Please enable javascript.ಏಕದಿನಕ್ಕೆ ರಿಕಿ ಪಾಂಟಿಂಗ್ ವಿದಾಯ - ಏಕದಿನಕ್ಕೆ ರಿಕಿ ಪಾಂಟಿಂಗ್ ವಿದಾಯ - Vijay Karnataka

ಏಕದಿನಕ್ಕೆ ರಿಕಿ ಪಾಂಟಿಂಗ್ ವಿದಾಯ

Agencies 22 Feb 2012, 5:58 pm
Subscribe

ಆಸ್ಟ್ರೇಲಿಯಾಕ್ಕೆ ಎರಡು ಬಾರಿ ವಿಶ್ವಕಪ್ ತಂದುಕೊಟ್ಟ ರಿಕಿ ಪಾಂಟಿಂಗ್ ಅಂತಾರಾಷ್ಟ್ರೀಯ ಏಕದಿನಕ್ಕೆ ವಿದಾಯ ಹೇಳಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ಆಸೀಸ್‌ನ ಮಾಜಿ ನಾಯಕ ತಿಳಿಸಿದ್ದಾರೆ.

ಏಕದಿನಕ್ಕೆ ರಿಕಿ ಪಾಂಟಿಂಗ್ ವಿದಾಯ

ಕ್ರಿಕೆಟ್ ಜಗತ್ತು ಶ್ರೇಷ್ಠ ಆಟಗಾರ, ಆಸ್ಟ್ರೇಲಿಯಾಕ್ಕೆ ಎರಡು ಬಾರಿ ವಿಶ್ವಕಪ್ ತಂದುಕೊಟ್ಟ ಸಮರ್ಥ ನಾಯಕ ಪಂಟರ್ ಖ್ಯಾತಿಯ ರಿಕಿ ಪಾಂಟಿಂಗ್ ಅಂತಾರಾಷ್ಟ್ರೀಯ ಏಕದಿನಕ್ಕೆ ವಿದಾಯ ಹೇಳಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ಆಸೀಸ್‌ನ ಮಾಜಿ ನಾಯಕ ತಿಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ನಂತರ ಅಂತಾರಾಷ್ಟ್ರೀಯ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಎರಡನೇ ಆಟಗಾರ ರಿಕಿ ಪಾಂಟಿಂಗ್ 275 ಏಕದಿನ ಪಂದ್ಯಗಳನ್ನಾಡಿ 13,704 ರನ್ ದಾಖಲಿಸಿ 42.03 ಸರಾಸರಿ ಹೊಂದಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಪಾಂಟಿಂಗ್ ಮತ್ತೆ ಆಸ್ಟ್ರೇಲಿಯಾ ತಂಡದ ಪರ ಏಕದಿನ ಪಂದ್ಯವನ್ನಾಡ ಬಯಸುವುದಿಲ್ಲ ಎಂದರು.

ಈಗಾಗಲೇ ನನ್ನನ್ನು ತಂಡದಿಂದ ಕೈ ಬಿಟ್ಟಿರುವಾಗ ಇಲ್ಲಿಗೆ ಬಂದು ಏಕದಿನದಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ಹೇಳಲು ಕಷ್ಟವಾಗುತ್ತಿದೆ. ಆಸ್ಟ್ರೇಲಿಯಾ ತಂಡದ ಪರ ಮತ್ತೆ ಏಕದಿನ ಪಂದ್ಯವನ್ನಾಡುವ ನಿರೀಕ್ಷೆ ಹೊಂದಿಲ್ಲ. ಆಯ್ಕೆಸಮಿತಿಯೂ ನನ್ನನ್ನು ಮತ್ತೆ ಆಯ್ಕೆ ಮಾಡುತ್ತಿಲ್ಲವೆಂಬುದು ಖಚಿತ. ಈಗೇನು ನಡೆದಿದೆಯೋ ಅದರ ಬಗ್ಗೆ ನನಗೆ ಬೇಸರವಿಲ್ಲ ಎಂದು ಪಾಂಟಿಂಗ್ ನುಡಿದರು.

ಇದಕ್ಕೆ ಕಾರಣವೇನೆಂಬುದು ನನಗೆ ಚೆನ್ನಾಗಿ ಗೊತ್ತು, ಮುಂದಿನ ವಿಶ್ವಕಪ್‌ನ್ನು ಗಮನದಲ್ಲಿರಿಸಿಕೊಂಡು ಆಯ್ಕೆ ಸಮಿತಿ ಈ ರೀತಿಯ ತೀರ್ಮಾನ ಕೈಗೊಂಡಿದೆ. ಆಯ್ಕೆ ಸಮಿತಿಯು ಉತ್ತಮ ರೀತಿಯಲ್ಲಿ ತಂಡವನ್ನು ಕಟ್ಟುವ ಯೋಜನೆ ಹಾಕಿಕೊಂಡಿದೆ. ಅವರ ಯೋಜನೆಯಲ್ಲಿ ನಾನಿಲ್ಲವೆಂಬುದೂ ಚೆನ್ನಾಗಿ ಗೊತ್ತು ಎಂದು ಪಾಂಟಿಂಗ್ ಸ್ಪಷ್ಟಪಡಿಸಿದರು.

ಪ್ರಸಕ್ತ ತ್ರಿಕೋನ ಸರಣಿಯ ಮುಂದಿನ ಪಂದ್ಯಗಳಿಗೆ ಕೈ ಬಿಟ್ಟ ಒಂದೇ ದಿನದಲ್ಲಿ ಏಕದಿನ ದಿನ ಕ್ರಿಕೆಟ್‌ಗೆ ವಿದಾಯ ಹೇಳಿದ ಪಾಂಟಿಂಗ್, ಟೆಸ್ಟ್ ಕ್ರಿಕೆಟ್‌ಗೆ ತಾವು ಲಭ್ಯವಿರುವುದಾಗಿ ತಿಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದೇನೆ, ಅದೇ ರೀತಿ ತಾಸ್ಮಾನಿಯಾ ತಂಡದ ಪರವೂ ಆಡಲಿದ್ದೇನೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಭುತ್ವ ಸಾಧಿಸಬಲ್ಲೆನೆಂಬುದನ್ನು ಎಲ್ಲರಿಗೂ ಮನದಟ್ಟು ಮಾಡಿದ್ದೇನೆ, ಅದು ನನಗೂ ಗೊತ್ತು. ಭಾರತ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅದನ್ನು ಸಾಬೀತುಪಡಿಸಿದ್ದೇನೆ ಎಂದು 37ರ ಪಾಂಟಿಂಗ್ ನುಡಿದರು.

ರಿಕಿ ಪಾಂಟಿಂಗ್ ಆಯ್ಕೆಗೆ ಸೂಕ್ತರಲ್ಲ ಎಂಬುದನ್ನು ಆಸ್ಟ್ರೇಲಿಯಾ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಜಾನ್ ಇನ್‌ವೆರಾರಿಟಿ ಆಯ್ಕೆಗೆ ಸ್ಪಷ್ಟಪಡಿಸಿದ್ದರು. ಮುಂದಿನ ವಿಶ್ವಕಪ್ ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಯ್ಕೆ ಸಮಿತಿ ಪಾಂಟಿಂಗ್‌ಗೆ ಒಂದು ದಿನ ಮುಂಚಿತವಾಗಿಯೇ ಸೂಚ್ಯವಾಗಿ ತಿಳಿಸಿತ್ತು.

ಆಸ್ಟ್ರೇಲಿಯಾ ಏಕದಿನ ತಂಡದ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ತಂಡದ ಆಯ್ಕೆ ಮಾಡಲಾಗುತ್ತಿದೆ ಎಂಬುದನ್ನು ಜಾನ್ ನನಗೆ ನಿನ್ನೆಯೇ ತಿಳಿಸಿದ್ದರು. ಅವರ ಆ ಯೋಜನೆಯಲ್ಲಿ ನಾನಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದರು ಎಂದು ಪಾಂಟಿಂಗ್ ಹೇಳಿದ್ದಾರೆ.

ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 4-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದ ಒಂದೇ ತಿಂಗಳಲ್ಲಿ ಪಾಂಟಿಂಗ್ ನಿವೃತ್ತಿ ಪ್ರಕಟಿಸಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಪಾಂಟಿಂಗ್ 2 ಶತಕ ಹಾಗೂ 3 ಅರ್ಧಶತಕ ಸೇರಿದಂತೆ 108.80 ಸರಾಸರಿಯೊಂದಿಗೆ 544 ರನ್ ಗಳಿಸಿದ್ದರು.

ಆದರೆ ಏಕದಿನ ತ್ರಿಕೋನ ಸರಣಿಯಲ್ಲಿ ಆಯ್ಕೆ ಸಮಿತಿ ಪಾಂಟಿಂಗ್ ಅವರ ಮೇಲಿನ ವಿಶ್ವಾಸ ಕಳೆದುಕೊಂಡಿತು, ಏಕೆಂದರೆ 5 ಇನಿಂಗ್ಸ್‌ಗಳಲ್ಲಿ ಪಾಂಟಿಂಗ್ ಗಳಿಸಿರುವುದು ಕೇವಲ 18 ರನ್.

ನನ್ನ ಪಾಲಿಗೆ ಇನ್ನು ಏಕದಿನ ಕ್ರಿಕೆಟ್ ಇಲ್ಲ, ನಿವೃತ್ತಿಯ ದಿನ ಸಮೀಪವಾಗಿದೆ ಎಂದು ನಮಗೆಲ್ಲರಿಗೂ ಗೊತ್ತು, ಆದರೆ ಅದಕ್ಕಾಗಿ ವಿದಾಯದ ಸರಣಿಯೊಂದನ್ನಾಡಬೇಕೆಂದು ಬಯಸುವವ ನಾನಲ್ಲ ಎಂದು ಪಾಂಟಿಂಗ್ ಹೇಳಿದ್ದಾರೆ.

ಆಸ್ಟ್ರೇಲಿಯಾದ ಕ್ರಿಕೆಟ್‌ಗಾಗಿ ಜಯದ ಪಂದ್ಯವನ್ನಾಡಲು ನನ್ನಿಂದ ಸಾಧ್ಯವಿಲ್ಲವೆಂಬುದು ಸ್ಪಷ್ಟವಾದಾಗ ನನ್ನ ತಿರ್ಮಾನವನ್ನು ಕೈಗೊಳ್ಳಬಲ್ಲೆ. ಕಳೆದ 12 ತಿಂಗಳಿಂದ ಈ ನಿಲುವೇ ನನಗೆ ಪ್ರೇರಣೆ ನೀಡುತ್ತಿತ್ತು. ಆಟಗಾರನಾಗಿ ನಾನೇನು ಮಾಡಬಲ್ಲೆ ಎಂಬುದು ನನಗೆ ಚೆನ್ನಾಗಿ ಗೊತ್ತು.

ಕ್ರಿಕೆಟ್ ಬದುಕಿಗೆ ಹೇಗೆ,ಯಾವಾಗ ವಿದಾಯ ಹೇಳಬೇಕೆಂಬುದು ತಮಗೆ ಚೆನ್ನಾಗಿ ಗೊತ್ತು ಎಂದು ಹೇಳಿರುವ ಪಾಂಟಿಂಗ್ ಆಯ್ಕೆ ಸಮಿತಿ ತಿರಸ್ಕರಿಸಿದ ಕಾರಣಕ್ಕೆ ಇಂಥ ತಿರ್ಮಾನ ಕೈಗೊಂಡಿಲ್ಲ ಎಂದಿದ್ದಾರೆ.

ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿರುವಾಗಲೇ ವಿದಾಯ ಹೇಳಬೇಕೆಂಬುದು ನನ್ನ ನಿರೀಕ್ಷೆ, ಹಾಗಿಯೇ ಮಾಡುತ್ತಿದ್ದೇನೆ. ಆಟದಲ್ಲಿ ಸಂಪೂರ್ಣ ವಿಫಲವಾದಾಗ ಅದಕ್ಕೊಂದು ಕೊನೆ ಹೇಳುವವ ನಾನಲ್ಲ, ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾವನ್ನು ಕೈಗೊಳ್ಳುತ್ತೇನೆ ಎಂದರು.

ಪ್ರತಿಯೊಂದು ಟೆಸ್ಟ್ ಪಂದ್ಯವನ್ನಾಡುವ ಉದ್ದೇಶದಿಂದ ಇನ್ನು ಮುಂದೆ ಟೆಸ್ಟ್ ಕ್ರಿಕೆಟ್ ಕಡೆಗೆ ಸಂಪೂರ್ಣ ಗಮನಹರಿಸಲಿದ್ದೇನೆ ಎಂದು ಪಾಂಟಿಂಗ್ ತಿಳಿಸಿದ್ದಾರೆ.

ನಿನ್ನೆಯ ದಿನ ನಾನು ಹೆಚ್ಚಾಗಿ ಯೋಚನೆ ಮಾಡಿರುವುದು, ಮುಂದಿನ ದಿನಗಳಲ್ಲಿ ಎಲ್ಲ ಟೆಸ್ಟ್ ಪಂದ್ಯಗಳನ್ನಾಡುವ ಉದ್ದೇಶದಿಂದ ಟೆಸ್ಟ್ ಕ್ರಿಕೆಟ್ ಕಡೆಗೆ ಹೆಚ್ಚಿನ ಗಮನಹರಿಸುವುದು. ಏಕದಿನ ಕ್ರಿಕೆಟ್ ಇಲ್ಲದೆ ಕ್ರಿಕೆಟ್‌ನಲ್ಲಿ ಮುಂದುವರಿಯುವುದು ನನಗೆ ಕಷ್ಟವಾಗಬಹುದು. ಆದರೆ ಕೇವಲ ಟೆಸ್ಟ್ ಕ್ರಿಕೆಟ್‌ನಲ್ಲೇ ಖ್ಯಾತಿ ಪಡೆದ ಸ್ಟೀವ್ ವಾ, ಮಾರ್ಕ್ ವಾ ಹಾಗೂ ಡೇವಿಡ್ ಬೂನ್ ನನಗೆ ಪ್ರೇರಣೆಯಾಗಿದ್ದಾರೆ. ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಮೇಲೂ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಪಾಂಟಿಂಗ್ ನುಡಿದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ