Please enable javascript.Virat Kohli,ದಕ್ಷಿಣ ಆಫ್ರಿಕಾ ವಿರುದ್ಧ ಓಡಿಐ ಸರಣಿಯಿಂದ ವಿರಾಟ್‌ ಕೊಹ್ಲಿ ಔಟ್‌? - ind vs sa: virat kohli request bcci for break in january, set to miss upcoming odi series against south africa - Vijay Karnataka

ದಕ್ಷಿಣ ಆಫ್ರಿಕಾ ವಿರುದ್ಧ ಓಡಿಐ ಸರಣಿಯಿಂದ ವಿರಾಟ್‌ ಕೊಹ್ಲಿ ಔಟ್‌?

Vijaya Karnataka Web 14 Dec 2021, 11:02 am
Subscribe

ಮುಂದಿನ ವರ್ಷ ಜನವರಿಯಲ್ಲಿ ಕುಟುಂಬದ ಜೊತೆ ಸಮಯ ಕಳೆಯುವ ಹಿನ್ನೆಲೆಯಲ್ಲಿ ತನಗೆ ಅಲ್ಪ ವಿರಾಮ ನೀಡುವಂತೆ ಬಿಸಿಸಿಐಗೆ ವಿರಾಟ್‌ ಕೊಹ್ಲಿ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಓಡಿಐ ಸರಣಿಗೆ ಅಲಭ್ಯರಾಗಲಿದ್ದಾರೆ.

ಹೈಲೈಟ್ಸ್‌:

  • ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಓಡಿಐ ಸರಣಿಗೆ ವಿರಾಟ್‌ ಕೊಹ್ಲಿ ಅಲಭ್ಯ.
  • ಜನವರಿಯಲ್ಲಿ ಕುಟುಂಬದ ಜೊತೆ ಸಮಯ ಕಳೆಯಲು ಅಲ್ಪ ವಿರಾಮ ಕೇಳಿರುವ ಕೊಹ್ಲಿ.
  • ಕಳೆದ ವಾರ ಭಾರತ ಓಡಿಐ ತಂಡದ ನಾಯಕತ್ವದಿಂದ ಕೊಹ್ಲಿಯನ್ನು ಬಿಸಿಸಿಐ ಕೆಳಗಿಳಿಸಿತ್ತು.
Virat kohli
ವಿರಾಟ್‌ ಕೊಹ್ಲಿ (ಚಿತ್ರ: ಟಿಒಐ)
ಹೊಸದಿಲ್ಲಿ: ಭಾರತ ಓಡಿಐ ತಂಡದ ನಾಯಕತ್ವದಿಂದ ಕೆಳಗಿಳಿಸಿರುವುದರಿಂದ ಬಿಸಿಸಿಐ ಮೇಲೆ ಮುನಿಸಿಕೊಂಡಿರುವ ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಓಡಿಐ ಸರಣಿಗೆ ವಿರಾಮ ನೀಡುವಂತೆ ಮನವಿ ಸಲ್ಲಿಸಿದ್ದಾರೆಂಬ ಬಗ್ಗೆ ವರದಿಯಾಗಿದೆ.
ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಯ ಪುತ್ರಿ ವಮಿಕಾ ಮುಂದಿನ ವರ್ಷ ಜನವರಿ 9ಕ್ಕೆ ಎರಡನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬ ಜೊತೆ ಸಮಯ ಕಳೆಯಲು ವಿರಾಟ್‌ ಕೊಹ್ಲಿ ಓಡಿಐ ಸರಣಿಗೆ ವಿರಾಮ ನೀಡುವಂತೆ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆಂದು ಮೂಲಗಳು ತಿಳಿಸಿರುವುದನ್ನು ಎಎನ್‌ಐ ವರದಿ ಮಾಡಿದೆ.

"ಹೌದು, ತಮ್ಮ ಕುಟುಂಬದ ಜತೆ ಅಮೂಲ್ಯವಾದ ಸಮಯವನ್ನು ಕಳೆಯುವ ಸಲುವಾಗಿ 2022ರ ಜನವರಿ ತಿಂಗಳಲ್ಲಿ ಅಲ್ಪ ವಿರಾಮವನ್ನು ವಿರಾಟ್‌ ಕೊಹ್ಲಿ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಓಡಿಐ ಸರಣಿಗೆ ಅಲಭ್ಯರಾಗಲಿದ್ದಾರೆ," ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಭಾರತಕ್ಕೆ ಶಾಕ್‌, ದ. ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿಯಿಂದ ರೋಹಿತ್‌ ಔಟ್!

ಕಳೆದ ವಾರ ಭಾರತ ಓಡಿಐ ತಂಡಕ್ಕೆ ನೂತನ ನಾಯಕನನ್ನಾಗಿ ರೋಹಿತ್‌ ಶರ್ಮಾ ಅವರನ್ನು ಬಿಸಿಸಿಐ ಆಯ್ಕೆ ಮಾಡಿತ್ತು. ಆ ಮೂಲಕ ವಿರಾಟ್‌ ಕೊಹ್ಲಿ ಕೇವಲ ಟೆಸ್ಟ್‌ ತಂಡದ ನಾಯಕನನ್ನಾಗಿ ಮಾತ್ರ ಮುಂದುವರಿಸಲು ಬಿಸಿಸಿಐ ನಿರ್ಧರಿಸಿತ್ತು. ಆದರೆ, ಐಸಿಸಿ ಟಿ20 ವಿಶ್ವಕಪ್‌ ಬಳಿಕ ಟಿ20 ತಂಡದ ನಾಯಕತ್ವ ತೊರೆದಿದ್ದ ವಿರಾಟ್‌, ಓಡಿಐ ಹಾಗೂ ಟೆಸ್ಟ್‌ ತಂಡದ ನಾಯಕತ್ವದಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದರು. ಆದರೆ, ಇದೀಗ ಹಠಾತ್‌ ಓಡಿಐ ನಾಯಕತ್ವ ಹಿಂಪಡೆದಿರುವ ಹಿನ್ನೆಲೆಯಲ್ಲಿ ಕೊಹ್ಲಿ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಕಳೆದ ವಾರ ಪ್ರತಿಕ್ರಿಯಿಸಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, "ಬಿಸಿಸಿಐ ಹಾಗೂ ಆಯ್ಕೆದಾರರು ಈ ಬಗ್ಗೆ ಒಮ್ಮತ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಅಂದಹಾಗೆ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯದಂತೆ ವಿರಾಟ್‌ ಕೊಹ್ಲಿಗೆ ಬಿಸಿಸಿಐ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿತ್ತು. ಆದರೆ, ಇದನ್ನು ಅವರು ಒಪ್ಪಿರಲಿಲ್ಲ. ಈ ಕಾರಣದಿಂದಾಗಿ ಸೀಮಿತ ಓವರ್‌ಗಳ ಎರಡು ತಂಡಕ್ಕೆ ಇಬ್ಬರು ನಾಯಕರನ್ನು ಹೊಂದಿರುವುದು ಸರಿಯಲ್ಲ ಎಂದು ಆಯ್ಕೆದಾರರು ಭಾವಿಸಿದ್ದರು," ಎಂದು ಸ್ಪಷ್ಟಪಡಿಸಿದ್ದರು.

ರೋಹಿತ್‌ ಸ್ಥಾನದಲ್ಲಿ ಭಾರತ ತಂಡ ಸೇರಿದ ಪ್ರಿಯಾಂಕ್ ಪಾಂಚಾಲ್‌ ಯಾರು?!

"ಈ ಹಿನ್ನೆಲೆಯಲ್ಲಿ ವಿರಾಟ್‌ ಕೊಹ್ಲಿಯನ್ನು ಟೆಸ್ಟ್‌ ತಂಡದ ನಾಯಕನನ್ನಾಗಿ ಮುಂದುವರಿಸಿ, ರೋಹಿತ್‌ ಶರ್ಮಾ ಅವರನ್ನು ವೈಟ್‌ ಬಾಲ್‌ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಬಿಸಿಸಿಐ ಅಧ್ಯಕ್ಷನಾಗಿ ನಾನು ವಿರಾಟ್‌ ಕೊಹ್ಲಿ ಬಳಿ ವೈಯಕ್ತಿಕವಾಗಿ ಮಾತನಾಡಿದ್ದೇನೆ ಹಾಗೂ ಆಯ್ಕೆದಾರರು ಕೂಡ ಕೊಹ್ಲಿ ಬಳಿ ಮಾತನಾಡಿದ್ದಾರೆ. ರೋಹಿತ್‌ ಶರ್ಮಾ ನಾಯಕತ್ವದ ಮೇಲೆ ಸಾಕಷ್ಟು ವಿಶ್ವಾಸವಿದೆ," ಎಂದು ಹೇಳಿದ್ದರು.

"ಭಾರತ ತಂಡ ಒಳ್ಳೆಯ ವ್ಯಕ್ತಿಗಳ ಕೈಯಲ್ಲಿ ಇದೆ ಎಂದು ಬಿಸಿಸಿಐಗೆ ವಿಶ್ವಾಸವಿದೆ. ಸೀಮಿತ ಓವರ್‌ಗಳ ತಂಡದ ನಾಯಕನಾಗಿ ಭಾರತೀಯ ಕ್ರಿಕೆಟ್‌ಗೆ ಕೊಡುಗೆ ನೀಡಿರುವ ವಿರಾಟ್‌ ಕೊಹ್ಲಿಗೆ ಧನ್ಯವಾದ ಹೇಳಲು ಬಯಸುತ್ತೇನೆ," ಎಂದು ಸೌರವ್ ಗಂಗೂಲಿ ತಿಳಿಸಿದ್ದರು.

ಭಾರತ ವಿರುದ್ಧ ಟೆಸ್ಟ್‌ ಸರಣಿಗೂ ಮೊದಲೇ ದಕ್ಷಿಣ ಆಫ್ರಿಕಾ ತಂಡಕ್ಕೆ ಹಿನ್ನಡೆ!

ಟೆಸ್ಟ್ ಸರಣಿಯಿಂದ ಹೊರಬಿದ್ದ ರೋಹಿತ್‌: ಅಭ್ಯಾಸದ ವೇಳೆ ಗಾಯಗೊಂಡಿರುವ ಭಾರತ ಟೆಸ್ಟ್‌ ತಂಡದ ನೂತನ ಉಪನಾಯಕ ರೋಹಿತ್‌ ಶರ್ಮಾ ಮುಂಬರುವ ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರ ಸ್ಥಾನಕ್ಕೆ ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ 'ಎ' ತಂಡವನ್ನು ಮುನ್ನಡೆಸಿದ್ದ ಪ್ರಿಯಾಂಕ್‌ ಪಾಂಚಲ್‌ ಅವರನ್ನು ಆಯ್ಕೆ ಮಾಡಲಾಗಿದೆ.

"ಮುಂಬೈನಲ್ಲಿ ನಡೆಯುತ್ತಿದ್ದ ಅಭ್ಯಾಸ ಶಿಬಿರದಲ್ಲಿ ಎಡಗಾಲಿನ ತೊಡೆಯ ಸ್ನಾಯು ಸೆಳೆತದ ಸಮಸ್ಯೆಗೆ ರೋಹಿತ್‌ ತುತ್ತಾಗಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯಿಂದ ಅವರು ಹೊರಗುಳಿಯಲಿದ್ದಾರೆ," ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದೆ.



ದಕ್ಷಿಣ ಆಫ್ರಿಕಾ ಪ್ರವಾಸದ ಭಾರತ ಟೆಸ್ಟ್‌ ತಂಡ
: ವಿರಾಟ್‌ ಕೊಹ್ಲಿ(ನಾಯಕ), ಪ್ರಿಯಾಂಕ್‌ ಪಾಂಚಲ್‌, ಕೆ.ಎಲ್‌ ರಾಹುಲ್‌, ಮಯಾಂಕ್‌ ಅಗರ್ವಾಲ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್, ಹನುಮ ವಿಹಾರಿ, ರಿಷಭ್‌ ಪಂತ್‌(ವಿ.ಕೀ), ವೃದ್ದಿಮಾನ್‌ ಸಹಾ(ವಿ.ಕೀ), ಆರ್‌ ಅಶ್ವಿನ್, ಜಯಂತ್‌ ಯಾದವ್‌, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಜಸ್‌ಪ್ರಿತ್‌ ಬುಮ್ರಾ, ಶಾರ್ದುಲ್‌ ಠಾಕೂರ್‌, ಮೊಹಮ್ಮದ್‌ ಸಿರಾಜ್‌

ಸ್ಟ್ಯಾಂಡ್ ಬೈ ಆಟಗಾರರು: ನವದೀಪ್‌ ಸೈನಿ, ಸೌರವ್‌ ಕುಮಾರ್‌, ದೀಪಕ್ ಚಹರ್‌, ಅರ್ಝಾನ್‌ ನಾಗವಾಸವಾಲ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ