ಆ್ಯಪ್ನಗರ

ಪಾಕ್‌ ಮುಖವಾಡ ಬಯಲು: ಸಯೀದ್‌ ಹಫೀಜ್‌ ಸಂಘಟನೆಗಳ ನಿಷೇಧ ತೆರವು

ಅಂತಾರಾಷ್ಟ್ರೀಯ ಸಮುದಾಯಕ್ಕೆ ಮೋಸ, ನಿಷೇಧ ಹೇರಿದ್ದ ಸುಗ್ರೀವಾಜ್ಞೆ ಮುಂದುವರಿಸದ ಪಾಕಿಸ್ತಾನ

Vijaya Karnataka 26 Oct 2018, 9:46 pm
ಇಸ್ಲಾಮಾಬಾದ್‌: ಮುಂಬೈ ದಾಳಿಯ ರೂವಾರಿ ಉಗ್ರ ಹಫೀಜ್‌ ಸಯೀದ್‌ ನೇತೃತ್ವದ ಜಮಾತ್‌-ಉದ್‌-ದವಾ(ಜೆಯುಡಿ) ಮತ್ತು ಫಲಾ-ಐ-ಇನ್ಸಾನಿಯಾತ್‌ ಫೌಂಡೇಶನ್‌ (ಎಫ್‌ಐಎಫ್‌) ಮೇಲಿನ ನಿಷೇಧವನ್ನು ಪಾಕಿಸ್ತಾನ ತೆಗೆದು ಹಾಕಿದೆ. ಈ ಕುರಿತು ಸರಕಾರ ಇಸ್ಲಾಮಾಬಾದ್‌ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
Vijaya Karnataka Web Ph


ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಜೆಯುಡಿ ಹಾಗೂ ಎಫ್‌ಐಎಫ್‌ ಸಂಘಟನೆಗಳನ್ನು ನಿಷೇಧಿತ ಉಗ್ರ ಸಂಘಟನೆಗಳ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಅಂತಾರಾಷ್ಟ್ರೀಯ ಒತ್ತಡ ಮತ್ತು ಅಮೆರಿಕದಿಂದ ಆರ್ಥಿಕ ಹಾಗೂ ಮಿಲಿಟರಿ ನೆರವು ಸ್ಥಗಿತಗೊಳ್ಳುವ ಭಯದಿಂದ ಕಳೆದ ಫೆಬ್ರವರಿಯಲ್ಲಿ ಪಾಕ್‌ ಮಾಜಿ ಅಧ್ಯಕ್ಷ ಮಾಮ್ನೂನ್‌ ಹುಸೇಸ್‌ ಅವರು ಭಯೋತ್ಪಾದನೆ ವಿರೋಧಿ ಕಾಯ್ದೆ 1997ಕ್ಕೆ ತಿದ್ದುಪಡಿ ತಂದು, ಈ ಎರಡೂ ಸಂಘಟನೆಗಳನ್ನು ನಿಷೇಧಿತ ಸಂಘಟನೆಗಳ ಪಟ್ಟಿಗೆ ಸೇರ್ಪಡೆಗೊಳಿಸಿ ಸುಗ್ರೀವಾಜ್ಞೆ ಹೊರಡಿಸಿದ್ದರು.

ಈ ಕ್ರಮದ ವಿರುದ್ಧ ಇಸ್ಲಾಮಾಬಾದ್‌ ಹೈಕೋರ್ಟ್‌ಗೆ ಹಫೀಜ್‌ ಅರ್ಜಿ ಸಲ್ಲಿಸಿದ್ದ. ಸಯೀದ್‌ ಪರ ವಕೀಲ ರಾಜಾ ರಿಜ್ವಾನ್‌ ಅಬ್ಬಾಸಿ, ಸುಗ್ರೀವಾಜ್ಞೆ ಅವಧಿ ಮುಕ್ತಾಯಗೊಂಡಿದ್ದು, ನಿಷೇಧವನ್ನು ಪುನಃ ಮುಂದುವರಿಸಿಲ್ಲ ಅಥವಾ ಈ ಕುರಿತು ಸಂಸತ್‌ನಲ್ಲಿ ವಿಧೇಯಕ ಮಂಡಿಸಿ ಕಾಯಿದೆಯಾಗಿಲ್ಲ ಎಂದು ಮಾಹಿತಿ ನೀಡಿದರು. ಸುಗ್ರೀವಾಜ್ಞೆ ಅವಧಿ ಮುಕ್ತಾಯವಾಗಿರುವ ಕುರಿತು ಪಾಕ್‌ ಡೆಪ್ಯೂಟಿ ಅಟಾರ್ನಿ ಜನರಲ್‌ ರಾಜ ಖಲೀದ್‌ ಮೆಹಮೂದ್‌ ಖಾನ್‌ ಸಹ ಖಚಿತಪಡಿಸಿದರು.

ಸುಗ್ರೀವಾಜ್ಞೆಯ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಸರಕಾರ ಸುಗ್ರೀವಾಜ್ಞೆಯನ್ನು ಪುನಃ ಜಾರಿಗೊಳಿಸಿದ್ದೇ ಆದಲ್ಲಿ ಅರ್ಜಿದಾರರು ಇದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದರೆ ವಿಚಾರಣೆ ನಡೆಸಬಹುದು ಎಂದು ನ್ಯಾಯಾಲಯ ತಿಳಿಸಿತು. ಈ ನಡುವೆ ಪಾಕಿಸ್ತಾನದ ರಾಷ್ಟ್ರೀಯ ಉಗ್ರ ನಿಗ್ರಹ ಪ್ರಾಧಿಕಾರವು ನಿಷೇಧಕ್ಕೊಳಗಾಗಿರುವ 66 ಉಗ್ರ ಸಂಘಟನೆಗಳ ಪರಿಷ್ಕೃತ ಪಟ್ಟಿಯನ್ನು ಸೆ.5ರಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಜೆಯುಡಿ ಹಾಗೂ ಎಫ್‌ಐಎಫ್‌ ಸಂಘಟನೆಗಳ ಹೆಸರಿಲ್ಲ.

ಹಫೀಜ್‌ ಸಯೀದ್‌ ನಿಷೇಧಿತ ಉಗ್ರ ಸಂಘಟನೆ ಲಷ್ಕರೆ ತಯ್ಯಬಾ ಸಹ ಸಂಸ್ಥಾಪಕ. 2002ರಲ್ಲಿ ಜಮಾತ್‌-ಉದ್‌-ದವಾ ಸ್ಥಾಪಿಸಿದ್ದ ಸಯೀದ್‌, ಎಲ್‌ಇಟಿ ಜತೆಗಿನ ಎಲ್ಲ ನಂಟು ಕಳೆದುಕೊಂಡಿರುವುದಾಗಿ ಘೋಷಿಸಿಕೊಂಡಿದ್ದ. 2008ರ ನವೆಂಬರ್‌ನಲ್ಲಿ ನಡೆದ ಮುಂಬೈ ದಾಳಿ ಹಿಂದೆಯೂ ಎಲ್‌ಇಟಿ ಮತ್‌ತು ಹಫೀಜ್‌ ಸಯೀದ್‌ ಕೈವಾಡವಿದೆ ಎನ್ನುವುದು ಭಾರತ ಆರೋಪ. ಅಂತಾರಾಷ್ಟ್ರೋಯ ಒತ್ತಡಕ್ಕೆ ಮಣಿದು ಹಫೀಜ್‌ನನ್ನು 2009 ಮತ್ತು 2017ರಲ್ಲಿ ರಲ್ಲಿ ಗೃಹ ಬಂಧನದಲ್ಲಿರಿಸಲಾಗಿತ್ತು. ಕೋರ್ಟ್‌ ಆದೇಶದಂತೆ ಆತನನ್ನು ಬಂಧಮುಕ್ತಗೊಳಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ