ಆ್ಯಪ್ನಗರ

ಭಾರತ-ಪಾಕ್ ಸೂಪರ್ ಫೋರ್ ಫೈಟ್

ಏಷ್ಯಾ ಕಪ್ 2018 ಫೈನಲ್ ಗುರಿ: ಭಾರತಕ್ಕೆ ಮತ್ತದೇ ಪಾಕಿಸ್ತಾನ ಸವಾಲು; ಭಾನುವಾರ ಸಂಜೆ 5ಕ್ಕೆ ಪಂದ್ಯಾರಂಭ

TOI.in 22 Sep 2018, 3:16 pm
ದುಬೈ: ಯುಎಇನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾನುವಾರ ನಡೆಯಲಿರುವ ಸೂಪರ್ ಫೋರ್ ಹಂತದ ತನ್ನ ಎರಡನೇ ಪಂದ್ಯದಲ್ಲಿ ಮತ್ತದೇ ಪಾಕಿಸ್ತಾನ ಸವಾಲನ್ನು ಟೀಮ್ ಇಂಡಿಯಾ ಎದುರಿಸಲಿದೆ.
Vijaya Karnataka Web rohit-dhoni


ಲೀಗ್ ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಎಂಟು ವಿಕೆಟುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ರೋಹಿತ್ ಶರ್ಮಾ ಪಡೆ, ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲೂ ಶ್ರೇಷ್ಠ ಪ್ರದರ್ಶನ ನೀಡುವ ಭರವಸೆಯಲ್ಲಿದೆ.

ಈಗಾಗಲೇ ಬಾಂಗ್ಲಾದೇಶ ವಿರುದ್ಧ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಭಾನುವಾರವೂ ಗೆಲುವು ದಾಖಲಿಸಿದರೆ ಫೈನಲ್‌ ಪ್ರವೇಶ ಬಹುತೇಕ ಖಚಿತವಾಗಲಿದೆ. ಈ ನಿಟ್ಟಿನಲ್ಲಿ ಪಾಕ್ ವಿರುದ್ಧದ ಪಂದ್ಯ ಲೀಗ್ ಹೋರಾಟಕ್ಕಿಂತಲೂ ಹೆಚ್ಚು ಮುಖ್ಯವೆನಿಸಿದೆ.

ಪಾಕ್ ವಿರುದ್ಧದ ಪಂದ್ಯದಲ್ಲಿ ತಲಾ ಮೂರು ವಿಕೆಟುಗಳನ್ನು ಕಬಳಿಸಿರುವ ಭುವನೇಶ್ವರ್ ಕುಮಾರ್ ಹಾಗೂ ಕೇದರ್ ಜಾಧವ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಗಾಯಾಳು ಹಾರ್ದಿಕ್ ಪಾಂಡ್ಯ ಬದಲಿ ಆಟಗಾರನಾಗಿ ತಂಡವನ್ನು ಪ್ರವೇಶಿಸಿರುವ ರವೀಂದ್ರ ಜಡೇಜಾ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟುಗಳನ್ನು ಕಬಳಿಸಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದರು.

ನಾಯಕ ರೋಹಿತ್ ಸೇರಿದಂತೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಶ್ರೇಷ್ಠ ಫಾರ್ಮ್‌ನಲ್ಲಿರುವುದು ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಶಿಖರ್ ಧವನ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಕೇದರ್ ಜಾಧವ್ ತಮಗೆ ಲಭಿಸಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಇನ್ನು ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಲ್, ಕುಲ್‌ದೀಪ್ ಯಾದವ್ ಜೊತೆಗೆ ರವೀಂದ್ರ ಜಡೇಜಾ ಅಮೋಘ ಲಯದಲ್ಲಿದ್ದಾರೆ.

ಇನ್ನೊಂದೆಡೆ ಪಾಕ್ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಬಾಬರ್ ಅಜಾಮ್, ಶೋಯಿಬ್ ಮಲಿಕ್ ಹಾಗೂ ಇಮಾನ್ ಉಲ್ ಹಕ್ ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ. ಹಾಗಿದ್ದರೂ ಬೌಲಿಂಗ್ ಮೊನಚು ಕಳೆದುಕೊಂಡಿರುವುದು ನಾಯಕ ಸರ್ಫರಾಜ್ ಅಹ್ಮದ್ ಪಾಲಿಗೆ ಚಿಂತೆಗೆ ಕಾರಣವಾಗಿದೆ.

ತಂಡಗಳು ಇಂತಿದೆ:

ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಮಹೇಂದ್ರ ಸಿಂಗ್ ಧೋನಿ, ಮನೀಷ್ ಪಾಂಡೆ, ಕೇದರ್ ಜಾಧವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಖಲೀಲ್ ಅಹ್ಮದ್, ಸಿದ್ಧಾರ್ಥ್ ಕೌಲ್, ಕುಲ್‌ದೀಪ್ ಯಾದವ್, ಯುಜ್ವೇಂದ್ರ ಚಹಲ್, ರವೀಂದ್ರ ಜಡೇಜಾ, ದೀಪಕ್ ಚಹರ್

ಪಾಕಿಸ್ತಾನ: ಫಖಾರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಾಮ್, ಶಾನ್ ಮಸೂದ್, ಸರ್ಫರಾಜ್ ಅಹ್ಮದ್ (ನಾಯಕ), ಶೋಯಿಬ್ ಮಲಿಕ್, ಹ್ಯಾರಿಸ್ ಸೊಹೈಲ್, ಶದಬ್ ಖಾನ್, ಮೊಹಮ್ಮದ್ ನವಾಜ್, ಫಾಹೀಂ ಅಶ್ರಫ್, ಹಸನ್ ಅಲಿ, ಜುನೈದ್ ಖಾನ್, ಉಸ್ಮಾನ್ ಖಾನ್, ಶಾಹೀನ್ ಆಫ್ರಿದಿ, ಆಸಿಫ್ ಅಲಿ ಮತ್ತು ಮೊಹಮ್ಮದ್ ಆಮೀರ್.

ಪಂದ್ಯಾರಂಭ: ಸಂಜೆ 5ಕ್ಕೆ (ಭಾರತೀಯ ಕಾಲಮಾನ)
ಟಾಸ್: ಸಂಜೆ 4.30ಕ್ಕೆ ಸರಿಯಾಗಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌