Please enable javascript.ದೇಶಗಳ ನಡುವಿನ ಬಾಂಧವ್ಯಕ್ಕೆ ಭಾಷೆಯೇ ಜೀವಾಳ: ಮೋದಿ - relationship between the countries: Modi - Vijay Karnataka

ದೇಶಗಳ ನಡುವಿನ ಬಾಂಧವ್ಯಕ್ಕೆ ಭಾಷೆಯೇ ಜೀವಾಳ: ಮೋದಿ

Vijaya Karnataka Web 8 Jul 2015, 4:30 am
Subscribe

ದೇಶ-ದೇಶಗಳ ಮಧ್ಯೆ ಸುಮಧುರ ಬಾಂಧವ್ಯ ಬೆಸೆಯುವಲ್ಲಿ ಭಾಷೆ ಹಾಗೂ ಸಂಸ್ಕೃತಿ ಪ್ರಾಮುಖ್ಯತೆ ಪಡೆಯುತ್ತದೆ. ಭಾರತ ಹಾಗೂ ಉಜ್ಬೇಕಿಸ್ತಾನದ ನಡುವೆ ಅಂತಹ ಬಾಂಧವ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

relationship between the countries modi
ದೇಶಗಳ ನಡುವಿನ ಬಾಂಧವ್ಯಕ್ಕೆ ಭಾಷೆಯೇ ಜೀವಾಳ: ಮೋದಿ
ಉಜ್ಬೇಕ್ ನಾಯಕರ ಜತೆ ದ್ವಿಪಕ್ಷೀಯ ಒಪ್ಪಂದ/ ಉಜ್ಬೇಕ್-ಹಿಂದಿ ನಿಘಂಟು ಲೋಕಾರ್ಪಣೆ
ತಾಷ್ಕೆಂಟ್: ದೇಶ-ದೇಶಗಳ ಮಧ್ಯೆ ಸುಮಧುರ ಬಾಂಧವ್ಯ ಬೆಸೆಯುವಲ್ಲಿ ಭಾಷೆ ಹಾಗೂ ಸಂಸ್ಕೃತಿ ಪ್ರಾಮುಖ್ಯತೆ ಪಡೆಯುತ್ತದೆ. ಭಾರತ ಹಾಗೂ ಉಜ್ಬೇಕಿಸ್ತಾನದ ನಡುವೆ ಅಂತಹ ಬಾಂಧವ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎಂಟು ದಿನಗಳ ಮಧ್ಯ ಏಷ್ಯಾ ಹಾಗೂ ರಷ್ಯಾ ಪ್ರವಾಸದ ಭಾಗವಾಗಿ ಉಜ್ಬೇಕಿಸ್ತಾನದ ರಾಜಧಾನಿ ತಾಷ್ಕೆಂಟ್‌ನಲ್ಲಿ ಸೋಮವಾರದಿಂದ ವಾಸ್ತವ್ಯ ಹೂಡಿರುವ ಪ್ರಧಾನಿ ಮೋದಿ ಅವರು ಇಲ್ಲಿನ ನಾಯಕರೊಂದಿಗೆ ಪರಮಾಣು ಇಂಧನ, ರಕ್ಷಣೆ, ವ್ಯಾಪಾರ ವಹಿವಾಟು ಸೇರಿದಂತೆ ನಾನಾ ವಿಷಯಗಳ ಕುರಿತು ಮಾತುಕತೆ ನಡೆಸಿದ್ದಾರೆ.

ಮಂಗಳವಾರ ನಡೆದ ಕಾರ‌್ಯಕ್ರಮದಲ್ಲಿ ಉಜ್ಬೇಕ್-ಹಿಂದಿ ನಿಘಂಟು ಬಿಡುಗಡೆ ಮಾಡಿ ಮಾತನಾಡಿದ ಮೋದಿ ಅವರು, ‘‘ಉಭಯ ದೇಶಗಳ ನಡುವಿನ ಆರ್ಥಿಕತೆ ಬಲವಾಗಿದ್ದು, ಸಾಂಸ್ಕೃತಿಕ ಬಂಧವನ್ನು ಗಟ್ಟಿಗೊಳಿಸಬೇಕಿದೆ’’ ಎಂದರು. ಯಾವುದೇ ಒಂದು ದೇಶದ ಭಾಷೆಯ ಜನಪ್ರಿಯತೆಗೂ ಹಾಗೂ ಆ ದೇಶದ ಆರ್ಥಿಕಾಭಿವೃದ್ಧಿಗೂ ಇರುವ ನಂಟನ್ನು ಬಿಡಿಸಿಟ್ಟರು. ಇದೇ ವೇಳೆ ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಹಿಂದಿ ಭಾಷೆಯ ಪ್ರಭಾವವನ್ನು ವಿವರಿಸಿದರಲ್ಲದೇ ಅದರ ಕಲಿಕೆಯ ಅಗತ್ಯತೆಯನ್ನೂ ಪ್ರತಿಪಾದಿಸಿದರು.

ಭಾರತೀಯ ಸಿನೆಮಾಗಳು: ಉಜ್ಬೇಕ್ ರೇಡಿಯೊ ಹಿಂದಿ ಭಾಷಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದು, ಈ ಪರಂಪರೆಗೆ 2012ರಲ್ಲಿಯೇ 50 ವರ್ಷ ಸಂದಿದೆ. ಭಾರತೀಯ ಸಿನೆಮಾ ಹಾಗೂ ಸಂಗೀತ ಕಾರ‌್ಯಕ್ರಮಗಳು ಇಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವುದನ್ನು ಮೋದಿ ಉಲ್ಲೇಖಿಸಿದರು.

ಶಾಸ್ತ್ರಿ ಪುತ್ಥಳಿಗೆ ನಮನ: ತಾಷ್ಕೆಂಟ್‌ನಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ಥಳಿಗೆ ಮೋದಿ ನಮನ ಸಲ್ಲಿಸಿದರು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದ ದೇಶದ ಎರಡನೇ ಪ್ರಧಾನಿ ಶಾಸ್ತ್ರಿ ಅವರನ್ನು ಮೋದಿ, ‘ಭಾರತದ ಹೆಮ್ಮೆಯ ಪುತ್ರ’ ಎಂದು ಬಣ್ಣಿಸಿದರು. ಶಾಸ್ತ್ರಿ ಅವರು 1966ರಲ್ಲಿ ತಾಷ್ಕೆಂಟ್‌ಗೆ ಭೇಟಿ ನೀಡಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟರು. ಆದರೆ ಅವರ ಸಾವಿನ ಕುರಿತು ಇನ್ನೂ ಅನುಮಾಗಳು ವ್ಯಕ್ತವಾಗುತ್ತಿವೆ.

ಕಜಕಸ್ತಾನಕ್ಕೆ ಬಂದಿಳಿದ ಮೋದಿ ಅಸ್ಟಾನಾ: ಉಜ್ಬೇಕ್ ಭೇಟಿ ಮುಗಿಸಿ ಕಜಕಸ್ತಾನಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರು ಇಲ್ಲಿನ ನಜರ್‌ಬಿಯೋವ್ ವಿಶ್ವವಿದ್ಯಾಲಯದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಭಾರತ ಹಾಗೂ ಮಧ್ಯ ಏಷ್ಯಾ ರಾಷ್ಟ್ರಗಳ ನಡುವಿನ ಇಸ್ಲಾಂ ಧರ್ಮ ಪರಂಪರೆ ಬಂಧವನ್ನು ಹೊಗಳಿದ ಅವರು ವಿಜ್ಞಾನ, ಗಣಿತ, ಖಭೌತ ವಿಜ್ಞಾನ ಹಾಗೂ ಔಷಧ ಕ್ಷೇತ್ರಗಳಲ್ಲಿ ಶತಶತಮಾನಗಳಿಂದ ಉಭಯ ದೇಶಗಳ ನಡುವೆ ಬೆಳೆದು ಬಂದಿರುವ ಸಾಂಸ್ಕೃತಿಕ ವಿನಿಮಯವನ್ನು ಸ್ಮರಿಸಿಕೊಂಡರು. ಈ ಮಾನವೀಯ ಸಂಬಂಧದಿಂದಲೇ ಮಧ್ಯ ಏಷ್ಯಾ ರಾಷ್ಟ್ರಗಳು ಮೊದಲಿನಿಂದಲೂ ಇಸ್ಲಾಂ ಮೂಲಭೂತವಾದವನ್ನು ನಿರಾಕರಿಸುತ್ತಾ ಬಂದಿವೆ ಎಂದು ಹೇಳಿದರು.

ಇದಕ್ಕೂ ಮೊದಲು ಮೋದಿ ಹಗೂ ಕಜಕ್ ಪ್ರಧಾನಿ ಕರೀಂ ಮಸ್ಸಿಮೋವ್ ದ್ವಿಪಕ್ಷೀಯ ಸಂಬಂಧ ಕುರಿತು ಮಾತುಕತೆ ನಡೆಸಿದರು. ಬುಧವಾರ ಕಜಕ್ ಅಧ್ಯಕ್ಷರೊಂದಿಗೆ ನಡೆಯುವ ಚರ್ಚೆಯಲ್ಲಿ ಉಭಯ ನಾಯಕರು ಇಂಧನ, ರಕ್ಷಣೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ