ಆ್ಯಪ್ನಗರ

ಚಿನ್ನಸ್ವಾಮಿಯಲ್ಲಿ ಇಂದು ಆರ್‌ಸಿಬಿಗೆ ಸಿಎಸ್‌ಕೆ ಸವಾಲು

9 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದು ನಾಲ್ಕು ಅಂಕ ಕಲೆಹಾಕಿರುವ ಆರ್‌ಸಿಬಿ ಪಾಲಿಗೆ ಈ ಪಂದ್ಯ 'ಮಾಡು ಇಲ್ಲವೇ ಮಡಿ' ಕದನವಾಗಿ ಮಾರ್ಪಟ್ಟಿದೆ.

Vijaya Karnataka Web 21 Apr 2019, 1:51 pm
ಬೆಂಗಳೂರು: ಕೋಲ್ಕೊತಾ ನೈಟ್‌ ರೈಡರ್ಸ್‌ ವಿರುದ್ಧ ಗೆದ್ದು ಪ್ಲೇಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪ್ರಸಕ್ತ ಸಾಲಿನ ತನ್ನ 10ನೇ ಪಂದ್ಯದಲ್ಲಿ ಭಾನುವಾರ ತವರಿನಂಗಣದಲ್ಲಿ ಲೀಗ್‌ ಲೀಡರ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಕಠಿಣ ಸವಾಲು ಎದುರಿಸಲಿದೆ.
Vijaya Karnataka Web RCB CSK


ಸದ್ಯ ಆಡಿರುವ 9 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದು ನಾಲ್ಕು ಅಂಕ ಕಲೆಹಾಕಿರುವ ಆರ್‌ಸಿಬಿ ಪಾಲಿಗೆ ಈ ಪಂದ್ಯ 'ಮಾಡು ಇಲ್ಲವೇ ಮಡಿ' ಕದನವಾಗಿ ಮಾರ್ಪಟ್ಟಿದೆ. ಒಂದು ವೇಳೆ, ಚೆನ್ನೈ ವಿರುದ್ಧ ಕೊಹ್ಲಿ ಬಳಗ ಮತ್ತೊಮ್ಮೆ ಮುಗ್ಗರಿಸಿದರೆ ಪ್ಲೇಆಫ್‌ ಕನಸು ನುಚ್ಚುನೂರಾಗಲಿದೆ. ಈ ಬಾರಿ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವಿಸಿರುವ ಕೊಹ್ಲಿ ಬಳಗ, ಧೋನಿ ಸಾರಥ್ಯದ ಸಿಎಸ್‌ಕೆ ವಿರುದ್ಧ ಸೇಡು ತೀರಿಸಿಕೊಳ್ಳುವುದೇ ಎಂಬುದನ್ನು ಕಾದುನೋಡಬೇಕಿದೆ. ಲೀಗ್‌ ಉದ್ಘಾಟನಾ ಪಂದ್ಯದಲ್ಲಿ ಉಭಯ ತಂಡಗಳು ಚೆನ್ನೈನಲ್ಲಿ ಮುಖಾಮುಖಿಯಾಗಿದ್ದ ವೇಳೆ ಚೆನ್ನೈ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತ್ತು.

ಹೈದರಾಬಾದ್‌ ತಂಡದ ವಿರುದ್ಧ ಅಲಭ್ಯರಾಗಿದ್ದ ಗಾಯಾಳು ಧೋನಿ ಇದೀಗ ಚೇತರಿಸಿಕೊಂಡಿದ್ದು, ತಂಡದ ಪ್ಲೇಆಫ್‌ ಪ್ರವೇಶವನ್ನು ಖಾತ್ರಿಪಡಿಸುವ ವಿಶ್ವಾಸದಲ್ಲಿದ್ದಾರೆ. ಧೋನಿ ಗೈರುಹಾಜರಿಯಲ್ಲಿ ಸಿಎಸ್‌ಕೆ ತಂಡವನ್ನು ಮುನ್ನಡೆಸಿದ್ದ ಹಂಗಾಮಿ ನಾಯಕ ಸುರೇಶ್‌ ರೈನಾ, ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಎಡವಿದ್ದರು.

2019ರ ಸಾಲಿನಲ್ಲಿ ಎರಡು ಬಾರಿ 200ಕ್ಕೂ ಅಧಿಕ ಮೊತ್ತ ಪೇರಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಭಾನುವಾರದ ಪಂದ್ಯದಲ್ಲೂ ಬ್ಯಾಟಿಂಗ್‌ ಪರಾಕ್ರಮ ಮೆರೆಯುವ ನಿರೀಕ್ಷೆ ಇದೆ. ಅದರಲ್ಲೂ ಕೆಕೆಆರ್‌ ವಿರುದ್ಧ ಗುಡುಗಿದ ನಾಯಕ ಕೊಹ್ಲಿ, ಲೀಗ್‌ನಲ್ಲಿ ಐದನೇ ಶತಕ ದಾಖಲಿಸಿ ಮಿಂಚಿದ್ದಾರೆ. ಇವರ ಜತೆಗೆ ಇಂಗ್ಲೆಂಡ್‌ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ಮೊಯೀನ್‌ ಅಲಿ ಸಹ ಫಾರ್ಮ್‌ ಕಂಡುಕೊಂಡಿರುವುದು ತಂಡದ ಆತ್ಮಸ್ಥೈರ್ಯವನ್ನು ಇನ್ನಷ್ಟು ವೃದ್ಧಿಸಿದೆ.

ದಕ್ಷಿಣ ಆಫ್ರಿಕಾದ ಸ್ಟಾರ್‌ ಬ್ಯಾಟ್ಸ್‌ಮನ್‌ ಹಾಗೂ 360 ಡಿಗ್ರಿ ಖ್ಯಾತಿಯ ಎಬಿ ಡಿ'ವಿಲಿಯರ್ಸ್‌ ಕೂಡ ಆರ್‌ಸಿಬಿಯ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ. ಆದರೆ ದುರ್ಬಲ ಬೌಲಿಂಗ್‌ ಮತ್ತು ಕಳಪೆ ಫೀಲ್ಡಿಂಗ್‌ನಲ್ಲಿ ಸುಧಾರಣೆ ಕಂಡುಬರದಿರುವುದು ನಾಯಕ ಕೊಹ್ಲಿಯನ್ನು ಚಿಂತೆಗೀಡುಮಾಡಿದೆ. ಕೆಕೆಆರ್‌ ವಿರುದ್ಧ ಬ್ಯಾಟ್ಸ್‌ಮನ್‌ಗಳು 213 ರನ್‌ಗಳ ಬೃಹತ್‌ ಮೊತ್ತ ಪೇರಿಸಿಯೂ ಅದನ್ನು ರಕ್ಷಿಸಿಕೊಳ್ಳಲು ಬೌಲರ್‌ಗಳು ಕೊನೆಯವರೆಗೂ ತಿಣುಕಾಡಿದ್ದು ನಾಯಕನಿಗೆ ಕಣ್ಣಿಗೆ ಕಟ್ಟಿದಂತಿದೆ. ಆದರೆ ದಕ್ಷಿಣ ಆಫ್ರಿಕಾದ ಅನುಭವಿ ವೇಗಿ ಡೇಲ್‌ ಸ್ಟೇನ್‌ ತಂಡಕ್ಕೆ ಆಗಮಿಸಿರುವುದು ನಿರಾಳ ತಂದಿದೆ.

ಅತ್ತ ಧೋನಿ, ರೈನಾ ಮತ್ತು ಫಾಫ್‌ ಡು ಪ್ಲೆಸಿಸ್‌ ಚೆನ್ನೈ ತಂಡದ ಬ್ಯಾಟಿಂಗ್‌ ಬಲವಾದರೆ, 40ರ ಆಸುಪಾಸಿನಲ್ಲಿರುವ ಸ್ಪಿನ್ನರ್‌ಗಳಾದ ಇಮ್ರಾನ್‌ ತಾಹಿರ್‌, ಹರ್ಭಜನ್‌ ಸಿಂಗ್‌ ಮತ್ತು ಮಧ್ಯಮ ವೇಗಿ ದೀಪಕ್‌ ಚಹರ್‌ ಬೌಲಿಂಗ್‌ ಅಸ್ತ್ರಗಳಾಗಿದ್ದಾರೆ. ಚಿದಂಬರಂ ಕ್ರೀಡಾಂಗಣದಲ್ಲಿ ಸ್ಪಿನ್‌ ಮೋಡಿಗೆ ಸೆರೆಯಾಗಿದ್ದ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು, ಬ್ಯಾಟಿಂಗ್‌ಗೆ ಹೆಚ್ಚು ನೆರವಾಗುವ ಚಿನ್ನಸ್ವಾಮಿಯಲ್ಲಿ ಹೇಗೆ ಆರ್ಭಟಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಪಂದ್ಯಕ್ಕೆ ಮಳೆ ಅಡಚಣೆ ಸಾಧ್ಯತೆ
ಕಳೆದ ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅಕಾಲಿಕ ಮಳೆ ಬೀಳುತ್ತಿರುವ ಕಾರಣ ಭಾನುವಾರ ಸಂಜೆಯೂ ಮಳೆಯಾಗುವ ನಿರೀಕ್ಷೆ ಇದ್ದು, ಪಂದ್ಯಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್‌ಏರ್‌ ವ್ಯವಸ್ಥೆ ಅಳವಡಿಸಲಾಗಿರುವ ಕಾರಣ ಪಂದ್ಯ ಸುಗಮವಾಗಿ ನಡೆಯುವ ಸಾಧ್ಯತೆ ಇದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು-ಚೆನ್ನೈ ಸೂಪರ್‌ ಕಿಂಗ್ಸ್‌
ಪಂದ್ಯ ಆರಂಭ: ರಾತ್ರಿ 8ಕ್ಕೆ

ಸ್ಥಳ: ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್ಸ್‌

ಮುಖಾಮುಖಿ : 24
ಆರ್‌ಸಿಬಿ ಗೆಲುವು : 7
ಸಿಎಸ್‌ಕೆ ಜಯ : 16
ಫಲಿತಾಂಶ ಇಲ್ಲ: 01

ಗೆಲುವಿನ ಸರಾಸರಿ
ಬೆಂಗಳೂರು: 30.43%
ಚೆನ್ನೈ: 69.56 %

ಸ್ಟಾರ್‌ ಆಟಗಾರರು
ರಾಯಲ್‌ ಚಾಲೆಂಜರ್ಸ್‌

ವಿರಾಟ್‌ ಕೊಹ್ಲಿ
ಎಬಿ ಡಿ'ವಿಲಿಯರ್ಸ್‌
ಮೊಯೀನ್‌ ಅಲಿ
ಯುಜ್ವೇದ್ರ ಚಹಲ್‌
ಡೇಲ್‌ ಸ್ಟೇನ್‌

ಸೂಪರ್‌ ಕಿಂಗ್ಸ್‌
ಮಹೇಂದ್ರ ಸಿಂಗ್‌ ಧೋನಿ
ಸುರೇಶ್‌ ರೈನಾ
ಫಾಫ್‌ ಡು' ಪ್ಲೆಸಿಸ್‌
ಇಮ್ರಾನ್‌ ತಾಹಿರ್‌
ದೀಪಕ್‌ ಚಹರ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌