ಆ್ಯಪ್ನಗರ

ನಾಯಕತ್ವದಲ್ಲೂ ಧೋನಿ ಅನುಕರಿಸಿದ ರೋಹಿತ್

ಯುವ ಆಟಗಾರ ಖಲೀಲ್ ಅಹ್ಮದ್‌ಗೆ ಟ್ರೋಫಿ ಹಸ್ತಾಂತರಿಸುವ ಮೂಲಕ ಮಾದರಿಯಾದ ರೋಹಿತ್ ಶರ್ಮಾ

Times Now 29 Sep 2018, 5:20 pm
ದುಬೈ: ಯುಎಇನಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಮಣಿಸಿರುವ ಟೀಮ್ ಇಂಡಿಯಾ ದಾಖಲೆಯ ಏಳನೇ ಬಾರಿಗೆ ಪ್ರಶಸ್ತಿ ಗೆದ್ದಿದೆ.
Vijaya Karnataka Web rohit-asia-cup-title-khaleel-01


ಪ್ರಸ್ತುತ ಖಾಯಂ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಬಲಗೈ ಓಪನರ್ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿದ ರೀತಿಯು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಅತಿ ಒತ್ತಡದ ಸನ್ನಿವೇಶದಲ್ಲೂ ಅತಿರೇಕಕ್ಕೊಳಗಾಗದೆ ತಾಳ್ಮೆಯ ನಾಯಕತ್ವ ಪ್ರದರ್ಶಿಸಿರುವ ರೋಹಿತ್ ಮಾದರಿಯಾಗಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅವರದ್ದೇ ಶೈಲಿಯ ನಾಯಕತ್ವ ಗುಣಗಳನ್ನು ರೋಹಿತ್ ಪಾಲಿಸಿದ್ದರು. ಇದು ಟ್ರೋಫಿ ಗೆದ್ದ ಬಳಿಕವೂ ನೆಲೆಗೊಂಡಿರುವುದು ಹೆಚ್ಚಿನ ಗಮನ ಸೆಳೆದಿದೆ.

ಪಂದ್ಯ ಗೆದ್ದ ಬಳಿಕವು ಸರಳ ನಗುಮುಖದಿಂದಲೇ ಪ್ರತಿಕ್ರಿಯೆ ನೀಡಿರುವ ರೋಹಿತ್ ಬಳಿಕ ಪ್ರಶಸ್ತಿ ಸಮಾರಂಭದಲ್ಲಿ ಟ್ರೋಫಿಯನ್ನು ಯುವ ಆಟಗಾರ ಖಲೀಲ್ ಅಹ್ಮದ್‌ಗೆ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಕ್ರಿಕೆಟ್ ಪಂಡಿತರ ಪ್ರಕಾರ ವಿರಾಟ್ ಕೊಹ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಆಕ್ರಮಣಕಾರಿ ನಾಯಕತ್ವ ಮೈಗೂಡಿಸಿದ್ದಾರೆ. ಅತ್ತ ರೋಹಿತ್ ಅವರು ಮಹಿ ಶೈಲಿಯ ಕಪ್ತಾನಗಿರಿಯನ್ನು ಅನುಸರಿಸುತ್ತಿದ್ದಾರೆ ಎಂದಿದ್ದಾರೆ.

ಟ್ರೋಫಿ ಹಸ್ತಾಂತರಿಸುವ ವಿಷಯಕ್ಕೆ ಬಂದಾಗ ವಿರಾಟ್ ಕೊಹ್ಲಿ ಸಹ ತಮ್ಮ ಹಿರಿಯ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಅನುಕರಿಸಿದ್ದಾರೆ. ಈ ಹಿಂದೆ ನ್ಯೂಜಿಲೆಂಡ್ ಪ್ರವಾಸದಲ್ಲಿ ಟ್ವೆಂಟಿ-20 ಸರಣಿ ಗೆದ್ದಾಗ ಮೊಹಮ್ಮದ್ ಸಿರಾಜ್ ಅವರಿಗೆ ಟ್ರೋಫಿ ಹಸ್ತಾಂತರಿಸಿದ್ದರು.

ಒಟ್ಟಿನಲ್ಲಿ ಯುವ ಆಟಗಾರರಿಗೆ ಟ್ರೋಫಿ ಹಸ್ತಾಂತರಿಸಿರುವುದು ಟೀಮ್ ಇಂಡಿಯಾ ಪಾಲಿಗೆ ಸಂಪ್ರದಾಯವಾಗಿಬಿಟ್ಟಿದೆ. ಈ ಬಗ್ಗೆ ಹಿಂದೊಮ್ಮೆ ಧೋನಿ ಅವರ ಬಳಿಕ ಕೇಳಿದಾಗ, "ಇದು ಯುವ ಆಟಗಾರರಿಗೆ ಸಿಗುವ ಪ್ರೋತ್ಸಾಹ. ಉತ್ತಮ ನಿರ್ವಹಣೆ ನೀಡಿದ ಯುವ ಆಟಗಾರರನ್ನು ಹುರಿದುಂಬಿಸುವುದು ಅಗತ್ಯ. ಇದು ಅವರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಲಿದೆ. ಹಾಗಾಗಿ ಟ್ರೋಫಿ ನೀಡುವ ಮೂಲಕ ಪ್ರಶಂಸಿಸುತ್ತೇವೆ" ಎಂದಿದ್ದರು.

"ದಿನದಂತ್ಯದಲ್ಲಿ ನಾವು ಟ್ರೋಫಿ ಗೆದ್ದಿದ್ದೇವೆ. ಬಳಿಕ ಯಾರೂ ಎತ್ತಿ ಹಿಡಿಯುತ್ತಾರೆ ಎಂಬುದು ಮುಖ್ಯವಲ್ಲ. ಆದರೆ ಓರ್ವ ಯುವ ಆಟಗಾರ ಎತ್ತಿ ಹಿಡಿದರೆ ಮುಂಬರುವ ಸರಣಿಯಲ್ಲೂ ಉತ್ತಮ ನಿರ್ವಹಣೆ ಭರವಸೆಯನ್ನು ನೀಡುತ್ತಾರೆ. ಇದು ವಿಜಯದ ಸನ್ನಿವೇಶ" ಎಂದರು.

ಅಂದ ಹಾಗೆ ಬಾಂಗ್ಲಾದೇಶ ವಿರುದ್ಧ ಕೊನೆಯ ಎಸೆತದಲ್ಲಿ ಭಾರತ ಗೆಲುವು ದಾಖಲಿಸಿತ್ತು. ಇದು ಪಂದ್ಯದ ರೋಚಕತೆ ಜೊತೆಗೆ ಸಂಭ್ರಮದ ಸಿಹಿಯನ್ನು ಇಮ್ಮಡಿಗೊಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌