ಆ್ಯಪ್ನಗರ

ಬಣ ವದಂತಿಗೆ ಇನ್ನಷ್ಟು ಬಲ

ಟೀಮ್‌ ಇಂಡಿಯಾದಲ್ಲಿ ರೋಹಿತ್‌ ಶರ್ಮ ಹಾಗೂ ವಿರಾಟ್‌ ಕೊಹ್ಲಿ ನೇತೃತ್ವದಲ್ಲಿ ಎರಡು ಬಣಗಳಿವೆ ಎನ್ನುವ ಸುದ್ದಿಗೆ ಪದೇಪದೆ ಇಂಬು ದೊರೆಯುತ್ತಿರುವ ನಡುವೆಯೂ, ತಂಡದಲ್ಲಿ ಅಂಥದ್ದೊಂದು ಬೆಳವಣಿಗೆಯೇ ಇಲ್ಲ ಎನ್ನುವ ಮಾತನ್ನು ಬಿಸಿಸಿಐ ಅಧಿಕಾರಿಗಳು ಒತ್ತಿ ಹೇಳುತ್ತಿದ್ದಾರೆ. ಏತನ್ಮಧ್ಯೆ, ಆರೋಪವನ್ನು ನಿರಾಕರಿಸುವ ಬದಲಿಗೆ ಪರಿಹಾರ ಕಂಡುಕೊಳ್ಳುವುದೇ ಉತ್ತಮ ಎಂದು ಬಿಸಿಸಿಐನ ಕೆಲವು ಅಧಿಕಾರಿಗಳು ಸಲಹೆ ನೀಡಿದ್ದಾರೆ.

Agencies 28 Jul 2019, 5:00 am
ಟೀಮ್‌ ಇಂಡಿಯಾದಲ್ಲಿಬಣಗಳ ಪ್ರಶ್ನೆಯೇ ಇಲ್ಲ ಎಂಬ ಚರ್ಚೆ ತಾರಕಕ್ಕೆ
Vijaya Karnataka Web rift in indian cricket team getting worst
ಬಣ ವದಂತಿಗೆ ಇನ್ನಷ್ಟು ಬಲ

ಹೊಸದಿಲ್ಲಿ: ಟೀಮ್‌ ಇಂಡಿಯಾದಲ್ಲಿ ರೋಹಿತ್‌ ಶರ್ಮ ಹಾಗೂ ವಿರಾಟ್‌ ಕೊಹ್ಲಿ ನೇತೃತ್ವದಲ್ಲಿ ಎರಡು ಬಣಗಳಿವೆ ಎನ್ನುವ ಸುದ್ದಿಗೆ ಪದೇಪದೆ ಇಂಬು ದೊರೆಯುತ್ತಿರುವ ನಡುವೆಯೂ, ತಂಡದಲ್ಲಿ ಅಂಥದ್ದೊಂದು ಬೆಳವಣಿಗೆಯೇ ಇಲ್ಲ ಎನ್ನುವ ಮಾತನ್ನು ಬಿಸಿಸಿಐ ಅಧಿಕಾರಿಗಳು ಒತ್ತಿ ಹೇಳುತ್ತಿದ್ದಾರೆ. ಏತನ್ಮಧ್ಯೆ, ಆರೋಪವನ್ನು ನಿರಾಕರಿಸುವ ಬದಲಿಗೆ ಪರಿಹಾರ ಕಂಡುಕೊಳ್ಳುವುದೇ ಉತ್ತಮ ಎಂದು ಬಿಸಿಸಿಐನ ಕೆಲವು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ವಿಶ್ವಕಪ್‌ ಸೋಲಿನ ಬಳಿಕ ಟೀಮ್‌ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೇಳಿಬರತೊಡಗಿದ್ದವು. ಎರಡೆರಡು ಬಣಗಳು ಸೃಷ್ಟಿಯಾಗಿರುವ ಕಾರಣ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗದೇ ಸೋಲಬೇಕಾಯಿತು ಎನ್ನುವ ಸುದ್ದಿ ಪ್ರಚಲಿತದಲ್ಲಿದೆ. ಆದರೆ, ಈ ಬಗ್ಗೆ ರೋಹಿತ್‌ ಮತ್ತು ವಿರಾಟ್‌ ಸಮರ್ಥಿಸಿಕೊಳ್ಳುತ್ತಲೂ ಇಲ್ಲ, ನಿರಾಕರಿಸುತ್ತಲೂ ಇಲ್ಲ. ಹೀಗಾಗಿ ದಿನೇದಿನೆ ಸುದ್ದಿಗೆ ರೆಕ್ಕೆಪುಕ್ಕ ಬರತೊಡಗಿವೆ.
ಆದರೆ, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯಂತೂ ಆರಂಭದಿಂದಲೂ ಈ ಸುದ್ದಿಯನ್ನು ನಿರಾಕರಿಸುತ್ತಲೇ ಬಂದಿದೆ. ಇಂಥದ್ದೊಂದು ಸಾಧ್ಯತೆ ಇಲ್ಲವೇ ಇಲ್ಲ ಎಂದು ಮಂಡಳಿ ಖಡಾಖಂಡಿತವಾಗಿ ಹೇಳುತ್ತಿದೆ.
ಮಾಧ್ಯಮಗಳ ಸೃಷ್ಟಿ ಎಂದ ರಾಯ್‌
ಟೀಮ್‌ ಇಂಡಿಯಾದಲ್ಲಿ ಎರಡು ಬಣಗಳಿವೆ ಎಂಬ ಸುದ್ದಿಯನ್ನು ಇತ್ತೀಚೆಗೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ''ಭಾರತ ತಂಡದೊಳಗೆ ಭಿನ್ನಾಭಿಪ್ರಾಯವಿಲ್ಲ, ಎಲ್ಲವೂ ಚೆನ್ನಾಗಿದೆ,'' ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಪ್ರಸ್ತುತ ಬಿಸಿಸಿಐ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಸುಪ್ರೀಂ ಕೋರ್ಟ್‌ ನೇಮಿತ ಸಿಒಎ ಮುಖ್ಯಸ್ಥ ವಿನೋದ್‌ ರಾಯ್‌, ''ಇದು ಮಾಧ್ಯಗಳ ಸೃಷ್ಟಿ. ಬಣ ಜಗಳ ಕಟ್ಟುಕತೆ,'' ಎಂದು ಮಾಧ್ಯಮಗಳ ವಿರುದ್ಧ ತಿರುಗಿಬಿದ್ದಿದ್ದಾರೆ.
ಇನ್‌ಸ್ಟಾಗ್ರಾಮ್‌ ಪ್ರಕರಣ
ವಿರಾಟ್‌ ಕೊಹ್ಲಿಯನ್ನು ವಾರಗಳ ಹಿಂದೆಯೇ ಇನ್‌ಸ್ಟಾಗ್ರಾಮ್‌ನಲ್ಲಿ 'ಅನ್‌ಫಾಲೋ' ಮಾಡಿದ್ದ ರೋಹಿತ್‌ ಶರ್ಮ, ಎರಡು ದಿನಗಳ ಹಿಂದೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಖಾತೆಯಿಂದಲೂ ಅನ್‌ಫಾಲೋ ಆಗಿದ್ದಾರೆ. ಇದಾದ ಬಳಿಕ ಅನುಷ್ಕಾ, ನಿಗೂಢ ಅರ್ಥ ಹೊಂದಿದ್ದ ಸಂದೇಶವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದರು. ಈ ಘಟನೆಯ ಬಳಿಕ ರೋಹಿತ್‌ ಹಾಗೂ ಕೊಹ್ಲಿ ನಡುವೆ ಜಗಳವಿದೆ ಎನ್ನುವ ಮಾತು ಮತ್ತೆ ಮುನ್ನೆಲೆಗೆ ಬಂದಿದೆ.
ಏತನ್ಮಧ್ಯೆ, ಸಿಒಎ ಮುಖ್ಯಸ್ಥ ವಿನೋದ್‌ ರಾಯ್‌, ''ಆಟಗಾರರ ನಡುವೆ ಜಗಳ ಇದ್ದರೆ ಅದನ್ನು ನಮ್ಮ ಗಮನಕ್ಕೆ ತರಬಹುದು. ಆದರೆ, ಇದುವರೆಗೆ ಅಂಥ ಪರಿಸ್ಥಿತಿ ಸೃಷ್ಟಿಯಾಗಿಲ್ಲ ,'' ಎಂದು ಸಮಜಾಯಿಷಿ ನೀಡಿದ್ದರು.
ತಂಡದ ಮೇಲೆ ವ್ಯತಿರಿಕ್ತ ಪರಿಣಾಮ
ಟೀಮ್‌ ಇಂಡಿಯಾದ ಪ್ರಸಕ್ತ ಬೆಳವಣಿಗೆ ಕುರಿತು ಬಿಸಿಸಿಐನ ಇನ್ನೊಬ್ಬ ಅಧಿಕಾರಿ ''ತಂಡದೊಳಗಿನ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವುದು ಉತ್ತಮ. ಇಲ್ಲದಿದ್ದರೆ ಅದು ತಂಡದ ಒಟ್ಟಾರೆ ಪ್ರದರ್ಶನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ನಿಶ್ಚಿತ,'' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಒಂದು ತಂಡದೊಳಗೆ ಇಬ್ಬರು ನಾಯಕರು ಇರುವುದು ಸೂಕ್ತವಲ್ಲ. ಅದೇ ರೀತಿ ತಂಡದೊಳಗೆ ಜಗಳವಿಲ್ಲ ಎನ್ನುವುದನ್ನು ಏಕಪಕ್ಷೀಯವಾಗಿ ನಿರಾಕರಿಸಲು ಸಾಧ್ಯವಿಲ್ಲ. ಇದನ್ನು ಮಾಧ್ಯಮಗಳ ಸೃಷ್ಟಿ ಎಂದು ಸಬೂಬು ಹೇಳಿ ಪಲಾಯನ ಮಾಡುವ ಬದಲು ಸಮಸ್ಯೆ ಪರಿಹರಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್‌ ಪ್ರದರ್ಶನದ ಪರಾಮರ್ಶೆ ಇಲ್ಲ
ವಿಶ್ವಕಪ್‌ನಲ್ಲಿ ಭಾರತ ತಂಡದ ವೈಫಲ್ಯದ ಕುರಿತು ಪರಾಮರ್ಶೆ ನಡೆಸಲು ಸಮಯಾವಕಾಶ ಇಲ್ಲ ಎಂದು ಸಿಒಎ ಮುಖ್ಯಸ್ಥ ವಿನೋದ್‌ ರಾಯ್‌ ಶನಿವಾರ ಹೇಳಿದ್ದಾರೆ.
ಭಾರತ ತಂಡ ಜುಲೈ 29ರಂದು ವೆಸ್ಟ್‌ ಇಂಡೀಸ್‌ಗೆ ಪಯಣ ಬೆಳೆಸಲಿದೆ. ಹೀಗಾಗಿ ವಿಶ್ವಕಪ್‌ ವೈಫಲ್ಯದ ಪುನರಾವಲೋಕನಕ್ಕೆ ಸಮಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
''ಸಹಾಯಕ ಸಿಬ್ಬಂದಿ ಹಾಗೂ ತಂಡದ ವ್ಯವಸ್ಥಾಪಕರು ವಿಶ್ವಕಪ್‌ ಪ್ರದರ್ಶನದ ಕುರಿತು ನೀಡುವ ವರದಿಗಾಗಿ ಕಾಯುತ್ತಿದ್ದೇವೆ,'' ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ವಿಶ್ವಕಪ್‌ ಗೆಲ್ಲುವ ಹುಮ್ಮಸ್ಸಿನೊಂದಿಗೆ ಇಂಗ್ಲೆಂಡ್‌ಗೆ ತೆರಳಿದ್ದ ಭಾರತ ತಂಡ ಸೆಮೀಸ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋತು ನಿರ್ಗಮಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌