ಆ್ಯಪ್ನಗರ

'ನನ್ನ ತಂದೆ 2-3 ದಿನ ಊಟ ಮಾಡಿರಲಿಲ್ಲ', ಕಷ್ಟದ ದಿನಗಳನ್ನು ಸ್ಮರಿಸಿದ ರಿಂಕು ಸಿಂಗ್!

2018ರಲ್ಲೇ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳಲ್ಲಿ ಕಾಣಿಸಿಕೊಂಡರೂ ಪ್ರತಿಭಾನ್ವಿತ ಆಟಗಾರ ರಿಂಕು ಸಿಂಗ್‌ ಅವರಿಗೆ ಹೇಳಿಕೊಳ್ಳುವಂತಹ ಅವಕಾಶಗಳು ಸಿಕ್ಕಿರಲಿಲ್ಲ. ಆದರೆ, 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಭರ್ಜರಿ ಆಟವಾಡುವ ಮೂಲಕ ಎಲ್ಲರೂ ತಮ್ಮತ್ತ ತಿರುಗಿನೋಡುವಂತೆ ಮಾಡಿದ್ದಾರೆ. ಅದರಲ್ಲೂ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ ಮೂಲಕ ಕೆಕೆಆರ್‌ಗೆ ಜಯ ತಂದುಕೊಡುವ ಅಮೋಘ ಪ್ರಯತ್ನ ಮಾಡಿ ಜನ ಮನ ಗೆದ್ದಿದ್ದಾರೆ.

Authored byವಿಜೇತ್ ಕುಮಾರ್ | Vijaya Karnataka Web 19 May 2022, 3:19 pm

ಹೈಲೈಟ್ಸ್‌:

  • ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿ.
  • ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಹೊಸ ತಾರೆಯಾಗಿ ಉದಯಿಸಿದ ರಿಂಕು ಸಿಂಗ್‌.
  • ಕ್ರಿಕೆಟ್‌ ವೃತ್ತಿಬದುಕಿನಲ್ಲಿ ಕಂಡ ಕಷ್ಟದ ದಿನಗಳನ್ನು ಸ್ಮರಿಸಿದ ಯುವ ಆಲ್‌ರೌಂಡರ್‌.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Rinku Singh In KKR vs LSG Match
ಕೋಲ್ಕತಾ ನೈಟ್‌ ರೈಡರ್ಸ್‌ ಬ್ಯಾಟರ್‌ ರಿಂಕು ಸಿಂಗ್‌ (ಚಿತ್ರ: ಐಪಿಎಲ್/ಬಿಸಿಸಿಐ).
ಮುಂಬೈ: ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದಲ್ಲಿ ಹೊಸ ತಾರೆಯಾಗಿ ರಿಂಕು ಸಿಂಗ್‌ ಉದಯಿಸಿದ್ದಾರೆ. ಅಂದಹಾಗೆ 2018ರಿಂದಲೂ ಎಡಗೈ ಬ್ಯಾಟರ್‌ ಕೆಕೆಆರ್‌ ತಂಡದ ಭಾಗವಾಗಿದ್ದಾರೆ. ಆದರೆ, ಆಡುವ ಅವಕಾಶಸಿಕ್ಕಿದ್ದು ಕೆಲವೇ ಕೆಲ ಪಂದ್ಯಗಳಲ್ಲಿ ಮಾತ್ರ.
ಆದರೆ, ಹೊಸ ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್‌ ತಂಡದ ಪ್ರತಿಭಾನ್ವಿತ ಆಟಗಾರನಿಗೆ ಅಗತ್ಯದ ಅವಕಾಶ ಕಲ್ಪಿಸಿಕೊಟ್ಟರು. ಇದಕ್ಕೆ ನ್ಯಾಯ ಒದಗಿಸಿರುವ ರಿಂಕು ಸಿಂಗ್‌ ಕೆಲ ಮ್ಯಾಚ್‌ ವಿನ್ನಿಂಗ್ ಬ್ಯಾಟಿಂಗ್‌ ಪ್ರದರ್ಶನಗಳನ್ನು ಹೊರತಂದಿದ್ದಾರೆ. ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಬುಧವಾರ (ಮೇ 18) ರಂದು ನಡೆದ ಪಂದ್ಯದಲ್ಲಿ 15 ಎಸೆತಗಳಲ್ಲಿ 40 ರನ್‌ ಸಿಡಿಸುವ ಮೂಲಕ 211 ರನ್ ಗುರಿ ಬೆನ್ನತ್ತಿದ್ದ ಕೆಕೆಆರ್‌ಗೆ ಇನ್ನೇನು ಜಯ ತಂದೇಬಿಟ್ಟಿದ್ದರು. ಆದರೆ, ಕೇವಲ 2 ರನ್‌ಗಳ ಅಂತರದಲ್ಲಿ ಸೋಲಿನ ನಿರಾಶೆ ಎದುರಾಗಿತ್ತು. ಕೆಕೆಆರ್‌ ವೀರೋಚಿತ ಸೋಲುಂಡರೂ ರಿಂಕು ಸಿಂಗ್‌ ಹೋರಾಟ ಕ್ರಿಕೆಟ್‌ ಪ್ರಿಯರ ಮನ ಗೆದ್ದಿದೆ.

ಅಂದಹಾಗೆ ರಿಂಕು ಸಿಂಗ್‌ 2021ರ ಐಪಿಎಲ್‌ನಲ್ಲಿ ಅರ್ಧಕ್ಕೆ ತಂಡದಿಂದ ಹೊರಗುಳಿಯುವಂತ್ತಾಗಿತ್ತು. ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಎದುರಿಸಿದ್ದ ಮಂಡಿ ನೋವಿನ ಗಾಯದ ಸಮಸ್ಯೆ ಕಾರಣ ಐಪಿಎಲ್‌ನಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡುವ ಅವಕಾಶ ಅವರಿಗೆ ಸಿಕ್ಕಿರಲಿಲ್ಲ. ಆ ಸಂದರ್ಭದಲ್ಲಿ ತಾವು ಎದುರಿಸಿ ಕಷ್ಟದ ಸಮಯವನ್ನು ರಿಂಕು ಇದೀಗ ಸ್ಮರಿಸಿದ್ದಾರೆ.

ಹೋರಾಡಿ ಸೋತಿದ್ದಕ್ಕೆ ತಮಗೆ ಯಾವುದೇ ಬೇಸರವಿಲ್ಲ ಎಂದ ಶ್ರೇಯಸ್‌ ಅಯ್ಯರ್‌!

"ಆ 5 ವರ್ಷಗಳು ನನ್ನ ಪಾಲಿನ ಅತ್ಯಂತ ಕಠಿಣ ಸಮಯ. ಮೊದಲ ವರ್ಷದ ಬಳಿಕ ಕೆಕೆಆರ್‌ ನನ್ನನ್ನು ತೆಗೆದುಕೊಂಡಾಗ ಆಡುವ ಅವಕಾಶ ಸಿಕ್ಕಿತ್ತು ಆದರೆ ನನ್ನಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಆದರೂ ಕೆಕೆಆರ್‌ ನನ್ನ ಮೇಲೆ ವಿಶ್ವಾಸವಿಟ್ಟು ಮುಂದಿನ 2 ಆವೃತ್ತಿಗಳಿಗೆ ಉಳಿಸಿಕೊಂಡಿತ್ತು," ಎಂದು ಕೆಕೆಆರ್‌ ಫ್ರಾಂಚೈಸಿ ತನ್ನ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವ ವಿಡಿಯೋದಲ್ಲಿ ರಿಂಕು ಸಿಂಗ್‌ ಮಾತನಾಡಿದ್ದಾರೆ.

ಗಾಯದ ಸಮಸ್ಯೆ ಕಾರಣ 6-7 ತಿಂಗಳು ಕಾಲ ಸಂಪೂರ್ಣವಾಗಿ ಕ್ರಿಕೆಟ್‌ನಿಂದ ದೂರ ಉಳಿಯುವಂತ್ತಾದಾಗ ಎದುರಿಸಿದ ಕಷ್ಟಗಳನ್ನು ರಿಂಕು ಸಿಂಗ್‌ ಇದೇ ವೇಳೆ ಹಂಚಿಕೊಂಡಿದ್ದಾರೆ. ಐಪಿಎಲ್‌ಗೆ ಕಮ್‌ಬ್ಯಾಕ್‌ ಮಾಡಲು ಬಹಳಾ ಕಷ್ಟ ಪಟ್ಟಿದ್ದಾಗಿ ತಿಳಿಸಿದ್ದಾರೆ.

"ಕಠಿಣ ಪರಿಶ್ರಮ ವಹಿಸಿದ್ದೇನೆ. ಏಕೆಂದರೆ ಕಳೆದ ವರ್ಷ ಮಂಡಿಯ ಗಾಯದ ಸಮಸ್ಯೆ ಎದುರಿಸಿದ್ದೆ. ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ 2ನೇ ರನ್‌ ಗಳಿಸುವ ಸಮಯದಲ್ಲಿ ಗಾಯಗೊಂಡಿದ್ದೆ. ಗಾಯಗೊಂಡು ಬಿದ್ದಾಗ ನನ್ನ ತಲೆಗೆ ಬಂದ ಮೊದಲ ಸಂಗತಿ ಐಪಿಎಲ್‌. ಗಾಯಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು 6-7 ತಿಂಗಳು ವಿಶ್ರಾಂತಿ ಬೇಕಾಗುತ್ತದೆ ಎಂದರು. ಆಗ ನನ್ನ ಮನಸ್ಸೆಲ್ಲವೂ ಐಪಿಎಲ್‌ ತಪ್ಪುತ್ತದೆ ಎಂಬುದರ ಕಡೆಗಿತ್ತು," ಎಂದಿದ್ದಾರೆ.

ಐಪಿಎಲ್‌ ಇತಿಹಾಸದಲ್ಲಿ ಪ್ರತಿ ವಿಕೆಟ್‌ಗೆ ದಾಖಲಾದ ಗರಿಷ್ಠ ರನ್‌ಗಳ ಜೊತೆಯಾಟಗಳ ವಿವರ ಇಲ್ಲಿದೆ!

"ಕ್ರಿಕೆಟ್‌ನಿಂದ ಅಷ್ಟು ಸಮಯ ದೂರ ಉಳಿಯುವುದು ನನ್ನ ಪಾಲಿಗೆ ಬಹಳಾ ಕಷ್ಟವಾಗಿತ್ತು. ಆ ಸಮಯದಲ್ಲಿ ನನ್ನ ತಂದೆ 2-3 ದಿನ ಊಟವನ್ನೇ ಮಾಡಿರಲಿಲ್ಲ. ಕ್ರಿಕೆಟ್‌ನಲ್ಲಿ ಈ ರೀತಿಯ ಗಾಯದ ಸಮಸ್ಯೆಗಳು ಸಾಮಾನ್ಯ ಎಂದು ಅವರಿಗೆ ಮನವರಿಕೆ ಮಾಡಿಸಿದೆ. ಏಕೆಂದರೆ ನಮ್ಮ ಕುಟುಂಬ ನನ್ನ ಸಂಪಾದನೆ ಮೇಲೆ ನಿಂತಿದೆ. ಹೀಗಿರುವಾಗ ಗಾಯದಂತಹ ಗಂಭೀರ ಸಮಸ್ಯೆ ಎದುರಾದಾಗ ಆತಂಕ ಎದುರಾಗುವುದು ಸಹಜ. ಇದರಿಂದ ಬಹಳಾ ಬೇಸರಗೊಂಡಿದ್ದೆ. ಖಂಡಿತಾ ಬಹಳಾ ಬೇಗ ಚೇತರಿಸುತ್ತೇನೆ ಎಂಬ ಆತ್ಮವಿಶ್ವಾಸವೂ ನನ್ನಲ್ಲಿತ್ತು," ಎಂದಿದ್ದಾರೆ. ಐಪಿಎಲ್ ಮೆಗಾ ಆಕ್ಷನ್‌ನಲ್ಲಿ ಕೆಕೆಆರ್‌ ತಂಡ 80 ಲಕ್ಷ ರೂ. ನೀಡಿ ರಿಂಕು ಸಿಂಗ್‌ ಅವರನ್ನು ಖರೀದಿ ಮಾಡಿತ್ತು.

ಇನ್ನು ಕೆಕೆಆರ್‌ ತಂಡ ಐಪಿಎಲ್‌ 2022 ಟೂರ್ನಿಯಲ್ಲಿ ಆಡಿದ 14 ಲೀಗ್‌ ಪಂದ್ಯಗಳಲ್ಲಿ ಕೇವಲ 6 ಜಯ ಮಾತ್ರವೇ ಗಳಿಸಲು ಶಕ್ತವಾಗಿ 12 ಅಂಕಗಳಿಗೆ ತೃಪ್ತಿಪಟ್ಟಿದೆ. ಈ ಮೂಲಕ ಸ್ಪರ್ಧೆಯಿಂದ ಅಧಿಕೃತವಾಗಿ ಹೊರಬಿದ್ದ ಮೂರನೇ ತಂಡವೆನಿಸಿಕೊಂಡಿದೆ.
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌