ಆ್ಯಪ್ನಗರ

ಏಕದಿನದಲ್ಲಿ 47ರ ಸರಾಸರಿ ಕಾಯ್ದುಕೊಂಡರೂ ರಾಯುಡುಗೆ ಸಿಗಲಿಲ್ಲ ವಿಶ್ವಕಪ್ ಟಿಕೆಟ್!

ಏಕದಿನದಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಹೊರತಾಗಿಯೂ ಅಂಬಟಿ ರಾಯುಡುಗೆ ವಿಶ್ವಕಪ್ ಟಿಕೆಟ್ ಕೈತಪ್ಪಿದೆ. ಇದರಿಂದ ಸಹಜವಾಗಿಯೇ ಆಕ್ರೋಶಗೊಂಡಿರುವ ರಾಯುಡು ಬಿಸಿಸಿಐ ವಿರುದ್ಧ ವ್ಯಂಗ್ಯಭರಿತವಾದ ಟ್ವೀಟ್ ಮಾಡಿದ್ದಾರೆ.

Vijaya Karnataka Web 16 Apr 2019, 5:38 pm
ಮುಂಬಯಿ: ಮುಂಬರುವ 2019 ಐಸಿಸಿ ಏಕದಿನ ವಿಶ್ವಕಪ್‌ಗಾಗಿನ 15 ಸದಸ್ಯ ಬಲದ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಆದರೆ ಅಚ್ಚರಿಯೆಂಬಂತೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಅವರನ್ನು ಕಡೆಗಣಿಸಲಾಗಿದೆ.
Vijaya Karnataka Web rayudu-kohli


55 ಏಕದಿನ ಪಂದ್ಯಗಳನ್ನು ಆಡಿರುವ ರಾಯುಡು 47.05ರ ಸರಾಸರಿಯಲ್ಲಿ 1694 ರನ್ ಗಳಿಸಿದ್ದಾರೆ. ಇದರಲ್ಲಿ 10 ಅರ್ಧಶತಕ ಹಾಗೂ ಮೂರು ಶತಕಗಳು ಸೇರಿದೆ. ಇಷ್ಟಾದರೂ ವಿಶ್ವಕಪ್ ಟಿಕೆಟ್ ಸಿಗಲಿಲ್ಲ.

ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಅತಿ ಹೆಚ್ಚು ನೆಚ್ಚಿಕೊಂಡಿದ್ದರು. ಅಲ್ಲದೆ ಕಳೆದೆರಡು ವರ್ಷಗಳಿಂದ ನಾಲ್ಕನೇ ಕ್ರಮಾಂಕದಲ್ಲಿ ನಿರಂತರ ಅವಕಾಶವನ್ನು ನೀಡಲಾಗಿತ್ತು. ಆದರೂ ಕೊನೆಯ ಆಸೀಸ್ ಸರಣಿಯಲ್ಲಿ ವೈಫಲ್ಯದ ಏಕ ಮಾತ್ರ ಕಾರಣಕ್ಕಾಗಿ ರಾಯುಡುರನ್ನು ಹೊರಗಟ್ಟಲಾಗಿದೆ. ಅಲ್ಲದೆ ರಾಯುಡು ಸ್ಥಾನಕ್ಕೆ ವಿಜಯ್ ಶಂಕರ್‌ರನ್ನು ಆಯ್ಕೆ ಮಾಡಲಾಗಿದೆ.

ಒಟ್ಟಿನಲ್ಲಿ ರಾಯುಡು ಹೊರಗಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ ಎಂದು ಸ್ವತ: ಕ್ರಿಕೆಟ್ ಲೆಜೆಂಡ್ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಮಾಜಿಗಳಾದ ವಿವಿಎಸ್ ಲಕ್ಷ್ಮಣ್ ಹಾಗೂ ಕಿರಣ್ ಮೋರೆ ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅತ್ತ ಬಿಸಿಸಿಐಗೆ ಟಾಂಗ್ ನೀಡುವ ಮೂಲಕ ಅಂಬಟಿ ರಾಯುಡು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಸ್ವತ: ರಾಯುಡುಗೆ ವಿಶ್ವಕಪ್ ತಂಡದಿಂದ ಹೊರಗಟ್ಟಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ ಪ್ರತಿಕ್ರಿಯಿಸಿರುವ ರಾಯುಡು ವಿಶ್ವಕಪ್ ವೀಕ್ಷಿಸಲು ತ್ರಿಡಿ ಗ್ಲಾಸ್ ಆರ್ಡರ್ ಮಾಡಿದ್ದೇನೆ ಎಂದು ಗೇಲಿ ಮಾಡಿದ್ದಾರೆ.

ಒಟ್ಟಿನಲ್ಲಿ ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಹಾಗೂ ಎಷ್ಟರ ಮಟ್ಟಿಗೆ ಯಶ ಸಾಧಿಸಲಿದ್ದಾರೆ ಎಂಬುದು ಬಹಳಷ್ಟು ಕುತೂಹಲಕ್ಕೀಡು ಮಾಡಿದೆ.

ಅತ್ತ 33ರ ಹರೆಯದ ರಾಯುಡು ಮಗದೊಮ್ಮೆ ಏಕದಿನ ತಂಡಕ್ಕೆ ಮರಳುವುದು ಕಷ್ಟವೆನಿಸಿದೆ. ಹಾಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌