ಆ್ಯಪ್ನಗರ

ಕೆರ್ಬರ್‌, ಸೆರೆನಾ ಫೈನಲ್‌ಗೆ

ವಿಶ್ವದ ಮಾಜಿ ನಂ.1 ಆಟಗಾರ್ತಿಯರಾದ ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಮತ್ತು ಅಮೆರಿಕದ ಸೆರೆನಾ ವಿಲಿಯಮ್ಸ್‌ ಇಲ್ಲಿ ನಡೆಯುತ್ತಿರುವ ವಿಂಬಲ್ಡನ್‌ ಗ್ರಾನ್‌ ಸ್ಪ್ಯಾಮ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಫೈನಲ್‌ ತಲುಪಿದ್ದು, ಶನಿವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪೈಪೋಟಿ ನಡೆಸಲಿದ್ದಾರೆ.

Vijaya Karnataka 13 Jul 2018, 10:38 am
ಲಂಡನ್‌: ವಿಶ್ವದ ಮಾಜಿ ನಂ.1 ಆಟಗಾರ್ತಿಯರಾದ ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಮತ್ತು ಅಮೆರಿಕದ ಸೆರೆನಾ ವಿಲಿಯಮ್ಸ್‌ ಇಲ್ಲಿ ನಡೆಯುತ್ತಿರುವ ವಿಂಬಲ್ಡನ್‌ ಗ್ರಾನ್‌ ಸ್ಪ್ಯಾಮ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಫೈನಲ್‌ ತಲುಪಿದ್ದು, ಶನಿವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪೈಪೋಟಿ ನಡೆಸಲಿದ್ದಾರೆ.
Vijaya Karnataka Web serena-williams-01


ಇಲ್ಲಿನ ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಗುರುವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಮಿಂಚಿದ 2016ರ ರನ್ನರ್‌ಅಪ್‌ ಕೆರ್ಬರ್‌, 6-3, 6-3ರಲ್ಲಿ ಲಾಟ್ವಿಯಾದ ಜೆಲೆನಾ ಆಸ್ಟಪೆಂಕೊಗೆ ಸೋಲುಣಿಸಿದರು. ಮತ್ತೊಂದೆಡೆ 2ನೇ ಸೆಮಿಫೈನಲ್‌ನಲ್ಲಿ ಅಬ್ಬರಿಸಿದ ಸೆರೆನಾ 6-2, 6-4 ಅಂತರದ ನೇರ ಸೆಟ್‌ಗಳಿಂದ ಜರ್ಮನಿಯ ಜೂಲಿಯಾ ಜೋರ್ಜಸ್‌ ವಿರುದ್ಧ ಜಯ ದಾಖಲಿಸಿದರು.

ಡೆಲ್‌ ಕದನ ಗೆದ್ದ ನಡಾಲ್‌

ವಿಂಬಲ್ಡನ್‌ ಅಂಗಣದಲ್ಲಿ ಬುಧವಾರ ಅಕ್ಷರಶಃ ಅದ್ಭುತ ಪಂದ್ಯಗಳು ಮೂಡಿ ಬಂದವು. ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ಸ್ಪೇನ್‌ನ ರಾಫೆಲ್‌ ನಡಾಲ್‌, ವಿಶ್ವದ 4ನೇ ರಾರ‍ಯಂಕ್‌ನ ಆಟಗಾರ ಅರ್ಜೆಂಟೀನಾದ ಜುವಾನ್‌ ಮಾರ್ಟಿನ್‌ ಡೆಲ್‌ ಪೋಟ್ರೊ ಅವರನ್ನು 5 ಸೆಟ್‌ಗಳ ಹೋರಾಟದಲ್ಲಿ ಮಣಿಸಿ ಉಪಾಂತ್ಯಕ್ಕೆ ಕಾಲಿರಿಸಿದರು. ಆಲ್‌ ಇಂಗ್ಲೆಂಡ್‌ ಕ್ಲಬ್‌ನ ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ 4 ಗಂಟೆ, 48 ನಿಮಿಷಗಳ ಕಾಲ ಮ್ಯಾರಥಾನ್‌ ಹೋರಾಟ ನಡೆಸಿದ 2ನೇ ಶ್ರೇಯಾಂಕಿತ ಆಟಗಾರ ನಡಾಲ್‌, ಅಂತಿಮವಾಗಿ 7-5, 6-7(7/9), 4-6, 6-4, 6-4 ಅಂತರದ ಸೆಟ್‌ಗಳಿಂದ 5ನೇ ಶ್ರೇಯಾಂಕ ಹೊಂದಿದ್ದ ಡೆಲ್‌ ಪೋಟ್ರೊ ಅವರನ್ನು ಮಣಿಸಿದರು.

ಕಳೆದ ತಿಂಗಳಷ್ಟೇ ವಿಶ್ವ ದಾಖಲೆಯ 11ನೇ ಫ್ರೆಂಚ್‌ ಓಪನ್‌ ಗೆದ್ದಿರುವ ನಡಾಲ್‌, ವಿಂಬಲ್ಡನ್‌ನಲ್ಲಿ ವೃತ್ತಿ ಬದುಕಿನ 3ನೇ ಪ್ರಶಸ್ತಿ ಗೆಲುವನ್ನು ಎದುರು ನೋಡುತ್ತಿದ್ದಾರೆ. ಆದರೆ, ಈ ಹಾದಿಯಲ್ಲಿ ವಿಶ್ವದ ಮಾಜಿ ನಂ.1 ಹಾಗೂ 3 ಬಾರಿಯ ಚಾಂಪಿಯನ್‌ ಸರ್ಬಿಯಾದ ನೊವಾಕ್‌ ಜೊಕೊವಿಕ್‌ ವಿರುದ್ಧ ಸೆಮಿಫೈನಲ್‌ ಪಂದ್ಯವನ್ನಾಡಲಿದ್ದಾರೆ. 32 ವರ್ಷದ ಅನುಭವಿ ಆಟಗಾರ ನಡಾಲ್‌ ತಮ್ಮ ಬದ್ಧ ಎದುರಾಳಿ ನೊವಾಕ್‌ ವಿರುದ್ಧ ಒಟ್ಟಾರೆ 51 ಪಂದ್ಯಗಳನ್ನಾಡಿದ್ದು, 25 ಜಯ ಹಾಗೂ 26 ಸೋಲುಂಡಿದ್ದಾದೆ. ವಿಂಬಲ್ಡನ್‌ ಸೆಮಿಫೈನಲ್‌ನಲ್ಲಿ ನಡಾಲ್‌ಗೆ ಜಯ ಸಾಧ್ಯವಾದರೆ 26 ಗೆಲುವುಗಳೊಂದಿಗೆ 31 ವರ್ಷದ ಅಟಗಾರ ನೊವಾಕ್‌ ಎದುರು ಸಮಬಲ ಸಾಧಿಸಲಿದ್ದಾರೆ.

ಮ್ಯಾಚ್‌ ಪಾಯಿಂಟ್‌ ಬಿಟ್ಟ ರೋಜರ್‌

ಸ್ವಿಸ್‌ ಮಾಸ್ಟರ್‌ ಹಾಗೂ ಹಾಲಿ ಚಾಂಪಿಯನ್‌ ರೋಜರ್‌ ಫೆಡರರ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲನುಭವಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಬುಧವಾರ ನಡೆದ ಪಂದ್ಯದಲ್ಲಿ ಮೊದಲ 2 ಸೆಟ್‌ಗಳನ್ನು ಸುಲಭವಾಗಿ ಗೆದ್ದು ನಂತರ 3ನೇ ಸೆಟ್‌ನಲ್ಲಿ ಮ್ಯಾಚ್‌ ಪಾಯಿಂಟ್‌ ಸಂಪಾದಿಸಿದ್ದ ರೋಜರ್‌, ಜಯದ ಹೊಸ್ತಿಲಲ್ಲಿ ಸರ್ವ್‌ ಕೈಚೆಲ್ಲಿದರ ತಪ್ಪಿಗೆ ಭಾರಿ ಬೆಲೆ ತೆತ್ತಿದ್ದಾರೆ.

ವೃತ್ತಿ ಬದುಕಿನಲ್ಲಿ ಫೆಡರರ್‌ ಎದುರು ಒಂದು ಸೆಟ್‌ ಕೂಡ ಜಯಿಸದೇ ಇದ್ದ ದಕ್ಷಿಣ ಆಫ್ರಿಕಾದ ಆಟಗಾರ ಕೆವಿನ್‌ ಆ್ಯಂಡರ್ಸನ್‌, ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿ 4 ಗಂಟೆ 14 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 2-6, 6-7(5/7), 7-5, 6-4, 13-11 ಅಂತರದಲ್ಲಿ 20 ಗ್ರ್ಯಾನ್‌ ಸ್ಪ್ಯಾಮ್‌ ಸಿಂಗಲ್ಸ್‌ ಪ್ರಶಸ್ತಿಗಳ ಒಡೆಯನಿಗೆ ಆಘಾತ ನೀಡಿದರು.

ಆ್ಯಂಡರ್ಸನ್‌, ತಮ್ಮ ಚೊಚ್ಚಲ ವಿಂಬಲ್ಡನ್‌ ಸೆಮಿಫೈನಲ್‌ನಲ್ಲಿ ಅಮೆರಿಕದ ಆಟಗಾರ ಜಾನ್‌ ಇಸ್ನರ್‌ ಅವರ ಸವಾಲೆದುರಿಸಲಿದ್ದಾರೆ. ಇಸ್ನಾರ್‌, ಕ್ವಾರ್ಟರ್‌ ಫೈನಲ್‌ನಲ್ಲಿ 6-7(5/7), 7-6(9/7), 6-4, 6-3ರ ಸೆಟ್‌ಗಳಿಂದ ಕೆನಡಾದ ಆಟಗಾರ ಮಿಲೋಸ್‌ ರವೋನಿಚ್‌ಗೆ ಸೋಲುಣಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌