ಆ್ಯಪ್ನಗರ

ಆತ್ಮೀಯರಿಗೆ ಉಡುಗೊರೆ ನೀಡುವ ಮುನ್ನ ಈ ಸಂಗತಿಯನ್ನು ನೆನಪಿಡಿ..!

ನಮ್ಮ ಪ್ರೀತಿ ಪಾತ್ರರಿಗೆ, ಸ್ನೇಹಿತರಿಗೆ ಉಡುಗೊರೆ ನೀಡುವಾಗ ಆಯ್ಕೆಯು ತಪ್ಪಾಗಿದ್ದರೆ ಕೆಲವೊಮ್ಮೆ ಅದನ್ನು ನೀಡಿದವರಿಗೆ ಹಾಗೂ ಪಡೆದವರಿಗೂ ದುರಾದೃಷ್ಟ ಎದುರಾಗುವುದು ಎಂದು ಹೇಳಲಾಗುತ್ತದೆ.

Vijaya Karnataka Web 14 Nov 2019, 3:14 pm
ನಮ್ಮವರಿಗೆ ಪ್ರೀತಿಯಿಂದ ಉಡುಗೊರೆ ನೀಡುವುದು ಎಂದರೆ ಅದೇನೋ ಒಂದು ರೀತಿಯ ಸಂತೋಷ. ಬಗೆ ಬಗೆಯ ಉಡುಗೊರೆಗಳ ಆಯ್ಕೆ ಮಾಡುವುದು, ವಿಶೇಷ ಆಶ್ಚರ್ಯಗಳಿಂದ ಅವರನ್ನು ರಂಜಿಸುವುದು ಎಲ್ಲವೂ ಸಂತೋಷದ ಬಂಧಗಳಿಗೆ ಮೆರಗನ್ನು ನೀಡುತ್ತವೆ. ಉಡುಗೊರೆ ನೀಡುವ ಪದ್ಧತಿಯು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.
Vijaya Karnataka Web gifting


ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಿದಾಗ ಅಥವಾ ವಿಶೇಷ ಪೂಜಾ ಸಮಯದಲ್ಲಿ ಆಪ್ತರಿಗೆ ಹಾಗೂ ಬಂಧು ಮಿತ್ರರಿಗೆ ವಿಶೇಷ ಉಡುಗೊರೆಯನ್ನು ನೀಡಿ, ಸಂತೋಷ ಪಡಿಸಲಾಗುವುದು. ಅಂತೆಯೇ ಬಂಧುಗಳು ಸಹ ಉಡುಗೊರೆಯನ್ನು ನೀಡುವುದರ ಮೂಲಕ ಶುಭ ಕೋರುತ್ತಾರೆ. ಉಡುಗೊರೆ ನೀಡುವುದು ಎಂದರೆ ಸಂತೋಷದ ಕ್ಷಣಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಎಂದರ್ಥ.

ಅನಿರೀಕ್ಷಿತವಾಗಿ ಎಡಗಣ್ಣು ಕುಣಿದರೆ ಅದರರ್ಥ ಏನು ಗೊತ್ತಾ?

ಉಡುಗೊರೆ ನೀಡುವ ಪದ್ಧತಿಯು ಶತಮಾನಗಳಷ್ಟು ಪುರಾತನ ಪದ್ಧತಿ. ಅದನ್ನು ವಿವಿಧ ಸಂದರ್ಭದಲ್ಲಿ ಪ್ರಮುಖ ಉದ್ದೇಶಗಳ ಮೇರೆಗೆ ಉಡುಗೊರೆಯನ್ನು ನೀಡಲಾಗುತ್ತಿತ್ತು. ಜೊತೆಗೆ ಸೂಕ್ತ ಸಂದರ್ಭಗಳಲ್ಲಿ ಪ್ರಮುಖ ವಸ್ತುಗಳನ್ನೇ ಉಡುಗೊರೆಯನ್ನಾಗಿ ನೀಡಬೇಕು ಎನ್ನುವ ಆಚರಣೆ ಸಹ ಇದ್ದದ್ದನ್ನು ನಾವು ಕಾಣಬಹುದು.

ಹಿಂದಿನ ಕಾಲದಲ್ಲಿ ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಜನರು ಅನುಭವಿಸುತ್ತಿದ್ದರು. ಜೊತೆಗೆ ಅವಿಭಕ್ತ ಕುಟುಂಬ ಯೋಜನೆಯೇ ಜಾರಿಯಲ್ಲಿದ್ದದ್ದರಿಂದ ಎಲ್ಲಾ ವ್ಯಕ್ತಿಗಳಿಗೂ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಪ್ತರು ಉಡುಗೊರೆಯನ್ನು ನೀಡುವಾಗ ಹೆಚ್ಚಾಗಿ ಮೂಲಭೂತವಾಗಿ ಅಗತ್ಯವಿರುವ ಬಟ್ಟೆ-ಬರೆ ಹಾಗೂ ಮನೆಗೆ ಅಗತ್ಯ ಇರುವ ವಸ್ತುಗಳನ್ನೇ ಉಡುಗೊರೆಯಾಗಿ ನೀಡುತ್ತಿದ್ದರು.

ಸೂರ್ಯಾಸ್ತದ ನಂತರ ಯಾಕೆ ಉಪ್ಪು ಎರವಲು ಪಡೆಯುವುದಿಲ್ಲ ಗೊತ್ತಾ?

ಆದರೆ ಈಗ ಸಂಗತಿಗಳು ಬದಲಾಗಿವೆ. ಆಧುನಿಕತೆಗೆ ತೆರೆದುಕೊಂಡ ಜನರ ಚಿಂತನೆಗಳು ಹೊಸ ಆಯಾಮಗಳನ್ನು ಹುಡುಕುತ್ತವೆ. ಹಾಗಾಗಿ ಉಡುಗೊರೆ ನೀಡುವುದು, ಶುಭಾಶಯ ಕೋರುವುದು ಎಲ್ಲವೂ ವಿಭಿನ್ನ ಸಂಗತಿಗಳಿಂದ ಕೂಡಿರುತ್ತವೆ. ನಾವು ಆಯ್ಕೆ ಮಾಡುವ ಉಡುಗೊರೆಯ ವಸ್ತುಗಳು ಅವರ ಸಂತೋಷಕ್ಕೆ ಕಾರಣವಾಗಲಿ ಎಂದು ಬಯಸುತ್ತೇವೆ. ಅದಕ್ಕಾಗಿ ವಿಶೇಷ ವಸ್ತುಗಳ ಹುಡುಕಾಟವೂ ನಡೆಯುತ್ತದೆ. ಜೊತೆಗೆ ನಾವು ನೀಡಿದ ವಸ್ತುವನ್ನು ಅವರು ಸರಿಯಾದ ಉದ್ದೇಶಗಳಿಗೆ ಬಳಸಿಕೊಳ್ಳಲಿ ಎನ್ನುವ ಆಶಯವೂ ಇರುತ್ತದೆ. ನಮ್ಮ ಉಡುಗೊರೆಯನ್ನು ಪಡೆದ ವ್ಯಕ್ತಿಗಳು ಉಡುಗೊರೆಯ ಪರಿಣಾಮದಿಂದ ಋಣಾತ್ಮಕ ಪರಿಸ್ಥಿತಿಯನ್ನು ಸಹ ಎದುರಿಸಬೇಕಾಗುವುದು ಎಂದು ಧಾರ್ಮಿಕ ಚಿಂತನೆ ತಿಳಿಸುತ್ತದೆ.

ಪ್ರೀತಿ-ಸಂತೋಷದ ವಿನಿಮಯಕ್ಕಾಗಿ ಹಾಗೂ ಸಹಾಯದ ದೃಷ್ಟಿಯಿಂದ ನೀಡುವ ಉಡುಗೊರೆಯು ದುಃಖವನ್ನು ನೀಡಬಾರದು. ಹಾಗಾಗಿ ಉಡುಗೊರೆಯನ್ನು ಆಯ್ಕೆ ಮಾಡುವ ಮುನ್ನ ಅದರ ಬಗ್ಗೆ ಯೋಚನೆ ಮಾಡುವುದು ಮುಖ್ಯ. ಸರಿಯಾದ ಉಡುಗೊರೆಯ ಆಯ್ಕೆಯಿಂದ ಎಲ್ಲರೂ ಸಂತೋಷದಿಂದ ಇರುತ್ತಾರೆ. ನೀವು ಯಾವ ಬಗೆಯ ಉಡುಗೊರೆಯನ್ನು ನೀಡಬಹುದು? ಯಾವ ಬಗೆಯ ಉಡುಗೊರೆಯನ್ನು ನೀಡಬಾರದು? ಎನ್ನುವ ಗೊಂದಲವನ್ನು ಹೊಂದಿದ್ದರೆ ಈ ಲೇಖನವು ನಿಮಗೆ ಸೂಕ್ತ ಮಾಹಿತಿಯನ್ನು ನೀಡುವುದು.

ಪರ್ಸ್ ಅಥವಾ ಬ್ಯಾಗ್ ಉಡುಗೊರೆ
ಕೈಚೀಲ, ಪರ್ಸ್, ಹ್ಯಾಂಡ್ ಬ್ಯಾಗ್‌ಗಳಂತಹ ಉಡುಗೊರೆಯನ್ನು ನೀಡಲು ನೀವು ಬಯಸಿದ್ದರೆ ಖಾಲಿ ಚೀಲವನ್ನು ನೀಡಬಾರದು. ಅದರಲ್ಲಿ ಹಣ ಅಥವಾ ನಾಣ್ಯಗಳನ್ನು ಇಟ್ಟು ಕೊಡಬೇಕು. ಖಾಲಿ ಪರ್ಸ್ ಅಥವಾ ಬ್ಯಾಗ್‌ಗಳ ಉಡುಗೊರೆ ನೀಡಬಾರದು. ಅದು ನೀಡುವವರ ಹಾಗೂ ಪಡೆಯುವವರ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎನ್ನುವ ನಂಬಿಕೆಯಿದೆ. ಉಡುಗೊರೆ ನೀಡುವ ಕೈ ಚೀಲದಲ್ಲಿ ಹಣವನ್ನು ಇಟ್ಟು ನೀಡಿದರೆ ಅದನ್ನು ಪಡೆದವರು ಹಾಗೂ ನೀಡಿದವರಲ್ಲಿ ಸದಾ ಕಾಲ ಹಣವು ಉಳಿಯುತ್ತದೆ ಎನ್ನುವ ಸಂದೇಶವನ್ನು ನೀಡುವುದು.

ಮನೆಯಲ್ಲಿ ಇರುವೆ ಗೂಡು ಕಟ್ಟಿದರೆ ಅದರರ್ಥ ಏನು ಗೊತ್ತಾ?

ಶೂ ಅಥವಾ ಚಪ್ಪಲಿಯ ಉಡುಗೊರೆ
ಸಣ್ಣ-ಪುಟ್ಟ ಸಂತೋಷಗಳ ಸಂದರ್ಭದಲ್ಲಿ ಅಥವಾ ಹಬ್ಬ-ಹರಿದಿನಗಳ ಆಚರಣೆಯ ವೇಳೆ ಶೂ ಅಥವಾ ಚಪ್ಪಲಿಯ ಉಡುಗೊರೆಯನ್ನು ನೀಡಬಾರದು. ಈ ವಸ್ತುವಿನ ಉಡುಗೊರೆ ಮಾಡಿದರೆ ನಿಮ್ಮ ಆಪ್ತರು ಅಂದರೆ ಉಡುಗೊರೆಯನ್ನು ಪಡೆದವರು ನಿಮ್ಮಿಂದ ಶಾಶ್ವತವಾಗಿ ದೂರವಾಗುತ್ತಾರೆ ಎಂದು ಹೇಳಲಾಗುತ್ತದೆ. ಅಲ್ಲದೆ ಚರ್ಮದಿಂದ ಮಾಡಿರುವ ಚಪ್ಪಲಿ ಅಥವಾ ಶೂ ಶುಭ ಸಂದರ್ಭದಲ್ಲಿ ಉಡುಗೊರೆ ಮಾಡಲು ಉತ್ತಮವಾದ ಆಯ್ಕೆಯಲ್ಲ ಎನ್ನುವುದು ತಿಳಿಸುವುದು.

ಕತ್ತರಿ, ಚಾಕು ಅಥವಾ ಮೊನಚಾದ ವಸ್ತುಗಳ ಉಡುಗೊರೆ
ಶುಭವನ್ನು ಕೋರುವ ಸಂದರ್ಭದಲ್ಲಿ ಕತ್ತರಿ, ಚಾಕು ಹಾಗೂ ಮೊನಚಾದ ವಸ್ತುಗಳ ಉಡುಗೊರೆಯನ್ನು ನೀಡಬಾರದು. ಪ್ರೇಮಿಗಳು ಈ ರೀತಿಯ ವಸ್ತುಗಳನ್ನು ಉಡುಗೊರೆಯನ್ನಾಗಿ ನೀಡಿದರೆ ಅವರ ಸಂಬಂಧ ಶೀಘ್ರದಲ್ಲಿಯೇ ಕೊನೆಗೊಳ್ಳುವುದು ಎನ್ನುವುದನ್ನು ಸೂಚಿಸುವುದು. ಸ್ನೇಹಿತರು ಅಥವಾ ಬಂಧುಗಳು ನಿಮಗೆ ಈ ರೀತಿ ವಸ್ತುಗಳ ಉಡುಗೊರೆ ನೀಡಿದರೆ ಅವರಿಗೆ ಆ ಕ್ಷಣದಲ್ಲಿಯೇ ಹಣವನ್ನು ನೀಡಬೇಕು. ಆಗ ಅದನ್ನು ನೀವು ಖರೀದಿಸಿದಂತಾಗುವುದು. ಅದರಿಂದ ಯಾವುದೇ ದುಷ್ಪರಿಣಾಮ ಉಂಟಾಗದು.

ಹಣದ ಉಡುಗೊರೆ
ಇತ್ತೀಚಿನ ದಿನಗಳಲ್ಲಿ ಉಡುಗೊರೆಯಾಗಿ ಹಣವನ್ನು ನೀಡಲು ಬಹುತೇಕ ಜನರು ಇಚ್ಚಿಸುತ್ತಾರೆ. ಹಣವು ಅಗತ್ಯ ವಸ್ತುಗಳನ್ನು ಖರೀದಿಸಲು ಸಹಾಯ ಮಾಡುವುದು. ಇತರ ವಸ್ತುಗಳನ್ನು ನೀಡಿದರೆ ಅವು ಉಪಯೋಗಕ್ಕೆ ಬಾರದೆ ಹೋಗಬಹುದು ಎನ್ನುವ ಮನೋಭಾವವನ್ನು ಹೊಂದಿರುತ್ತಾರೆ. ಹಣದ ಉಡುಗೊರೆ ನೀಡುವಾಗ ನೀಡುವ ಹಣವು ಬೆಸ ಸಂಖ್ಯೆಯಿಂದ ಕೂಡಿರಬೇಕು ಎಂದು ಹೇಳಲಾಗುತ್ತದೆ. ಅದು ಪಡೆದವರ ಹಾಗೂ ನೀಡಿದವರಿಗೆ ಉತ್ತಮ ಅದೃಷ್ಟ ಹಾಗೂ ಫಲವನ್ನು ನೀಡುವುದು ಎಂದು ಹೇಳಲಾಗುವುದು.

ನವಧಾನ್ಯಗಳ ಉಡುಗೊರೆ ಮಾಡಿ
ಹೊಸ ಮನೆ ಅಥವಾ ಹೊಸ ಜೋಡಿಗಳಿಗೆ ಉಡುಗೊರೆ ಮಾಡುವಾಗ ನವಧಾನ್ಯ ಅಥವಾ ಆಹಾರ ವಸ್ತುಗಳ ಉಡುಗೊರೆ ಮಾಡಬೇಕು. ಅವು ಮನೆಯ ಸಿರಿಯನ್ನು ಸಂಕೇತಿಸುತ್ತವೆ. ನೀವು ನೀಡುವ ಉಡುಗೊರೆಯ ಫಲವಾಗಿ ಸದಾ ಕಾಲ ಧಾನ್ಯಗಳು ಮನೆಯಲ್ಲಿ ತುಂಬಿರುತ್ತವೆ. ಮನೆ ಮಂದಿಗೆ ಊಟ-ತಿಂಡಿಗಳಿಗೆ ಎಂದಿಗೂ ಕೊರೆತೆ ಉಂಟಾಗದು ಎಂದು ಹೇಳಲಾಗುವುದು.

Lizard Superstition: ಹಲ್ಲಿ ಲೊಚಗುಟ್ಟಿದರೆ ಶುಭ ಸೂಚನೆಯೇ?

ಮುಳ್ಳಿರುವ ಹೂವುಗಳನ್ನು ನೀಡಬಾರದು
ವಿಶೇಷ ಸಂದರ್ಭದಲ್ಲಿ ಹೂವಿನ ಗುಚ್ಚಗಳನ್ನು ನೀಡುವುದು ಸಂಪ್ರದಾಯ. ಅಂತಹ ಸಮಯದಲ್ಲಿ ಮುಳ್ಳುಗಳನ್ನು ಹೊಂದಿರುವ ಗುಲಾಬಿ ಹೂವನ್ನು ನೀಡಬಾರದು. ಅದು ಸಂಬಂಧವನ್ನು ಹಾಳು ಮಾಡುತ್ತದೆ. ಜೊತೆಗೆ ಜೀವನದಲ್ಲಿ ಸದಾ ಕಷ್ಟವನ್ನು ಅನುಭವಿಸುವ ಸಾಧ್ಯತೆಗಳಿರುತ್ತವೆ. ಮುಳ್ಳು ನಕಾರಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸುವುದು.

ಕನ್ನಡಿ ಮತ್ತು ಛತ್ರಿ
ಉಡುಗೊರೆಯಾಗಿ ಕನ್ನಡಿಯನ್ನು ನೀಡಬಾರದು. ಅದು ದೀರ್ಘಾಯುಷ್ಯವನ್ನು ಹಾಳು ಮಾಡುವುದು ಎನ್ನುವ ನಂಬಿಕೆಯಿದೆ. ಅದು ಕೆಟ್ಟ ಅದೃಷ್ಟವನ್ನು ಆಹ್ವಾನಿಸುವುದು. ಕೊಡೆ ಅಥವಾ ಚತ್ರಿಯು ಶವ ಸಂಸ್ಕಾರದ ಸಮಯದಲ್ಲಿ ನೀಡುವ ದಾನದ ಒಂದು ವಸ್ತು. ಅದನ್ನು ಶುಭ ಸಮಾರಂಭದಲ್ಲಿ ಹಾಗೂ ಶುಭ ಕೋರುವ ಸಂದರ್ಭದಲ್ಲಿ ನೀಡಬಾರದು. ಅದು ನೀಡಿದವರಿಗೆ ಹಾಗೂ ಪಡೆದವರಿಗೆ ಕೆಟ್ಟ ಅದೃಷ್ಟವನ್ನು ನೀಡುವುದು ಎಂದು ಧಾರ್ಮಿಕ ನಂಬಿಕೆಗಳು ತಿಳಿಸುತ್ತವೆ.

ಬಟ್ಟೆಗಳ ಉಡುಗೊರೆ ನೀಡಿ
ಮಕ್ಕಳಿಗೆ ಹಾಗೂ ದೊಡ್ಡವರಿಗೆ ಉಡುಗೊರೆಯನ್ನು ನೀಡಲು ನೀವು ಬಯಸುತ್ತೀರಿ ಎಂದಾದರೆ ಬಟ್ಟೆಗಳ ಆಯ್ಕೆಯನ್ನು ಮಾಡಬಹುದು. ರೇಷ್ಮೆ ಮತ್ತು ಹತ್ತಿಯ ಬಟ್ಟೆಯ ದಾನ ಹಾಗೂ ಉಡುಗೊರೆಯು ಶುಭವನ್ನು ಸೂಚಿಸುತ್ತವೆ. ಅವು ವ್ಯಕ್ತಿಯ ಪುಣ್ಯವನ್ನು ಹೆಚ್ಚಿಸುವುದು. ಅದನ್ನು ಪಡೆದವರು ಸಹ ಬಟ್ಟೆ ಬರೆಗಳ ಕೊರತೆಯನ್ನು ಅನುಭವಿಸರು. ಸದಾ ಕಾಲ ಮನೆಯಲ್ಲಿ ನೆಮ್ಮದಿಯನ್ನು ಪಡೆದುಕೊಳ್ಳುವರು.

ದೇವರಿಗೆ ಸಂಬಂಧಿಸಿದ ಉಡುಗೊರೆ ನೀಡಿ
ದೇವರ ಚಿತ್ರ, ದೇವರ ಮೂರ್ತಿ, ದೀಪದ ಹಣತೆ, ದೇವರ ಪೂಜಾ ಸಾಮಾಗ್ರಿಗಳು, ದೇವರ ಅಲಂಕಾರಿಕ ಚಸ್ತುಗಳು ಹಾಗೂ ಧಾರ್ಮಿಕ ಪೂಜಾ ವಿಧಿ-ವಿಧಾನಗಳಿಗೆ ಸಂಬಂಧಿಸಿದ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಕು. ದೇವರಿಗೆ ಸಂಬಂಧಿಸಿದ ವಸ್ತುಗಳು ವ್ಯಕ್ತಿಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುವುದು. ಮನೆಯಲ್ಲಿ ಸದಾ ಸುಖ ಶಾಂತಿ ನೆಲೆಸುವಂತೆ ಮಾಡುವುದು. ಹಾಗಾಗಿ ನೀವು ನೀಡುವ ಉಡುಗೊರೆಗಳು ನಿಮಗೆ ಹಾಗೂ ನಿಮ್ಮವರಿಗೆ ಶುಭವನ್ನು ತರುವಂತಿರಲಿ. ಆಗ ಉಡುಗೊರೆ ನೀಡಿರುವುದು ಸಾರ್ಥಕ ಎನಿಸಿಕೊಳ್ಳುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ