ಆ್ಯಪ್ನಗರ

ಲಂಕಾ ಉಗ್ರ ದಾಳಿ: ಸಾವಿನ ಸಂಖ್ಯೆ 290ಕ್ಕೆ ಏರಿಕೆ

ತೌಹೀದ್ ಜಮಾತ್ ಎಂಬ ಇಸ್ಲಾಮಿಕ್ ಉಗ್ರ ಸಂಘಟನೆ ಈ ಭಯೋತ್ಪಾದಕ ದಾಳಿಗೆ ಹೊಣೆ ಎಂದು ಹೇಳಲಾಗಿದೆ. ಸದ್ಯ ಸಾವಿನ ಸಂಖ್ಯೆ 290ಕ್ಕೇರಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಸರಣಿ ಸ್ಫೋಟಗಳ ಬಳಿಕ ಕೊಲಂಬೋ ವಿಮಾನ ನಿಲ್ದಾಣದಲ್ಲಿ ಸುಧಾರಿತ ಸ್ಫೋಟಕವೊಂದು ಪತ್ತೆಯಾಗಿದ್ದು, ಅದನ್ನು ಭದ್ರತಾ ಪಡೆಗಳು ಸಕಾಲದಲ್ಲಿ ನಿಷ್ಕ್ರಿಯಗೊಳಿಸಿವೆ.

Vijaya Karnataka Web 22 Apr 2019, 11:47 am
ಕೊಲಂಬೋ: ಶ್ರೀಲಂಕಾದಲ್ಲಿ ಭಾನುವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ಮೃತಪಟ್ಟವರ ಸಂಖ್ಯೆ 290ಕ್ಕೇರಿದೆ. ದಶಕದ ಹಿಂದೆ ಕೊನೆಗೊಂಡಿದ್ದ ಅಂತರ್ಯುದ್ಧದ ಬಳಿಕ ನಡೆದ ಅತಿದೊಡ್ಡ ಹಿಂಸಾಚಾರ ಇದಾಗಿದೆ.
Vijaya Karnataka Web Lanka Blasts


ಈಸ್ಟರ್ ಹಬ್ಬದ ಪ್ರಾರ್ಥನೆ ವೇಳೆ ಚರ್ಚ್‌ಗಳಲ್ಲಿ ಹಾಗೂ ಅಂತಾರಾಷ್ಟ್ರೀಯ ಅತಿಥಿಗಳು ತಂಗಿದ್ದ ಐಷಾರಾಮಿ ಹೋಟೆಲ್‌ಗಳಲ್ಲಿ 8 ಸರಣಿ ಸ್ಫೋಟಗಳು ಸಂಭವಿಸಿವೆ.

ತೌಹೀದ್ ಜಮಾತ್ ಎಂಬ ಇಸ್ಲಾಮಿಕ್ ಉಗ್ರ ಸಂಘಟನೆ ಈ ಭಯೋತ್ಪಾದಕ ದಾಳಿಗೆ ಹೊಣೆ ಎಂದು ಹೇಳಲಾಗಿದೆ. ಸದ್ಯ ಸಾವಿನ ಸಂಖ್ಯೆ 290ಕ್ಕೇರಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.


ಈ ಸರಣಿ ಸ್ಫೋಟಗಳ ಬಳಿಕ ಕೊಲಂಬೋ ವಿಮಾನ ನಿಲ್ದಾಣದಲ್ಲಿ ಸುಧಾರಿತ ಸ್ಫೋಟಕವೊಂದು ಪತ್ತೆಯಾಗಿದ್ದು, ಅದನ್ನು ಭದ್ರತಾ ಪಡೆಗಳು ಸಕಾಲದಲ್ಲಿ ನಿಷ್ಕ್ರಿಯಗೊಳಿಸಿವೆ.


ಸ್ಫೋಟದ ಬಳಿಕ ದ್ವೀಪರಾಷ್ಟ್ರದಲ್ಲಿ 12 ಗಂಟೆಗಳ ಕರ್ಫ್ಯೂ ಹೇರಲಾಗಿತ್ತು. ಇಂದು ಬೆಳಗಿನ ಜಾವ (ಸೋಮವಾರ) ಕರ್ಫ್ಯೂ ಹಿಂತೆಗೆದುಕೊಳ್ಳಲಾಗಿದೆ. ಪ್ರಮುಖ ಸ್ಫೋಟ ಸಂಭವಿಸಿದ ಸೇಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಇಂದೂ ಬಿಗು ಭದ್ರತೆ ಮುಂದುವರಿಸಲಾಗಿದೆ.

ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ 7 ಜೆಡಿಎಸ್ ಮುಖಂಡರು ನಾಪತ್ತೆ, ಇಬ್ಬರ ಸಾವು?

ಸ್ಫೋಟ ಸಂಭವಿಸಿದ ವೇಳೆ ವಿದೇಶದಲ್ಲಿದ್ದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಕೂಡಲೇ ಲಂಕಾಗೆ ವಾಪಸಾಗಿದ್ದು, ಇಂದು ಬೆಳಗ್ಗೆ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ಕರೆದಿದ್ದಾರೆ. ಪ್ರಧಾನಿ ರನಿಲ್ ವಿಕ್ರಮಸಿಂಘೆ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.


ಶ್ರೀಲಂಕಾದ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯ ಒಟ್ಟು ಜನಸಂಖ್ಯೆಯ ಶೇ 6ರಷ್ಟಿದೆ. ಹಿಂದೆಯೂ ಕ್ರೈಸ್ತ ಸಮುದಾಯದ ಮೇಲೆ ದಾಳಿಗಳು ನಡೆದಿದ್ದವು. ಆದರೆ ಇಷ್ಟೊಂದು ತೀವ್ರ ಪ್ರಮಾಣದ್ದಾಗಿರಲಿಲ್ಲ.


ಸ್ಫೋಟದ ಹೊಣೆಯನ್ನು ಅಧಿಕೃತವಾಗಿ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ ತೌಹೀದ್ ಜಮಾತ್ ಉಗ್ರ ಸಂಘಟನೆ ಮೇಲೆ ಶಂಕೆ ದಟ್ಟವಾಗಿದೆ. ಇದುವರೆಗೆ ಒಟ್ಟು 24 ಮಂದಿ ಶಂಕಿತರನ್ನು ಬಂಧಿಸಲಾಗಿದೆ. ದಾಳಿಕೋರರಿಗೆ ವಿದೇಶಿ ಸಂಪರ್ಕಗಳಿವೆಯೆ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.


ಆರು ಮಂದಿ ಭಾರತೀಯರೂ ಬಲಿ:
ಲಂಕಾ ಸ್ಫೋಟಗಳಲ್ಲಿ ಮೃತಪಟ್ಟ ವಿದೇಶೀಯರ ಪೈಕಿ 6 ಮಂದಿ ಭಾರತೀಯರೂ ಸೇರಿದ್ದಾರೆ ಎಂದು ವರದಿಯಾಗಿದೆ. ನಿನ್ನೆ ನಾಲ್ವರ ಹೆಸರುಗಳನ್ನು ಖಚಿತಪಡಿಸಲಾಗಿತ್ತು. ಇಂದು ಮತ್ತಿಬ್ಬರ ಹೆಸರುಗಳು ದೃಢಪಟ್ಟಿದೆ. ಕೆ.ಜಿ ಹನುಮಂತರಾಯಪ್ಪ ಮತ್ತು ಎಂ ರಂಗಪ್ಪ ಎಂಬವರು ಮೃತಪಟ್ಟಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ