ಆ್ಯಪ್ನಗರ

ಪದಕ ಕಳೆದುಕೊಂಡರೂ ಹೃದಯ ಗೆದ್ದ ದೀಪಾ

ಸ್ಟಾರ್ ಜಿಮ್ನಾಸ್ಟ್ ದೀಪಾ ಕರ್ಮಕಾರ್ ಅಂತಿಮ ಸುತ್ತಿನಲ್ಲಿ ಪದಕ ಕಳೆದುಕೊಂಡರೂ ಭಾರತೀಯರ ಹೃದಯ ಗೆದ್ದಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 15 Aug 2016, 7:58 am
ರಿಯೊ ಡಿ ಜನೈರೊ: ಒಲಿಂಪಿಕ್ಸ್‌ಗೆ ಅರ್ಹತೆ ಹೊಂದುವ ಜತೆಗೆ ವಾಲ್ಟ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದ್ದ ಭಾರತದ ಸ್ಟಾರ್ ಜಿಮ್ನಾಸ್ಟ್ ದೀಪಾ ಕರ್ಮಕಾರ್ ಅಂತಿಮ ಸುತ್ತಿನಲ್ಲಿ ಪದಕ ಕಳೆದುಕೊಂಡರೂ ಭಾರತೀಯರ ಹೃದಯ ಗೆದ್ದಿದ್ದಾರೆ.
Vijaya Karnataka Web rio olympics dipa karmakar wins hearts india still medal less
ಪದಕ ಕಳೆದುಕೊಂಡರೂ ಹೃದಯ ಗೆದ್ದ ದೀಪಾ


ವಾಲ್ಟ್‌ ಫೈನಲ್‌ನಲ್ಲಿ 15.006 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದ ದೀಪಾ 0.150 ಅಂಕಗಳಿಂದ ಕಂಚಿನ ಪದಕದಿಂದ ವಂಚಿತರಾದರು.

ಪ್ರೊಡುನೋವಾದ ಎರಡನೇ ಪ್ರಯತ್ನದ ನಂತರ ದೀಪಾ ಎರಡನೇ ಸ್ಥಾನದಲ್ಲಿದ್ದರು, ಆದರೆ ಅಂತಿಮ ಸುತ್ತಿನಲ್ಲಿ ನಾಲ್ಕನೇ ಸ್ಥಾನಕ್ಕೆ ಇಳಿದರು. 15.966 ಅಂಕಗಳೊಂದಿಗೆ ಅಮೆರಿಕದ ಸಿಮೋನ್‌ ಬೈಲೆಸ್ ಚಿನ್ನ ಗೆದ್ದಿದ್ದಾರೆ.

ದೀಪಾ ಕರ್ಮಕಾರ್ ಜಿಮ್ನಾಸ್ಟಿಕ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತದ ಮೊದಲ ಮಹಿಳೆ. ಜಿಮ್ನಾಸ್ಟಿಕ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ದೀಪಾ ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಪ್ರೊಡುನೋವಾ ವಾಲ್ಟ್ ಸ್ಪರ್ಧೆಯಲ್ಲಿ ಯಶಸ್ವಿ ಪ್ರದರ್ಶನ ನೀಡಿದ ಬಳಿಕ ದೀಪಾ ಫೈನಲ್‌ಗೆ ಅರ್ಹತೆ ಗಳಿಸಿದ್ದರು. ದೀಪಾ ಹೊರತುಪಡಿಸಿ ಇಡೀ ವಿಶ್ವದಲ್ಲೇ ಕೇವಲ ನಾಲ್ಕು ಮಹಿಳಾ ಸ್ಪರ್ಧಿಗಳು ಮಾತ್ರ ಅತ್ಯಂತ ಕಠಿಣ ಕಸರತ್ತಾಗಿರುವ ಈ ವಾಲ್ಟ್ ವಿಭಾಗದಲ್ಲಿ ಯಶಸ್ಸು ಗಳಿಸಿದ್ದಾರೆ.

‘ಪ್ರೊಡುನೊವಾ ವಾಲ್ಟ್’?

ರಷ್ಯಾದ ಜಿಮ್ನಾಸ್ಟ್ ಎಲೆನಾ ಪ್ರೊಡುನೋವಾ 1999ರಲ್ಲಿ ಮೊದಲ ಬಾರಿ ವಾಲ್ಟ್ ನಲ್ಲಿ ಅದ್ಭುತ ಕಸರತ್ತು ಪ್ರದರ್ಶಿಸಿದ್ದರು. ಅದುವರೆಗೂ ಯಾರು ಇಂಥದ್ದೊಂದು ಸಾಹಸವನ್ನು ಯಶಸ್ವಿಯಾಗಿ ಮಾಡಿರಲಿಲ್ಲ. ಆದ್ದರಿಂದಲೇ ಈ ಕಸರತ್ತಿಗೆ ಪ್ರೊಡುನೋವಾ ಎಂದೇ ಕರೆಯಲಾಯಿತು. ದೂರದಿಂದ ಓಡಿ ಬಂದು ಎರಡೂ ಕೈಗಳನ್ನು ವಾಲ್ಟ್ ಮೇಲೆ ಒತ್ತಿ ನಂತರ ಕೈಗಳನ್ನು ಸ್ಪ್ರಿಂಗ್‌ನಂತೆ ಕೆಲಸ ಮಾಡಿ ಮೇಲಕ್ಕೆ ಜಿಗಿದು, ಮೂರುವರೆ ಸಮರ್‌ಸಾಲ್ಟ್ ಹೊಡೆದು, ನೆಲದ (ಮ್ಯಾಟ್) ಮೇಲೆ ಸರಿಯಾಗಿ ನಿಲ್ಲುವುದಾಗಿದೆ. ನೆಲಕ್ಕೆ ಬೀಳುವ ವೇಳೆ ದೇಹವನ್ನು ಸಮತೋಲನ ಕಾಯ್ದುಕೊಂಡು ನೆಲದ ಮೇಲೆ ನಿಲ್ಲಬೇಕು. ಸ್ವಲ್ಪ ನಿಯಂತ್ರಣ ತಪ್ಪಿದರೂ ಕುತ್ತಿಗೆ ಮತ್ತು ಬೆನ್ನುಮೂಳೆ ಮುರಿದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ ಸ್ಪರ್ಧಿಯು ಪಾರ್ಶ್ವವಾಯುವಿಗೂ ಗುರಿಯಾಗುವ ಸಾಧ್ಯತೆ ಇರುವ ಕಾರಣ ಇದನ್ನು ‘ವಾಲ್ಟ್ ಆಫ್ ಡೆತ್’ ಎಂತಲೂ ಕರೆಯುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌