ಆ್ಯಪ್ನಗರ

ಬ್ರಿಟನ್‌ ಹೊಸ ವೀಸಾ ನೀತಿ: ಭಾರತೀಯರಿಗೆ ಅನುಕೂಲ

ದೇಶದ ಸಂಶೋಧನಾ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯರು ಸೇರಿದಂತೆ ಸಾಗರೋತ್ತರ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಅನುಕೂಲವಾಗುವಂತೆ ನೂತನ ವೀಸಾ ಪದ್ಧತಿಯನ್ನು ಬ್ರಿಟನ್‌ ಜಾರಿಗೊಳಿಸಿದೆ.

Vijaya Karnataka 8 Jul 2018, 11:22 am
ಲಂಡನ್‌: ದೇಶದ ಸಂಶೋಧನಾ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯರು ಸೇರಿದಂತೆ ಸಾಗರೋತ್ತರ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಅನುಕೂಲವಾಗುವಂತೆ ನೂತನ ವೀಸಾ ಪದ್ಧತಿಯನ್ನು ಬ್ರಿಟನ್‌ ಜಾರಿಗೊಳಿಸಿದೆ.
Vijaya Karnataka Web Veesa


ಈಗಾಗಲೇ ಇರುವ ಟಯರ್‌ 5(ತಾತ್ಕಾಲಿಕ ಕೆಲಸಗಾರರು-ಸರಕಾರಿ ಅಧಿಕೃತ ವಿನಿಮಯ) ವೀಸಾದಡಿಯಲ್ಲಿ ಐರೋಪ್ಯ ಒಕ್ಕೂಟ ಹೊರತುಪಡಿಸಿ ಬೇರೆ ದೇಶಗಳಿಂದ ಎರಡು ವರ್ಷಗಳ ಅವಧಿಗೆ ಬ್ರಿಟನ್‌ಗೆ ಆಗಮಿಸುವ ವಿಜ್ಞಾನಿಗಳು, ಸಂಶೋಧಕರು ಮತ್ತು ಶೈಕ್ಷಣಿಕ ತಜ್ಞರಿಗೆ ನೆರವಾಗಲು ನೂತನ ಯುಕೆಆರ್‌ಐ ವಿಜ್ಞಾನ, ಸಂಶೋಧನೆ ಮತ್ತು ಶೈಕ್ಷ ಣಿಕ ವೀಸಾ ಪದ್ಧತಿಯನ್ನು ಶುಕ್ರವಾರದಿಂದ ಅನುಷ್ಠಾನಕ್ಕೆ ತರಲಾಗಿದೆ.

''ಸಂಶೋಧನೆ ಮತ್ತು ನೂತನ ಆವಿಷ್ಕಾರಗಳಲ್ಲಿ ಬ್ರಿಟನ್‌ ಮುಂಚೂಣಿಯಲ್ಲಿದ್ದು, ನೂತನ ವೀಸಾ ಪದ್ಧತಿಯಿಂದ ವಿದೇಶಿ ಸಂಶೋಧಕರು ಇಲ್ಲಿಗೆ ಬಂದು ಕೆಲಸ ಮಾಡಲು ಮತ್ತು ತರಬೇತಿ ನೀಡಲು ಅನುಕೂಲವಾಗುತ್ತದೆ. ಅಲ್ಲದೇ ಅಂತಾರಾಷ್ಟ್ರೀಯ ಪ್ರತಿಭೆಯನ್ನು ಆಕರ್ಷಿಸಲು ಹಾಗೂ ತಮ್ಮ ಜ್ಞಾನ ಮತ್ತು ಪರಿಣತಿಯಿಂದ ಲಾಭ ಪಡೆಯಲು ಸಹಾಯವಾಗುವ ವಲಸೆ ವ್ಯವಸ್ಥೆಯನ್ನು ನಾವು ಹೊಂದಿರಬೇಕಾಗುತ್ತದೆ,'' ಎಂದು ಬ್ರಿಟನ್‌ನ ವಲಸೆ ಖಾತೆ ಸಚಿವೆ ಕ್ಯಾರೋಲಿನ್‌ ನೋಕ್ಸ್‌ ಹೇಳಿದ್ದಾರೆ.

ಬ್ರಿಟನ್‌ ಸಂಶೋಧನೆ ಮತ್ತು ಆವಿಷ್ಕಾರ(ಯುಕೆಆರ್‌ಐ) ಮಂಡಳಿಯ ಮೂಲಕ ಈ ಪದ್ಧತಿ ಕಾರ್ಯನಿರ್ವಹಿಸಲಿದೆ. ಇದು ದೇಶದ ಏಳು ಸಂಶೋಧನಾ ಮಂಡಳಿಗಳು, ಇನ್ನೋವೇಟ್‌ ಯುಕೆ ಮತ್ತು ರಿಸರ್ಚ್‌ ಇಂಗ್ಲೆಂಡ್‌ ಸಂಸ್ಥೆಗಳನ್ನು ಒಂದೇ ಸೂರಿನಡಿ ತರುತ್ತದೆ.

ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಂ ಸೇರಿದಂತೆ 12 ಅನುಮೋದಿತ ಸಂಶೋಧನಾ ಸಂಸ್ಥೆಗಳಿಗೆ, ಬ್ರಿಟನ್‌ನಲ್ಲಿ ಕೆಲಸ ಮಾಡಲು ಮತ್ತು ತರಬೇತಿ ನೀಡಲು ವಿಶೇಷ ತಂತ್ರಜ್ಞರು ಸೇರಿದಂತೆ ಹೆಚ್ಚು ನುರಿತ ವ್ಯಕ್ತಿಗಳಿಗೆ ನೇರ ಪ್ರಾಯೋಜಕತ್ವವನ್ನು ನೀಡಲು ಯುಕೆಆರ್‌ಐ ಮೂಲಕ ಸಾಧ್ಯವಾಗುತ್ತದೆ.

ಪ್ರಾಯೋಜಕ ಸಂಸ್ಥೆಗಳ ಮೇಲ್ವಿಚಾರಣೆಯನ್ನು ಯುಕೆಆರ್‌ಐ ನಡೆಸಲಿದೆ. ಜತೆಗೆ ಈ ಸಂಸ್ಥೆಗಳು ಟಯರ್‌ 5 ಪ್ರಾಯೋಜಕ ಪರವಾನಗಿಯನ್ನು ಪಡೆಯಬೇಕಾಗುತ್ತದೆ. ಟಯರ್‌ 5 ಸರಕಾರಿ ಅಧಿಕೃತ ವಿನಿಮಯ(ಜಿಎಇ)ದ ಪ್ರಮುಖ ವೀಸಾ ಮಾರ್ಗವಾಗಿದ್ದು, ಯೂರೋಪಿಯನ್‌ ಆರ್ಥಿಕ ಪ್ರದೇಶದ ಹೊರಗಿನ ವೃತ್ತಿಪರರು ಬ್ರಿಟನ್‌ಗೆ ಬರಲು ಇದರಿಂದ ಸಾಧ್ಯವಾಗುತ್ತದೆ.

ಟಯರ್‌ 5 ಪದ್ಧತಿಯ ಮಾನದಂಡವನ್ನು ಪೂರೈಸಲು, ಬ್ರಿಟನ್‌ನ ಉದ್ಯಮ, ಇಂಧನ ಮತ್ತು ಕೈಗಾರಿಕಾ ಕಾರ್ಯತಂತ್ರ ಇಲಾಖೆ(ಬಿಇಐಎಸ್‌) ಯುಕೆಆರ್‌ಐ ನೊಂದಿಗೆ ನಿಯಮಿತವಾಗಿ ಯೋಜನೆಯ ಚಟುವಟಿಕೆಗಳನ್ನು ಮೇಲ್ವಿಚಾರಣೆ ನಡೆಸಲಿದೆ.

ಇತ್ತೀಚಿಗೆ ಬ್ರಿಟನ್‌ ಸರಕಾರ ವೀಸಾ ನೀತಿಗಳಲ್ಲಿ ಕೆಲವು ಬದಲಾವಣೆ ಮಾಡಿದ್ದು, ಟಯರ್‌ 2 ವೀಸಾ ಪದ್ಧತಿಯಿಂದ ವೈದ್ಯರು ಮತ್ತು ದಾದಿಯರನ್ನು ಹೊರಗಿಡಲಾಗಿದೆ. ಈ ಮೂಲಕ ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಗಳಲ್ಲಿ ಹೆಚ್ಚಿನ ಭಾರತೀಯ ವೈದ್ಯರು ಕೆಲಸ ಮಾಡಲು ಅನುಕೂಲವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ