ಆ್ಯಪ್ನಗರ

ದಕ್ಷಿಣ ಆಫ್ರಿಕಾ ವಿರುದ್ಧ ವಿಶೇಷ ದಾಖಲೆ ಬರೆದ ರವಿಚಂದ್ರನ್‌ ಅಶ್ವಿನ್‌!

ಇತ್ತೀಚೆಗಷ್ಟೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ವೇಗದ 350 ವಿಕೆಟ್‌ ಪಡೆದ ವಿಶ್ವ ದಾಖಲೆ ಸರಿಗಟ್ಟಿದ್ದ ಟೀಮ್‌ ಇಂಡಿಯಾದ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌, ಇದೀಗ ಟೆಸ್ಟ್‌ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿಕೆಟ್‌ಗಳ ಹಾಫ್‌ ಸೆಂಚುರಿ ಬಾರಿಸಿದ್ದಾರೆ.

Vijaya Karnataka Web 13 Oct 2019, 1:05 pm
ಪುಣೆ: ಟೀಮ್‌ ಇಂಡಿಯಾದ ಸ್ಟಾರ್‌ ಸ್ಪಿನ್‌ ರವಿಚಂದ್ರನ್‌ ಅಶ್ವಿನ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪುಣೆ ಟೆಸ್ಟ್‌ ಪಂದ್ಯದ ಮೂರನೇ ದಿನದಾಟದಲ್ಲಿ ಒಟ್ಟು ನಾಲ್ಕು ವಿಕೆಟ್‌ ಕಬಳಿಸಿದ ಅನುಭವಿ ಆಫ್‌ ಸ್ಪಿನ್ನರ್‌, ಹರಿಣಗಳ ವಿರುದ್ಧ ಟೆಸ್ಟ್‌ ಕ್ರಿಕೆಟ್‌ನಲ್ಲಿ 50ಕ್ಕೂ ಹೆಚ್ಚು ವಿಕೆಟ್‌ ಪಡೆದ ಭಾರತದ ನಾಲ್ಕನೇ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Vijaya Karnataka Web Ravichandran Ashwin test vs SA 2019


ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3 ಪಂದ್ಯಗಳ ಟೆಸ್ಟ್‌ ಸರಣಿಯ 2ನೇ ಹಣಾಹಣಿಯಲ್ಲಿ ಭಾರತ ಇನಿಂಗ್ಸ್‌ ಗೆಲುವಿನ ವಿಶ್ದವಾಸದಲ್ಲಿದೆ. ಪಂದ್ಯದ ಮೂರನೇ ದಿನವಾದ ಶನಿವಾರ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ 275 ರನ್‌ಗಳಿಗೆ ಆಲ್‌ಔಟ್‌ ಮಾಡಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 601 ರನ್‌ ದಾಖಲಿಸಿ ಡಿಕ್ಲೇರ್‌ ಮಾಡಿಕೊಂಡಿದ್ದ ಭಾರತಕ್ಕೆ 326 ರನ್‌ಗಳ ಭಾರಿ ಮುನ್ನಡೆ ತನ್ನದಾಗಿಸಿಕೊಂಡಿತು.

ಭಾರತ vs ದ. ಆಫ್ರಿಕಾ 2ನೇ ಟೆಸ್ಟ್‌

ಶನಿವಾರದ ಆಟದಲ್ಲಿ ಸ್ಪಿನ್‌ ಬಲೆ ಹೆಣೆದಿದ್ದ ಆರ್‌ ಅಶ್ವಿನ್‌, ಪ್ರವಾಸಿ ಪಡೆಯ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಫಾಫ್‌ ಡು'ಪ್ಲೆಸಿಸ್‌ (64), ಕ್ವಿಂಟನ್‌ ಡಿ'ಕಾಕ್‌ (31), ಕಗಿಸೊ ರಬಾಡ (2) ಮತ್ತು ಕೇಶವ್‌ ಮಹಾರಾಜ್‌ (72) ಅವರನ್ನು ಸೆರೆ ಹಿಡಿದರು. ಈ ಮೂಲಕ ದಕ್ಷಿಣ ಆಫ್ರಿಕಾ ಎದುರು ಟೆಸ್ಟ್‌ ಕ್ರಿಕೆಟ್‌ನಲ್ಲಿ 50 ವಿಕೆಟ್‌ಗಳನ್ನು ಪಡೆದ ದಾಖಲೆ ಬರೆದು ಎಲೈಟ್‌ ಪಟ್ಟಿಗೆ ಸೇರ್ಪಡೆಯಾದರು.

ದಕ್ಷಿಣ ಆಫ್ರಿಕಾ ಎದುರು 50ಕ್ಕೂ ಹೆಚ್ಚು ಟೆಸ್ಟ್‌ ವಿಕೆಟ್‌ ಪಡೆದವರ ಪೈಕಿ ಸ್ಪಿನ್ನರ್‌ಗಳ ಪ್ರಾಬಲ್ಯ ಹೆಚ್ಚಿದ್ದು, ಕನ್ನಡಿಗ ಹಾಗೂ ಲೆಗ್‌ ಸ್ಪಿನ್ನರ್‌ ಅನಿಲ್‌ ಕುಂಬ್ಳೆ (84) ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮತ್ತೊಬ್ಬ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ (64) ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ. ಇನ್ನು ಹರಿಣಗಳ ಎದುರು ವಿಕೆಟ್‌ಗಳ ಆಫ್‌ಸೆಂಚುರಿ ಬಾರಿಸಿದ ಏಕಮಾತ್ರ ಭಾರತೀಯ ವೇಗಿ ಎಂಬ ಖ್ಯಾತಿ ಮೈಸೂರು ಎಕ್ಸ್‌ಪ್ರೆಸ್‌ ಜಾವಗಲ್‌ ಶ್ರೀನಾಥ್‌ ಅವರದ್ದು. ಶ್ರೀನಾಥ್‌ ಒಟ್ಟು 60 ವಿಕೆಟ್‌ಗಳನ್ನು ಸಂಪಾದಿಸಿ ಈ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ.

ಕ್ಯಾಪ್ಟನ್‌ ಕೊಹ್ಲಿ ಜೊತೆಗಿನ ಜೊತೆಯಾಟದ ಬಗ್ಗೆ ಮಾತನಾಡಿದ ಟೀಮ್‌ ಇಂಡಿಯಾ ವೈಸ್‌ ಕ್ಯಾಪ್ಟನ್‌!

ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅಶ್ವಿನ್‌ ಇನ್ನು 10 ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರೆ ಹರ್ಭಜನ್‌ ಮತ್ತು ಶ್ರೀನಾಥ್‌ ಇಬ್ಬರ ದಾಖಲೆಯನ್ನೂ ಮುರಿಯುವ ಉತ್ತಮ ಅವಕಾಶ ಹೊಂದಿದ್ದಾರೆ. ಎರಡನೇ ಇನಿಂಗ್ಸ್‌ನಲ್ಲೂ ಅಶ್ವಿನ್‌ ತಮ್ಮ ಖಾತೆಗೆ ಮತ್ತೆರಡು ವಿಕೆಟ್‌ ಜೋಡಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ 50+ ವಿಕೆಟ್‌ ಪಡೆದ ಭಾರತೀಯ ಬೌಲರ್‌ಗಳು
ಅನಿಲ್‌ ಕುಂಬ್ಳೆ (84)
ಹರ್ಭಜನ್‌ ಸಿಂಗ್‌ (64)
ಜಾವಗಲ್‌ ಶ್ರೀನಾಥ್‌ (60)
ಆರ್‌ ಅಶ್ವಿನ್‌ (52*)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌