ಆ್ಯಪ್ನಗರ

Famous Temples : ಮಹಾರಾಷ್ಟ್ರಕ್ಕೆ ಹೋದರೆ ಈ 5 ಪ್ರಸಿದ್ಧ ದೇಗುಲಗಳಿಗೂ ಭೇಟಿ ನೀಡಬಹುದು

ಮಹಾರಾಷ್ಟ್ರ ತನ್ನದೇ ಆದ ಸಂಸ್ಕೃತಿ, ಸೌಂದರ್ಯಕ್ಕೆ ಹೆಸರಾದ ರಾಜ್ಯ. ಇಲ್ಲಿ ಸಾಕಷ್ಟು ಸುಂದರ ಧಾರ್ಮಿಕ ಕೇಂದ್ರಗಳಿವೆ. ಅವುಗಳಲ್ಲಿ ಐದು ಪ್ರಸಿದ್ಧ ದೇವಸ್ಥಾನಗಳ ಬಗ್ಗೆ ಇಲ್ಲಿ ನೋಡೋಣ.

Authored byಸುನೀಲ್ | Vijaya Karnataka Web 19 Jan 2023, 4:07 pm
ದೇಗುಲಗಳು ಒಂದು ಪ್ರದೇಶದ ಹೆಗ್ಗುರುತುಗಳು. ಭಾರತದ ಮೂಲೆ ಮೂಲೆಗಳಲ್ಲಿ ಅದ್ಭುತ ದೇವಸ್ಥಾನಗಳನ್ನು ನೋಡಬಹುದು. ಈ ಎಲ್ಲಾ ದೇವಸ್ಥಾನಗಳಿಗೆ ತನ್ನದೇ ಆದ ಹಿರಿಮೆ ಗರಿಮೆಯ ಕಿರೀಟಗಳೂ ಇರುತ್ತವೆ. ಹೀಗಾಗಿ, ಈ ಎಲ್ಲಾ ದೇವಸ್ಥಾನಗಳು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರನ್ನು ಕೈಬೀಸಿ ಕರೆಯುತ್ತಿರುತ್ತದೆ. ಅಂತೆಯೇ, ಮಹಾರಾಷ್ಟ್ರದಲ್ಲಿ ಸಾಕಷ್ಟು ಸುಂದರ ದೇಗುಲಗಳಿವೆ. ಮಹಾರಾಷ್ಟ್ರ ಶ್ರೀಮಂತ ಪರಂಪರೆ, ಇತಿಹಾಸವನ್ನು ಹೊಂದಿರುವ ರಾಜ್ಯ. ಇಂತಹ ಮಹಾರಾಷ್ಟ್ರದ ಹೆಗ್ಗುರುತಿನಂತಿರುವ ದೇವಾಲಯಗಳಿಗೆ ಪ್ರತಿದಿನ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
Vijaya Karnataka Web these are 5 famous temples in maharashtra you can visit these temples to get amazing spiritual experience
Famous Temples : ಮಹಾರಾಷ್ಟ್ರಕ್ಕೆ ಹೋದರೆ ಈ 5 ಪ್ರಸಿದ್ಧ ದೇಗುಲಗಳಿಗೂ ಭೇಟಿ ನೀಡಬಹುದು


Image by Vignesh Murugan from Pixabay

ಗ್ರಿಷ್ಣೇಶ್ವರ ದೇವಸ್ಥಾನ

ಮಹಾರಾಷ್ಟ್ರದ ಸುಂದರ ಮತ್ತು ಪುರಾತನ ದೇಗುಲಗಳಲ್ಲಿ ಒಂದು ಗ್ರಿಷ್ಣೇಶ್ವರ ದೇವಾಲಯ. ಇದೊಂದು ಶಿವ ದೇಗುಲ ಇದನ್ನು ಗ್ರಿಷ್ಣೇಶ್ವರ ಜ್ಯೋತಿರ್ಲಿಂಗ ದೇವಾಲಯ ಅಥವಾ ಘ್ರಷ್ನೇಶ್ವರ ದೇವಾಲಯ ಎಂದೂ ಕರೆಯಲಾಗುತ್ತದೆ. ಶಿವ ಪುರಾಣದಲ್ಲಿ ಉಲ್ಲೇಖಿಸಲಾಗಿರುವ 12 ಜ್ಯೋತಿರ್ಲಿಂಗ ಇರುವ ದೇಗುಲಗಳಲ್ಲಿ ಇದು ಕೂಡಾ ಒಂದು. ಇದು ಮಹಾರಾಷ್ಟ್ರದ ಪ್ರಸಿದ್ಧ ಯಾತ್ರಾ ಕ್ಷೇತ್ರ ಕೂಡಾ ಹೌದು. ಔರಂಗಾಬಾದ್ ನಗರದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿ ಈ ದೇವಸ್ಥಾನ ಇದೆ. ಇಲ್ಲಿರುವುದು ಹನ್ನೆರಡನೆಯ ಜ್ಯೋತಿರ್ಲಿಂಗ ಎಂದು ಪರಿಗಣಿಸುತ್ತದೆ. ಮಹಾರಾಷ್ಟ್ರದಲ್ಲಿ ಒಟ್ಟು ನಾಲ್ಕು ಜ್ಯೋತಿರ್ಲಿಂಗಗಳಿವೆ. ಭೀಮಾಶಂಕರ, ತ್ರಯಂಬಕೇಶ್ವರ, ಔಂಧ ನಾಗನಾಥ ದೇವಾಲಯ ಮತ್ತು ಈ ಗ್ರಿಷ್ಣೇಶ್ವರ ದೇವಾಲಯ. ಇಲ್ಲಿಂದ ಇನ್ನೊಂದು ಪ್ರಸಿದ್ಧ ತಾಣ ಎಲ್ಲೋರಾ ಗುಹೆಗಳಿಗೂ ಬಲು ಹತ್ತಿರ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಎಲ್ಲೋರಾ ಗುಹೆಗೆ ಇಲ್ಲಿಂದ ಸುಮಾರು ಒಂದು ಕಿಲೋಮೀಟರ್ ದೂರ ಕೂಡಾ ಇಲ್ಲ. ಭಾರತದ ಇತರ ದೇವಾಲಯಗಳಂತೆ ಈ ದೇವಸ್ಥಾನ ಕೂಡಾ ಸಾಕಷ್ಟು ಬಾರಿ ದಾಳಿಗೊಳಗಾಗಿತ್ತು. ಹೀಗಾಗಿ, ಹಲವು ಸಲ ಈ ದೇಗುಲ ಮರು ನಿರ್ಮಾಣಗೊಂಡಿತ್ತು. ಕೊನೆಯದಾಗಿ ಇಂದೋರ್ನ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಸಹಾಯದಿಂದ 18ನೇ ಶತಮಾನದಲ್ಲಿ ಪ್ರಸ್ತುತ ರೂಪದ ದೇವಾಲಯವನ್ನು ಪುನರ್ನಿರ್ಮಿಸಲಾಯಿತು ಎಂಬ ಉಲ್ಲೇಖ ಸಿಗುತ್ತದೆ.
| Image Courtesy : wikipedia/Rashmi.parab

ಯಮಾಯಿ ದೇವಿ ದೇವಸ್ಥಾನ

ಮಹಾರಾಷ್ಟ್ರದ ಇನ್ನೊಂದು ಪ್ರಸಿದ್ಧ ದೇವಸ್ಥಾನ ಯಮಾಯಿ ದೇವಿ ದೇಗುಲ. ಮಹಿಷಮರ್ಧಿನಿ ದೇವಿಗೆ ಅರ್ಪಿತವಾಗಿರುವ ದೇಗುಲ ಇದು. ಸತಾರಾ ಜಿಲ್ಲೆಯ ಔಂಧ್ ಪಟ್ಟಣದಲ್ಲಿರುವ ಬೆಟ್ಟದ ಮೇಲೆ ಈ ಸುಂದರ ದೇಗುಲವನ್ನು ನೋಡಬಹುದು. ಈ ಬೆಟ್ಟದ ಮೇಲಿಂದ ಔಂಧ್ ಪಟ್ಟಣದ ಸುಂದರ ನೋಟವನ್ನೂ ಕಣ್ತುಂಬಿಕೊಳ್ಳಬಹುದು. ತಾಯಿಯ ಆಶೀರ್ವಾದವನ್ನು ಪಡೆಯಲು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಈ ದೇಗುಲಕ್ಕೆ ಭೇಟಿ ನೀಡುತ್ತಾರೆ. ಮೆಟ್ಟಿಲನ್ನೇರಿ ಅಥವಾ ವಾಹನಗಳ ಮೂಲಕ ಬೆಟ್ಟದ ಮೇಲಿನ ಈ ದೇಗುಲವನ್ನು ತಲುಪಬಹುದು. ಒಂದೊಮ್ಮೆ ಮಹಾರಾಷ್ಟ್ರದ ಕಡೆಗೆ ಭೇಟಿ ನೀಡಿದರೆ ನೀವು ಈ ದೇಗುಲಕ್ಕೂ ಹೋಗಬಹುದು.
| Image Courtesy : wikipedia/Yashodhansd


Also Read : Lord Krishna : ಯಶಸ್ವಿ ಜೀವನಕ್ಕೆ ಶ್ರೀಕೃಷ್ಣನ ಬದುಕಿನಿಂದ ನಾವು ಕಲಿಯಬೇಕಾದ ಪಾಠಗಳು ಹಲವು

ಶ್ರೀ ಸಿದ್ಧಿವಿನಾಯಕ ದೇವಸ್ಥಾನ

ಮಹಾರಾಷ್ಟ್ರದ ಹೆಗ್ಗುರುತುಗಳಲ್ಲಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಕೂಡಾ ಒಂದು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಗಣಪತಿ ದೇವರ ದರ್ಶನಕ್ಕೆ ಇಲ್ಲಿಗೆ ಬರುತ್ತಾರೆ. ಮುಂಬೈನ ಪ್ರಭಾದೇವಿಯಲ್ಲಿದೆ ಈ ಸುಂದರ ದೇವಸ್ಥಾನ. 1801ರ ನವೆಂಬರ್ 19ರಂದು ಲಕ್ಷ್ಮಣ್ ವಿಠು ಮತ್ತು ದೇವುಬಾಯಿ ಪಾಟೀಲ್ ಎಂಬವರು ಈ ದೇಗುಲವನ್ನು ಸ್ಥಾಪಿಸಿದ್ದರು. ಇದು ಭಾರತದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿದೆ. ಆರಂಭದಲ್ಲಿ ಸಣ್ಣದಾಗಿದ್ದ ಈ ದೇವಾಲಯ ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಭವ್ಯವಾದ ದೇವ ಮಂದಿರವಾಗಿ ರೂಪುಗೊಂಡಿತ್ತು. ಗರ್ಭಗುಡಿಯ ಒಳ ಛಾವಣಿ ಚಿನ್ನದಿಂದ ಲೇಪಿತವಾಗಿದೆ. ದೇಗುಲದ ಹೊರಭಾಗದಲ್ಲಿ ಹನುಮಾನ್ ದೇವರ ದೇವಾಲಯ ಕೂಡಾ ಇದೆ. ಬಾಲಿವುಡ್ ಸೆಲೆಬ್ರಿಟಿಗಳು, ವಿವಿಧ ವಲಯಗಳ ಖ್ಯಾತನಾಮರು ಸೇರಿದಂತೆ ಪ್ರತಿ ವರ್ಷ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.
| Image Courtesy : wikipedia/Darwininan

Also Read : Kerala Temple: ಭೂತ ಬಿಡಿಸಲು ಚೊಟ್ಟನಿಕ್ಕಾರ ವೆರಿ ಫೇಮಸ್..! ಕೊಲ್ಲೂರಿಗೂ ಇದೆ ನಂಟು

ಶಿರಡಿ ಸಾಯಿ ಬಾಬಾ ಮಂದಿರ

ಶಿರಡಿ ಸಾಯಿ ಬಾಬಾರ ಭಕ್ತರು ದೇಶಾದ್ಯಂತ ಇದ್ದಾರೆ. ದೇಶದ ಬಹುಭಾಗಗಳಲ್ಲಿ ಸಾಯಿ ಮಂದಿರಗಳಿವೆ. ಆದರೆ, ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿ ಬಾಬಾ ಮಂದಿರಕ್ಕೆ ಬಲು ಪ್ರಾಮುಖ್ಯತೆ ಇದೆ. ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯಲ್ಲಿ ಈ ಭವ್ಯ ಮಂದಿರವಿದ್ದು, ಪ್ರತಿದಿನ ಸಹಸ್ರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಸಾಕಷ್ಟು ಪ್ರವಾಸಿ ಆಕರ್ಷಣೆಯನ್ನು ಹೊಂದಿರುವ ಪವಿತ್ರ ಸ್ಥಳವಿದು. ಮಹಾರಾಷ್ಟ್ರದ ಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ ಶಿರಡಿ ಸಾಯಿ ಬಾಬಾ ಮಂದಿರ ಕೂಡಾ ಒಂದು. ಮಹಾರಾಷ್ಟ್ರಕ್ಕೆ ಹೋದವರು ಇಲ್ಲಿಗೊಮ್ಮೆ ಭೇಟಿ ನೀಡದೆ ಇರಲಾರರು.
| Image Courtesy : wikipedia/Amolthefriend

Also Read : Hampi : ಗತ ವೈಭವಕ್ಕೆ ಸಾಕ್ಷಿಯಾಗಿವೆ ಹಂಪಿಯ ಈ ಸುಂದರ ದೇಗುಲಗಳು

ಭುಲೇಶ್ವರ ದೇವಾಲಯ

ಪುರಾತನ ಶಿವ ದೇವಾಲಯವಿದು. ಭುಲೇಶ್ವರ ದೇವಸ್ಥಾನ ಎಂದೇ ಇದು ಖ್ಯಾತಿ. ಪುಣೆಯಿಂದ ಸುಮಾರು 45 ಕಿಲೋಮೀಟರ್ ದೂರದಲ್ಲಿ ಈ ಅಪೂರ್ವ ದೇವಸ್ಥಾನ ಇದೆ. ಬೆಟ್ಟದ ಮೇಲೆ ನೆಲೆಗೊಂಡಿರುವ ಈ ದೇವಸ್ಥಾನವನ್ನು ಸುಮಾರು 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂಬ ಉಲ್ಲೇಖ ಸಿಗುತ್ತದೆ. ದೇಗುಲದ ಗೋಡೆಯ ಮೇಲೆ ಸುಂದರ ಕೆತ್ತನೆಗಳನ್ನೂ ನೋಡಬಹುದಾಗಿದೆ. ಇದು ಮಹಾರಾಷ್ಟ್ರದ ಅತ್ಯಂತ ಹಳೆಯ ದೇವಸ್ಥಾನಗಳಲ್ಲಿ ಒಂದು. ಇಲ್ಲಿನ ಪ್ರಶಾಂತ ಮತ್ತು ಆಹ್ಲಾದಕರ ವಾತಾವರಣ ಕೂಡಾ ಮನಸ್ಸಿಗೆ ಆನಂದ ನೀಡುತ್ತದೆ. ಈ ದೇವಾಲಯದಲ್ಲಿ ಪಂಚ ಶಿವಲಿಂಗಗಳನ್ನು ಪೂಜಿಸಲಾಗುತ್ತದೆ. ಪ್ರತಿದಿನ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.
| Image Courtesy : wikipedia/Prasad.vaidya
ಲೇಖಕರ ಬಗ್ಗೆ
ಸುನೀಲ್
"2007ರ ಸೆಪ್ಟೆಂಬರ್‌ನಿಂದ ಪತ್ರಿಕೋದ್ಯಮದ ಪಯಣ ಶುರು. ಪ್ರಮುಖ ದಿನಪತ್ರಿಕೆಯೊಂದರಲ್ಲಿ ಉಪಸಂಪಾದಕನಾಗಿ ವೃತ್ತಿ ಜೀವನ ಆರಂಭ. ಇದಾದ ಆರು ತಿಂಗಳ ಬಳಿಕ ನ್ಯೂಸ್ ಚಾನೆಲ್‌ನಲ್ಲಿ ಕೆಲಸ. 2008ರಿಂದ ಶುರುವಾದ ಸುದ್ದಿ ವಾಹಿನಿಯ ಪಯಣ ನ್ಯೂಸ್‌ ಡೆಸ್ಕ್‌ನ ವಿವಿಧ ಜವಾಬ್ದಾರಿಗಳ ನಿರ್ವಹಣೆಯೊಂದಿಗೆ 2019ರ ತನಕ ಸಾಗಿತ್ತು. ಅಲ್ಲಿಂದ ಮತ್ತೊಂದು ಬದಲಾವಣೆಯ ಕ್ಷಣ. 2019ರಿಂದ ಡಿಜಿಟಲ್ ಮಾಧ್ಯಮದಲ್ಲಿ ಹೊಸ ಕಲಿಕೆಯೊಂದಿಗೆ ಹೊಸ ಜೀವನ ಶುರು. ಇಲ್ಲಿಂದ ಈ ಕ್ಷಣದವರೆಗೆ ವಿಜಯ ಕರ್ನಾಟಕ ಬಳಗದೊಂದಿಗೆ ನನ್ನ ವೃತ್ತಿ ಬದುಕು ಸಾಗಿದೆ. ಇಷ್ಟು ವರ್ಷದ ಪಯಣದಲ್ಲಿ ವಿವಿಧ ಸಂಸ್ಥೆಗಳಲ್ಲಿ ಹಲವು ವಿಭಾಗಗಳಲ್ಲಿ ಕೆಲಸದ ಅನುಭವ ಪಡೆದ ತೃಪ್ತಿ ನನ್ನದು. ಎಲ್ಲಾ ಪತ್ರಕರ್ತರಿಗೂ ಪ್ರಮುಖವಾಗಿರುವ ಓದು ನನ್ನ ಹವ್ಯಾಸಗಳಲ್ಲಿ ಒಂದು. ಬಿಡುವಾದಾಗ ಪ್ರವಾಸಕ್ಕೆ ಹೋಗುವುದು ಕೂಡಾ ನನ್ನ ಜೀವನದ ಖುಷಿಯ ಭಾಗ. "... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ