ಆ್ಯಪ್ನಗರ

ಮಾರ್ಚ್‌ 23ರಿಂದ ಐಪಿಎಲ್‌

ಲೋಕಸಭೆ ಚುನಾವಣೆ ದಿನಾಂಕದೊಂದಿಗೆ ಮುಖಾಮುಖಿಯಾಗುವ ಸಾಧ್ಯತೆ ಇದ್ದರೂ ಈ ಬಾರಿ ಐಪಿಎಲ್‌ ಟೂರ್ನಿ ಭಾರತದಲ್ಲಿ ನಡೆಯದೆ.

PTI 9 Jan 2019, 5:00 am
ಲೋಕಸಭೆ ಚುನಾವಣೆ ಹೊರತಾಗಿಯೂ ಭಾರತದಲ್ಲೇ ಆಯೋಜಿಸಲು ನಿಧಾರ
Vijaya Karnataka Web ipl to stay in india but to have march start this year
ಮಾರ್ಚ್‌ 23ರಿಂದ ಐಪಿಎಲ್‌


ಹೊಸದಿಲ್ಲಿ: ಲೋಕಸಭೆ ಚುನಾವಣೆ ದಿನಾಂಕದೊಂದಿಗೆ ಮುಖಾಮುಖಿಯಾಗುವ ಸಾಧ್ಯತೆ ಇದ್ದರೂ ಈ ಬಾರಿ ಐಪಿಎಲ್‌ ಟೂರ್ನಿ ಭಾರತದಲ್ಲಿ ನಡೆಯದೆ. ಈ ಹಿಂದಿನ ಆವೃತ್ತಿಗಳಿಗಿಂತಲೂ ಕೊಂಚ ಮೊದಲೇ ನಡೆಯಲಿದ್ದು, ಮಾರ್ಚ್‌ 23ಕ್ಕೆ ಟಿ20 ಕ್ರಿಕೆಟ್‌ ಕದನ ಶುರುವಾಗಲಿದೆ ಎಂದು ಸುಪ್ರೀಂ ಕೋರ್ಟ್‌ ನೇಮಿತ ಆಡಳಿತಾತ್ಮಕ ಸಮಿತಿ (ಸಿಒಎ) ಮಂಗಳವಾರ ತಿಳಿಸಿದೆ.

ಟೂರ್ನಿ ಆಯೋಜನೆಯ ಸಾಧ್ಯತೆ ಮತ್ತು ಪಂದ್ಯ ನಡೆಯುವ ಸ್ಥಳಗಳ ಕುರಿತಾಗಿ ಚರ್ಚಿಸಲು ಸಿಒಎ ಸದಸ್ಯರಾದ ವಿನೋದ್‌ ರಾಯ್‌ (ಮುಖ್ಯಸ್ಥ ) ಮತ್ತು ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಮಂಗಳವಾರ ಸಭೆ ನಡೆಸಿದ್ದಾರೆ.

''ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳು ಹಾಗೂ ಅಧಿಕಾರಿಗಳೊಂದಿಗೆ ನಡೆಸಿದ ಪ್ರಥಮಿಕ ಸಭೆ ನಂತರ 12ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ನಿರ್ಧರಿಸಲಾಗಿದೆ,'' ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

''2019ರ ಐಪಿಎಲ್‌ ಟೂರ್ನಿಯನ್ನು 2019ರ ಮಾರ್ಚ್‌ 23ರಂದು ಆರಂಭಿಸಲು ಪ್ರಸ್ಥಾಪಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗುವುದು,'' ಎಂದು ಹೇಳಿದೆ.

ಇದರೊಂದಿಗೆ ಜಗತ್ತಿನ ಅತ್ಯಂತ ಐಶಾರಾಮಿ ಟಿ20 ಕ್ರಿಕೆಟ್‌ ಟೂರ್ನಿಯಾಗಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಈ ಬಾರಿ ಬೇರೆಡೆ ನಡೆಯಲಿದೆ ಎಂಬ ಊಹಾಪೋಹಗಳಿಗೆ ತೆರೆಬಿದ್ದಂತಾಗಿದೆ.

ಐಪಿಎಲ್‌ ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಆರಂಭಗೊಂಡು ಮೇ ತಿಂಗಳಿನ ಕೊನೆಯಲ್ಲಿ ಅಂತ್ಯಗೊಳ್ಳುತ್ತಿತ್ತು. 2010ರ ಆವೃತ್ತಿಯಲ್ಲಿ ಮಾತ್ರವೇ ಈ ಮೊದಲು ಮಾರ್ಚ್‌ನಲ್ಲಿ ಆರಂಭಿಸಲಾಗಿತ್ತು. ಇನ್ನು 2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಇಂಗ್ಲೆಂಡ್‌ನಲ್ಲಿ ಮೇ 30ರಿಂದ ಆರಂಭವಾಗಲಿದ್ದು, ಐಪಿಎಲ್‌ ಟೂರ್ನಿಯನ್ನು ಅವಧಿಗು ಮೊದಲೇ ಆಯೋಜಿಸುತ್ತಿರುವುದಕ್ಕೆ ಮತ್ತೊಂದು ಕಾರಣವಾಗಿದೆ. ಏಕೆಂದರೆ ಬಿಸಿಸಿಐನ ನಿಯಮಗಳ ಅನುಸಾರ ಐಪಿಎಲ್‌ ಮತ್ತು ಭಾರತ ತಂಡದ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಚಟುವಟಿಕೆಗಳ ನಡುವೆ ಕನಿಷ್ಠ 15 ದಿನಗಳ ಅಂತರ ಇರಬೇಕು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಮೊದಲು ಎರಡು ಬಾರಿ ಐಪಿಎಲ್‌ ಟೂರ್ನಿಯನ್ನು ಭಾರತದಿಂದಾಚೆ ಆಯೋಜಿಸಲಾಗಿತ್ತು. 2009ರಲ್ಲಿ ಸಂಪೂರ್ಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಬಳಿಕ 2014ರಲ್ಲಿ ಅರ್ಧದಷ್ಟು ಪಂದ್ಯಗಳು ಯುಎಇನಲ್ಲಿ ನಡೆದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌