ಆ್ಯಪ್ನಗರ

ರಾಹುಲ್ ದ್ರಾವಿಡ್ ನೀಡಿದ ಅಮೂಲ್ಯ ಸಲಹೆಯಿಂದ ಬದಲಾದ ಶುಭಮನ್ ಗಿಲ್ ಕೆರಿಯರ್ !

ತಾಂತ್ರಿಕವಾಗಿ ಎಷ್ಟೇ ಹೊಂದಾಣಿಕೆಗಳನ್ನು ಮಾಡಿದರೂ ಸಹಜ ಶೈಲಿಯ ಆಟದಲ್ಲಿ ಯಾವುದೇ ಬದಲಾವಣೆ ತರಬಾರದು ಎಂಬ ಮಾಜಿ ನಾಯಕ ಹಾಗೂ ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಸಲಹೆಯನ್ನು ಯುವ ಭರವಸೆಯ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ನೆನಪಿಸಿಕೊಂಡಿದ್ದಾರೆ.

TOI.in 22 Aug 2019, 6:24 pm
ಹೊಸದಿಲ್ಲಿ: ಯುವ ಆಟಗಾರರ ಬೆಳವಣಿಗೆಯಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಬೀರುತ್ತಿರುವ ಪ್ರಭಾವ ಅಷ್ಟಿಷ್ಟಲ್ಲ. ಭಾರತದ ಅಂಡರ್-19 ವಿಶ್ವಕಪ್ ತಂಡದ ಹೀರೊ ಶುಭಮನ್ ಗಿಲ್ ಸಹ ಇದರಿಂದ ಹೊರತಾಗಿಲ್ಲ.
Vijaya Karnataka Web gill-dravid


ಅಂಡರ್-19 ಬಳಿಕವೀಗ ರಾಷ್ಟ್ರೀಯ ತಂಡದ ಕನಸನ್ನು ಕಾಣುತ್ತಿರುವ ಗಿಲ್, ತಮಗೆ ಲಭಿಸಿದ ಅವಕಾಶವನ್ನು ಸಮರ್ಥವಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಅಮೋಘ ದ್ವಿಶತಕ ಸಾಧನೆ ಮಾಡಿದ್ದರು. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಭಾರತದ ಅತಿ ಕಿರಿಯ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರವಾಗಿದ್ದರು.

ಅಂಡರ್-19 ದಿನಗಳಿಂದ ಹಿಡಿದು ಇದೀಗ ಭಾರತ ಎ ತಂಡದಲ್ಲೂ ರಾಹುಲ್ ಸರ್ ನನ್ನ ತರಬೇತುದಾರರಾಗಿದ್ದಾರೆ. ಅವರು ನೀಡಿದ ಆ ಒಂದು ಮೂಲಭೂತ ಸಲಹೆಯನ್ನು ಎಂದಿಗೂ ನೆನಪಿನಲ್ಲಿರಿಸುತ್ತೇನೆ. ನಿಮಗೆ ಯಶಸ್ಸನ್ನು ನೀಡಿದ ಮೂಲಭೂತ ಆಟವನ್ನು ಯಾವತ್ತೂ ಬದಲಾಯಿಸಬಾರದು ಎಂಬ ದ್ರಾವಿಡ್ ಸಲಹೆಯನ್ನು ನೆನಪಿಸಿಕೊಂಡರು.

ತಾಂತ್ರಿಕವಾಗಿ ಹೆಚ್ಚು ಸದೃಢರಾಗಲು ಬಯಸುವುದಾರೆ, ನಾವು ಮಾಡುವ ಎಲ್ಲ ಹೊಂದಾಣಿಕೆಗಳು ನಮ್ಮ ಮೂಲ ಆಟದಲ್ಲಿಯೇ ಅಡಗಿರಬೇಕು. ಹಾಗೊಂದು ವೇಳೆ ನಾನು ನನ್ನ ನೈಜ ಆಟದ ಶೈಲಿಯನ್ನು ಬದಲಾಯಿಸಿದರೆ ಸಹಜತೆಯನ್ನು ಕಳೆದುಕೊಳ್ಳಲಿದೆ. ಹಾಗಾಗಿ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂಬ ದ್ರಾವಿಡ್ ಮಾತುಗಳನ್ನು ವಿವರಿಸಿದರು.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ತಾಂತ್ರಿಕವಾಗಿ ಅತ್ಯಂತ ಸದೃಢವಾಗಿರುವ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ರಾಹುಲ್ ದ್ರಾವಿಡ್ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಯುವ ಆಟಗಾರರು ಉತ್ತಮ ಮನೋಸ್ಥಿತಿ ಕಾಪಾಡುವುದರತ್ತ ನೆರವಾಗುತ್ತಾರೆ ಎಂದು ಗಿಲ್ ವಿವರಿಸಿದರು.

ಏತನ್ಮಧ್ಯೆ ಎದುರಾಳಿ, ಪರಿಸ್ಥಿತಿ ಹಾಗೂ ಪಿಚ್ ಗಮನದಲ್ಲಿಟ್ಟುಕೊಂಡು ವಿಂಡೀಸ್ ಎ ವಿರುದ್ಧ ಬಾರಿಸಿದ ದ್ವಿಶತಕವು ಕೆಂಪು ಚೆಂಡಿನಲ್ಲಿ ನಾನು ಬಾರಿಸಿದ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ ಎಂದು ರೇಟಿಂಗ್ ಮಾಡಿದರು.

ಅದೇ ಹೊತ್ತಿಗೆ ಮಾಜಿ ಆಟಗಾರ ಯುವರಾಜ್ ಸಿಂಗ್ ಸಹ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದಕ್ಕೆ ಸಂಬಂಧಪಟ್ಟಂತೆ ಸಲಹೆ ಮಾಡುತ್ತಿರುವುದಾಗಿ ಗಿಲ್ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌