ಆ್ಯಪ್ನಗರ

ರದ್ದಿ ಅಂಗಡಿಯಲ್ಲಿ ಅರಳಿದ ಪ್ರತಿಭೆಗೆ ಮಿನಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ

ಹಳೇ ಪೇಪರ್‌-ಕಬ್ಬಿಣದ ಅಂಗಡಿಯಲ್ಲಿ ಕೆಲಸ ಮಾಡುತ್ತಾಲೇ ಓದುವುದರ ಜೊತೆಗೆ ಟೇಕ್ವಾಂಡೋ ಕಲಿತ ಬೆಂಗಳೂರಿ ಬಾಲಕ ಮೂರ್ತಿ ಮುರುಗನ್, ಇತ್ತೀಚೆಗೆ ನಡೆದ ಮಿನಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಸಾಧನೆ ಮೆರೆದಿದ್ದಾರೆ.

ವಿಜೇತ್ ಕುಮಾರ್ | Vijaya Karnataka Web 12 Feb 2020, 8:02 pm
ಬೆಂಗಳೂರು: ಸಾಧಿಸುವ ಛಲವೊಂದಿದ್ದರೆ ಅಲ್ಲಿ ಬಡತನ ಅಡ್ಡಿಯಾಗುವುದಿಲ್ಲ ಎಂಬುದನ್ನು ಬೆಂಗಳೂರಿನ 13 ವರ್ಷದ ಬಾಲಕ ಮೂರ್ತಿ ಮುರುಗನ್‌ ಸಾಬೀತು ಪಡಿಸಿದ್ದಾನೆ.

ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ ಆಶ್ರಯದಲ್ಲಿ ಇತ್ತೀಚೆಗಷ್ಟೇ ನಡೆದ ಮಿನಿ ಒಲಿಂಪಿಕ್ಸ್‌ 2020ರ ಕ್ರೀಡಾಕೂಟದ ಟೇಕ್ವಾಂಡೋ ಚಾಂಪಿಯನ್‌ಷಿಪ್‌ನ ಕಿರಿಯರ 39ಕೆಜಿ ವಿಭಾಗದಲ್ಲಿ ಬನಶಂಕರಿಯ ಎಸ್‌ವಿಎಸ್‌ ಶಾಲೆಯ ವಿದ್ಯಾರ್ಥಿ ಮೂರ್ತಿ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದಾನೆ.

ಅಂದಹಾಗೆ ಈ ಬಾಲಕನ ಸಾಧನೆ ನಿಜಕ್ಕೂ ಹಲವರಿಗೆ ಮಾದರಿಯಾಗುವಂಥದ್ದು. ಏಕೆಂದರೆ ಪ್ರತಿನಿತ್ಯ ಶಾಲೆ ಮುಗಿದ ಬಳಿಕ ಕುಟುಂಬದ ಹೊಟ್ಟೆ ಹೊರೆಯುವ ಸಲುವಾಗಿ ಇರುವ ರದ್ದಿ ಅಂಗಡಿಯಲ್ಲಿನ (ಹಳೇ ಪೇಪರ್‌-ಕಬ್ಬಿಣ) ಕೆಲಸ ಕಾರ್ಯಗಳಿಗೆ ತಾಯಿ ನಂದಿನಿ ಅವರಿಗೆ ಕೈಜೋಡಿಸುವ ಬಾಲಕ, ಬೆಳಗ್ಗೆ ಬೇಗ ಎದ್ದು ಟೇಕ್ವಾಂಡೋ ಅಭ್ಯಾಸ ಮಾಡಿ ಇದೀಗ ರಾಜ್ಯ ಮಟ್ಟದಲ್ಲಿ ಬೆಳ್ಳಿ ಗೆದ್ದು ಮಿಂಚಿದ್ದಾನೆ.

ಒಲಿಂಪಿಕ್ಸ್‌ ಜಪದಲ್ಲಿ ಗೌತಮ

ಒಲಿಂಪಿಕ್‌ ಕ್ರೀಡೆಯಾಗಿರುವ ಟೇಕ್ವಾಂಡೋ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪದಕಗಳನ್ನು ಗೆದ್ದುಕೊಡುವ ಕನಸು ಕಂಡಿರುವ ಮೂರ್ತಿ, ರದ್ದಿ ಅಂಗಡಿಯಲ್ಲಿ ಕೆಲಸದ ಮಧ್ಯೆಯೂ ದಿನನಿತ್ಯ ಓದಿನ ನಡುವೆ ಕೊರಿಯಾ ಮೂಲದ ಸಮರ ಕಲೆಯಾಗಿರುವ ಟೇಕ್ವಾಂಡೋ ಅಭ್ಯಾಸ ಮಾಡುತ್ತಾರಂತೆ.

"ಬೆಳಗ್ಗೆ 8.30ರಿಂದ ಮಧ್ಯಾಹ್ನ 3.30ರವರೆಗೆ ಶಾಲೆ ಇರುತ್ತದೆ. ಹೀಗಾಗಿ ಬೆಳಗ್ಗೆ 5.30 ರಿಂದ 7.30ರವರೆಗೆ ಮತ್ತು ಸಂಜೆ ಒಂದು ಗಂಟೆಕಾಲ ಟೇಕ್ವಾಂಡೋ ಅಭ್ಯಾಸ ಮಾಡುತ್ತೇನೆ. ಸಂಜೆ ಹೊತ್ತು ಅಂಗಡಿ ಕೆಲಸ ಇರುವುದರಿಂದ ಕೆಲಸದ ಮಧ್ಯೆ ಬಿಡುವಿನಲ್ಲಿ ಶಾಲೆಯ ಪಾಠಗಳನ್ನು ಓದುವುದರ ಜೊತೆಗೆ ಟೇಕ್ವಾಂಡೋ ಅಭ್ಯಾಸವನ್ನೂ ಮಾಡುತ್ತೇನೆ," ಎಂದು ಮೂರ್ತಿ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.

ತಮ್ಮ ಅಂಗಡಿ ಸಮೀಪವೇ ಇರುವ ಟೇಕ್ವಾಂಡೋ ತರಬೇತಿ ಕೇಂದ್ರ ಸೇರಿದ ಮೂರ್ತಿ ಕೇವಲ 11 ತಿಂಗಳ ಅಂತರದಲ್ಲಿ ರಾಜ್ಯ ಮಟ್ಟದಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾನೆ. ಕಳೆದ ವರ್ಷ ನಡೆದ 37ನೇ ರಾಜ್ಯ ಮಟ್ಟದ ಟೇಕ್ವಾಂಡೋ ಚಾಂಪಿಯನ್‌ಷಿಪ್‌ನ 45 ಕೆಜಿ ಮತ್ತು 33ಕೆಜಿ ವಿಭಾಗಗಳಲ್ಲಿ ಕಂಚು ಗೆದ್ದು ಪದಕಗಳ ಖಾತೆ ತೆರೆದ ಮೂರ್ತಿ, ಇದೀಗ ಮಿನಿ ಒಲಿಂಪಿಂಕ್ಸ್‌ನಲ್ಲಿ ಬೆಳ್ಳಿಗೆ ಕೊರಳೊಡ್ಡಿದ್ದಾರೆ.

ಮೋಟಾರ್‌ ಸ್ಪೋರ್ಟ್ಸ್‌ನಲ್ಲಿ ಯುವ ಕನ್ನಡಿಗನ ಕೀರ್ತಿ ಪತಾಕೆ

ಎಷ್ಟೇ ಕಷ್ಟಗಳು ಎದುರಾದರೂ ಆತ್ಮಬಲದಿಂದ ಎಲ್ಲವನ್ನೂ ಮೆಟ್ಟಿನಿಂತು ಸಾಧನೆಯತ್ತ ಸಾಗುವ ಇಂತಹ ಪ್ರತಿಭೆಗಳು ದೇಶದಲ್ಲಿ ಮತ್ತಷ್ಟು ಮೂಡಿಬರಲಿ ಎಂಬುದಷ್ಟೇ ಆಶಯ.

ಪ್ರತಿಭೆಯನ್ನು ಗುರುತಿಸಿ ಪೋಷಿಸಿದ ಗೌತಮ್
ಅಂತಾರಾಷ್ಟ್ರೀಯ ಟೇಕ್ವಾಂಡೋ ಪಟು ಕನ್ನಡಿಗ ಗೌತಮ್‌ ಚರಣ್‌, ಬೆಂಗಳೂರಿನ ಉತ್ತರಹಳ್ಳಿಯಲ್ಲಿನ ತಮ್ಮ ನಿವಾಸದ ಸಮೀಪದಲ್ಲೇ ಖಾಲಿ ನಿವೇಶನವೊಂದರಲ್ಲಿ ಬಡ ಮಕ್ಕಳಿಗಾಗಿ ನಡೆಸಿಕೊಡುವ ಉಚಿತ ಟೇಕ್ವಾಂಡೋ ತರಬೇತಿ ಕೇಂದ್ರದಲ್ಲಿ ಮೂರ್ತಿ ಮುರುಗನ್‌ ತರಹದ ಹಲವು ಯುವ ಪ್ರತಿಭೆಗಳು ಅರಳಿದ್ದಾರೆ. ರದ್ದಿ ಅಂಗಡಿಯಲ್ಲಿ ಕುಳಿತು ಓದುತ್ತಿದ್ದ ಹುಡುಗನನ್ನು ಕಂಡು ಟೇಕ್ವಾಂಡೋ ಕಲಿಯುವಂತೆ ಪ್ರೇರೇಪಿಸಿ, ಆತನಿಗೆ ಅಗತ್ಯದ ಸಮವಸ್ತ್ರ, ಸುರಕ್ಷಾ ಕವಚಗಳೆಲ್ಲವನ್ನೂ ಒದಗಿಸಿಕೊಟ್ಟು ಇಂದು ಮಿನಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆಲ್ಲುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಗರಡಿಯಲ್ಲಿ ಇಂತ ಹಲವು ಮಕ್ಕಳಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿ ಪದಕಗಳನ್ನು ಗೆಲ್ಲುವಂತೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌