ಆ್ಯಪ್ನಗರ

ವಿರಾಟ್ ಕೊಹ್ಲಿಗೆ ಸವಾಲೆಸೆದ ಆಸೀಸ್ ನಾಯಕ ಟಿಮ್ ಪೈನ್

ಬ್ರಿಸ್ಬೇನ್‌ನ ಗಬ್ಬಾ ಕ್ರಿಕೆಟ್ ಮೈದಾನದಲ್ಲೇ ಮುಂದಿನ ಟೆಸ್ಟ್ ಋತುವನ್ನು ಆರಂಭಿಸೋಣ ಎಂದು ಭಾರತ ಕಪ್ತಾನ ವಿರಾಟ್ ಕೊಹ್ಲಿ ಅವರಿಗೆ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಸವಾಲನ್ನು ಎಸೆದಿದ್ದಾರೆ.

Vijaya Karnataka Web 25 Nov 2019, 12:00 pm
ಹೊಸದಿಲ್ಲಿ: ಬ್ರಿಸ್ಬೇನ್‌ನ ಗಬ್ಬಾ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡವು ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಇದಕ್ಕೊಂದು ಹೊಸ ಸೇರ್ಪಡೆಯೆಂಬಂತೆ ಪಾಕಿಸ್ತಾನ ವಿರುದ್ಧ ಇನ್ನಿಂಗ್ಸ್ ಹಾಗೂ ಐದು ರನ್‌ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಹೊಸ ಬೇಸಿಗೆ ಋತುವನ್ನು ಭರ್ಜರಿಯಾಗಿ ಆರಂಭಿಸಿದೆ.
Vijaya Karnataka Web ವಿರಾಟ್ ಕೊಹ್ಲಿ vs ಟಿಮ್ ಪೈನ್


1988ನೇ ಇಸವಿಯಿಂದ ಗಬ್ಬಾ ಮೈದಾನದಲ್ಲಿ ಆಸೀಸ್ ಗೆಲುವಿನ ಓಟ ಮುಂದುವರಿಸಿದೆ. ಕಳೆದ ಬಾರಿ ಇದೇ ಮೈದಾನದಲ್ಲಿ ಭಾರತ ಆಡಲು ನಿರಾಕರಿಸಿತ್ತು ಎಂಬ ಬಗ್ಗೆ ಆರೋಪಗಳಿವೆ. ಬಳಿಕ ಆಸೀಸ್ ನೆಲದಲ್ಲಿ ಭಾರತ ಐತಿಹಾಸಿಕ ಸರಣಿ ಗೆಲುವನ್ನು ಬಾರಿಸಿತ್ತು.

1947ರಿಂದ ಗಬ್ಬಾ ಮೈದಾನದಲ್ಲಿ ಆರು ಟೆಸ್ಟ್ ಪಂದ್ಯಗಳನ್ನಾಡಿರುವ ಭಾರತ ಐದರಲ್ಲಿ ಸೋಲುಂಡರೆ ಒಂದು ಪಂದ್ಯದಲ್ಲಿ ಡ್ರಾ ಫಲಿತಾಂಶವನ್ನಷ್ಟೇ ದಾಖಲಿಸಲು ಯಶಸ್ವಿಯಾಗಿತ್ತು.

ಚಾರಿತ್ರಿಕ ಹಗಲು-ರಾತ್ರಿ ಟೆಸ್ಟ್‌ 17 ಗಂಟೆಗಳಲ್ಲೇ ಮುಕ್ತಾಯ

ಬ್ರಿಸ್ಬೇನ್‌ನಲ್ಲಿ ಆಸೀಸ್ ಗೆಲುವು ಬಾರಿಸಿದರೆ ಅತ್ತ ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಚಾರಿತ್ರಿಕ ಪಿಂಕ್ ಬಾಲ್ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 46 ರನ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಸತತ ನಾಲ್ಕು ಇನ್ನಿಂಗ್ಸ್ ಗೆಲುವುಗಳನ್ನು ಬಾರಿಸಿದ ವಿಶ್ವದ ಮೊದಲ ತಂಡವೆಂಬ ಕೀರ್ತಿಗೆ ಭಾಜನವಾಗಿದೆ.

ಈ ನಡುವೆ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಗಬ್ಬಾದಲ್ಲಿ ಆಡುವಂತೆ ಸವಾಲೆಸೆದಿದ್ದಾರೆ. ಮುಂದಿನ ವರ್ಷ ಭಾರತದ ವಿರುದ್ಧದ ಸರಣಿಯನ್ನು ಗಬ್ಬಾದಿಂದಲೇ ಆರಂಭಿಸೋಣ ಎಂದು ಟಾಂಗ್ ನೀಡಿದ್ದಾರೆ.

"ಹೌದು, ನಾವೆಲ್ಲರೂ ಪ್ರಯತ್ನಿಸುತ್ತಿದ್ದೇವೆ. ವಿರಾಟ್ ಕೊಹ್ಲಿ ಅವರ ಪ್ರತಿಕ್ರಿಯೆಯನ್ನು ಬಯಸುತ್ತೇವೆ" ಎಂದು ಹೇಳಿದ್ದಾರೆ.

ದಾದಾ ತಂಡದಿಂದ ಗೆಲುವಿನ ಅಭಿಯಾನ ಆರಂಭ; ವಿರಾಟ್ ಕೊಹ್ಲಿ ಹೇಳಿಕೆಗೆ ಸುನಿಲ್ ಗವಾಸ್ಕರ್ ಟಾಂಗ್

"ನಮ್ಮ ಬೇಸಿಗೆ ಋತುವನ್ನು ಇಲ್ಲಿಂದಲೇ ಆರಂಭಿಸುತ್ತೇವೆ. ಆದರೆ ಕಳೆದ ಬಾರಿ ಸಾಧ್ಯವಾಗಿರಲಿಲ್ಲ. ಹಾಗಾಗಿ ನಾನು ಹೇಳಿದ್ದಂತೆ ವಿರಾಟ್ ಕೊಹ್ಲಿ ಅವರನ್ನು ಕೇಳಲಿದ್ದೇವೆ. ಇಲ್ಲಿ ಆಡಲು ಅವರ ಅನುಮತಿ ಪಡೆಯಬಹುದೇ ಎಂಬುದನ್ನು ನೋಡೋಣ" ಎಂದಿದ್ದಾರೆ.

ಮಾತು ಮುಂದುವರಿಸಿದ ಆಸೀಸ್ ನಾಯಕ, "ವಿರಾಟ್ ಕೊಹ್ಲಿ ಉತ್ತಮ ಮೂಡ್‌ನಲ್ಲಿದ್ದರೆ ಪಿಂಕ್ ಬಾಲ್ ಪಂದ್ಯವನ್ನೇ ಆಡಲಿದ್ದೇವೆ" ಎಂದು ಕಾಲೆಳೆಯುವ ಪ್ರಯತ್ನ ಮಾಡಿದರು.

ಪಿಂಕ್ ಬಾಲ್‌ನಲ್ಲಿ ಆಡಲು ವಿರಾಟ್‌ಗೆ ಸಚಿನ್ ನೀಡಿದ ಅಮೂಲ್ಯ ಟಿಪ್ಸ್ ಏನಾಗಿತ್ತು?

"ಗಬ್ಬಾದಲ್ಲಿ ಆಡುವುದನ್ನು ನಾವು ಇಷ್ಟಪಡುತ್ತೇವೆ. ದೀಘ ಕಾಲದಿಂದ ಇಲ್ಲಿನ ಪಿಚ್‌ನಲ್ಲಿ ಆಸೀಸ್ ತಂಡ ಉತ್ತಮವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡುತ್ತಿದೆ. ಯಾವುದೇ ತಂಡದ ವಿರುದ್ಧವೂ ಇಲ್ಲಿ ಆಡಲು ಇಷ್ಟಪಡುತ್ತೇವೆ. ನಾವಿಲ್ಲಿ ಗೆಲ್ಲುತ್ತೇವೆ ಏಕೆಂದರೆ ಎದುರಾಳಿಗಿಂತಲೂ ಉತ್ತಮ ನಿರ್ವಹಣೆಯನ್ನು ನೀಡುತ್ತೇವೆ. ಅದು ಸ್ಥಳವನ್ನು ಅವಲಂಬಿಸಿ ಬದಲಾಗುವುದಿಲ್ಲ" ಎಂದರು.

1931ನೇ ಇಸವಿಯಿಂದ ಗಬ್ಬಾದಲ್ಲಿ ಆಡಲಾಗಿರುವ 62 ಟೆಸ್ಟ್ ಪಂದ್ಯಗಳ ಪೈಕಿ ಕೇವಲ ಎಂಟರಲ್ಲಿ ಮಾತ್ರ ಆಸ್ಟ್ರೇಲಿಯಾ ಸೋಲಿಗೆ ಶರಣಾಗಿದೆ. ಇಲ್ಲಿನ ಪಿಚ್‌ನಲ್ಲಿ ದೊರಕುವ ಹೆಚ್ಚುವರಿ ಬೌನ್ಸರ್‌ಗಳ ಪ್ರಯೋಜನವನ್ನು ಆಸೀಸ್ ವೇಗಿಗಳು ಪಡೆಯುತ್ತಾರೆ. ಇದು ಎದುರಾಳಿ ತಂಡಗಳ ಪಾಲಿಗೆ ಹೆಚ್ಚು ಸಂಕಷ್ಟವನ್ನು ಸೃಷ್ಟಿಮಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌