ಆ್ಯಪ್ನಗರ

ಧವನ್ ಗಾಯದ ಬೆನ್ನಲ್ಲೇ ಮತ್ತೆ ಹುಟ್ಟಿಕೊಂಡ ನಂ.4 ಪ್ರಾಬ್ಲಂ!

ಟೀಮ್ ಇಂಡಿಯಾ ಓಪನರ್ ಶಿಖರ್ ಧವನ್ ಗಾಯದ ಸಮಸ್ಯೆಯಿಂದಾಗಿ ಮುಂದಿನ ಮೂರು ವಾರಗಳಷ್ಟು ಕಾಲ ಅಲಭ್ಯವಾಗಿರುವುದರಿಂದ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆಂಬ ಸಮಸ್ಯೆ ಮತ್ತೆ ಹುಟ್ಟಿಕೊಂಡಿದೆ.

Vijaya Karnataka Web 11 Jun 2019, 3:31 pm
ಲಂಡನ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಎಡಗೈ ಆಕ್ರಮಣಕಾರಿ ಓಪನರ್ ಶಿಖರ್ ಧವನ್, ಗಾಯದ ಸಮಸ್ಯೆಗೊಳಗಾಗಿದ್ದು ಕನಿಷ್ಠ ಮೂರು ವಾರಗಳಷ್ಟು ಕಾಲ ವಿಶ್ರಾಂತಿಯನ್ನು ಸೂಚಿಸಲಾಗಿದೆ.
Vijaya Karnataka Web shikhar-dhawan-injury-01


ಇದರೊಂದಿಗೆ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂಬ ಬಗ್ಗೆ ಸಮಸ್ಯೆಗಳು ಮತ್ತೆ ಹುಟ್ಟಿಕೊಂಡಿದೆ. ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ ಧವನ್ ವೈದಕೀಯ ವರದಿಗಾಗಿ ಬಿಸಿಸಿಐ ಕಾಯುತ್ತಿದೆ.

ಇಂದು (ಮಂಗಳವಾರ) ಸಂಜೆಯೊಳಗೆ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಲಾಗುವ ಸಾಧ್ಯತೆಯಿದೆ. ಧವನ್ ಗಾಯದ ಆಳವನ್ನು ಪರಿಗಣಿಸಿ ವಿಶ್ವಕಪ್‌ನಲ್ಲಿ ಉಳಿದಿರುವ ಪಂದ್ಯಗಳಿಗೆ ಲಭ್ಯವಾಗುವರೇ ಇಲ್ಲವೇ ಎಂಬುದರ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗುವುದು.

ಸದ್ಯ ಧವನ್ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಜತೆ ನಾಟಿಂಗ್‌ಹ್ಯಾಮ್‌ಗೆ ಪ್ರಯಾಣಿಸಿಲ್ಲ. ಬದಲಾಗಿ ಫಿಸಿಯೋ ಪ್ಯಾಟ್ರಿಕ್ ಫರ್ಹಾಟ್ ಜತೆ ಲೀಡ್ಸ್‌ಗೆ ತೆರಳಿರುವ ಧವನ್ ಹೆಚ್ಚಿನ ವೈದ್ಯಕೀಯ ಪರೀಕ್ಷೆಗೊಳಗಾಗಿದ್ದಾರೆ.

ಹಾಗಾಗಿ ಲೀಗ್ ಹಂತಗಳ ಪಂದ್ಯಗಳಿಗೆ ಧವನ್ ಅಲಭ್ಯವಾಗುವುದು ಬಹುತೇಕ ಖಚಿತವೆನಿಗಿದೆ. ಧವನ್ ಅಲಭ್ಯತೆಯಲ್ಲಿ ರೋಹಿತ್ ಶರ್ಮಾ ಜತೆಗೆ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

ಇದರಿಂದಾಗಿ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂಬುದು ಸಮಸ್ಯೆಗೆ ಕಾರಣವಾಗಿದೆ. ವಿಶ್ವಕಪ್‌ಗೂ ಮೊದಲು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ರಾಹುಲ್ ನಾಲ್ಕನೇ ಕ್ರಮಾಂಕದ ಸಮಸ್ಯೆಗೆ ಪರಿಹಾರ ಕಂಡುಹುಡುಕಿದ್ದರು. ಇದೀಗ್ ರಾಹುಲ್ ಮತ್ತೆ ತಮ್ಮ ಫೇವರಿಟ್ ಓಪನರ್ ಸ್ಥಾನಕ್ಕೆ ಬಡ್ತಿ ಪಡೆಯಲಿರುವುದರಿಂದ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂಬುದು ಕುತೂಹಲವೆನಿಸಿದೆ.

ಸದ್ಯ ಕಿವೀಸ್ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅಥವಾ ವಿಜಯ್ ಶಂಕರ್ ನಾಲ್ಕನೇ ಕ್ರಮಾಂಕಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ. ಹಾಗೊಂದು ವೇಳೆ ಧವನ್ ಸಂಪೂರ್ಣ ವಿಶ್ವಕಪ್‌ಗೆ ಅಲಭ್ಯವಾದರೆ ರಿಷಬ್ ಪಂತ್ ಅಥವಾ ಶ್ರೇಯಸ್ ಅಯ್ಯರ್‌ಗೆ ಬುಲಾವ್ ಸಿಗುವ ಸಾಧ್ಯತೆಯಿದೆ.

ಇನ್ನು ನಾಲ್ಕನೇ ಕ್ರಮಾಂಕಕ್ಕೆ ಕೇದರ್ ಜಾಧವ್ ಅಥವಾ ಹಾರ್ದಿಕ್ ಪಾಂಡ್ಯ ಹೆಸರು ಕೇಳಿ ಬರುತ್ತಿದೆ. ಜಾಧವ್‌ಗೆ ನಾಲ್ಕನೇ ಕ್ರಮಾಂಕ ನೀಡಿ ರವೀಂದ್ರ ಜಡೇಜಾಗೆ ಕೆಳ ಕ್ರಮಾಂಕದಲ್ಲಿ ಅವಕಾಶ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ನಾಲ್ಕನೇ ಕ್ರಮಾಂಕ ನೀಡಿದರೂ ಅಚ್ಚರಿಪಡಬೇಕಿಲ್ಲ.

ಏತನ್ಮಧ್ಯೆ ಟೀಮ್ ಇಂಡಿಯಾ ಕ್ಯಾಂಪ್, ಧವನ್ ನಾಕೌಟ್ ಹಂತದ ವೇಳೆ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯನ್ನು ಹೊಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌