ಆ್ಯಪ್ನಗರ

ವಾರಿಯರ್ಸ್‌ಗೆ ಬೆಚ್ಚಿದ ಯೋಧಾ

ಬೆಂಗಾಲ್‌ ತಂಡಕ್ಕೆ 20 ಅಂಕಗಳ ಭರ್ಜರಿ ಜಯ ವಿಕ ಸುದ್ದಿಲೋಕ ನಾಗ್ಪುರ ವಿನೋದ್‌ ಕುಮಾರ್‌, ಜಾಂಗ್‌ ಕುನ್‌ ಲೀ ಮತ್ತು ಮಣಿಂದರ್‌ ಸಿಂಗ್‌ ಅವರ ಅಮೋಘ ಆಟದ ನೆರವಿಂದ ಕಂಗೊಳಿಸಿದ ...

ವಿಕ ಸುದ್ದಿಲೋಕ 7 Aug 2017, 4:00 am

ಬೆಂಗಾಲ್‌ ತಂಡಕ್ಕೆ 20 ಅಂಕಗಳ ಭರ್ಜರಿ ಜಯ

ನಾಗ್ಪುರ : ವಿನೋದ್‌ ಕುಮಾರ್‌, ಜಾಂಗ್‌ ಕುನ್‌ ಲೀ ಮತ್ತು ಮಣಿಂದರ್‌ ಸಿಂಗ್‌ ಅವರ ಅಮೋಘ ಆಟದ ನೆರವಿಂದ ಕಂಗೊಳಿಸಿದ ಬೆಂಗಾಲ್‌ ವಾರಿಯರ್ಸ್‌ ಪ್ರೊ ಕಬಡ್ಡಿ ಲೀಗ್‌ ಐದನೇ ಆವೃತ್ತಿಯ ತನ್ನ ಎರಡನೇ ಪಂದ್ಯದಲ್ಲಿ ಯು.ಪಿ. ಯೋಧಾ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು.

ಇಲ್ಲಿನ ಮಂಕಾಪುರ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬಿ ವಲಯದ ಪಂದ್ಯದಲ್ಲಿ ವಾರಿಯರ್ಸ್‌ 40-20 ಅಂಕಗಳಿಂದ ಸ್ಟಾರ್‌ ರೇಡರ್‌ ನಿತಿನ್‌ ತೋಮರ್‌ ಬಳಗವನ್ನು ಬಗ್ಗು ಬಡಿದು, ಪ್ರಸಕ್ತ ಲೀಗ್‌ನಲ್ಲಿ ಅತ್ಯಧಿಕ ಅಂತರದ ದಾಖಲೆಯ ಗೆಲುವು ತನ್ನದಾಗಿಸಿಕೊಂಡಿತು. ಇದರೊಂದಿಗೆ ಬೆಂಗಾಲ್‌ ಲೀಗ್‌ನಲ್ಲಿ ಸತತ ಎರಡನೇ ಜಯ ದಾಖಲಿಸಿತು. ಈ ಮೊದಲ ತೆಲುಗು ಟೈಟನ್ಸ್‌ ವಿರುದ್ಧ ಶುಭಾರಂಭ ಮಾಡಿತ್ತು.

ಅತ್ತ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಲೀಗ್‌ ಪದಾರ್ಪಣೆ ತಂಡ ಯು.ಪಿ. ಯೋಧಾ, ಮೊದಲ ಸೋಲಿನ ಕಹಿ ಅನುಭವಿಸಿತು. ಟೈಟನ್ಸ್‌ ಮತ್ತು ಬುಲ್ಸ್‌ ವಿರುದ್ಧ ಪೂರ್ಣ ಅಂಕ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದ ಯೋಧಾ, ವಾರಿಯರ್ಸ್‌ ವಿರುದ್ಧ ಹಿಂದಿನ ಪ್ರದರ್ಶನವನ್ನು ಪುನರಾವರ್ತಿಸುವಲ್ಲಿ ವೈಫಲ್ಯ ಕಂಡಿತು. ಪಂದ್ಯದ ಮೊದಲಾರ್ಧದಲ್ಲಿಯೇ ಎರಡು ಬಾರಿ ಯೋಧಾ ತಂಡವನ್ನು ಕಟ್ಟಿಹಾಕಿ ಪಾರಮ್ಯ ಮೆರೆದ ಬೆಂಗಾಲ್‌, ದ್ವಿತೀಯಾರ್ಧದ 30ನೇ ನಿಮಿಷದಲ್ಲೂ ಎದುರಾಳಿ ತಂಡವನ್ನು ಆಲೌಟ್‌ ಮಾಡುವ ಮೂಲಕ ಒಟ್ಟು ಮೂರು ಬಾರಿ ಲೋನಾ ಅಂಕ ಪಡೆಯಿತು.

ಬೆಂಗಾಲ್‌ ವಾರಿಯರ್ಸ್‌ ಪರ ವಿನೋದ್‌ ಕುಮಾರ್‌(8), ಇರಾನ್‌ ಆಟಗಾರ ಜಾಂಗ್‌ ಕುನ್‌ ಲೀ(7) ಮತ್ತು ಮಣಿಂದರ್‌ ಸಿಂಗ್‌ (6) ರೇಡಿಂಗ್‌ ಮತ್ತು ಟ್ಯಾಕಲ್‌ನಲ್ಲಿ ಮಿಂಚಿನ ಸಂಚಲನ ಮೂಡಿಸಿದರು. ಯು.ಪಿ. ಯೋಧಾ ಪರ ತನ್ನ ಹಿಂದಿನ ಎರಡು ಪಂದ್ಯಗಳಲ್ಲಿ ಆರ್ಭಟಿಸಿದ್ದ ನಿತಿನ್‌ ತೋಮರ್‌ (1), ಜೀವ ಕುಮಾರ್‌ (2) ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲರಾದರು. ಆದಾಗ್ಯೂ ಸುರೇಂದರ್‌ ಸಿಂಗ್‌ ಮತ್ತು ರಾಜೇಶ್‌ ನರ್ವಾಲ್‌ ಕ್ರಮವಾಗಿ 5 ಮತ್ತು 3 ಅಂಕ ಗಳಿಸಿ ತಂಡದ ಸೋಲಿನ ಅಂತರವನ್ನು ತಗ್ಗಿಸಿದರು.

Vijaya Karnataka Web bengal warriors beat up yoddha
ವಾರಿಯರ್ಸ್‌ಗೆ ಬೆಚ್ಚಿದ ಯೋಧಾ

ಪ್ರಥಮಾರ್ಧದಲ್ಲಿ ಬೆಂಗಾಲ್‌ ಪಾರಮ್ಯ

ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ರೇಡಿಂಗ್‌ ಮತ್ತು ಟ್ಯಾಕಲ್‌ ಮೂಲಕ ಆರ್ಭಟಿಸಿದ ಬೆಂಗಾಲ್‌ ವಾರಿಯರ್ಸ್‌, ಉತ್ತರಾರ್ಧಕ್ಕೆ 22-8ರಲ್ಲಿ ಮೇಲುಗೈ ಕಾಯ್ದುಕೊಂಡಿತು. ಮೊದಲು ಖಾತೆ ತೆರೆದ ವಾರಿಯರ್ಸ್‌, ಕೇವಲ 8 ನಿಮಿಷದಲ್ಲಿ ಯೋಧಾ ತಂಡದ ಅಂಗಣ ಖಾಲಿ ಮಾಡಿಸಿ 11-2ರಲ್ಲಿ ಹಿಡಿತ ಸಾಧಿಸಿತು. ಈ ಹಂತದಲ್ಲಿ ಪುಟಿದೇಳುವ ಯತ್ನ ಮಾಡಿದ ಯೋಧಾ ಹಲವು ಪ್ರಮಾದಗಳನ್ನು ಎಸೆಗಿ ಎದುರಾಳಿಗೆ ಅಂಕ ಬಿಟ್ಟುಕೊಟ್ಟಿತು. ಮೊದಲಾರ್ಧದ ಅಂತ್ಯಕ್ಕೆ ಒಂದೂವರೆ ನಿಮಿಷ ಬಾಕಿ ಇರುವಾಗ ಮತ್ತೊಮ್ಮೆ ಯೋಧಾ ತಂಡವನ್ನು ಆಲೌಟ್‌ ಮಾಡಿದ ಬೆಂಗಾಲ್‌ ತಂಡ 21-6ರಲ್ಲಿ ಮುನ್ನಡೆ ಗಳಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌