ಆ್ಯಪ್ನಗರ

ಸಿನೆಮಾ ಶೈಲಿಯಲ್ಲಿ ಮೈದಾನಕ್ಕೆ ಎಂಟ್ರಿ ಕೊಟ್ಟು ವಾಗ್ವಾದಕ್ಕಿಳಿದ ಧೋನಿ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಅಂಪೈರ್‌ಗಳ ವಿರುದ್ಧ ವಾಗ್ವಾದಕ್ಕಿಳಿಯುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ವಿವಾದಕ್ಕೀಡಾಗಿದ್ದಾರೆ.

Vijaya Karnataka Web 12 Apr 2019, 5:29 pm
ಜೈಪುರ: ಎಂತಹ ಪರಿಸ್ಥಿತಿಯೇ ಆಗಿರಲಿ. ಮಹೇಂದ್ರ ಸಿಂಗ್ ಧೋನಿ ತಾಳ್ಮೆ ಕಳೆದುಕೊಳ್ಳುವುದು ಅತ್ಯಂತ ವಿರಳ. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗುರುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಿಶ್ವದ ಅತ್ಯಂತ ಕೂಲೆಸ್ಟ್ ಪರ್ಸನ್ ಸಹ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುವಂತಾಗಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ಚೇಸಿಂಗ್ ವೇಳೆ ಪಂದ್ಯದ ಅಂತಿಮ ಓವರ್‌ನಲ್ಲಿ ಘಟನೆ ಸಂಭವಿಸಿತ್ತು. ಬೆನ್ ಸ್ಟೋಕ್ಸ್ ಎಸೆದ ಕೊನೆಯ ಓವರ್‌ನಲ್ಲಿ ಸಿಎಸ್‌ಕೆ ಗೆಲುವಿಗೆ 18 ರನ್‌ಗಳ ಅವಶ್ಯಕತೆಯಿತ್ತು. ಆದರೆ ಮೂರನೇ ಎಸೆತದಲ್ಲಿ ಏಕೈಕ ಆಸರೆಯಾಗಿರುವ ಧೋನಿ ಸಹ ಕ್ಲೀನ್ ಬೌಲ್ಡ್ ಆಗುವುದರೊಂದಿಗೆ ಬಹುತೇಕ ಗೆಲುವಿನ ಆಸೆ ಕೈಮೀರಿ ಹೋಗಿತ್ತು.

ಆದರೆ ಮಿಚೆಲ್ ಸ್ಯಾಂಟ್ನರ್‌ಗೆ ಎಸೆದ ನಾಲ್ಕನೇ ಎಸೆತದಲ್ಲಿ ಸಾಕಷ್ಟು ನಾಟಕೀಯ ಸನ್ನಿವೇಶವು ನಿರ್ಮಾಣವಾಗಿತ್ತು. ಸ್ಟೋಕ್ಸ್ ಎಸೆತ ಚೆಂಡು ನೋ ಬಾಲ್‌ನಂತೆ ಭಾಸವಾಗಿತ್ತು. ತಕ್ಷಣವೇ ಅಂಪೈರ್ ನೋ ಬಾಲ್ ಕರೆಯನ್ನು ನೀಡಿದ್ದರು. ಆದರೆ ಸ್ಕ್ವೇರ್ ಲೆಗ್ ಅಂಪೈರ್ ನೋ ಬಾಲ್ ನೀಡಿರಲಿಲ್ಲ. ಇದು ಅಂಪೈರ್‌ಗಳ ನಡುವೆಯೇ ಗೊಂದಲಕ್ಕೀಡು ಮಾಡಿತ್ತು.

ಈ ಎಸೆತದಲ್ಲಿ ಚೆನ್ನೈ ಬ್ಯಾಟ್ಸ್‌ಮನ್‌ಗಳು ಎರಡು ರನ್ ಕಸಿದುಕೊಂಡಿದ್ದರು. ಇದನ್ನು ಗಮನಿಸಿದ ಜಡೇಜಾ ಅಂಪೈರ್ ಜತೆ ಮನವಿ ಮಾಡಿದರು. ಆದರೆ ಅಂಪೈರ್‌ಗಳು ಪುರಸ್ಕರಿಸಲಿಲ್ಲ.

ಅಲ್ಲೇ ಬೌಂಡರಿ ಗೆರೆ ಬಳಿ ಪಂದ್ಯವನ್ನು ವೀಕ್ಷಿಸುತ್ತಿದ್ದ ಧೋನಿ ತಕ್ಷಣ ಸಿನೆಮಾ ಶೈಲಿಯಲ್ಲಿ ಮೈದಾನಕ್ಕೆ ಎಂಟ್ರಿ ಕೊಟ್ಟು ಅಂಪೈರ್‌ಗಳ ಜತೆ ವಾಗ್ವಾದಕ್ಕಿಳಿದರು. ಆದರೆ ಧೋನಿ ವಾದವನ್ನು ಪುರಸ್ಕರಿಸಲಿಲ್ಲ. ಅಲ್ಲದೆ ಥರ್ಡ್ ಅಂಪೈರ್‌ಗೂ ಮನವಿ ನೀಡಲು ನಿರಾಕರಿಸಿದರು. ಪರಿಣಾಮ ಬರಿಗೈಯಲ್ಲಿ ಧೋನಿ ವಾಪಾಸಾಗಬೇಕಾಯಿತು.

ಅಂತಿಮವಾಗಿ ಕೊನೆಯ ಎಸೆತವನ್ನು ಸಿಕ್ಸರ್‌ಗಟ್ಟಿದ ಸ್ಯಾಂಟ್ನರ್ ಚೆನ್ನೈಗೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾಗಿದ್ದರು. ಅತ್ತ ಧೋನಿ ತಾಳ್ಮೆ ಕಳೆದುಕೊಂಡು ಮೈದಾನಕ್ಕೆ ಎಂಟ್ರಿ ಕೊಟ್ಟಿರುವುದು ಹೆಚ್ಚಿನ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.

ಈ ನಡುವೆ ಧೋನಿ ತಮ್ಮ ಎಡವಟ್ಟಿಗಾಗಿ ಪಂದ್ಯ ಶುಲ್ಕ ಶೇಕಡಾ 50ರಷ್ಟು ದಂಡ ಪಾವತಿಸಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌