ಆ್ಯಪ್ನಗರ

ದಾಖಲೆ ಹೊರತಾಗಿಯೂ ವಿಶ್ವಕಪ್‌ ಕೈಗೆಟುಕಲಿಲ್ಲ

ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ 3ನೇ ಬಾರಿ ವಿಶ್ವಕಪ್‌ ಜಯಿಸಲು ಇಂಗ್ಲೆಂಡ್‌ನಲ್ಲಿ ತಯಾರಿ ನಡೆಸುತ್ತಿರುವ ಈ ಸಮಯದಲ್ಲಿ ನಮಗೆಲ್ಲರಿಗೂ 1999ರ ವಿಶ್ವಕಪ್‌ ಸಮರ ನೆನಪಾಗಲೇಬೇಕು. ಯಾಕೆಂದರೆ ಆ ಟೂರ್ನಿಗೆ ವೇದಿಕೆ ಒದಗಿಸಿದ್ದು ಕೂಡ ಇಂಗ್ಲೆಂಡೇ. ಬ್ರಿಟಿಷರಿಗೆ ಆ ವರ್ಷ ಸ್ಕಾಟ್ಲೆಂಡ್‌, ಐರ್ಲೆಂಡ್‌, ನೆದರ್ಲೆಂಡ್ಸ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ ಸಾಥ್‌ ನೀಡಿದರು. ಇಂಗ್ಲೆಂಡ್‌ ಪಾಲಿಗೆ ನಾಲ್ಕನೇ ಬಾರಿಗೆ ಸತ್ಕಾರ ನೀಡುವ ಭಾಗ್ಯ ಒದಗಿಬಂದಿತ್ತು. ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡ ಲಂಡನ್‌ ವಿಮಾನವೇರಿತ್ತು.

Vijaya Karnataka 24 May 2019, 5:00 am
ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ 3ನೇ ಬಾರಿ ವಿಶ್ವಕಪ್‌ ಜಯಿಸಲು ಇಂಗ್ಲೆಂಡ್‌ನಲ್ಲಿ ತಯಾರಿ ನಡೆಸುತ್ತಿರುವ ಈ ಸಮಯದಲ್ಲಿ ನಮಗೆಲ್ಲರಿಗೂ 1999ರ ವಿಶ್ವಕಪ್‌ ಸಮರ ನೆನಪಾಗಲೇಬೇಕು. ಯಾಕೆಂದರೆ ಆ ಟೂರ್ನಿಗೆ ವೇದಿಕೆ ಒದಗಿಸಿದ್ದು ಕೂಡ ಇಂಗ್ಲೆಂಡೇ. ಬ್ರಿಟಿಷರಿಗೆ ಆ ವರ್ಷ ಸ್ಕಾಟ್ಲೆಂಡ್‌, ಐರ್ಲೆಂಡ್‌, ನೆದರ್ಲೆಂಡ್ಸ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ ಸಾಥ್‌ ನೀಡಿದರು. ಇಂಗ್ಲೆಂಡ್‌ ಪಾಲಿಗೆ ನಾಲ್ಕನೇ ಬಾರಿಗೆ ಸತ್ಕಾರ ನೀಡುವ ಭಾಗ್ಯ ಒದಗಿಬಂದಿತ್ತು. ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡ ಲಂಡನ್‌ ವಿಮಾನವೇರಿತ್ತು.
Vijaya Karnataka Web BNG-2305-2-2-AUSTRELIA


ಗಂಗೂಲಿ ಭಾರತೀಯ ಕ್ರಿಕೆಟ್‌ಗೊಂದು ಹೊಸ ರೂಪ ನೀಡಿದ್ದ ಕಾರಣ ಗೆಲುವಿನ ದೊಡ್ಡ ಆಶಯವಿತ್ತು. ಆದರೆ, ಮೊದಲ ಪಂದ್ಯದಲ್ಲಿ 22 ವರ್ಷಗಳ ಬಳಿಕ ಮರು ಪ್ರವೇಶ ಪಡೆದ ದಕ್ಷಿಣ ಆಫ್ರಿಕಾದ ಮುಂದೆ ಮಂಡಿಯೂರಿತು ಗಂಗೂಲಿ ಪಡೆ. ಆ ಆವೃತ್ತಿಯಲ್ಲಿ 'ಸೂಪರ್‌ ಸಿಕ್ಸ್‌' ಮಾದರಿಯನ್ನು ಪರಿಚಯಿಸಲಾಗಿತ್ತು. ಭಾರತ 'ಎ' ಗುಂಪಿನಲ್ಲಿತ್ತು. ನಂತರದಲ್ಲಿ ಭಾರತ ತಂಡ ಜಾದೂ ಮಾಡಿದ್ದನ್ನು ಸ್ಮರಿಸಲೇಬೇಕು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗಂಗೂಲಿ (183) ಹಾಗೂ ರಾಹುಲ್‌ ದ್ರಾವಿಡ್‌ (145) ಎರಡನೇ ವಿಕೆಟಿಗೆ 318 ರನ್‌ಗಳ ದಾಖಲೆ ಜತೆಯಾಟವಾಡಿ ಕ್ರಿಕೆಟ್‌ ಲೋಕವನ್ನು ಬೆಕ್ಕಸಬೆರಗಾಗಿಸಿದರು. ಭಾರತ ತಂಡ ರನ್‌ರೇಟ್‌ ಆಧಾರದಲ್ಲಿ ಕೀನ್ಯಾ ಹಾಗೂ ಇಂಗ್ಲೆಂಡ್‌ ತಂಡಗಳನ್ನು ಹಿಂದಿಕ್ಕಿ ಸೂಪರ್‌ ಸಿಕ್ಸ್‌ಗೆ ದಾಂಗುಡಿಯಿಟ್ಟಿತು.

ಬದ್ಧ ವೈರಿಗಳ ಕದನ

ಭಾರತ ಮತ್ತು ಪಾಕಿಸ್ತಾನ ಅಲ್ಲಿಯ ತನಕದ ಆರು ವಿಶ್ವಕಪ್‌ಗಳಲ್ಲಿ ಲೀಗ್‌ ಹಂತದಲ್ಲಷ್ಟೇ ಮುಖಾಮುಖಿಯಾಗಿದ್ದವು. ಆದರೆ, 7ನೇ ಆವೃತ್ತಿಯಲ್ಲಿ ಸೂಪರ್‌ ಸಿಕ್ಸ್‌ ಹಂತದಲ್ಲಿ ಪರಸ್ಪರ ಕಾದಾಡುವ ಅವಕಾಶ ಕೂಡಿಬಂತು. ಮೈದಾನದ ಮೂಲೆಮೂಲೆಯಲ್ಲೂ ಸಂಘರ್ಷದ ಕಳೆ. ಭಾರತ ಹಾಗೂ ಪಾಕಿಸ್ತಾನದ ಮನೆಮನೆಗಳಲ್ಲಿ ಟಿವಿ ವೀಕ್ಷಕರ ಮನದಲ್ಲೂ ಕಾತರ-ಕುತೂಹಲ. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 6 ವಿಕೆಟ್‌ಗೆ 227 ಕಲೆಹಾಕಿದಾಗ ಗೆಲ್ಲಲು ಅಷ್ಟು ರನ್‌ ಸಾಕೇ ಅನ್ನಿಸಿತ್ತು. ಆದರೆ, ಗಂಗೂಲಿ ಪಡೆ ಕೇವಲ 180 ರನ್‌ಗಳಿಗೆ ಪಾಕ್‌ ತಂಡವನ್ನು ಹೆಡೆಮುರಿಗೆ ಕಟ್ಟಿ 47 ರನ್‌ಗಳ ಜಯಭೇರಿ ಬಾರಿಸಿದಾಗ ಯುದ್ಧ ಗೆದ್ದ ಸಂಭ್ರಮ. ಆದರೆ, ಭಾರತದ ಹೋರಾಟ ಸೂಪರ್‌ ಸಿಕ್ಸ್‌ ಹಂತಕ್ಕೆ ಮುಕ್ತಾಯಗೊಂಡಿದ್ದು ಮಾತ್ರ ವಿಪರ್ಯಾಸ.

ರನ್‌ರೇಟ್‌ನಲ್ಲಿ ಮುಂದೆ ಇದ್ದ ಪಾಕ್‌ ತಂಡ ಸೆಮಿಫೈನಲ್‌ ಹಂತ ಪ್ರವೇಶಿಸಿ ಭಾರತದ ಅಭಿಮಾನಿಗಳ ಕಡೆ ವ್ಯಂಗ್ಯ ನೋಟ ಬೀರಿತು. ಅಲ್ಲೂ ನ್ಯೂಜಿಲೆಂಡ್‌ಗೆ 9 ವಿಕೆಟ್‌ಗಳ ಸೋಲುಣಿಸಿದ ಪಾಕ್‌ ಎರಡನೇ ಬಾರಿ ಫೈನಲ್‌ ಪ್ರವೇಶಿಸಿತು.

ಅದಕ್ಕೂ ಮೊದಲು ಆಸ್ಪ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಣ ಎರಡನೇ ಸೆಮಿಫೈನಲ್‌ ಟೈ ಆಗಿತ್ತು. ಆಸ್ಪ್ರೇಲಿಯಾ 49.2 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು 213 ರನ್‌ ಮಾಡಿದರೆ, ದ.ಆಫ್ರಿಕಾ ತಂಡವೂ 49.4 ಓವರ್‌ಗಳಲ್ಲಿ 213 ರನ್‌ಗಳಿಗೆ ಸರ್ವಪತನಗೊಂಡಿತ್ತು. ವಿಶ್ವಕಪ್‌ ಇತಿಹಾಸದಲ್ಲಿ ಪಂದ್ಯವೊಂದು ಟೈ ಆಗಿದ್ದು ಅದೇ ಮೊದಲು. ಏನೇ ಆದರೂ, ನೆಟ್‌ ರನ್‌ರೇಟ್‌ ಆಧಾರದಲ್ಲಿ ಆಸ್ಪ್ರೇಲಿಯಾ ತಂಡ ಫೈನಲ್‌ ಪ್ರವೇಶಿಸಿತು.

ಆಸ್ಪ್ರೇಲಿಯಾ ಚಾಂಪಿಯನ್‌
'ಕ್ರಿಕೆಟ್‌ ಕಾಶಿ' ಲಾರ್ಡ್ಸ್ನಲ್ಲಿ ಫೈನಲ್‌. ಪಾಕಿಸ್ತಾನದ 132 ರನ್‌ಗಳ ಸವಾಲನ್ನು ಕಾಂಗರೂ ಪಡೆ ಕೇವಲ 20.2 ಓವರ್‌ಗಳಲ್ಲಿ ಮೆಟ್ಟಿ ನಿಂತಿತು.
20
ಟೂರ್ನಿಯಲ್ಲಿ ಬೌಲರ್‌ವೊಬ್ಬ ಪಡೆದ ಅತ್ಯಧಿಕ ವಿಕೆಟ್‌ಗಳು (ಜೆಫ್‌ ಅಲೋಟ್‌, ನ್ಯೂಜಿಲೆಂಡ್‌)

461
ಟೂರ್ನಿಯಲ್ಲಿ ಬ್ಯಾಟ್ಸ್‌ಮನ್‌ ಕಲೆಹಾಕಿದ ಗರಿಷ್ಠ ರನ್‌(ರಾಹುಲ್‌ ದ್ರಾವಿಡ್‌, ಭಾರತ)

11
ಟೂರ್ನಿಯಲ್ಲಿ ದಾಖಲಾದ ಒಟ್ಟು ಶತಕಗಳು. ಸಚಿನ್‌ ತೆಂಡೂಲ್ಕರ್‌ (140*), ರಾಹುಲ್‌ ದ್ರಾವಿಡ್‌ (104*, 145), ಸೌರವ್‌ ಗಂಗೂಲಿ (183) ಮತ್ತು ಅಜಯ್‌ ಜಡೇಜಾ (100*) ಶತಕ ಬಾರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌