ಆ್ಯಪ್ನಗರ

ಬಿಸಿಸಿಐಗೆ ನಾಡಾ ಪರೀಕ್ಷೆ

ನಮ್ಮದು ಸ್ವಾಯತ್ತ ಸಂಸ್ಥೆ, ನಮಗ್ಯಾರ ಹಂಗೂ ಇಲ್ಲ ಎನ್ನುವ ಕಾರಣವೊಡ್ಡಿ ಹಲವು ವರ್ಷಗಳಿಂದ ರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ಸಂಸ್ಥೆಯ (ನಾಡಾ) ವ್ಯಾಪ್ತಿಯೊಳಗೆ ಬರಲೊಪ್ಪದ ಬಿಸಿಸಿಐ ಇದೀಗ ಕ್ರೀಡಾ ಸಚಿವಾಲಯದ ಆದೇಶಕ್ಕೆ ಮಣಿದಿದ್ದು, ನಾಡಾದ ಮೂಲಕವೇ ಕ್ರಿಕೆಟಿಗರನ್ನು ಪರೀಕ್ಷೆ ಮಾಡಲು ಸಮ್ಮತಿಸಿದೆ. ಇದರೊಂದಿಗೆ ಜಗತ್ತಿನ ಶ್ರೀಮಂತ ಕ್ರಿಕೆಟ್‌ ಸಂಸ್ಥೆಯೆನ್ನುವ ಪ್ರಖ್ಯಾತಿ ಪಡೆದಿರುವ ಬಿಸಿಸಿಐ, ದೇಶದ ಪ್ರತಿಷ್ಠಿತ ರಾಷ್ಟ್ರೀಯ ಕ್ರೀಡಾ ಒಕ್ಕೂಟವಾಗಿ ಮಾರ್ಪಾಡಾಗಿದ್ದು, ಆರ್‌ಟಿಐ ಕಾಯಿದೆಗೂ ಒಳಪಡಲಿದೆ.

Vijaya Karnataka 10 Aug 2019, 5:00 am
ಹೊಸದಿಲ್ಲಿ: ನಮ್ಮದು ಸ್ವಾಯತ್ತ ಸಂಸ್ಥೆ, ನಮಗ್ಯಾರ ಹಂಗೂ ಇಲ್ಲ ಎನ್ನುವ ಕಾರಣವೊಡ್ಡಿ ಹಲವು ವರ್ಷಗಳಿಂದ ರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ಸಂಸ್ಥೆಯ (ನಾಡಾ) ವ್ಯಾಪ್ತಿಯೊಳಗೆ ಬರಲೊಪ್ಪದ ಬಿಸಿಸಿಐ ಇದೀಗ ಕ್ರೀಡಾ ಸಚಿವಾಲಯದ ಆದೇಶಕ್ಕೆ ಮಣಿದಿದ್ದು, ನಾಡಾದ ಮೂಲಕವೇ ಕ್ರಿಕೆಟಿಗರನ್ನು ಪರೀಕ್ಷೆ ಮಾಡಲು ಸಮ್ಮತಿಸಿದೆ. ಇದರೊಂದಿಗೆ ಜಗತ್ತಿನ ಶ್ರೀಮಂತ ಕ್ರಿಕೆಟ್‌ ಸಂಸ್ಥೆಯೆನ್ನುವ ಪ್ರಖ್ಯಾತಿ ಪಡೆದಿರುವ ಬಿಸಿಸಿಐ, ದೇಶದ ಪ್ರತಿಷ್ಠಿತ ರಾಷ್ಟ್ರೀಯ ಕ್ರೀಡಾ ಒಕ್ಕೂಟವಾಗಿ ಮಾರ್ಪಾಡಾಗಿದ್ದು, ಆರ್‌ಟಿಐ ಕಾಯಿದೆಗೂ ಒಳಪಡಲಿದೆ.
Vijaya Karnataka Web bcci logo


ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್‌ ಜುಲಾನಿಯಾ, ನಾಡಾದ ಪ್ರಧಾನ ನಿರ್ದೇಶಕ ನವೀನ್‌ ಅಗರ್ವಾಲ್‌ ಅವರನ್ನು ಶುಕ್ರವಾರ ಭೇಟಿಯಾದ ಬಿಸಿಸಿಐ ಸಿಇಒ ರಾಹುಲ್‌ ಜೋಹ್ರಿ ಹಾಗೂ ಕ್ರಿಕೆಟ್‌ ನಿರ್ವಹಣೆಯ ಪ್ರಧಾನ ವ್ಯವಸ್ಥಾಪಕ ಸಬಾ ಕರೀಂ, ಲಿಖಿತ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಭಾರತೀಯ ಕ್ರಿಕೆಟಿಗರಿಗೆ ಇನ್ನು ಮುಂದೆ ನಾಡಾ ಅಧಿಕಾರಿಗಳೇ ಉದ್ದೀಪನಾ ಮದ್ದು ಪರೀಕ್ಷೆ ನಡೆಸಲಿದ್ದಾರೆ.

ಹಲವು ವರ್ಷಗಳ ಪ್ರಯತ್ನ: ಬಿಸಿಸಿಐಯನ್ನು ನಾಡಾದ ವ್ಯಾಪ್ತಿಗೆ ತರಲು ಹಲವು ವರ್ಷಗಳಿಂದ ಪ್ರಯತ್ನ ನಡೆಸಲಾಗುತ್ತಿತ್ತು. ಆದರೆ, ಸರಕಾರದಿಂದ ಆರ್ಥಿಕ ನೆರವು ಪಡೆಯದೇ ಸ್ವಂತ ಆದಾಯದಿಂದ ನಡೆಯುವ ಸ್ವಾಯತ್ತ ಸಂಸ್ಥೆ ಎನ್ನುವ ಕಾರಣ ನೀಡಿ ಆ ಅದಕ್ಕೆ ತಡೆಯೊಡ್ಡಲಾಗುತ್ತಿತ್ತು. ಅಲ್ಲದೆ, ಬಿಸಿಸಿಐ ವತಿಯಿಂದಲೇ ಪರೀಕ್ಷೆ ನಡೆಸಲಾಗುತ್ತಿತ್ತು. ಪೃಥ್ವಿ ಶಾ ಸೇರಿದಂತೆ ಕೆಲವು ಕ್ರಿಕೆಟಿಗರು ಕೆಲ ದಿನಗಳ ಹಿಂದೆ ಇದೇ ಪರೀಕ್ಷೆಯಲ್ಲಿ ಫೇಲ್‌ ಆಗಿ ಅಮಾನತು ಶಿಕ್ಷೆಗೆ ಒಳಗಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಈ ನಡುವೆ ನಾಡಾದ ನಿಯಮಗಳಿಗೆ ಒಪ್ಪಲೇಬೇಕು ಎಂದು ಕ್ರೀಡಾ ಸಚಿವಾಲಯ ಬಿಸಿಸಿಐಗೆ ಕಟ್ಟಕಡೆಯ ಆದೇಶ ನೀಡಿತ್ತು. ಇದಾದ ಬಳಿಕ ಮೆತ್ತಗಾದ ಬಿಸಿಸಿಐ ಒಪ್ಪಿಗೆ ನೀಡಿದೆ.

ಎಲ್ಲರಿಗೂ ಪರೀಕ್ಷೆ: ನಾಡಾ ಸಂಸ್ಥೆಯು ವಿಶ್ವ ಉದ್ದೀಪನಾ ಮದ್ದು ನಿಗ್ರಹ ಸಂಸ್ಥೆಯ (ವಾಡಾ) ನಿಯಮಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಸಂಸ್ಥೆ ನಿಗದಿ ಮಾಡಿರುವ ಮಾನದಂಡಗಳೆಲ್ಲವು ಇನ್ನು ಕ್ರಿಕೆಟಿಗರಿಗೂ ಅನ್ವಯವಾಗಲಿದೆ. ಪ್ರತಿಯೊಬ್ಬ ಆಟಗಾರನೂ ಪರೀಕ್ಷೆ ನಡೆಸಲು ಲಿಖಿತ ಒಪ್ಪಿಗೆಯೊಂದನ್ನು ನಾಡಾಗೆ ಸಲ್ಲಿಸಬೇಕಾಗುತ್ತದೆ. ಮೂರು ದಿನಾಂಕಗಳನ್ನು ಸೂಚಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಇರುತ್ತದೆ. ಅಲ್ಲದೆ, ಅಧಿಕಾರಿಗಳು ಹೇಳಿದ ಸಮಯಕ್ಕೆ ಆಟಗಾರರು ಹಾಜರಾಗಿ ಸ್ಯಾಂಪಲ್‌ಗಳನ್ನೂ ನೀಡಬೇಕಾಗುತ್ತದೆ. ಇದರ ಜತೆಗೆ ಕ್ರಿಕೆಟ್‌ ಟೂರ್ನಿಯೊಂದು ನಡೆಯುವಲ್ಲಿಗೆ ನಾಡಾ ಅಧಿಕಾರಿಗಳು ಭೇಟಿ ನೀಡಿ ಪರೀಕ್ಷೆ ಮಾಡಬಹುದು.

ಗುಣಮಟ್ಟದ ಆಕ್ಷೇಪ: ನಾಡಾ ನಡೆಸುವ ಪರೀಕ್ಷಾ ವಿಧಾನದ ಸ್ಥಿರತೆಯನ್ನು ಬಿಸಿಸಿಐ ಸಂಶಯಿಸುತ್ತಲೇ ಬಂದಿತ್ತು. ಗುಣಮಟ್ಟದ ಪರಿಕರಗಳು ಹಾಗೂ ಆಧುನಿಕ ವ್ಯವಸ್ಥೆಗಳಿಲ್ಲ ಎಂದು ದೂರಿತ್ತು. ಇದೀಗ ನಾಡಾ ಅಧಿಕಾರಿಗಳು ಸುಧಾರಿತ ತಂತ್ರಜ್ಞಾನದ ಬಳಕೆಯ ಭರವಸೆಯನ್ನು ಬಿಸಿಸಿಐಗೆ ನೀಡಿದೆ.

ಆರ್‌ಟಿಐ ವ್ಯಾಪ್ತಿ: ಹೊಸ ಬದಲಾವಣೆ ಬಿಸಿಸಿಐಯನ್ನು ದೇಶದ ಪ್ರತಿಷ್ಠಿತ ರಾಷ್ಟ್ರೀಯ ಕ್ರೀಡಾ ಒಕ್ಕೂಟವಾಗಿ ಪರಿವರ್ತಿಸಿದೆ. ಇದು ಕ್ರಿಕೆಟ್‌ ಸಂಸ್ಥೆಯನ್ನು ಮಾಹಿತಿ ಹಕ್ಕಿನ ವ್ಯಾಪ್ತಿಗೆ ತಂದಿದ್ದು, ಸಾರ್ವಜನಿಕರು ಕೂಡ ಆಡಳಿತ ನಿರ್ವಹಣೆ ಕುರಿತು ತಿಳಿದುಕೊಳ್ಳಬಹುದು.

ಏನೇನು ಹೊಸ ಬದಲಾವಣೆ?
* ಕ್ರೀಡಾ ಸಚಿವಾಲಯದ ಸೂಚನೆಯಂತೆ ಒಪ್ಪಿಗೆ ಕೊಟ್ಟ ಬಿಸಿಸಿಐ
* ನಾಡಾ ನಿಯಮಗಳ ಪ್ರಕಾರ ಕ್ರಿಕೆಟಿಗರಿಗೆ ಉದ್ದೀಪನಾ ಮದ್ದು ನಿಗ್ರಹ ಪರೀಕ್ಷೆ
* ರಾಷ್ಟ್ರೀಯ ಕ್ರೀಡಾ ಒಕ್ಕೂಟವಾಗಿ ಬದಲಾದ ಬಿಸಿಐಐ
* ಮಾಹಿತಿ ಹಕ್ಕಿನಡಿ ಬಿಸಿಸಿಐನ ಆಡಳಿತದ ಮೇಲೆ ಸಾರ್ವಜನಿಕರಿಗೆ ಹಿಡಿತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌