ಆ್ಯಪ್ನಗರ

ದಕ್ಷಿಣ ಆಫ್ರಿಕಾ ತಂಡಕ್ಕೆ ಗಾಯದ ಮೇಲೆ ಬರೆ, 3ನೇ ಟೆಸ್ಟ್‌ಗೂ ಮೊದಲೇ ಮತ್ತೊಂದು ಆಘಾತ!

ಹೀನಾಯ ಪ್ರದರ್ಶನ ನೀಡಿ ಟೀಮ್‌ ಇಂಡಿಯಾ ಎದುರು ಈಗಲೇ ಟೆಸ್ಟ್‌ ಸರಣಿಯನ್ನು ಸೋತಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ತಂಡದ ಪ್ರಮುಖ ಸ್ಪಿನ್‌ ಬೌಲರ್‌ ಕೇಶವ್‌ ಮಹಾರಾಜ್‌ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.

Vijaya Karnataka Web 13 Oct 2019, 7:15 pm
ಪುಣೆ: ಮೂರು ಪಂದ್ಯಗಳ ಟೆಸ್ಟ್‌ ಸರಣಿಯಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ 0-2 ಅಂತರದಲ್ಲಿ ಸೋತು ಸುಣ್ಣವಾಗಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಗಾಯದ ಮೇಲೆ ಬರೆ ಬಿದ್ದಿದೆ. ಸರಣಿಯ ಎರಡನೇ ಟೆಸ್ಟ್‌ ವೇಳೆ ಪ್ರಮುಖ ಸ್ಪಿನ್‌ ಬೌಲರ್‌ ಕೇಶವ್‌ ಮಹಾರಾಜ್‌ ಗಾಯಗೊಂಡಿದ್ದು, ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಿಂದ ಹೊರಗುಳಿಯುವಂತಾಗಿದೆ.
Vijaya Karnataka Web keshav maharaj injury test vs ind 2019


ಪುಣೆ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಲ್ಲಿ ಕ್ಷೇತ್ರ ರಕ್ಷಣೆ ಚೇಳೆ ಬಲ ಭುಜಕ್ಕೆ ಪೆಟ್ಟು ಮಾಡಿಕೊಂಡಿರುವ ಕೇಶವ್‌ ಮಹಾರಾಜ್‌, ಗಾಯದ ಸಮಸ್ಯೆ ನಡುವೆಯೂ ಎರಡೂ ಇನಿಂಗ್ಸ್‌ಗಳಲ್ಲಿ ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಅದರಲ್ಲೂ ಮೊದಲ ಇನಿಂಗ್ಸ್‌ನಲ್ಲಿ ವೃತ್ತಿ ಬದುಕಿನ ಚೊಚ್ಚಲ ಅರ್ಧಶತಕ ದಾಖಲಿಸಿ ಗಮನ ಸೆಳೆದಿದ್ದರು.

ಭಾರತ vs ದ. ಆಫ್ರಿಕಾ 2ನೇ ಟೆಸ್ಟ್‌: ಟೀಮ್‌ ಇಂಡಿಯಾಗೆ ಇನಿಂಗ್ಸ್‌ ಮತ್ತು 137 ರನ್‌ ಭರ್ಜರಿ ಜಯ

ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಆಟ ಆರಂಭಕ್ಕೂ ಮುನ್ನ ಎಂ.ಆರ್‌.ಐ ಸ್ಕ್ಯಾನ್‌ಗೆ ಕೇಶವ್‌ ಅವರನ್ನು ಒಳಪಡಿಸಲಾಗಿದ್ದು, ವರದಿಗಳ ಪ್ರಕಾರ ಮುಂದಿನ ಟೆಸ್ಟ್‌ ಪಂದ್ಯದಲ್ಲಿ ಆಡಲು ಅನ್‌ಫಿಟ್‌ ಆಗಿದ್ದಾರೆ ಎಂಬುದು ತಿಳಿದು ಬಂದಿದೆ.

"ಬಲ ಭುಜದ ಮಾಂಸಖಂಡಕ್ಕೆ ಬಲವಾದ ಪೆಟ್ಟಾಗಿರುವುದು ಎಂಆರ್‌ಐ ಸ್ಕ್ಯಾನ್‌ ಮೂಲಕ ತಿಳಿದುಬಂದಿದೆ. ಹೀಗಾಗಿ ಬ್ಯಾಟಿಂಗ್‌ ಮಾಡಲು ಅವರ ಭುಜಕ್ಕೆ ಪಟ್ಟಿ ತೊಡಿಸಲಾಗಿತ್ತು. ಬಳಿಕ ಅವರಿಗೆ ಬೌಲಿಂಗ್‌ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬುದು ತಿಳಿದುಬಂದಿದೆ" ಎಂದು ದಕ್ಷಿಣ ಆಫ್ರಿಕಾ ತಂಡ ವೈದ್ಯಾಧಿಕಾರಿ ರಾಮ್ಜೀ ಹರ್ಷೇಂದ್ರ ಹೇಳಿಕೆ ನೀಡಿದ್ದಾರೆ.

"ಅವರ ಗಾಯದ ಸಮಸ್ಯೆಯ ಗಂಭೀರತೆ ಅನುಗುಣವಾಗಿ ಮುಂದಿನ 14-21 ದಿನಗಳಲ್ಲಿ ಆಟಕ್ಕೆ ಹಿಂದಿರುಗಬಹುದಾಗಿದೆ. ಈ ವೇಳೆ ಅವರು ಪುನಶ್ಚೇತನದಲ್ಲಿ ತೊಡಗಲಿದ್ದಾರೆ," ಎಂದು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ವಿಶೇಷ ದಾಖಲೆ ಬರೆದ ರವಿಚಂದ್ರನ್‌ ಅಶ್ವಿನ್‌!

ಮೂರನೇ ಟೆಸ್ಟ್‌ ಪಂದ್ಯಕ್ಕೆ ಕೇಶವ್‌ ಮಹಾರಾಜ್‌ ಅಲಭ್ಯತೆ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಚೊಚ್ಚಲ ಟೆಸ್ಟ್‌ ಆಡಲು ಎದುರು ನೋಡುತ್ತಿರುವ ಯುವ ಸ್ಪಿನ್ನರ್‌ ಜಾರ್ಜ್‌ ಲಿಂಡೆ ಅವರನ್ನು ಬದಲಿ ಆಟಗಾರನಾಗಿ ದಕ್ಷಿಣ ಆಫ್ರಿಕಾ ನೇಮಿಸಿದೆ.

ಹರಿಣ ಪಡೆಯನ್ನು ಬಗ್ಗುಬಡಿದು ವಿಶ್ವ ದಾಖಲೆ ಮುರಿದ ಟೀಮ್‌ ಇಂಡಿಯಾ!

ನಾಲ್ಕೇ ದಿನದಲ್ಲಿ ಮುಕ್ತಾಯಗೊಂಡ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ ಟೀಮ್‌ ಇಂಡಿಯಾ, ದಕ್ಷಿಣ ಆಫ್ರಿಕಾ ತಂಡವನ್ನು ಇನಿಂಗ್ಸ್‌ ಮತ್ತು 137 ರನ್‌ಗಳಿಂದ ಬಗ್ಗುಬಡಿದು ಫ್ರೀಡಂ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಗೆದ್ದುಕೊಂಡಿದೆ. ಮೂರನೇ ಟೆಸ್ಟ್‌ ಅ.19ರಂದು ರಾಂಚಿಯಲ್ಲಿ ಆರಂಭವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌