ಆ್ಯಪ್ನಗರ

ಏಕದಿನದಲ್ಲೂ ಗೆಲುವಿನ ಓಟ ಮುಂದುವರಿಸುವ ಗುರಿ

ವಿಶ್ವಕಪ್‌ಗೆ ಪರಿಪೂರ್ಣ ಸಂಯೋಜನೆಯ ಹುಡುಕಾಟದಲ್ಲಿ ಟೀಮ ಇಂಡಿಯಾ

Vijaya Karnataka Web 20 Oct 2018, 7:16 pm
ಗುವಾಹಟಿ: ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ದಾಖಲಾದ ಅಧಿಕಾರಯುತ ಗೆಲುವಿನ ಬಳಿಕ ಟೀಮ್ ಇಂಡಿಯಾ ಇದೀಗ ಐದು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗುತ್ತಿದೆ.
Vijaya Karnataka Web virat-kohli-29


ಟೆಸ್ಟ್ ತಂಡಕ್ಕೆ ಹೋಲಿಸಿದಾಗ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವಿಂಡೀಸ್ ಪ್ರಬಲವೆನಿಸಿದ್ದು, ದಿಟ್ಟ ಪೈಪೋಟಿ ನೀಡುವ ಇರಾದೆಯಲ್ಲಿದೆ.

ಟೀಮ್ ಇಂಡಿಯಾ ಪ್ರಮುಖವಾಗಿಯೂ ಮುಂಬರುವ ಏಕದಿನ ವಿಶ್ವಕಪ್ ದೃಷ್ಟಿಕೋನದಲ್ಲಿ ಪರಿಪೂರ್ಣ ಸಂಯೋಜನೆಯ ಹುಡುಕಾಟದಲ್ಲಿದೆ.

ನಾಯಕ ವಿರಾಟ್ ಕೊಹ್ಲಿ ಸಹ ಇದನ್ನು ಉಲ್ಲೇಖಿಸಿದ್ದು, ಅಂಬಟಿ ರಾಯುಡುಗೆ ಹೆಚ್ಚಿನ ಅವಕಾಶ ನೀಡುವ ಮೂಲಕ ಮಧ್ಯಮ ಕ್ರಮಾಂಕದ ಸಮಸ್ಯೆಗಳಿಗೆ ಉತ್ತರ ಕಂಡು ಹುಡುಕುವ ಪ್ರಯತ್ನದಲ್ಲಿದ್ದಾರೆ.

ಗುವಾಹಟಿಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೆ 12 ಸದಸ್ಯ ಬಲದ ಟೀಮ್ ಇಂಡಿಯಾವನ್ನು ಈಗಾಗಲೇ ಘೋಷಿಸಲಾಗಿದೆ. ಕರ್ನಾಟಕದ ಮನೀಷ್ ಪಾಂಡೆ ಹಾಗೂ ಕೆಎಲ್ ರಾಹುಲ್ ಅವಕಾಶ ವಂಚಿತರಾಗಿದ್ದಾರೆ.

ರೋಹಿತ್ ಶರ್ಮಾ ಜೊತೆ ಶಿಖರ್ ಧವನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಏಷ್ಯಾ ಕಪ್ ವೇಳೆ ವಿಶ್ರಾಂತಿಯಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬಲ ತುಂಬಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಅಂಬಟಿ ರಾಯುಡು ಸ್ಥಿರ ಪ್ರದರ್ಶನದತ್ತ ಗುರಿಯಿರಿಸಿದ್ದಾರೆ.

ಈ ನಡುವೆ ರಿಷಭ್ ಪಂತ್ ಏಕದಿನಕ್ಕೂ ಕಾಲಿರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ವಿಕಟ್ ಕೀಪಿಂಗ್ ಜವಾಬ್ದಾರಿಯನ್ನು ಮಹೇಂದ್ರ ಸಿಂಗ್ ಧೋನಿ ನಿಭಾಯಿಸಲಿದ್ದು, ರವೀಂದ್ರ ಜಡೇಜಾ ಆಲ್‌ರೌಂಡರ್ ಆಗಿರಲಿದ್ದಾರೆ.

ಇನ್ನು ಯುಜ್ವೇಂದ್ರ ಚಹಲ್ ಹಾಗೂ ಕುಲ್‌ದೀಪ್ ಯಾದವ್ ಸ್ಪಿನ್ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಅಂತೆಯೇ ಇಬ್ಬರು ವೇಗಿಗಳ ಸ್ಥಾನಕ್ಕೆ ಮೊಹಮ್ಮದ್ ಶಮಿ, ಉಮೇಶ್ ಯಾದವ್ ಹಾಗೂ ಖಲೀಲ್ ಅಹ್ಮದ್ ನಡುವೆ ಪೈಪೋಟಿ ಕಂಡುಬರಲಿದೆ.

ಗಾಯದ ಹಿನ್ನಲೆಯಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೇದರ್ ಜಾಧವ್‌ಗೆ ವಿಶ್ರಾಂತಿ ಸೂಚಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹವೆನಿಸುತ್ತದೆ.

ಅತ್ತ ವೆಸ್ಟ್ಇಂಡೀಸ್ ತಂಡದಲ್ಲಿ ನಾಯಕ ಜೇಸನ್ ಹೋಲ್ಡರ್ ಜೊತೆಗೆ ತಂಡದೆಲ್ಲ ಆಟಗಾರರು ಶಕ್ತಿ ಮೀರಿ ಪ್ರದರ್ಶನ ನೀಡುವುದು ಅತಿ ನಿರ್ಣಾಯಕವೆನಿಸುತ್ತದೆ.

ತಂಡಗಳು ಇಂತಿದೆ:

ಟೀಮ್ ಇಂಡಿಯಾ 12 ಸದಸ್ಯರ ಬಳಗ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಟಿ ರಾಯುಡು, ಎಂಎಸ್ ಧೋನಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್, ಕುಲ್‌ದೀಪ್ ಯಾದವ್, ಮೊಹಮ್ಮದ್ ಶಮಿ, ಖಲೀಲ್ ಅಹ್ಮದ್ ಮತ್ತು ಉಮೇಶ್ ಯಾದವ್.

ವೆಸ್ಟ್‌ಇಂಡೀಸ್: ಜೇಸನ್ ಹೋಲ್ಡರ್ (ನಾಯಕ), ಫ್ಯಾಬಿಯನ್ ಅಲೆನ್, ಸುನಿಲ್ ಅಂಬ್ರಿಸ್, ದೇವೇಂದ್ರ ಬಿಶೂ, ಚಂದ್ರಪಾಲ್ ಹೇಮ್‌ರಾಜ್, ಶಿಮ್ರನ್ ಹೇಟ್ಮಯರ್, ಶಾಯ್ ಹೋಪ್, ಅಲ್ಜಾರಿ ಜೋಸೆಫ್, ಕೀರಾನ್ ಪೊವೆಲ್, ಆಶ್ಲೆ ನರ್ಸ್, ಕೀಮೊ ಪೌಲ್, ರೋವ್‌ಮ್ಯಾನ್ ಪೊವೆಲ್, ಕೆಮರ್ ರೂಚ್, ಮಾರ್ಲನ್ ಸ್ಯಾಮುವೆಲ್ಸ್, ಓಶಾನೆ ಥಾಮಸ್ ಮತ್ತು ಒಬೆಡ್ ಮೆಕೋಯ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌