ಆ್ಯಪ್ನಗರ

'ಪಿಎಸ್‌ಎಲ್‌ ಬಿಟ್ಟು ಐಪಿಎಲ್‌ ಯಾರಾಡ್ತಾರೆ ನೋಡೋಣ', ರಮೀಝ್‌ ರಾಜಾ ಸವಾಲು!

ಜಗತ್ತಿನ ಐಶಾರಾಮಿ ಟಿ20 ಕ್ರಿಕೆಟ್‌ ಲೀಗ್‌ ಆಗಿರುವ ಇಂಡಿಯನ್ ಪ್ರೀಮಿಯರ್‌ ಲೀಗ್‌ಗೆ ಸರಿಸಾಟಿಯಾದ ಟೂರ್ನಮೆಂಟ್‌ ಮತ್ತೊಂದಿಲ್ಲ ಎಂಬುದು ಪ್ರತಿಬಾರಿ ಸಾಬೀತಾಗಿದೆ. ಕೇವಲ ಭಾರತೀಯ ಆಟಗಾರರು ಮಾತ್ರವಲ್ಲ, ಇಂದು ವಿಶ್ವದ ವಿವಿಧ ರಾಷ್ಟ್ರಗಳ ಶ್ರೇಷ್ಠ ಆಟಗಾರರು ಐಪಿಎಲ್‌ ಆಡಬೇಕೆಂದು ತುದಿಗಾಲಲ್ಲಿ ನಿಂತಿದ್ದಾರೆ. ವೃತ್ತಿಬದುಕಿನ ಬಹುದೊಡ್ಡ ಅವಕಾಶದ ಜೊತೆಗೆ ಹಣಕಾಸಿನ ವಿಚಾರದಲ್ಲೂ ಆಟಗಾರನನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಕನಸಿನ ವೇದಿಕೆ ಐಪಿಎಲ್‌. ಅಂದಹಾಗೆ ಐಪಿಎಲ್‌ಗೆ ಸಡ್ಡು ಹೊಡೆಯಬೇಕೆಂಬ ಹಗಲುಗನಸನ್ನು ಪಾಕಿಸ್ತಾನ ಕಾಣುತ್ತಲೇ ಬಂದಿದೆ.

Authored byವಿಜೇತ್ ಕುಮಾರ್ | Vijaya Karnataka Web 15 Mar 2022, 2:27 pm

ಹೈಲೈಟ್ಸ್‌:

  • ಮಾರ್ಚ್‌ 26ರಿಂದ ಮೇ 29ರವರೆಗೆ ನಡೆಯಲಿರುವ ಐಪಿಎಲ್‌ 2022 ಟೂರ್ನಿ.
  • ಐಪಿಎಲ್‌ ಮಾದರಿಯ ಆಟಗಾರರ ಹರಾಜು ಪ್ರಕ್ರಿಯೆ ಆಯೋಜನೆ ಬಗ್ಗೆ ಪಿಸಿಬಿ ಚಿಂತನೆ.
  • ಹರಾಜು ಪ್ರಕ್ರಿಯೆ ನಡೆಸಿದರೆ ಪಿಎಸ್‌ಎಲ್‌ ಬಹುದೊಡ್ಡ ಟೂರ್ನಿ ಆಗಲಿದೆ ಎಂದ ರಮೀಝ್ ರಾಜಾ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Ramiz Raja on IPL
ಪಿಸಿಬಿ ಮುಖ್ಯಸ್ಥ ರಮೀಝ್‌ ರಾಜಾ (ಚಿತ್ರ: ಪಿಸಿಬಿ).
ಬೆಂಗಳೂರು: 2008ರಲ್ಲಿ ಇಂಡಿಯನ್ ಪ್ರೀಮಿಯರ್‌ ಲೀಗ್‌ ಶುರುವಾಗಿದ್ದು, ಟಿ20 ಕ್ರಿಕೆಟ್‌ನ ಅತ್ಯಂತ ಕ್ರಾಂತಿಕಾರಿ ಬೆಳವಣಿಗೆ ಆಗಿದೆ. ಅಂದಿನಿಂದ ಇಂದಿನವರೆಗೆ ಐಪಿಎಲ್‌ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್‌ ಆಗಿ ಬೆಳೆದು ಬಂದಿದೆ.
ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕನಸಿನ ಕೂಸು ಇಂಡಿಯನ್ ಪ್ರೀಮಿಯರ್‌ ಲೀಗ್‌ ಕಂಡ ಅಭೂತಪೂರ್ವ ಯಶಸ್ಸಿನ ಬಳಿಕ ವಿಶ್ವದ ವಿವಿಧ ರಾಷ್ಟ್ರಗಳು ಕೂಡ ಲೀಗ್‌ ಸಂಸ್ಕೃತಿ ಅಳವಡಿಸಿಕೊಂಡು ತಮ್ಮದೇ ಟೂರ್ನಿಗಳನ್ನು ಆಯೋಜಿಸಲು ಆರಂಭಿಸಿದವು. ಅದರಲ್ಲಿ ಪಾಕಿಸ್ತಾನ್‌ ಸೂಪರ್‌ ಲೀಗ್‌ ಕೂಡ ಒಂದಾಗಿದೆ.

ಆಸ್ಟ್ರೇಲಿಯಾದಲ್ಲಿ 'ಬಿಗ್‌ ಬ್ಯಾಷ್‌ ಲೀಗ್‌', ಇಂಗ್ಲೆಂಡ್‌ನಲ್ಲಿ 'ದಿ ಹಂಡ್ರೆಡ್‌', ವೆಸ್ಟ್‌ ಇಂಡೀಸ್‌ನಲ್ಲಿ 'ಕೆರಿಬಿಯನ್ ಪ್ರೀಮಿಯರ್‌ ಲೀಗ್‌', ಪಾಕಿಸ್ತಾನದ (ಪಾಕಿಸ್ತಾನ್‌ ಸೂಪರ್‌ ಲೀಗ್‌) ಟಿ0 ಲೀಗ್‌, ಶ್ರೀಲಂಕಾದ 'ಲಂಕಾ ಪ್ರೀಮಿಯರ್‌ ಲೀಗ್‌, ಬಾಂಗ್ಲಾದೇಶದ 'ಬಾಂಗ್ಲಾ ಪ್ರೀಮಿಯರ್‌ ಲೀಗ್' ಹೀಗೆ ಹಲವು ಲೀಗ್‌ಗಳು ಶುರುವಾಗಿವೆ. ಆದರೆ, ಇದ್ಯಾವುವೂ ಕೂಡ ಐಪಿಎಲ್‌ಗೆ ಸರಿಸಾಟಿಯಲ್ಲ ಎಂಬುದು ಪದೇ ಪದೇ ಸಾಬೀತಾಗಿದೆ.

ಐಪಿಎಲ್‌ ಮತ್ತು ಪಿಎಸ್‌ಎಲ್‌ ಟೂರ್ನಿಗಳ ಬಹುಮಾನ ಮೊತ್ತದ ಅಂತರ ಅಜಗಜಾಂತರ!

ಐಪಿಎಲ್‌ 2022 ಟೂರ್ನಿ ಸಲುವಾಗಿ ಇತ್ತೀಚೆಗೆ ನಡೆದ ಆಟಗಾರರ ಹರಾಜಿನಲ್ಲಿ ದೇಶ-ವಿದೇಶಗಳಿಂದ ಬರೋಬ್ಬರಿ 600 ಆಟಗಾರರು ಪಾಲ್ಗೊಂಡಿದ್ದರು. ಎಲ್ಲಾ 10 ಫ್ರಾಂಚೈಸಿಗಳು 550 ಕೋಟಿ ರೂ.ಗಳಿಗೂ ಅಧಿಕ ಹಣ ಖರ್ಚು ಮಾಡುವ ಮೂಲಕ ಒಟ್ಟಾರೆ 204 ಆಟಗಾರರನ್ನು ಖರೀದಿ ಮಾಡಿದ್ದರು. 11ಕ್ಕೂ ಹೆಚ್ಚು ಆಟಗಾರರಿಗೆ ಈ ಬಾರಿ 10 ಕೋಟಿ ರೂ.ಗಳಿಗೂ ಅಧಿಕ ಬೆಲೆ ಸಿಕ್ಕಿದೆ ಎಂಬುದು ವಿಶೇಷ. ಹರಾಜಿನಲ್ಲಿ ಹರಿದ ಹಣದ ಹೊಳೆ ಕಂಡ ವಿದೇಶಿ ಲೀಗ್‌ಗಳು ಕೈ-ಕೈ ಮುರಿದುಕೊಂಡರೆ ಅಚ್ಚರಿಯೇನಿಲ್ಲ.

ಇನ್ನು ಐಪಿಎಲ್‌ಗೆ ಪೈಪೋಟಿ ನೀಡಲು ಪಾಕಿಸ್ತಾನ್‌ ಸೂಪರ್‌ ಲೀಗ್‌ ಭಾರಿ ಪೈಪೋಟಿ ನಡೆಸುತ್ತಾ ಬಂದಿದೆ. ಇತ್ತೀಚೆಗೆ ಮಾತನಾಡಿರುವ ಪಾಕಿಸ್ತಾನ್ ಕ್ರಿಕೆಟ್‌ ಮಂಡಳಿ (ಪಿಸಿಬಿ) ಮುಖ್ಯಸ್ಥ ರಮೀಝ್‌ ರಾಜಾ, ಪಿಎಸ್‌ಎಲ್‌ ಟೂರ್ನಿಯಲ್ಲಿ ಕೆಲ ಕ್ರಾಂತಿಕಾರಿ ಬದಲಾವಣೆಗಳನ್ನು ಖಂಡಿತಾ ಐಪಿಎಲ್‌ಗೆ ಪೈಪೋಟಿ ನೀಡಬಹುದು ಎಂದಿದ್ದಾರೆ. ಆಟಗಾರರ ವಿಂಗಡಣೆ ವ್ಯವಸ್ಥೆಯನ್ನು ಬದಿಗಿಟ್ಟು, ಹರಾಜು ಪ್ರಕ್ರಿಯೆ ಅಳವಡಿಸಿಕೊಂಡರೆ ವಿಶ್ವದ ಶ್ರೇಷ್ಠ ಕ್ರಿಕೆಟಿಗರನ್ನು ಆಕರ್ಷಿಸಲು ಸಾಧ್ಯ ಎಂದಿದ್ದಾರೆ.

"ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತಹ ಆಸ್ತಿಯನ್ನು ಸೃಷ್ಟಿಸಬೇಕಿದೆ. ಸದ್ಯಕ್ಕೆ ನಮ್ಮ ಬಳಿ ಪಿಎಸ್‌ಎಲ್‌ ಮತ್ತು ಐಸಿಸಿ ಹಣ ಬಿಟ್ಟರೆ ಬೇರೆ ಏನೂ ಇಲ್ಲ. ಪಿಎಲ್‌ಎಲ್‌ ಟೂರ್ನಿಯ ಮುಂದಿನ ಆವೃತ್ತಿಯ ವ್ಯವಸ್ಥೆ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಮುಂದಿನ ವರ್ಷದಿಂದ ಆಟಗಾರರ ಹರಾಜು ಪ್ರಕ್ರಿಯೆ ಶುರು ಮಾಡಬೇಕೆಂದಿದ್ದೇನೆ. ಇದಕ್ಕೆ ಮಾರುಕಟ್ಟೆ ಕೂಡ ಪೂರಕವಾಗಿದೆ. ಫ್ರಾಂಚೈಸಿ ಮಾಲೀಕರ ಬಳಿ ಈ ಕುರಿತಾಗಿ ಚರ್ಚೆ ಮಾಡಲಿದ್ದೇವೆ," ಎಂದು ರಮೀಝ್‌ ರಾಜಾ ಕ್ರಿಕ್‌ಇನ್ಫೋಗೆ ಮಾಹಿತಿ ನೀಡಿದ್ದಾರೆ.

'ಐಪಿಎಲ್‌ಗಿಂತ ಪಾಕಿಸ್ತಾನ್ ಸೂಪರ್‌ ಲೀಗ್‌ನಲ್ಲೇ ಲಾಭ ಜಾಸ್ತಿ' ಎಂದ ಡೇಲ್‌ ಸ್ಟೇನ್!

"ಇದು ಹಣದ ಆಟ. ಪಾಕಿಸ್ತಾನದಲ್ಲಿ ಕ್ರಿಕೆಟ್‌ನ ಆರ್ಥಿಕತೆ ಬೆಳೆದರೆ, ನಮ್ಮ ಮೇಲಿನ ಗೌರವ ಕೂಡ ಹೆಚ್ಚಾಗುತ್ತದೆ. ಪಿಎಸ್‌ಎಲ್‌ ಮೂಲಕವೇ ಈ ಆರ್ಥಿಕ ಪ್ರಗತಿ ಕಾಣಲು ಸಾಧ್ಯ. ಪಿಎಸ್‌ಎಲ್‌ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ತಂದರೆ, ತಂಡಗಳ ಪರ್ಸ್‌ ಮೊತ್ತ ಹೆಚ್ಚಿಸಿದರೆ ಆಗ ಐಪಿಎಲ್‌ ಆಧಿಪತ್ಯಕ್ಕೆ ಬ್ರೇಕ್‌ ಹಾಕಲು ಸಾಧ್ಯ. ಆಗ ಪಿಎಸ್‌ಎಲ್‌ ಬಿಟ್ಟು ಐಪಿಎಲ್‌ ಆಡಲು ಯಾವ ಆಟಗಾರ ಹೋಗುತ್ತಾನೇ ನೋಡೋಣ," ಎಂದು ಬಡಾಯಿ ಕೊಚ್ಚಿಕೊಂಡಿದ್ದಾರೆ.

ಪಿಎಸ್‌ಎಲ್ 2022 ಟೂರ್ನಿ ಮುಗಿದಿದ್ದು, ಲಾಹೋರ್‌ ಕಲಂದರ್ಸ್‌ ತಂಡ ಚಾಂಪಿಯನ್ಸ್‌ ಪಟ್ಟ ಗೆದ್ದಿದೆ. ಗೆದ್ದ ತಂಡಕ್ಕೆ ಸಿಕ್ಕಿರುವ ಬಹುಮಾನ ಮೊತ್ತ ಕೇವಲ 3.5 ಕೋಟಿ ರೂ. ಆಗಿದೆ. ಅದೇ ಐಪಿಎಲ್‌ 2022 ಟೂರ್ನಿಯಲ್ಲಿ ಗೆಲ್ಲುವ ತಂಡಕ್ಕೆ 20 ಕೋಟಿ ರೂ. ಲಭ್ಯವಾಗಲಿದೆ. ಇಷ್ಟು ಅಜಗಜಾಂತರ ವ್ಯತ್ಯಾಸವನ್ನು ಪಿಸಿಬಿ ನೀಗಿಸಬಲ್ಲದೆ ಕಾದು ನೋಡಬೇಕು.
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌