ಆ್ಯಪ್ನಗರ

ಸಿದ್ದಾರ್ಥ್ ಹೋರಾಟ ವ್ಯರ್ಥ; ಸತತ 2ನೇ ಗೆಲುವು ಬಾರಿಸಿದ ಶಿವಮೊಗ್ಗ

ಕೃಷ್ಣಮೂರ್ತಿ ಸಿದ್ಧಾರ್ಥ್ (77) ದಿಟ್ಟ ಹೋರಾಟದ ಹೊರತಾಗಿಯೂ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಮೈಸೂರು ವಾರಿಯರ್ಸ್ 14 ರನ್ ಅಂತರದ ಸೋಲಿಗೆ ಶರಣಾಗಿದೆ.

Vijaya Karnataka Web 18 Aug 2019, 6:56 pm
ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ಎಂಟನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಶಿವಮೊಗ್ಗ ಲಯನ್ಸ್ 14 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.
Vijaya Karnataka Web mysuru-vs-shimogga


ಈ ಮೂಲಕ ಕೆಪಿಎಲ್ 8ರಲ್ಲಿ ಸತತ ಎರಡನೇ ಗೆಲುವನ್ನು ಬಾರಿಸಿದೆ. ಈ ಮುನ್ನ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದೆ.

ಇನ್ನೊಂದೆಡೆ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಮಳೆಯಿಂದಾಗಿ ಸಮಾನ ಅಂಕವನ್ನು ಹಂಚಿಕೊಂಡಿರುವ ಮೈಸೂರು, ಈ ಸೋಲಿನೊಂದಿಗೆ ಹಿನ್ನಡೆಯನ್ನು ಅನುಭವಿಸಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗಿಳಿಸಲ್ಪಟ್ಟ ಶಿಮಮೊಗ್ಗ ಲಯನ್ಸ್ ಪವನ್ ದೇಶಪಾಂಡೆ ಸಮಯೋಚಿತ ಅರ್ಧಶತಕದ ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 166 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ಆರಂಭಿಕರಾದ ನಿಹಾಲ್ ಉಲ್ಲಾಳ್ ಹಾಗೂ ಅರ್ಜುನ್ ಹೊಯ್ಸಳ ತಲಾ 28 ರನ್‌ಗಳ ಉಪಯುಕ್ತ ನೆರವನ್ನು ನೀಡಿದ್ದರು. ಈ ಮೂಲಕ ಒಂದು ಹಂತದಲ್ಲಿ 10 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು.

ಆದರೆ ನಿರಂತರ ಅಂತರಾಳದಲ್ಲಿ ವಿಕೆಟುಗಳನ್ನು ಕಳೆದುಕೊಂಡಿರುವುದು ಹಿನ್ನಡೆಗೆ ಕಾರಣವಾಯಿತು. ಆದರೆ ಆಕರ್ಷಕ ಅರ್ಧಶತಕ ಬಾರಿಸಿದ ಪವನ್ ತಂಡಕ್ಕೆ ಆಸರೆಯಾದರು. 42 ಎಸೆತಗಳನ್ನು ಎದುರಿಸಿದ ಪವನ್ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿಂದ 53 ರನ್ ಗಳಿಸಿದರು.

ಬಳಿಕ ಗುರಿ ಬೆನ್ನಟ್ಟಿದ ಮೈಸೂರಿಗೆ ಮೊದಲ ಎಸೆತದಲ್ಲೇ ನಾಯಕ ಅಭಿಮನ್ಯು ಮಿಥುನ್ ಆಘಾತ ನೀಡಿದರು. ಇದರಿಂದಾಗಿ ದೇಗ ನಿಶ್ಚಲ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡರು.

ಇಲ್ಲಿಗೆ ಮೈಸೂರು ಪತನ ನಿಲ್ಲಲಿಲ್ಲ. ನಾಯಕ ಅಮಿತ್ ವರ್ಮಾ (14) ಸೇರಿದಂತೆ ಪವರ್ ಪ್ಲೇನಲ್ಲೇ 41 ರನ್ನಿಗೆ ಪ್ರಮುಖ ಐದು ವಿಕೆಟುಗಳನ್ನು ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತು.

ಇನ್ನೊಂದೆಡೆ ಆರಂಭಿಕ ಕೃಷ್ಣಮೂರ್ತಿ ಸಿದ್ದಾರ್ಥ್ ಆಸರೆಯಾದರು. ಇವರಿಗೆ ಅನಿರುದ್ಧ ಜೋಶಿ (26) ಅವರಿಂದ ಬೆಂಬಲ ದೊರಕಿತು. ಅಲ್ಲದೆ ಆರನೇ ವಿಕೆಟ್‌ಗೆ 48 ರನ್‌ಗಳ ಜತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡವನ್ನು ಹಳಿಗೆ ಮರಳಿಸಿದರು.

ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಸಿದ್ದಾರ್ಥ್ ಫೈಟ್ ಬ್ಯಾಕ್ ಫಿಫ್ಟಿ ಸಾಧನೆ ಮಾಡಿದರು. ಆದರೆ ಕೊನೆಯ ಹಂತದಲ್ಲಿ ಸಹ ಆಟಗಾರರಿಂದ ಉತ್ತಮ ಬೆಂಬಲ ಸಿಗದೇ ನಿರಾಸೆಯನ್ನು ಅನುಭವಿಸಿದರು. ಅಂತಿಮವಾಗಿ 19.2 ಓವರ್‌ಗಳಲ್ಲಿ 152 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು.

ಕೊನೆಯವರಾಗಿ ವಿಕೆಟ್ ಒಪ್ಪಿಸಿದ ಸಿದ್ಧಾರ್ಥ್, 54 ಎಸೆತಗಳಲ್ಲಿ ಎದುರಿಸಿದ ಸಿದ್ಧಾರ್ಥ್ 10 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 77 ರನ್ ಗಳಿಸಿದರು. ಅತ್ತ ಶಿವಮೊಗ್ಗ ಪರ ಶರತ್ ಹಾಗೂ ಪ್ರದೀಪ್ ಟಿ ತಲಾ ಮೂರು ಮತ್ತು ನಾಯಕ ಅಭಿಮನ್ಯು ಮಿಥುನ್, ಹಾಗೂ ಮಂಜುನಾಥ್ ತಲಾ ಎರಡು ವಿಕೆಟುಗಳನ್ನು ಕಿತ್ತು ಮಿಂಚಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌