ಆ್ಯಪ್ನಗರ

ಪ್ರತಿಯೊಬ್ಬರಿಗೂ ಗೌರವಯುತ ಜೀವನ ನಡೆಸುವ ಹಕ್ಕಿದೆ

ಕಾನೂನಿನ ಮುಂದೆ ಎಲ್ಲರೂ ಸಮಾನರು. ನಮ್ಮ ಹಕ್ಕುಗಳನ್ನು ಯಾರೂ ಉಲ್ಲಂಘಿಸುವಂತಿಲ್ಲ. ಅದರಂತೆ ನಾವು ಕೂಡ ಬೇರೆಯವರ ಹಕ್ಕುಗಳನ್ನು ಉಲ್ಲಂಘನೆ ಮಾಡಬಾರದು. ಪ್ರತಿಯೊಬ್ಬರಿಗೂ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸುವ ಹಕ್ಕು ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ರಾಚಪ್ಪ ತಾಳಿಕೋಟಿ ಹೇಳಿದರು.

Vijaya Karnataka 11 Dec 2018, 5:00 am
ಯಾದಗಿರಿ :ಕಾನೂನಿನ ಮುಂದೆ ಎಲ್ಲರೂ ಸಮಾನರು. ನಮ್ಮ ಹಕ್ಕುಗಳನ್ನು ಯಾರೂ ಉಲ್ಲಂಘಿಸುವಂತಿಲ್ಲ. ಅದರಂತೆ ನಾವು ಕೂಡ ಬೇರೆಯವರ ಹಕ್ಕುಗಳನ್ನು ಉಲ್ಲಂಘನೆ ಮಾಡಬಾರದು. ಪ್ರತಿಯೊಬ್ಬರಿಗೂ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸುವ ಹಕ್ಕು ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ರಾಚಪ್ಪ ತಾಳಿಕೋಟಿ ಹೇಳಿದರು.
Vijaya Karnataka Web everyone under the law is equal the claim can not be violated
ಪ್ರತಿಯೊಬ್ಬರಿಗೂ ಗೌರವಯುತ ಜೀವನ ನಡೆಸುವ ಹಕ್ಕಿದೆ


ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಾ ಸ್ಥಳಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದು ಕಂಡುಬರುತ್ತಿವೆ. ಅದರಲ್ಲಿ ಹೆಚ್ಚಾಗಿ ಮಕ್ಕಳು ಮತ್ತು ಮಹಿಳೆಯರ ಮೇಲೆ ಕಿರುಕುಳ, ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಅವರ ಆರ್ಥಿಕ ದುರ್ಬಲತೆ ಹಾಗೂ ಶಿಕ್ಷಣದ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ಬಾಲ ಕಾರ್ಮಿಕ ಪದ್ಧತಿಯನ್ನು ಶಿಕ್ಷಣದಿಂದ ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂದು ಅವರು ಹೇಳಿದರು.

ಮಾನವ ಹಕ್ಕುಗಳನ್ನು ರಕ್ಷಿಸುವ ಹೊಣೆ ಹೊತ್ತ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಇದನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳುವುದು ಅಗತ್ಯವಿದೆ ಎಂದು ತಿಳಿಸಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ನಾಮದೇವ ಸಾಲಮಂಟಪಿ ಮಾತನಾಡಿ, ಅಧಿಕಾರಿ ವರ್ಗವು ಸಾರ್ವಜನಿಕರ ಸೇವೆ ಮಾಡುವುದು ದೇವರು ನೀಡಿದ ಅವಕಾಶವೆಂದು ತಿಳಿದು ಕರ್ತವ್ಯ ನಿರ್ವಹಿಸಬೇಕು. ಅಧಿಕಾರಿಗಳಿಗೆ ತಮ್ಮ ಕೆಲಸಕ್ಕೆ ತಕ್ಕ ವೇತನವನ್ನು ಸರ್ಕಾರ ನೀಡುತ್ತದೆ. ಇದರಲ್ಲಿ ನೆಮ್ಮದಿ ಜೀವನ ನಡೆಸಬಹುದು. ಕಾರಣ ಅನ್ಯ ಮಾರ್ಗಗಳಿಂದ ಹಣ ಗಳಿಕೆಗೆ ಮುಂದಾಗಬಾರದು. ಈ ಮೂಲಕ ಮಾನವ ಹಕ್ಕುಗಳ ರಕ್ಷಣೆಯ ಜತೆಗೆ ಸಾರ್ವಜನಿಕರೊಂದಿಗೆ ಮಾನವೀಯತೆಯಿಂದ ವರ್ತಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಅವರು ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಹುಟ್ಟುವ ಮುನ್ನವೇ ಭ್ರೂಣಹತ್ಯೆಯಂತಹ ಹೀನಕೃತ್ಯಗಳು ನಡೆಯುತ್ತಿರುತ್ತವೆ. ಆದ್ದರಿಂದ ಸಮಾಜದಲ್ಲಿ ಮನುಷ್ಯ ಮನುಷ್ಯನಾಗಿ ಜೀವನ ಮಾಡುವುದಕ್ಕೆ ಅವಕಾಶ ಕಲ್ಪಿಸುವ ಅವಶ್ಯಕತೆಯಿದೆ ಎಂದು ಹೇಳಿದರು.

ಹತ್ತಿ ಕೀಳುವ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಹೊಲಕ್ಕೆ ಕಳುಹಿಸುತ್ತಾರೆ. ಇದನ್ನು ಟ್ರಾನ್ಸ್‌ಪೋರ್ಟ್‌ ಕಾಯ್ದೆಯ ಮೂಲಕ ತಡೆಯಬಹುದಾಗಿದೆ. ಮಕ್ಕಳ ಸಮಸ್ಯೆಗಳನ್ನು ನಿವಾರಿಸಲು ಗ್ರಾಮ ಸಭೆಗಳನ್ನು ಆಯೋಜಿಸಬೇಕಿದೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳನ್ನು ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ವಿವಾಹ ಆಮಂತ್ರಣ ಪತ್ರಿಕೆಗಳನ್ನು ಮುದ್ರಣ ಮಾಡುವಾಗ ಪ್ರಿಂಟಿಂಗ್‌ ಪ್ರೆಸ್‌ನವರು ಕಡ್ಡಾಯವಾಗಿ ವಧು-ವರರ ವಯಸ್ಸನ್ನು ಪರಿಶೀಲಿಸುವಂತೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ಶುಭಂ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಗುರುಪ್ರಸಾದ ವೈದ್ಯ ಅವರು ಉಪನ್ಯಾಸ ನೀಡಿದರು. ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೊಡೆ, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತರಾವ್‌ ಕುಲಕರ್ಣಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶ್ರೀನಿವಾಸರಾವ್‌ ಕುಲಕರ್ಣಿ, ಡಿವೈಎಸ್‌ಪಿ ಯು.ಶರಣಪ್ಪ, ಜಿಲ್ಲಾ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಸುರೇಶ ಬಾಬು ಕಲಾಲ್‌, ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಶಾಂತಪ್ಪ ಎಸ್‌.ಖಾನಹಳ್ಳಿ ಸೇರಿದಂತೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂಗೀತ ಶಿಕ್ಷಕರಾದ ಚಂದ್ರಶೇಖರ ಗೋಗಿ ಹಾಗೂ ತಂಡದವರು ಪ್ರಾರ್ಥನೆ ಗೀತೆ ಹಾಡಿದರು. ಉಪನ್ಯಾಸಕಿ ಡಾ.ಜ್ಯೋತಿಲತಾ ತಡಿಬಿಡಿಮಠ ಅವರು ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ