ಆ್ಯಪ್ನಗರ

ಯುಗಾದಿ 2020: ಹೊಸ ಚಂದ್ರ ಮೂಡಿದಾಗ ಆರಂಭವಾಗುವ ಹೊಸ ವರ್ಷ..

ಸಂಕ್ರಾಂತಿಯ ನಂತರದ ಮೊದಲ ಅಮಾವಾಸ್ಯೆ ಮುಗಿದು ಹೊಸ ಚಂದ್ರ ಮೂಡಿದಾಗ ಆರಂಭವಾಗುತ್ತದೆ ಹೊಸ ವರ್ಷ. ಅದೇ ಚಾಂದ್ರಮಾನ ಯುಗಾದಿಯ ದಿನ. ಇದು ಸಾಮಾನ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್‌ನ ಮಾರ್ಚ್ ಅಥವಾ ಏಪ್ರಿಲ್ ತಿಂಗಳ ನಡುವೆ ಬರುತ್ತದೆ. ಈ ಬಾರಿ ಮಾರ್ಚ್‌ 25ರಂದು ಯುಗಾದಿ ಬಂದಿದೆ ಯುಗಾದಿಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Vijaya Karnataka Web 23 Mar 2020, 11:22 am
ಹಿಂದೂ ಪುರಾಣ, ಶಾಸ್ತ್ರಗಳ ಪ್ರಕಾರ ಇರುವುದು ನಾಲ್ಕು ಯುಗ. ಕೃತಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗ. ನಮ್ಮ ಪೂರ್ವಿಕರು, ಈ ಯುಗಗಳಲ್ಲಿ ದಿನಗಣನೆಗೆ ಪಂಚಾಂಗವನ್ನು ಸೃಷ್ಟಿಸಿದರು. ಸೂರ್ಯ ಚಂದ್ರಾದಿ ಭೂಮಿಯ ಚಲನೆ ಆಧರಿಸಿ ಧರ್ಮಸಿಂಧು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂವತ್ಸರ, ಆಯನ, ಋತು, ಮಾಸ, ಪಕ್ಷ, ತಿಥಿಗಳನ್ನು ಗುರುತಿಸಿದರು. ಈ ಎಲ್ಲದರ ವೈಜ್ಞಾನಿಕ ಸಮ್ಮಿಲನವೇ ಪಂಚಾಂಗ. ಆದರೆ ಇದಕ್ಕೊಂದು ಆದಿ ಬೇಕಲ್ಲ. ಅದೇ ಯುಗಾದಿ.
Vijaya Karnataka Web ugadi 2020 date time and chandramana ugadi pratipada tithi begins and ending time in kannada
ಯುಗಾದಿ 2020: ಹೊಸ ಚಂದ್ರ ಮೂಡಿದಾಗ ಆರಂಭವಾಗುವ ಹೊಸ ವರ್ಷ..


ಹೊಸ ವರ್ಷದ ಆರಂಭವೇ ಯುಗಾದಿ

ಸಂಕ್ರಾಂತಿಯ ನಂತರದ ಮೊದಲ ಅಮಾವಾಸ್ಯೆ ಮುಗಿದು ಹೊಸ ಚಂದ್ರ ಮೂಡಿದಾಗ ಆರಂಭವಾಗುತ್ತದೆ ಹೊಸ ವರ್ಷ. ಅದೇ ಚಾಂದ್ರಮಾನ ಯುಗಾದಿಯ ದಿನ. ಇದು ಸಾಮಾನ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್‌ನ ಮಾರ್ಚ್ ಅಥವಾ ಏಪ್ರಿಲ್ ತಿಂಗಳ ನಡುವೆ ಬರುತ್ತದೆ.ಯುಗಾದಿ ಎಂಬ ಪದವು ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳ ಸಮ್ಮಿಲನದಿಂದ ಆಗಿದೆ, ಸಂಸ್ಕೃತದಲ್ಲಿ ಯುಗ ಎಂದರೆ ವರ್ಷ, ಆದಿ ಎಂದರೆ ಆರಂಭ ಯುಗಾದಿ ಎಂದರೆ ವರ್ಷದ ಆರಂಭ ಎಂದರ್ಥ.

ಯುಗಾದಿ ಹಬ್ಬದ ದಿನಾಂಕ ಮತ್ತು ಮುಹೂರ್ತ

  • ಪ್ರತಿಪಾದ ತಿಥಿ ಆರಂಭ ಕಾಲ: 24 ಮಾರ್ಚ್ 2020 ಮಧ್ಯಾಹ್ನ 2:57
  • ಪ್ರತಿಪಾದ ತಿಥಿ ಅಂತ್ಯ ಕಾಲ: 25 ಮಾರ್ಚ್‌ 2020 ಸಂಜೆ 5:26

ಹೊಸ ಚಿಗುರು ಹೊಸ ವಸಂತ

ವಸಂತ ಋತುವಿನ ಆಗಮನ ಕಾಲದಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಯುಗಾದಿ ಹಬ್ಬ ಸಮೃದ್ಧಿಯನ್ನು ಸೂಚಿಸುತ್ತದೆ. ವಸಂತ ಕಾಲದ ಹೊಸ ಚಿಗುರು, ಹೊಸ ಮೊಗ್ಗುಗಳು, ಪ್ರಕಾಶಮಾನವಾದ ಸೂರ್ಯನ ಬೆಳಕು, ಮತ್ತು ಪ್ರಕೃತಿ ಜಗವೇ ಚಳಿಗಾಲದ ನಿದ್ದೆಯಿಂದ ಎಚ್ಚರಗೊಳ್ಳುವಂತೆ ತೋರುತ್ತವೆ. ಆದ್ದರಿಂದ ಈ ಹಬ್ಬವು ಹೊಸ ಯುಗದ ಹುಟ್ಟನ್ನು ಸೂಚಿಸುತ್ತದೆ.


ಶಿವನನ್ನು ತೃಪ್ತಿಗೊಳಿಸುವ ರುದ್ರಾಭಿಷೇಕ ಪೂಜೆಯ ಮಹತ್ವವೇನು ಗೊತ್ತಾ?

ಹಿಂದೂ ಪುರಾಣದ ಪ್ರಕಾರ..

ಹಿಂದೂ ಪುರಾಣಗಳ ಪ್ರಕಾರ, ಸೃಷ್ಟಿಕರ್ತ ಭಗವಾನ್ ಬ್ರಹ್ಮ ಈ ದಿನ ತನ್ನ ಸೃಷ್ಟಿಯನ್ನು ಪ್ರಾರಂಭಿಸಿದ ಎಂಬ ನಂಬಿಕೆಯಿದೆ. ಬ್ರಹ್ಮದೇವನು ತನ್ನ ಸೃಷ್ಟಿ ಕಾರ್ಯವನ್ನು ಚೈತ್ರ ಶುಕ್ಲ ಪಾಡ್ಯದಿಂದ ಪ್ರಾರಂಭಿಸಿದ ಎಂದೂ ಹೇಳಲಾಗುತ್ತದೆ. ಅಂದಿನಿಂದಲೇ ಕಾಲಗಣನೆ ಆರಂಭವಾಯಿತು. ಗಣನೆಗೆ ಅನುಕೂಲವಾಗಲೆಂದು ಬ್ರಹ್ಮನೇ ವಾರ, ತಿಥಿ, ನಕ್ಷತ್ರ, ಮಾಸ, ಋತುಗಳನ್ನು ಮಾಡಿದ ಎನ್ನುತ್ತವೆ ಪುರಾಣಗಳು.ಕಾರಣ ಈ ದಿನ ಯುಗಗಳ ಸೃಷ್ಟಿಕರ್ತ ವಿಷ್ಣು ವಿನೊಂದಿಗೆ ಬ್ರಹ್ಮ ದೇವರನ್ನು ಪೂಜಿಸಲಾಗುತ್ತದೆ. ಅಲ್ಲದೆ ಈ ದಿನವನ್ನು ಯಾವುದೇ ಹೊಸ ಉದ್ಯಮವನ್ನು ಪ್ರಾರಂಭಿಸಲು ಮತ್ತು ಹೊಸ ಹೂಡಿಕೆಗಳನ್ನು ಮಾಡಲು ಈ ದಿನವನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ.


ಬ್ರಹ್ಮನನ್ನು ಯಾವುದೇ ದೇವಾಲಯಗಳಲ್ಲಿ ಪೂಜಿಸುವುದಿಲ್ಲ..! ಕಾರಣ ಗೊತ್ತಾ?

ವರ್ಷದ ಮೊದಲ ಹಬ್ಬದ ಸಂಭ್ರಮ

ಈ ಹೊಸ ವರ್ಷದ ಹೊಸ ಹಬ್ಬದ ಸಂಭ್ರಮ, ಹಬ್ಬದ ಸಿದ್ಧತೆಗಳು ಒಂದು ವಾರದ ಮೊದಲೇ ಪ್ರಾರಂಭವಾಗುತ್ತವೆ. ಮನೆಯ ಸಂಪೂರ್ಣವಾಗಿ ಶುಚಿಗೊಳಿಸಲಾಗುತ್ತದೆ. ಕುಟುಂಬದ ಪ್ರತಿಯೊಬ್ಬರಿಗೂ ಹೊಸ ಬಟ್ಟೆಗಳನ್ನು ಖರೀದಿಸಲಾಗುತ್ತದೆ. ಹಬ್ಬದ ದಿನದಂದು ಮನೆಯ ಹೆಂಗಸರು ಮನೆಯ ಬಾಗಿಲಲ್ಲಿ ವರ್ಣಮಯ ‘ರಂಗೋಲಿ’ ಹಾಕುತ್ತಾರೆ. ಹೊಸ ವರ್ಷವನ್ನು ಸ್ವಾಗತಿಸಲು ತಾಜಾ ಮಾವಿನ ಎಲೆಗಳಿಂದ ಮಾಡಿದ ತೋರಣ ಬಾಗಿಲಿಗೆ ಕಟ್ಟಲಾಗುತ್ತದೆ.

ಯುಗಾದಿಯಂದು ಎಣ್ಣೆ ಸ್ನಾನ

ಯುಗಾದಿ ಹಬ್ಬದಲ್ಲಿ ಎಣ್ಣೆ ಸ್ನಾನ ಮತ್ತೊಂದು ವಿಶೇಷ, ಮನೆ ಮಂದಿಯೆಲ್ಲ ಸ್ನಾನ ಮಾಡಿದ ನಂತರ ಮತ್ತು ಏನನ್ನಾದರೂ ತಿನ್ನುವ ಮೊದಲು, ಕರಗಿದ ತುಪ್ಪ ತುಂಬಿದ ಬಟ್ಟಲಿನಲ್ಲಿ ಒಬ್ಬರು ಮತ್ತೊಬ್ಬರ ಪ್ರತಿಬಿಂಬವನ್ನು ನೋಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಮನೆಯ ಹಿರಿಯ ಮಹಿಳೆಯರು, ನಂತರ ಕುಟುಂಬದ ಎಲ್ಲ ಸದಸ್ಯರ ಹಣೆಯ ಮೇಲೆ ‘ಕುಂಕುಮ’ ಹಚ್ಚಿ. ಭಗವಂತನ ವಿಗ್ರಹಕ್ಕೆ ತಾಜಾ ಬಟ್ಟೆ ಮತ್ತು ಬಿಳಿ ಮಲ್ಲಿಗೆ ಹೂಗಳಿಂದ ಮಾಡಿದ ಹಾರವನ್ನು ಅಲಂಕರಿಸಿ, ಇಡೀ ಕುಟುಂಬವು ಒಟ್ಟಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಪಂಚಾಂಗ ಶ್ರವಣ

ಪ್ರಾರ್ಥನೆ ಮುಗಿದ ನಂತರ ಪಂಚಾಂಗ ಪೂಜೆ ಓದುವುದು ವಾಡಿಕೆ. ಪಂಚಾಂಗ ಪೂಜೆಯ ನಂತರ ಮನೆಯ ಹಿರಿಯರು ಮನೆಯ ಪ್ರತಿಯೊಬ್ಬರೂ ಕೇಳುವಂತೆ ಪಂಚಾಂಗ ಓದುತ್ತಾರೆ. ಈ ಶುಭ ದಿನದಂದು ವಿಶೇಷ ಸಾಂಪ್ರದಾಯಿಕ ಭಕ್ಷ್ಯಗಳನ್ನು ಭಗವಂತನಿಗೆ ನೈವೇದ್ಯಕ್ಕಾಗಿ ತಯಾರಿಸಲಾಗುತ್ತದೆ. ಪುಳಿಯೋಗರೆ,ಒಬ್ಬಟ್ಟು, ಸಿಹಿ ಪೊಂಗಲ್, ಮಾವು ಪಚಡಿ,ಹೆಸರುಕಾಳು ಪಾಯಸ ಕೋಸಂಬರಿ, ವಡಾ ಇತ್ಯಾದಿ ತಿಂಡಿಗಳನ್ನ ಮಾಡಲಾಗುತ್ತದೆ. ಹೀಗೆ ಹಬ್ಬಕ್ಕೆಂದು ಮಾಡಿದ ಅಡುಗೆಯನ್ನ ಮೊದಲು ಭಗವಂತನಿಗೆ ನೈವೇದ್ಯ ಮಾಡಿ, ನಂತರ ಎಲ್ಲರಿಗೂ ‘ಪ್ರಸಾದ’ ವಿತರಿಸಲಾಗುತ್ತದೆ. ಹಬ್ಬದ ದಿನ ಸಂಜೆ ಭಗವಂತನ ಆಶೀರ್ವಾದ ಪಡೆಯಲು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದೇವಾಲಯದಲ್ಲಿ ಅರ್ಚಕರು ಎಲ್ಲರಿಗೂ ಹೊಸ ವರ್ಷದ ಪಂಚಾಂಗವನ್ನು ಓದಿ ಹೇಳುತ್ತಾರೆ . ಈ ಸಂಪ್ರದಾಯವನ್ನು ‘ಪಂಚಾಗ ಶ್ರವಣ' ಎಂದು ಕರೆಯಲಾಗುತ್ತದೆ.


ನಮಸ್ಕಾರ ಮಾಡುವುದರಿಂದಾಗುವ ಆಧ್ಯಾತ್ಮಿಕ, ವೈಜ್ಞಾನಿಕ ಪ್ರಯೋಜನಗಳೇನು ಗೊತ್ತೇ?

ಸಿಹಿ ಕಹಿಗಳ ಸಂಮಿಶ್ರಣ

ಯುಗಾದಿ ಹಬ್ಬದಂದು ಇನ್ನೊಂದು ವಿಶೇಷ ಆಚರಣೆ ಎಂದರೆ ಬೇವು - ಬೆಲ್ಲ ಹಂಚುವುದು, ಇದು ಜೀವನದ ಏಳು ಬೀಳುಗಳನ್ನ ಸೂಚಿಸುತ್ತದೆ. ಇದರಲ್ಲಿನ ಬೆಲ್ಲ ಬಾಳಿನ ಸಂತೋಷದ ಕ್ಷಣಗಳ ಸಂಕೇತವಾದರೆ, ಹುಳಿ ಬದುಕಿನ ಸವಾಲುಗಳನ್ನ, ಮಾವು ಆಶ್ಚರ್ಯದ ಕ್ಷಣಗಳನ್ನ, ಬೇವು ಕಹಿ ಕ್ಷಣಗಳ ಸಂಕೇತವಾಗಿದೆ. ವಿಶೇಷವಾದ ಬೇವು -ಬೆಲ್ಲ ಮಿಶ್ರಣವನ್ನು ಮೊದಲು ಭಗವಂತನಿಗೆ ಅರ್ಪಿಸಿ, ನಂತರ ಕುಟುಂಬದ ಸದಸ್ಯರಿಗೆ ಮತ್ತು ಮನೆಗೆ ಬರುವ ಅತಿಥಿಗಳಿಗೂ ನೀಡಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ