ಆ್ಯಪ್ನಗರ

ಸ್ಕೋರ್ ಸಮ-ಸಮ, ಟೈ-ಟೈ; ಇಂಗ್ಲೆಂಡ್‌ಗೆ ಚಾಂಪಿಯನ್ ಪಟ್ಟ ಏಕೆ?

ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯವು ಎರಡೆರಡು ಬಾರಿ ರೋಚಕ ಟೈ ಫಲಿತಾಂಶವನ್ನು ಕಂಡಿತು. ಆದರೆ ಅತಿ ಹೆಚ್ಚು ಬೌಂಡರಿ ಬಾರಿಸಿದ ತಂಡವೆಂಬ ಕಾರಣಕ್ಕಾಗಿ ಇಂಗ್ಲೆಂಡ್ ಚಾಂಪಿಯನ್ ಪಟ್ಟವನ್ನು ಆಲಂಕರಿಸಿದೆ.

Vijaya Karnataka Web 15 Jul 2019, 10:11 am
ಲಂಡನ್: 44 ವರ್ಷಗಳ ವಿಶ್ವಕಪ್‌ ಇತಿಹಾಸದಲ್ಲಿ ಇಂಗ್ಲೆಂಡ್‌ ತಂಡ ಮೊತ್ತ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಆಲಂಕರಿಸಿದೆ. ಭಾನುವಾರ ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯವು ಎರಡೆರಡು ಬಾರಿ ಟೈ ಫಲಿತಾಂಶವನ್ನು ಕಂಡಿತು.
Vijaya Karnataka Web england-03


ಆದರೆ ಅತಿ ಹೆಚ್ಚು ಬೌಂಡರಿ ಬಾರಿಸಿದ ತಂಡವೆಂಬ ಕಾರಣಕ್ಕಾಗಿ ಇಂಗ್ಲೆಂಡ್ ತಂಡವನ್ನು ವಿಜೇತರೆಂದು ಘೋಷಿಸಲಾಯಿತು. ಇದರಿಂದಾಗಿ ನ್ಯೂಜಿಲೆಂಡ್ ಚೊಚ್ಚಲ ಕನಸು ಭಗ್ನವಾಯಿತು.

ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ 241 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಬೆನ್ ಸ್ಟೋಕ್ಸ್ (84*) ಹಾಗೂ ಜೋಸ್ ಬಟ್ಲರ್ (59) ವಿರೋಚಿತ ಹೋರಾಟದ ನೆರವಿನಿಂದ ಅಷ್ಟೇ ರನ್ ಪೇರಿಸಲು ಶಕ್ತವಾಗಿತ್ತು. ಇದರಿಂದಾಗಿ ಸೂಪರ್ ಓವರ್‌ನಲ್ಲಿ ವಿಜೇತರನ್ನು ನಿರ್ಣಯಿಸಲಾಯಿತು.

ಬಳಿಕ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಂಗ್ಲರ ಪಡೆ 15 ರನ್ ಪೇರಿಸಿತ್ತು. ಆದರೆ ಕೆಚ್ಚೆದೆಯ ಹೋರಾಟ ನೀಡಿದ ನ್ಯೂಜಿಲೆಂಡ್ ಅಷ್ಟೇ ರನ್ ಪೇರಿಸಿ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದರೂ ಕೂದಲೆಳೆಯ ಅಂತರದಲ್ಲಿ ವಿಶ್ವಕಪ್ ಕಳೆದುಕೊಳ್ಳುವಂತಾಗಿದೆ.

ಐಸಿಸಿ ನಿಯಮದನ್ವಯ ಸೂಪರ್ ಓವರ್ ಟೈನಲ್ಲಿ ಅಂತ್ಯ ಕಂಡರೆ ಅತಿ ಹೆಚ್ಚು ಬೌಂಡರಿ (ಬೌಂಡರಿ ಹಾಗೂ ಸಿಕ್ಸರ್) ಬಾರಿಸಿದ ತಂಡವು ಗೆಲುವು ದಾಖಲಿಸುತ್ತದೆ. ಹಾಗೆಯೇ ಕಿವೀಸ್‌ಗಿಂತಲೂ ಬೌಂಡರಿ ಎಣಿಕೆ ಹೆಚ್ಚು ಗಳಿಸಿರುವ ಇಂಗ್ಲೆಂಡ್ ವಿಶ್ವಕ್ಕೆ ನೂತನ ಸೂಪರ್ ಚಾಂಪಿಯನ್ ಎನಿಸಿಕೊಂಡಿದೆ.

1979, 1987 ಪಾಗೂ 1992ರಲ್ಲಿ ಮೂರು ಬಾರಿ ರನ್ನರ್-ಅಪ್ ಸಾಧನೆ ಮಾಡಿರುವ ಕ್ರಿಕೆಟ್ ಜನಕ ಇಂಗ್ಲೆಂಡ್‌ ಈ ಮೂಲಕ ಇತಿಹಾಸದ ಪುಟ ಸೇರಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌