ಆ್ಯಪ್ನಗರ

ಮೊಹಾಲಿಯಲ್ಲಿ ಅಫ್ರಿದಿ ದಾಖಲೆ ಸರಿಗಟ್ಟಿದ ಕೊಹ್ಲಿ!

ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ 50+ ಬ್ಯಾಟಿಂಗ್‌ ಸರಾಸರಿ ಹೊಂದಿರುವ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಪಾಕಿಸ್ತಾನ ತಂಡದ ಮಾಜಿ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

Vijaya Karnataka Web 19 Sep 2019, 2:13 pm
ಮೊಹಾಲಿ: ಟೆಸ್ಟ್‌ ಆಗಲಿ, ಒಡಿಐ ಆಗಲಿ ಅಥವಾ ಟಿ20 ಕ್ರಿಕೆಟ್‌ ಆಗಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಬ್ಯಾಟ್‌ನಿಂದ ರನ್‌ ಹೊಳೆ ಹರಿಯುವುದಂತೂ ನಿಶ್ಚಿತ. ಅಂದಹಾಗೆ ಮೊಹಾಲಿಯಲ್ಲಿ ಬುಧವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಕದನದಲ್ಲೂ ಅಜೇಯ 72 ರನ್‌ ಬಾರಿಸಿ ಟೀಮ್‌ ಇಂಡಿಯಾಗೆ 7 ವಿಕೆಟ್‌ ಜಯ ತಂದುಕೊಟ್ಟಿದರು.
Vijaya Karnataka Web Virat Kohli and Shahid Afridi


ಹರಿಣ ಪಡೆಯ ಎದುರು ನೀಡಿದ ಈ ಭರ್ಜರಿ ಪ್ರದರ್ಶನಕ್ಕೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಕೊಹ್ಲಿ 11 ಬಾರಿ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಈ ಮೂಲಕ ಟಿ20ಐನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಗೌರವಗಳನ್ನು ಪಡೆದವರ ಪೈಕಿ ಪಾಕಿಸ್ತಾನದ ಸ್ಟಾರ್‌ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಭಾರತ v/s ದ.ಆಫ್ರಿಕಾ 2ನೇ ಟಿ20: ಕಿಂಗ್‌ ಕೊಹ್ಲಿ ಅಬ್ಬರ, ಟೀಮ್‌ ಇಂಡಿಯಾಗೆ 7 ವಿಕೆಟ್‌ ಜಯ

ಬೂಮ್‌ ಬೂಮ್‌ ಖ್ಯಾತಿಯ ಅಫ್ರಿದಿ ತಮ್ಮ ಆಲ್‌ರೌಂಡರ್‌ ಪ್ರದರ್ಶನಗಳ ಮೂಲಕ ಟಿ20-ಐನಲ್ಲಿ ಈವರೆಗೆ ಒಟ್ಟು 11 ಬಾರಿ ಪಂದ್ಯಶ್ರೇಷ್ಠ ಗೌರವ ಸಂಪಾದಿಸಿದ್ದಾರೆ. ಇದೀಗ ಅಫ್ರಿದಿ ಮತ್ತು ಕೊಹ್ಲಿ ಇಬ್ಬರೂ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದವರ ಪೈಕಿ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಅಫಘಾನಿಸ್ತಾನದ ಆಲ್‌ರೌಂಡರ್‌ ಮೊಹಮ್ಮದ್‌ ನಬಿ ಅಗ್ರಸ್ಥಾನದಲ್ಲಿದ್ದಾರೆ.

ಇದೇ ವೇಳೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪೈಕಿ ರೋಹಿತ್‌ ಶರ್ಮಾ ಅವರನ್ನು ಹಿಂದಿಕ್ಕಿ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದು, ಟೆಸ್ಟ್‌, ಏಕದಿನ ಮತ್ತು ಟಿ20ಐ ಮೂರೂ ಮಾದರಿಯಲ್ಲಿ ಅದ್ಭುತ ರೀತಿಯ 50+ ಬ್ಯಾಟಿಂಗ್‌ ಸರಾಸರಿ ಪಡೆದುಕೊಂಡಿದ್ದಾರೆ. ಈ ಸಾಧನೆ ಮೆರೆದ ವಿಶ್ವದ ಮೊದಲ ಹಾಗೂ ಏಕಮಾತ್ರ ಕ್ರಿಕೆಟಿಗನಾಗಿದ್ದಾರೆ.

ದ್ವಿತೀಯ ಟಿ20 ಪಂದ್ಯದಲ್ಲಿ ಮುಗ್ಗರಿಸಿದ ಬಳಿಕ ಹರಿಣ ಪಡೆಯ ನಾಯ ಡಿ'ಕಾಕ್‌ ಹೇಳಿದ್ದಿದು

"ವಿರಾಟ್‌ ಅಣ್ಣ ಇಷ್ಟು ಸ್ಥಿರ ಪ್ರದರ್ಶನ ಹೇಗೆ ಕಾಯ್ದುಕೊಳ್ಳುತ್ತಾರೆ ಎಂಬುದು ಗೊತ್ತಿಲ್ಲ. ಅವರು ಮತ್ತೊಂದು ಹಂತದ ಆಟಗಾರ," ಎಂದು ಟೀಮ್‌ ಇಂಡಿಯಾದ ಯುವ ವೇಗದ ಬೌಲರ್‌ ದೀಪಕ್‌ ಚಹರ್‌ ಭಾರತ ತಂಡದ ರನ್‌ ಮಷೀನ್‌ ವಿರಾಟ್‌ ಕೊಹ್ಲಿ ಕುರಿತಾಗಿ ಮಾತನಾಡಿದ್ದಾರೆ.

ಇನ್ನು ಶಾಹಿದ್‌ ಅಫ್ರಿದಿ ಕೂಡ ಕೊಹ್ಲಿ ಪರಾಕ್ರಮವನ್ನು ಮುಕ್ತ ಕಂಠದಿಂದ ಹೊಗಳಿದ್ದು, ಟ್ವಿಟರ್‌ನಲ್ಲಿ ಕಿಂಗ್ ಕೊಹ್ಲಿ ಬಗ್ಗೆ ಗುಣಗಾನ ಮಾಡಿದ್ದಾರೆ. "ಅಭಿನಂದನೆಗಳು ಕೊಹ್ಲಿ! ನೀನೊಬ್ಬ ಅದ್ಭುತ ಆಟಗಾರ. ನಿಮ್ಮ ಯಶಸ್ಸು ಹೀಗೇ ಸಾಗುತ್ತಿರಲಿ ಎಂದು ಹಾರೈಸುತ್ತೇನೆ. ವಿಶ್ವದಾದ್ಯಂತ ಕ್ರಿಕೆಟ್‌ ಅಭಿಮಾನಿಗಳನ್ನು ಮನರಂಜಿಸುವುದನ್ನು ಹೀಗೇ ಮುಂದುವರಿಸಿ," ಎಂದು ಅಫ್ರಿದಿ ಟ್ವೀಟ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌