ಆ್ಯಪ್ನಗರ

'ಗ್ರೀನ್ ಪಿಚ್‌ ಕೊಟ್ಟಾಗ ಭಾರತ ದೂರಲಿಲ್ಲ', ಸ್ಪಿನ್‌ ಪಿಚ್‌ನ ಸಮರ್ಥಿಸಿಕೊಂಡ ಸ್ವಾನ್!

ಭಾರತ ಮತ್ತು ಇಂಗ್ಲೆಂಡ್‌ ನಡುವೆ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಡೇ-ನೈಟ್‌ ಟೆಸ್ಟ್‌ ಪಂದ್ಯ ಎರಡು ದಿನಗಳ ಒಳಗೆ ಕೇವಲ 5 ಅವಧಿಗಳಲ್ಲಿ ಅಂತ್ಯಗೊಂಡ ಬಳಿಕ ಪಿಚ್‌ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿದೆ.

Vijaya Karnataka Web 26 Feb 2021, 3:40 pm

ಹೈಲೈಟ್ಸ್‌:

  • ಭಾರತ-ಇಂಗ್ಲೆಂಡ್‌ ನಡುವೆ ಮೊಟೆರಾದಲ್ಲಿ ನಡೆದ ಡೇ-ನೈಟ್‌ ಟೆಸ್ಟ್‌ ಪಂದ್ಯ.
  • ಎರಡನೇ ದಿನ ದಿನ್ನರ್‌ ಬ್ರೇಕ್‌ ಬಳಿಕವೇ ಫಲಿತಾಂಶ ಕಂಡ ಪಿಂಕ್‌ ಬಾಲ್‌ ಟೆಸ್ಟ್.
  • ಮೊಟೆರಾದ ಸ್ಪಿನ್ ಸ್ನೇಹಿ ಪಿಚ್‌ ಬಗ್ಗೆ ಪರ, ವಿರೋಧದ ಚರ್ಚೆ ಜೋರಾಗಿದೆ.
  • ಇಂಗ್ಲೆಂಡ್‌ನಲ್ಲಿ ಗ್ರೀನ್ ಪಿಚ್‌ ನೀಡುವಂತೆ ಇಲ್ಲಿ ಸ್ಪಿನ್‌ ಪಿಚ್ ಎಂದು ಸಮರ್ಥಿಸಿದ ಸ್ವಾನ್.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Graeme Swann
ಇಂಗ್ಲೆಂಡ್‌ ತಂಡದ ಮಾಜಿ ಆಫ್‌ ಸ್ಪಿನ್ನರ್‌ ಗ್ರೇಮ್‌ ಸ್ವಾನ್‌
ಅಹ್ಮದಾಬಾದ್: ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್‌ ನಡುವೆ ನಡೆದ ಮೊತ್ತ ಮೊದಲ ಡೇ-ನೈಟ್‌ ಟೆಸ್ಟ್‌ ಪಂದ್ಯ ಕೇವಲ 2 ದಿನಗಳ ಒಳಗಾಗಿ ಮುಕ್ತಾಯಗೊಂಡ ಬಳಿಕ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್‌ ಬಗ್ಗೆ ಮಾಜಿ ಕ್ರಿಕೆಟಿಗರು ಅಸಮಾಧಾನ ಹೊರಹಾಕಿದ್ದಾರೆ.
ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ ಭಾರತ ತಂಡದ ಸ್ಪಿನ್ನರ್‌ಗಳ ಎದುರು ತಬ್ಬಿಬ್ಬಾಗಿ ಮೊದಲ ಇನಿಂಗ್ಸ್‌ನಲ್ಲಿ 112 ರನ್‌ಗಳಿಗೆ ಆಲ್‌ಔಟ್‌ ಆಗಿದ್ದಲ್ಲದೆ, ಎರಡನೇ ಇನಿಂಗ್ಸ್‌ನಲ್ಲಿ ಭಾರತದ ಎದುರು ತನ್ನ ಅತ್ಯಂತ ಕಡಿಮೆ ಮೊತ್ತ ಎಂಬಂತೆ 81 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.

ಇದರೊಂದಿಗೆ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ಭಾರತ ತಂಡ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 2-1 ಅಂತರದ ಮೇಲುಗೈ ಪಡೆದುಕೊಂಡಿದೆ. ಸರಣಿಯ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ 227 ರನ್‌ಗಳ ಜಯ ದಾಖಲಿಸಿದ್ದನ್ನು ಬಿಟ್ಟರೆ ನಂತರದ ಎರಡೂ ಟೆಸ್ಟ್‌ಗಳಲ್ಲಿ ತಿರುಗೇಟು ನೀಡಿರುವ ಭಾರತ ಸ್ಪಿನ್‌ ಸ್ನೇಹಿ ಪಿಚ್‌ಗಳ ಬಲದಿಂದ ಕ್ರಮವಾಗಿ 317 ರನ್ ಮತ್ತು 10 ವಿಕೆಟ್‌ಗಳ ಜಯ ದಾಖಲಿಸಿದೆ. ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಮೊಟೆರಾದಲ್ಲೇ ಮಾರ್ಚ್ 4ರಂದು ಆರಂಭವಾಗಲಿದೆ.

'ಪಿಚ್‌ ಸಮಸ್ಯೆ ಅಲ್ಲ, ಬ್ಯಾಟ್ಸ್‌ಮನ್‌ಗಳ ತಪ್ಪೇ ಹೆಚ್ಚು': ರೋಹಿತ್ ಶರ್ಮಾ!

ಪಂದ್ಯದ ಮೊದಲ ದಿನ ಒಟ್ಟು 13 ವಿಕೆಟ್‌ಗಳು ಉದುರಿದರೆ, ಎರಡನೇ ದಿನ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್‌ ಪರೇಡ್‌ ಮುಂದುವರಿದು ಒಟ್ಟು 17 ವಿಕೆಟ್‌ಗಳ ಪತನಕ್ಕೆ ಮೊಟೆರಾ ಕ್ರೀಡಾಂಗಣ ಸಾಕ್ಷಿಯಾಯಿತು. ತಿರುಗುತ್ತಿದ್ದ ಚೆಂಡಿನ ಎದುರು ಸಮರ್ಥವಾಗಿ ಬ್ಯಾಟ್‌ಮಾಡುವಲ್ಲಿ ಎರಡೂ ತಂಡದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು.

ಭಾರತ ತಂಡ ಮೊದಲ ದಿನದಾಟದ ಅಂತ್ಯಕ್ಕೆ ಪ್ರಥಮ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 99 ರನ್‌ಗಳನ್ನು ಗಳಿಸಿ ದೊಡ್ಡ ಮೊತ್ತ ಪೇರಿಸುವ ಸೂಚನೆ ನೀಡಿತ್ತು. ಆದರೆ ಜೋ ರೂಟ್‌ (8ಕ್ಕೆ 5) ಅವರ ಅಚ್ಚರಿಯ ಆಫ್‌ ಸ್ಪಿನ್ ಬೌಲಿಂಗ್‌ ಪ್ರದರ್ಶನಕ್ಕೆ ನಲುಗಿ 145 ರನ್‌ಗಳಿಗೆ ಸರ್ವಪತನ ಕಂಡಿತ್ತು.

ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್‌ ತಂಡದ ಮಾಜಿ ಆಫ್‌ ಸ್ಪಿನ್ನರ್‌ ಗ್ರೇಮ್‌ ಸ್ವಾನ್‌, ಪಿಚ್‌ ಸರಿಯಿಲ್ಲ ಎಂದು ದೂರುವ ಬದಲಿಗೆ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್‌ಗಳ ಎದುರು ಬ್ಯಾಟ್‌ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ. 2012-13ರಲ್ಲಿ ಇಂಗ್ಲೆಂಡ್‌ ತಂಡ ಭಾರತದಲ್ಲಿ ಟೆಸ್ಟ್‌ ಸರಣಿ ಗದ್ದಾಗ ಸ್ವಾನ್‌ ಬೌಲಿಂಗ್‌ ಪ್ರದರ್ಶನ ಇಂಗ್ಲೆಂಡ್‌ಗೆ ಮೇಲುಗೈ ಒದಗಿಸಿತ್ತು.

400 ವಿಕೆಟ್‌ ಕಿತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ಸ್ಥಾಪಿಸಿದ ಅಶ್ವಿನ್‌!

"ಇಂಗ್ಲೆಂಡ್‌ ತಂಡದ ಡ್ರೆಸಿಂಗ್‌ ರೂಮ್‌ನಲ್ಲಿ ಚರ್ಚೆ ಆರಂಭವಾಗಿರುತ್ತದೆ. ಈ ಪಂದ್ಯದಿಂದ ಏನೆಲ್ಲಾ ಕಲಿತುಕೊಳ್ಳಬಹುದು ಎಂಬುದರ ಬಗ್ಗೆ ಚರ್ಚೆ ಮಾಡಲಿದ್ದಾರೆ. ಇನ್ನು ಪಿಚ್‌ ಬಗ್ಗೆ ಮಾತನಾಡುವುದಾದರೆ ಇಂಗ್ಲೆಂಡ್‌ನಲ್ಲೂ ಭಾರಿ ಚರ್ಚೆ ಆಗಿರುತ್ತದೆ. ಪಿಚ್‌ ಹೀಗಿದೆ ಹಾಗಿದೆ ಎಂದೆಲ್ಲಾ ಮಾತನಾಡಲಾಗುತ್ತದೆ. ಆದರೆ ಒಂದು ಅರ್ಥ ಮಾಡಿಕೊಳ್ಳಬೇಕಿರುವುದು ಏನೆಂದರೆ ಪಿಚ್‌ ಎರಡೂ ತಂಡಗಳಿಗೆ ಒಂದೇ ಎಂಬುದು," ಎಂದು ಸ್ವಾನ್‌ ಹೇಳಿದ್ದಾರೆ.

"ಚೆಂಡಿನೊಂದಿಗೆ ಇಂಗ್ಲೆಂಡ್ ಈ ಪಂದ್ಯದಲ್ಲಿ ಉತ್ತಮವಾಗಿ ಆಡಿದೆ. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಭಾರತ ತಂಡ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದೆ. ಮುಂದಿನ ಪಂದ್ಯಕ್ಕೂ ಇಂಥದ್ದೇ ಪಿಚ್‌ ಸಿಗಲಿದೆ. ಇದರಲ್ಲಿ ಎರಡು ಮಾತಿಲ್ಲ. ಇಂಗ್ಲೆಂಡ್‌ ಉತ್ತಮವಾಗಿ ಬ್ಯಾಟಿಂಗ್‌ ಮಾಡಲೇ ಬೇಕು. ಸಣ್ಣ ಸಣ್ಣ ತಪ್ಪುಗಳಿಗೆ ಇಲ್ಲಿ ಅವಕಾಶವೇ ಇಲ್ಲ. ಪಿಚ್‌ ಸ್ಪಿನ್‌ ಸ್ನೇಹಿ ಎಂದೆಲ್ಲಾ ಕಾರಣ ಕೊಟ್ಟು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದು ಮೂರ್ಖತನದ ವಾದ," ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದೇ ವೇಳೆ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅಲ್ಲಿ ನೀಡಲಾಗುವುದು ಹಸಿರು ಹಾಸನ್ನು ಹೊಂದಿರುವ ವೇಗಿಗಳಿಗೆ ನೆರವಾಗುವ ಪಿಚ್‌ಗಳು. ಈ ಬಗ್ಗೆ ಭಾರತ ತಂಡ ಎಂದಿಗೂ ಕೂಡ ದೂರು ನೀಡಿಲ್ಲ ಎಂದು ಸ್ವಾನ್‌ ಸಮರ್ಥಿಸಿದ್ದಾರೆ.

'ಇಂದಿನಿಂದ ನಾನು ಅಕ್ಷರ್ ಪಟೇಲ್‌ ಫ್ಯಾನ್‌' ಯುವ ಸ್ಪಿನ್ನರ್‌ಗೆ ಜೈ ಹೋ ಎಂದ ನೆಟ್ಟಿಗರು!

"ಭಾರತ ತಂಡ ಇಂಗ್ಲೆಂಡ್‌ಗೆ ಬಂದಾಗ ವೇಗಿಗಳಿಗೆ ನೆರವಾಗುವ ಗ್ರೀನ್ ಪಿಚ್‌ಗಳಲ್ಲಿ ಬ್ಯಾಟ್‌ ಮಾಡುವಂತ್ತಾಗುತ್ತದೆ. ಈ ಬಗ್ಗೆ ಭಾರತ ತಂಡ ಎಂದಿಗೂ ದೂರು ನೀಡಿಲ್ಲ. ಜಿಮ್ಮಿ ಆಂಡರ್ಸನ್‌ ಎದುರು ದಿಟ್ಟ ಬ್ಯಾಟಿಂಗ್ ಮಾಡಲು ವಿರಾಟ್‌ ಕೊಹ್ಲಿ ಕಠಿಣ ಪರಿಶ್ರಮ ವಹಿಸಿದ್ದಾರೆ. ಅಂತೆಯೇ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ಅಶ್ವಿನ್ ಮತ್ತು ಅಕ್ಷರ್‌ ಪಟೇಲ್‌ ಎದುರು ಬ್ಯಾಟ್‌ ಮಾಡುವ ಕಡೆಗೆ ಶ್ರಮ ವಹಿಸಬೇಕಿದೆ," ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌