ಆ್ಯಪ್ನಗರ

ಸೋಲಿನಿಂದ ಪಾರಾದ ಪ್ಯಾಂಥರ್ಸ್‌

ಅಂತಿಮ ಕ್ಷ ಣದಲ್ಲಿ ಅಬ್ಬರಿಸಿದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ, ಪ್ರೊ ಕಬಡ್ಡಿ ಲೀಗ್‌ 5ನೇ ಆವೃತ್ತಿಯ ಹರಿಯಾಣ ಸ್ಟೀಲರ್ಸ್‌ ವಿರುದ್ಧದ ಪಂದ್ಯವನ್ನು ಟೈಗೊಳಿಸುವಲ್ಲಿ ಯಶಸ್ವಿಯಾಗಿದೆ.

Agencies 15 Sep 2017, 9:32 am

ಹರಿಯಾಣ ಸ್ಟೀಲರ್ಸ್‌ ವಿರುದ್ಧದ ಪಂದ್ಯ 27-27ರಲ್ಲಿ ಪಂದ್ಯ ಸಮಬಲ

ಸೋನೆಪತ್‌: ಅಂತಿಮ ಕ್ಷ ಣದಲ್ಲಿ ಅಬ್ಬರಿಸಿದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ, ಪ್ರೊ ಕಬಡ್ಡಿ ಲೀಗ್‌ 5ನೇ ಆವೃತ್ತಿಯ ಹರಿಯಾಣ ಸ್ಟೀಲರ್ಸ್‌ ವಿರುದ್ಧದ ಪಂದ್ಯವನ್ನು ಟೈಗೊಳಿಸುವಲ್ಲಿ ಯಶಸ್ವಿಯಾಗಿದೆ.

ಇಲ್ಲಿನ ಮೋತಿಲಾಲ್‌ ನೆಹರೂ ಕ್ರೀಡಾ ಶಾಲೆ ಮೈದಾನದಲ್ಲಿ ಗುರುವಾರ ನಡೆದ 'ಎ' ಜೋನ್‌ನ ಪಂದ್ಯ 27-27ರಲ್ಲಿ ಸಮಬಲಗೊಂಡಿತು. 35 ನಿಮಿಷಗಳ ಅಂತ್ಯಕ್ಕೆ 24-19ರ ಮುನ್ನಡೆಯೊಂದಿಗೆ ಗೆಲುವಿನತ್ತ ಹೆಜ್ಜೆ ಹಾಕಿದ್ದ ಸ್ಟೀಲರ್ಸ್‌ಗೆ ಕೊನೆಯ 5 ನಿಮಿಷಗಳಲ್ಲಿ ಪ್ಯಾಂಥರ್ಸ್‌ ತಿರುಗೇಟು ನೀಡಿತು. 36ನೇ ನಿಮಿಷದಲ್ಲಿ ಆಲ್‌ಔಟ್‌ ಪಾಯಿಂಟ್ಸ್‌ ಗಿಟ್ಟಿಸಿದ ಜೈಪುರ 25-25ರಲ್ಲಿ ಮರು ಹೋರಾಟ ಸಂಘಟಿಸಿ ಅಂತಿಮವಾಗಿ ಕೈತಪ್ಪಿ ಹೋಗುತ್ತಿದ್ದ ಪಂದ್ಯವನ್ನು ಟೈಗೊಳಿಸುವಲ್ಲಿ ಯಶಸ್ಸು ಕಂಡಿತು.

ಇದರೊಂದಿಗೆ ಉಭಯ ತಂಡಗಳು ತಲಾ 3 ಅಂಕ ಹಂಚಿಕೊಂಡವು. ಈ ಮೂಲಕ ತವರು ಚರಣದಲ್ಲಿ ತಲಾ ಎರಡು ಗೆಲುವು-ಟೈ-ಸೋಲಿನ ಫಲಿತಾಂಶ ಕಂಡ ಸ್ಟೀಲರ್ಸ್‌ 'ಎ' ಜೋನ್‌ನಲ್ಲಿ ಅಗ್ರಸ್ಥಾನಕ್ಕೇರಿತು.

ಹರಿಯಾಣ ಸ್ಟೀಲರ್ಸ್‌ ಪರ ದೀಪಕ್‌ ಕುಮಾರ್‌ ದಹಿಯಾ 7 ರೇಡ್‌ ಪಾಯಿಂಟ್‌ಗಳೊಂದಿಗೆ ಮತ್ತೊಮ್ಮೆ ಮಿಂಚಿದರು. ಪಿಂಕ್‌ ಪ್ಯಾಂಥರ್ಸ್‌ ಪರ ಯುವ ಆಲ್‌ರೌಂಡರ್‌ ನಿತಿನ್‌ ರಾವಲ್‌ 11 ರೇಡ್‌ ಪಾಯಿಂಟ್ಸ್‌ ಮತ್ತು 1 ಟ್ಯಾಕಲ್‌ ಪಾಯಿಂಟ್‌ ಸಹಿತ ಪಂದ್ಯದಲ್ಲಿ ಒಟ್ಟು 12 ಅಂಕ ಗಳಿಸಿ ಜೈಪುರ ತಂಡದ ತಿರುಗೇಟಿಗೆ ಕಾರಣರಾದರು. ಪ್ರಸಕ್ತ ಸಾಲಿನ ರಾಂಚಿ ಚರಣದ ಪಂದ್ಯಗಳು ಶುಕ್ರವಾರ ಆರಂಭವಾಗಲಿವೆ.

ಟ್ಯಾಕಲ್‌ನಲ್ಲಿ ಎಡವಿದ ಜೈಪುರ

ವಿಶ್ವದ ಅಗ್ರಮಾನ್ಯ ಆಲ್‌ರೌಂಡರ್‌ ಮಂಜೀತ್‌ ಚಿಲಾರ್‌ ತಂಡಕ್ಕೆ ಮರಳಿದರೂ ಪ್ರಥಮಾರ್ಧದಲ್ಲಿ ಜೈಪುರ ತಂಡಕ್ಕೆ ಕನಿಷ್ಠ ಒಂದು ಟ್ಯಾಕಲ್‌ ಪಾಯಿಂಟ್‌ ಗಳಿಸಲು ಸಾಧ್ಯವಾಗಲಿಲ್ಲ. ಭರ್ಜರಿ ರೇಡ್‌ಗಳಿಂದ ಪ್ಯಾಂಥರ್ಸ್‌ ಡಿಫೆಂಡರ್‌ಗಳನ್ನು ಕಂಗೆಡಿಸಿದ ಹರಿಯಾಣ ರೇಡರ್‌ಗಳು ತಂಡದ ಮೇಲುಗೈಗೆ ಕಾರಣರಾದರು. 15ನೇ ನಿಮಿಷ ಜೈಪುರ ತಂಡವನ್ನು ಮೊದಲ ಬಾರಿ ಆಲ್‌ಔಟ್‌ ಮಾಡಿದ ಸ್ಟೀಲರ್ಸ್‌ 14-7ರ ಮುನ್ನಡೆ ಪಡೆಯಿತು. ಪ್ರಥಮಾರ್ಧದ ಕೊನೆಯವರೆಗೂ ಮುನ್ನಡೆಯನ್ನು ಉಳಿಸಿಕೊಂಡ ಹರಿಯಾಣ ತಂಡ , ಮೊದಲ ಅವಧಿಯ ಅಂತ್ಯಕ್ಕೆ 17-9ರ ಮುನ್ನಡೆಯೊಂದಿಗೆ ಪಾರಮ್ಯ ಮೆರೆಯಿತು.

ಐದು ಪಂದ್ಯಗಳ ನಂತರ ಚಿಲಾರ್‌ ಕಣಕ್ಕೆ

ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡದ ನಾಯಕ ಹಾಗೂ ಸ್ಟಾರ್‌ ಆಲ್‌ರೌಂಡರ್‌ ಮಂಜೀತ್‌ ಚಿಲಾರ್‌, ಐದು ಪಂದ್ಯಗಳ ವಿಶ್ರಾಂತಿಯ ಬಳಿಕ ಅಖಾಡಕ್ಕಿಳಿದರು. ಆ.18ರಂದು ನಡೆದ ಬೆಂಗಳೂರು ಬುಲ್ಸ್‌ ವಿರುದ್ಧದ ಪಂದ್ಯದ ನಂತರ ಚಿಲಾರ್‌ ಗಾಯದ ಕಾರಣ ಐದು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಮಂಜೀತ್‌ ಚಿಲಾರ್‌ ಅನುಪಸ್ಥಿತಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಜೈಪುರ 3ರಲ್ಲಿ ಗೆಲುವು ಸಾಧಿಸಿ 2ರಲ್ಲಿ ಸೋತಿತ್ತು.

ಲೆಫ್ಟ್‌-ರೈಟ್‌ ಜೋಡಿಗೆ ವಿಶ್ರಾಂತಿ

ಹರಿಯಾಣ ಚರಣದ ಅಂತಿಮ ಪಂದ್ಯದಲ್ಲಿ ಲೆಫ್ಟ್‌-ರೈಟ್‌ ಕಾರ್ನರ್‌ನ ಸ್ಟಾರ್‌ ಜೋಡಿಯಾದ ಸುರೇಂದರ್‌ ನಾಡಾ ಮತ್ತು ಮೋಹಿತ್‌ ಚಿಲಾರ್‌ಗೆ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಹರಿಯಾಣ ಸ್ಟೀಲರ್ಸ್‌ ಸಾರಥಿ ಸುರೇಂದರ್‌ ನಾಡಾ ಮತ್ತು ಜೈಪುರ ಪಿಂಕ್‌ ಪ್ಯಾಂಥರ್ಸ್‌ ಕ್ಯಾಪ್ಟನ್‌ ಮಂಜೀತ್‌ ಚಿಲಾರ್‌ ಅವರ ನಡುವಿನ ಜಿದ್ದಾಜಿದ್ದಿಯನ್ನು ವೀಕ್ಷಿಸುವ ಅವಕಾಶದಿಂದ ಕಬಡ್ಡಿ ಪ್ರಿಯರು ವಂಚಿತರಾದರು. ಪ್ರೊ ಕಬಡ್ಡಿಯಲ್ಲಿ ಈ ಇಬ್ಬರು ಆಟಗಾರರು ಸಾಂಪ್ರದಾಯಿಕ ಎದುರಾಳಿಗಳಾಗಿದ್ದಾರೆ. ನಾಯಕ ನಾಡಾ ಅನುಪಸ್ಥಿತಿಯಲ್ಲಿ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಅನುಭವಿ ಆಟಗಾರ ವಜೀರ್‌ ಸಿಂಗ್‌ ಮುನ್ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌