ಆ್ಯಪ್ನಗರ

ಸೆಮೀಸ್‌ನಲ್ಲಿ ಫೆಡರರ್‌ ಕನಸು ಭಗ್ನ

ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ನಡೆದ ಮ್ಯಾರಥಾನ್‌ ಹೋರಾಟದಲ್ಲಿ ಕೆನಡಾದ ಯುವ ಆಟಗಾರ ಮಿಲೋಸ್‌ ರವೋನಿಕ್‌, ಸ್ವಿಸ್‌ನ ತಾರೆ ರೋಜರ್‌ ಫೆಡರರ್‌ ಅವರ 18ನೇ ಗ್ರ್ಯಾನ್‌ ಸ್ಪ್ಯಾಮ್‌ ಗೆಲುವಿನ ಕನಸನ್ನು ಭಗ್ನ ಪಡಿಸಿದರು.

ಏಜೆನ್ಸೀಸ್ 9 Jul 2016, 4:00 am

5 ಸೆಟ್‌ಗಳ ಕದನ ಗೆದ್ದ ರವೋನಿಕ್‌ | ಮಹಿಳಾ ಡಬಲ್ಸ್‌ ಫೈನಲ್‌ಗೆ ವಿಲಿಯಮ್ಸ್‌ ಸೋದರಿಯರು

ಲಂಡನ್‌: ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ನಡೆದ ಮ್ಯಾರಥಾನ್‌ ಹೋರಾಟದಲ್ಲಿ ಕೆನಡಾದ ಯುವ ಆಟಗಾರ ಮಿಲೋಸ್‌ ರವೋನಿಕ್‌, ಸ್ವಿಸ್‌ನ ತಾರೆ ರೋಜರ್‌ ಫೆಡರರ್‌ ಅವರ 18ನೇ ಗ್ರ್ಯಾನ್‌ ಸ್ಪ್ಯಾಮ್‌ ಗೆಲುವಿನ ಕನಸನ್ನು ಭಗ್ನ ಪಡಿಸಿದರು.

ಆಲ್‌ ಇಂಗ್ಲೆಂಡ್‌ ಕ್ಲಬ್‌ನ ಸೆಂಟರ್‌ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಒತ್ತಡ ಮೆಟ್ಟಿನಿಂತ 25 ವರ್ಷದ ರವೋನಿಕ್‌, 6-3, 6-7(3/7), 3-6, 7-5, 6-3 ಅಂತರದ ಸೆಟ್‌ಗಳಿಂದ 17 ಗ್ರ್ಯಾನ್‌ ಸ್ಪ್ಯಾಮ್‌ಗಳ ಒಡೆಯ ಫೆಡರರ್‌ಗೆ ಸೋಲುಣಿಸಿದರು. ಇದರೊಂದಿಗೆ 34 ವರ್ಷದ ಅನುಭವಿ ಆಟಗಾರ ಫೆಡರರ್‌ ಅವರ ವಿಶ್ವ ದಾಖಲೆಯ 8ನೇ ವಿಂಬಲ್ಡನ್‌ ಕಿರೀಟದ ಕನಸು ನುಚ್ಚು ನೂರಾಯಿತು.

ಇದೇ ವೇಳೆ ಮಹಿಳಾ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಸೆರೆನಾ ಮತ್ತು ವೀನಸ್‌ ವಿಲಿಯಮ್ಸ್‌ ಸೋದರಿಯರು, 8ನೇ ಶ್ರೇಯಾಂಕಿತ ಜೋಡಿ ಜರ್ಮನಿಯ ಜೂಲಿಯಾ ಗೋರ್ಜಸ್‌ ಮತ್ತು ಜೆಕ್‌ ಗಣರಾಜ್ಯದ ಕ್ಯಾರೊಲೀನಾ ಪ್ಲಿಸ್ಕೋವಾ ಜೋಡಿಗೆ 7-6(7/3), 6-4 ಅಂತರದ ಸೆಟ್‌ಗಳಿಂದ ಸೋಲುಣಿಸಿ ಫೈನಲ್‌ ಪ್ರವೇಶಸಿದ್ದಾರೆ.

ಮೊದಲ ಸೆಟ್‌ನಲ್ಲಿ ಡಬಲ್‌ ಫಾಲ್ಟ್‌

ಉತ್ತಮ ಸರ್ವಿಸ್‌ಗಳ ಮೂಲಕ ಪಂದ್ಯ ಆರಂಭಿಸಿದ ರೋಜರ್‌ ಫೆಡರ್‌, ನಾಲ್ಕನೇ ಗೇಮ್‌ನ ಬ್ರೇಕ್‌ ಪಾಯಿಂಟ್‌ನಲ್ಲಿ ತೀರಾ ಅಪರೂಪ ಎಂಬಂತೆ ಡಬಲ್‌ ಫಾಲ್ಟ್‌ ಎಸೆಗಿದ್ದು ಮೊದಲ ಸೆಟ್‌ ಹಿನ್ನಡೆಗೆ ಕಾರಣವಾಯಿತು. ರೋಜರ್‌ ಸರ್ವ್‌ ಮುರಿದು ಆತ್ಮವಿಶ್ವಾಸ ಹೆಚ್ಚಿಸಿಕೊಂಡ ರವೋನಿಕ್‌ 4-1ರ ಮುನ್ನಡೆ ಪಡೆದರಲ್ಲದೆ ಅಂತಿಮವಾಗಿ 6-3 ಗೇಮ್‌ಗಳಿಂದ ಮೊದಲ ಸೆಟ್‌ ವಶ ಪಡಿಸಿಕೊಂಡರು.

ಟೈ ಬ್ರೇಕರ್‌ನಲ್ಲಿ ಫೆಡ್‌ ಎಕ್ಸ್‌ಪ್ರೆಸ್‌

ಸಮಬಲದ ಹೋರಾಟದಿಂದ ಕೂಡಿದ್ದ 2ನೇ ಸೆಟ್‌ನಲ್ಲಿ ಇಬ್ಬರೂ ಆಟಗಾರರು ಸರ್ವ್‌ ಮುರಿಯುವಲ್ಲಿ ವಿಫಲರಾದ್ದರಿಂದ 6-6 ಗೇಮ್‌ಗಳಿಂದ ಸೆಟ್‌ ಟೈ ಬ್ರೇಕರ್‌ ಕಡೆಗೆ ಸಾಗಿತು. ಮೊದಲ ಸೆಟ್‌ನಲ್ಲಿ ಮಾಡಿದ ತಪ್ಪನ್ನು ಸರಿಪಡಿಸಿಕೊಂಡಿದ್ದ ರೋಜರ್‌, 2ನೇ ಸೆಟ್‌ನ ನಿರ್ಣಯಕ ಟೈ ಬ್ರೇಕರ್‌ನಲ್ಲಿ ತಮ್ಮ ಎಕ್ಸ್‌ಪ್ರೆಸ್‌ ಸರ್ವ್‌ಗಳಿಂದ ಏಸ್‌ಗಳನ್ನು ಸಿಡಿಸಿ 7/3 ಅಂಕಗಳಿಂದ 1-1 ಸೆಟ್‌ಗಳ ಸಮಬಲ ತಂದುಕೊಳ್ಳುವಲ್ಲಿ ಸಫಲರಾದರು.

ರೋಜರ್‌ಗೆ ಮೊದಲ ಬ್ರೇಕ್‌

ಮೂರನೇ ಸೆಟ್‌ನಲ್ಲಿ ಪಂದ್ಯದ ಮೊದಲ ಬ್ರೇಕ್‌ ಪಾಯಿಂಟ್‌ಗಳಿಸುವಲ್ಲಿ ಸಫಲರಾದ ಸ್ವಿಸ್‌ ಮಾಸ್ಟರ್‌ ರೋಜರ್‌ ಫೆಡರರ್‌, 4-3ರಲ್ಲಿ ಮುನ್ನಡೆ ಪಡೆದು ಬಳಿಕ ತಮ್ಮ 2 ಸರ್ವಿಸ್‌ ಗೇಮ್‌ಗಳಲ್ಲಿ ಸತತ ಏಸ್‌ ಮತ್ತು ಮೊದಲ ಸರ್ವಿಸ್‌ ಅಂಕಗಳಿಂದ ಮಿಂಚಿ 6-4ರಲ್ಲಿ ಸೆಟ್‌ ವಶಪಡಿಸಿಕೊಂಡು 2-1 ಸೆಟ್‌ಗಳ ಮೇಲುಗೈ ಸಂಪಾದಿಸಿದರು. ಆದರೆ, 4ನೇ ಸೆಟ್‌ನಲ್ಲಿ ಸಿಕ್ಕ 3 ಬ್ರೇಕ್‌ ಪಾಯಿಂಟ್‌ ಅವಕಾಶಗಳಲ್ಲಿ ಎಡವಿದ ರೋಜರ್‌, ಸೆಟ್‌ನ ಕೊನೆಯ ಗೇಮ್‌ ಕೈಚೆಲ್ಲಿದರಿಂದ 5-7ರಲ್ಲಿ ಸೆಟ್‌ ಗೆದ್ದ ರವೋನಿಕ್‌ ಪಂದ್ಯವನ್ನು 5ನೇ ಹಾಗೂ ಅಂತಿಮ ಸೆಟ್‌ಗೆ ಕರೆದೊಯ್ದರು.

ಮಿಂಚಿನ ಸರ್ವ್‌ಗಳ ರವೋನಿಕ್‌

ಗಂಟೆಗೆ 225 ಕಿ.ಮೀ ವೇಗದ ಸರಾಸರಿಯಲ್ಲಿ ಸರ್ವ್‌ ಮಾಡುತ್ತಿದ್ದ ಮಿಲೋಸ್‌ ರವೋನಿಕ್‌, ಅಂತಿಮ ಹಾಗೂ ನಿರ್ಣಾಯಕ ಸೆಟ್‌ನ 4ನೇ ಗೇಮ್‌ನಲ್ಲಿ ಫೆಡರರ್‌ ಸರ್ವ್‌ ಮುರಿಯುವಲ್ಲಿ ಯಶಸ್ವಿಯಾದರು. ಬಳಿಕ ರೋಜರ್‌ಗೆ ತಿರುಗೇಟು ನೀಡಲು ಯಾವುದೇ ಅವಕಾಶ ನೀಡದೆ ಬಿರುಸಿನ ಸರ್ವ್‌ಗಳನ್ನು ಬಳಕೆಗೆ ತಂದು 3 ಗಂಟೆ 25 ನಿಮಿಷಗಳಲ್ಲಿ ಚೊಚ್ಚಲ ವಿಂಬಲ್ಡನ್‌ ಫೈನಲ್‌ ಅರ್ಹತೆಯನ್ನು ತಮ್ಮದಾಗಿಸಿಕೊಂಡರು.

Vijaya Karnataka Web 2016 wimbledon milos raonic beats roger federer to reach final
ಸೆಮೀಸ್‌ನಲ್ಲಿ ಫೆಡರರ್‌ ಕನಸು ಭಗ್ನ


**

ಸೆರೆನಾ-ಕೆರ್ಬರ್‌ ಕದನ ಇಂದು

ಲಂಡನ್‌: ವಿಂಬಲ್ಡನ್‌ ಮಹಿಳಾ ಸಿಂಗಲ್ಸ್‌ನ ಫೈನಲ್‌ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಹಾಲಿ ಆಸ್ಪ್ರೇಲಿಯಾ ಓಪನ್‌ ಚಾಂಪಿಯನ್‌ ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಅವರ ಸವಾಲು ಎದುರಿಸಲಿದ್ದಾರೆ.

ವೃತ್ತಿ ಬದುಕಿನ 22ನೇ ಗ್ರ್ಯಾನ್‌ ಸ್ಪ್ಯಾಮ್‌ ಗೆಲುವಿನ ಲೆಕ್ಕಾಚಾರದಲ್ಲಿರುವ 34 ವರ್ಷದ ಸೆರೆನಾ, ಆಲ್‌ ಇಂಗ್ಲೆಂಡ್‌ ಟೆನಿಸ್‌ ಕ್ಲಬ್‌ನ ಸೆಂಟರ್‌ ಕೋರ್ಟ್‌ನಲ್ಲಿ ಶನಿವಾರ ಯಶಸ್ಸು ಕಂಡರೆ ಜರ್ಮನಿಯ ದಂತಕತೆ ಸ್ಟೆಫಿ ಗ್ರಾಫ್‌ ಅವರ ಒಟ್ಟು ಗ್ರ್ಯಾನ್‌ಸ್ಪ್ಯಾಮ್‌ ಗೆಲುವಿನ ದಾಖಲೆಗಳನ್ನು ಸರಿಗಟ್ಟಲಿದ್ದಾರೆ.

ಆದರೆ, ಸಾಲಿನ ಮೊದಲ ಗ್ರಾ ್ಯನ್‌ ಸ್ಪ್ಯಾಮ್‌ ಟೂರ್ನಿಯಾದ ಆಸ್ಪ್ರೇಲಿಯಾ ಓಪನ್‌ನಲ್ಲಿ ಸೆರೆನಾಗೆ ಆಘಾತ ನೀಡಿ ನೂತನ ಚಾಂಪಿಯನ್‌ ಆಗಿ ಹೊರಹೊಮ್ಮಿದ ಜರ್ಮನಿಯ ತಾರೆ 28 ವರ್ಷದ ಏಂಕಲಿಕ್‌ ಕೆರ್ಬರ್‌, ಇದೀಗ ಮತ್ತೊಮ್ಮೆ ಅಂಥದ್ದೇ ಪ್ರದರ್ಶನ ಹೊರತರುವ ವಿಶ್ವಾಸದಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌