ಆ್ಯಪ್ನಗರ

ಶಂಕರ್‌ ತ್ರಿ ಡೈಮೆನ್ಷನಲ್‌; ರಾಯುಡು, ಪಂತ್ ಕೊಕ್‌ಗೆ ಉತ್ತರ ನೀಡದ ಕೊಹ್ಲಿ

ಅಂಬಟಿ ರಾಯುಡು ಹಾಗೂ ರಿಷಬ್ ಪಂತ್ ಅವರನ್ನು ವಿಶ್ವಕಪ್‌ಗಾಗಿನ ಭಾರತ ತಂಡದಿಂದ ಕೈಬಿಟ್ಟಿರುವುದಕ್ಕೆ ಹೆಚ್ಚಿನ ಪ್ರತಿಕ್ರಿಯೆ ನೀಡದ ನಾಯಕ ವಿರಾಟ್ ಕೊಹ್ಲಿ, 15 ಸದಸ್ಯ ಬಲದ ತಂಡದ ಆಯ್ಕೆ ಬಗ್ಗೆ ಸಂಪೂರ್ಣ ಸಂತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ.

Vijaya Karnataka Web 19 Apr 2019, 5:13 pm
ಕೋಲ್ಕತಾ: ಮುಂಬರುವ ಏಕದಿನ ವಿಶ್ವಕಪ್‌ಗಾಗಿನ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿರುವ ಪ್ರತಿಯೊಬ್ಬ ಆಟಗಾರನ ಆಯ್ಕೆ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಸಂತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅಂಬಟಿ ರಾಯುಡು ಹಾಗೂ ರಿಷಬ್ ಪಂತ್ ಅವರನ್ನು ತಂಡದಿಂದ ಹೊರಗಟ್ಟಿರುವುದರ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ.

ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂಬುದು ಸಾಕಷ್ಟು ಚರ್ಚೆಗೀಡು ಮಾಡಿತ್ತು. ಇದರಂತೆ ಕಳೆದ ಕೆಲವು ವರ್ಷಗಳಿಂದ ಅನೇಕ ಆಟಗಾರರನ್ನು ಪ್ರಯೋಗಿಸಲಾಗಿತ್ತು. ಕೊನೆಗೆ ಅಂಬಟಿ ರಾಯುಡು ಅವರನ್ನು ಕಡೆಗಣಿಸಿ ಈ ಸ್ಥಾನಕ್ಕೆ ವಿಜಯ್ ಶಂಕರ್ ಹಾಗೂ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಗಿದೆ.

ನಂ. 4 ಸಮಸ್ಯೆಯಿಂದ ಅಗ್ರ ಮೂವರು ಆಟಗಾರರ ಮೇಲೆ ಹೆಚ್ಚಿನ ಹೊರೆಯಾಗಲಿದೆಯೇ ಎಂಬುದನ್ನು ಕೇಳಿದಾಗ ಇಲ್ಲ ಖಂಡಿತವಾಗಿಯೂ ಇಲ್ಲ ಉತ್ತರವನ್ನು ಕ್ಯಾಪ್ಟನ್ ಕೊಹ್ಲಿ ನೀಡಿದ್ದಾರೆ.

ನಾವು ಅನೇಕ ಅಂಶಗಳನ್ನು ಪ್ರಯೋಗ ಮಾಡಿದ್ದೇವೆ. ಕೆಲವೊಂದು ಹೊಂದಾಣಿಕೆಗಳನ್ನು ಪರೀಕ್ಷಿಸಿದ್ದೇವೆ. ಕ್ರಮೇಣ ಆಲ್‌ರೌಂಡರ್ ವಿಜಯ್ ಶಂಕರ್ ಬಂದ ಬಳಿಕ ನಮಗೆ ಮೂರು ಡೈಮೆನ್ಷನಲ್‌ ದೊರಕಿತು. ಅವರು ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಮಾಡಬಲ್ಲರು. ಓರ್ವ ಪರಿಪೂರ್ಣ ಬ್ಯಾಟ್ಸ್‌ಮನ್ ಕೂಡಾ ಆಗಿದ್ದಾರೆ ಎಂದು ವಿವರಿಸಿದರು.

ಇದರಿಂದ ತಂಡಕ್ಕೆ ಅನೇಕ ಆಯ್ಕೆಗಳು ಲಭಿಸುತ್ತದೆ. ಇತರೆ ತಂಡಗಳಲ್ಲಿ ಇರುವಂತೆಯೇ ಅಂತಹ ಸಮತೋಲನವನ್ನು ನಾವೇಕೆ ಪಡೆಯಬಾರದು? ಹೌದು, ಇಂತಹದೊಂದು ಆಯ್ಕೆಯಿಂದ ವಿಶ್ವಕಪ್‌ ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಎಲ್ಲ ಸಮಸ್ಯೆಯನ್ನು ಬಗೆ ಹರಿಸಿದ್ದೇವೆ ಎಂದರು.

ಹಾಗಿದ್ದರೂ ಯಾವ ಆಟಗಾರ ಯಾವ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬುದನ್ನು ಬಳಿಕವಷ್ಟೇ ನಿರ್ಧರಿಸಲಿದ್ದೇವೆ. ಒಟ್ಟಾರೆಯಾಗಿ ತಂಡದ ಆಯ್ಕೆ ಬಗ್ಗೆ ಸಂಪೂರ್ಣ ಸಂತೃಪ್ತಿಯನ್ನು ಹೊಂದಿದ್ದೇವೆ ಎಂದರು.

ಈ ಮೊದಲು ವಿಶ್ವಕಪ್ ತಂಡದ ಆಯ್ಕೆ ವೇಳೆ ವಿಜಯ್‌ ಶಂಕರ್‌ ತ್ರಿ ಡೈಮೆನ್ಷನಲ್‌ ಸಾಮರ್ಥ್ಯ‌ವಿರುವ ಆಟಗಾರ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್‌ ಸಮರ್ಥನೆ ನೀಡಿದ್ದರು. ಇದಕ್ಕೆ ಆಕ್ರೋಶಗೊಂಡಿದ್ದ ರಾಯುಡು ವಿಶ್ವಕಪ್ ವೀಕ್ಷಿಸಲು ನಾನೀಗಾಗಲೇ 3ಡಿ ಗ್ಲಾಸ್‌ಗೆ ಆರ್ಡರ್‌ ಮಾಡಿದ್ದೇನೆ ಎಂದು ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದರು.

ಟೀಮ್‌ ಇಂಡಿಯಾದಲ್ಲಿ ಖಾಲಿ ಬಿದ್ದಿದ್ದ 4ನೇ ಕ್ರಮಾಂಕಕ್ಕೆ ಅಂಬಾಟಿ ರಾಯುಡು ಪ್ರಬಲ ಸ್ಪರ್ಧಿಯಾಗಿದ್ದರು. ಆದರೆ, 5 ಸದಸ್ಯರ ರಾಷ್ಟ್ರೀಯ ಆಯ್ಕೆ ಸಮಿತಿ, ಆಂಧ್ರಪ್ರದೇಶದ ಅಂಬಾಟಿ ರಾಯುಡು ಬದಲು ತಮಿಳುನಾಡಿನ ಬೌಲಿಂಗ್‌ ಆಲ್‌ರೌಂಡರ್‌ ವಿಜಯ್‌ ಶಂಕರ್‌ಗೆ ಮಣೆಹಾಕಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌