ಆ್ಯಪ್ನಗರ

ನೈಜ ಎಲೆಗಳಿಗಿಂತ 10 ಪಟ್ಟು ವೇಗವಾಗಿ CO2 ಹೀರಿಕೊಳ್ಳುವ ಕೃತಕ ಎಲೆಗಳ ಅಭಿವೃದ್ಧಿ

ವಾತಾವರಣದಿಂದ ಸಾಮಾನ್ಯ ಸಸ್ಯಗಳಿಂತ 10 ಪಟ್ಟು ವೇಗವಾಗಿ ಇಂಗಾಲದ ಡೈಆಕ್ಸೈಡ್‌ ಅನ್ನು ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುವ ಕೃತಕ ಎಲೆಗಳನ್ನು ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ. ಇವುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಗೊತ್ತೆ?

Indiatimes 15 Feb 2019, 12:11 pm
ಚಿಕಾಗೋ: ಸಸ್ಯಗಳು ನೈಸರ್ಗಿಕವಾಗಿ ಗಾಳಿಯನ್ನು ಶುದ್ಧೀಕರಿಸುತ್ತವೆ. ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್‌ಅನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಈ ಪ್ರಕ್ರಿಯೆಯನ್ನು ಫೋಟೋಸಿಂಥಸಿಸ್‌ ಎಂದು ವೈಜ್ಞಾನಿಕವಾಗಿ ಕರೆಯಲಾಗುತ್ತದೆ. ಕನ್ನಡದಲ್ಲಿ ದ್ಯುತಿ ಸಂಶ್ಲೇಷಣಾ ಕ್ರಿಯೆ ಎನ್ನಲಾಗುತ್ತದೆ. ಅಶ್ವತ್ಥಮರದ ಎಲೆಗಳು ಅತಿಹೆಚ್ಚು ಆಮ್ಲಜನಕ ಬಿಡುಗಡೆ ಮಾಡುತ್ತವೆ.
Vijaya Karnataka Web Artificial leaves


ವಾತಾವರಣದಲ್ಲಿ ಇಂಗಾಲ ಹೆಚ್ಚಾಗಲು ಪ್ರಮುಖ ಕಾರಣ ಸಸ್ಯಗಳ ನಾಶ. ನಗರೀಕರಣ ಹೆಚ್ಚಾದಂತೆ ಸಸ್ಯಕುಲವನ್ನು ಮನುಷ್ಯ ನಾಶ ಮಾಡುತ್ತಿರುವ ಪರಿಣಾಮ ಉತ್ಪತ್ತಿಯಾಗುತ್ತಿರುವ ಇಂಗಾಲವನ್ನು ನಿರ್ಮೂಲನೆಗೊಳಿಸುವ ಪ್ರಮಾಣದ ಸಸ್ಯಗಳ ಕೊರತೆಯನ್ನು ಭೂಮಿ ಎದುರಿಸುತ್ತಿದೆ.

ತಾಯಿ ನೆಲದ ಪ್ರಮುಖ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸಾಮಾನ್ಯ ಸಸ್ಯಗಳಿಂದ ವೇಗವಾಗಿ ಇಂಗಾಲದ ಡೈಆಕ್ಸೈಡ್‌ಅನ್ನು ಹೀರಿಕೊಳ್ಳುವ ಕೃತಕ ಎಲೆಗಳನ್ನು ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿ ಮಾಡಿದ್ದಾರೆ. ಚಿಕಾಗೋನಲ್ಲಿರುವ ಯೂನಿವರ್ಸಿಟಿ ಆಫ್‌ ಇಲ್ಲಿನಾಯ್ಸ್‌ (ಯುಐಸಿ)ನ ಸಂಶೋಧಕರು ಕೃತಕ ಸಸ್ಯವನ್ನು ಅಭಿವೃದ್ಧಿ ಪಡಿಸಿದ್ದಾರೆ.

ನೈಜ ಸಸ್ಯಗಳಂತೆ ಕಂಡುಬರುವ ಕೃತಕ ಸಸ್ಯವು ಕಾರ್ಬನ್‌ ಡೈಆಕ್ಸೈಡ್‌ಅನ್ನು ಆಮ್ಲಜನಕವಾಗಿ ಪರಿವರ್ತನೆ ಮಾಡುತ್ತದೆ. ಸಾಮಾನ್ಯ ಸಸ್ಯಗಳಿಗಿಂತ 10 ಪಟ್ಟು ಹೆಚ್ಚು ವೇಗವಾಗಿ ಎಂಬುದು ಸಂಶೋಧನೆಯ ಹೈಲೈಟ್‌ ಆಗಿದೆ.

ಪ್ರಸ್ತುತ ವಿಜ್ಞಾನಿಗಳು ಸಾಧ್ಯಸಾಧ್ಯತೆ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿ ಕೃತಕ ಸಸ್ಯ ಸೃಷ್ಟಿಗೆ ಸಿದ್ಧರಾಗಿದ್ದಾರೆ. ಕಂಟೈನರ್‌ಗಳಲ್ಲಿ ಪ್ರಯೋಗಾತ್ಮಕ ಪರೀಕ್ಷೆಗಳನ್ನು ನಡೆಸಿದ್ದಾರೆ. ಗಾಳಿಯಲ್ಲಿರುವ ಕಾರ್ಬನ್‌ ಡಾಆಕ್ಸೈಡ್‌ಅನ್ನು ನಿರ್ಮೂಲನೆಗೊಳಿಸುತ್ತದೆ.


ವಿಜ್ಞಾನಿಗಳ ತಂಡ ಕೃತಕ ಎಲೆಯನ್ನು ನೀರು ತುಂಬಿದ ಕ್ಯಾಪ್ಸೂಲ್‌ ಒಳಗೆ ಅಳವಡಿಸಿದ್ದಾರೆ. ಕ್ಯಾಪ್ಸೂಲ್‌ ಅತ್ಯಂತ ಸೂಕ್ಷ್ಮ ತೂತುಗಳಿರುವ ಮೆಬ್ರೇನ್‌ನಿಂದ ಮಾಡಿದ್ದಾಗಿತ್ತು. ಸೂರ್ಯನ ಕಿರಣಗಳು ಬಿದ್ದಾಗ ನಿಧಾನವಾಗಿ ನೀರು ಆವಿಯಾಗುತ್ತ ಹೋಗುತ್ತದೆ. ಅತಿಸೂಕ್ಷ್ಮ ರಂಧ್ರಗಳ ಮೂಲಕ ಆವಿಯಾದ ನೀರು ಹೊರಗೆ ಹೋಗುತ್ತದೆ. ಈ ಪ್ರಕ್ರಿಯೆ ವೇಳೆ ಸುತ್ತಲಿನ ಇಂಗಾಲದ ಡೈಆಕ್ಸೈಡ್‌ಅನ್ನು ಸೂಕ್ಷ್ಮ ರಂಧ್ರಗಳು ಸೆಳೆಯುತ್ತವೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಇಂಗಾಲದ ಡೈಆಕ್ಸೈಡ್‌ಅನ್ನು ಕೃತಕ ಎಲೆ ಮೋನಾಕ್ಸೈಡ್‌ ಮತ್ತು ಆಮ್ಲಜನಕವನ್ನಾಗಿ ಪರಿವರ್ತನೆ ಮಾಡುತ್ತದೆ. ಹೀಗೆ ಉತ್ಪತ್ತಿಯಾದ ಆಮ್ಲಜನಕವನ್ನು ಹೊರಗೆ ಬಿಡಬಹುದು ಅಥವಾ ಸಂಗ್ರಹಿಸಿಡಬಹುದು. ಅಥವಾ ಅಪಾಯಕಾರಿ ಅನಿಲವನ್ನು ಬೇರ್ಪಡಿಸಿ ಮೆಥನಾಲ್‌ನಂತಹ ಸಂಶ್ಲೇಷಿತ ಇಂಧನವನ್ನು ಉತ್ಪತ್ತಿ ಮಾಡಬಹುದು ಎಂದು ಪ್ರಯೋಗದ ಬಗ್ಗೆ ವಿಜ್ಞಾನಿಗಳು ವಿವರಣೆ ನೀಡಿದ್ದಾರೆ.

ಯುಐಸಿ ಸಂಶೋಧಕ ಮೀನೇಶ್‌ ಸಿಂಗ್‌ ಹೇಳುವಂತೆ, ಕೃತಕ ಎಲೆಯನ್ನು ಸಾಮನ್ಯ ಎಲೆಯಂತೆ ಬಳಸಬಹುದು.

ವಿಜ್ಞಾನಿಗಳ ಪ್ರಕಾರ ಇಂತಹ 360 ಕೃತಕ ಎಲೆಗಳಿಂದ ಪ್ರತಿದಿನ ಅರ್ಧ ಟನ್‌ ಕಾರ್ಬನ್‌ ಮೋನಾಕ್ಸೈಡ್‌ ಉತ್ಪತ್ತಿ ಮಾಡಬಹುದು. 500 ಚದರ ಮೀಟರ್‌ ಪ್ರದೇಶದಲ್ಲಿ ಒಂದು ದಿನದಲ್ಲಿ ವಾತಾವರಣದಲ್ಲಿರುವ ಕಾರ್ಬನ್‌ ಡೈಆಕ್ಸೈಡ್‌ ಪ್ರಮಾಣವನ್ನು ಇಳಿಕೆ ಮಾಡಬಹುದು ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ