ಆ್ಯಪ್ನಗರ

ಸ್ವರ್ಣಕ್ಕೆ ಮುತ್ತಿಟ್ಟ ಬಜರಂಗ್‌ ಪೂನಿಯಾ

ಬಜರಂಗ್‌ ಪೂನಿಯಾ ಇಲ್ಲಿ ನಡೆಯುತ್ತಿರುವ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಮೊದಲ ಸ್ವರ್ಣ ಪದಕ ಗೆದ್ದುಕೊಟ್ಟಿದ್ದಾರೆ.

ವಿಕ ಸುದ್ದಿಲೋಕ 13 May 2017, 9:44 pm

ಹೊಸದಿಲ್ಲಿ: ಬಜರಂಗ್‌ ಪೂನಿಯಾ ಇಲ್ಲಿ ನಡೆಯುತ್ತಿರುವ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಮೊದಲ ಸ್ವರ್ಣ ಪದಕ ಗೆದ್ದುಕೊಟ್ಟಿದ್ದಾರೆ.

ಶನಿವಾರ ನಡೆದ ಪುರುಷರ 65ಕೆಜಿ ಫೈನಲ್‌ ಸ್ಪರ್ಧೆಯಲ್ಲಿ ಬಜರಂಗ್‌ ದಕ್ಷಿಣ ಕೊರಿಯಾದ ಲೀ ಸೆಯುಂಗಲ್‌ ವಿರುದ್ಧ ಗೆದ್ದು ಆತಿಥೇಯರಿಗೆ ಮೊದಲ ಬಂಗಾರ ತಂದುಕೊಡುವಲ್ಲಿ ಯಶಸ್ವಿಯಾದರು. ಪಂದ್ಯದ ದ್ವಿತೀಯ ಹಾಗೂ ಕೊನೆಯ ಸುತ್ತಿನಲ್ಲಿ ಪ್ರಭುತ್ವ ಸಾಧಿಸಿದ ಬಜರಂಗ್‌ 6-2 ಅಂಕಗಳ ಅಂತರದಿಂದ ಗೆಲುವು ದಾಖಲಿಸಿದರು.

Vijaya Karnataka Web wrestler bajrang punia wins gold at asian championships
ಸ್ವರ್ಣಕ್ಕೆ ಮುತ್ತಿಟ್ಟ ಬಜರಂಗ್‌ ಪೂನಿಯಾ


ಈ ಮಧ್ಯೆ ಮಹಿಳೆಯರ 58ಕೆಜಿ ವಿಭಾಗದ ಫೈನಲ್‌ ಸ್ಪರ್ಧೆಯಲ್ಲಿ ಸೋಲನುಭವಿಸಿದ ಸರಿತಾ ರಜತ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಸೆಮಿಫೈನಲ್‌ನಲ್ಲಿ ತೋರಿದ ಪ್ರದರ್ಶನವನ್ನು ಪ್ರಶಸ್ತಿ ಸುತ್ತಿನಲ್ಲಿ ಪುನರಾವರ್ತಿಸುವಲ್ಲಿ ವಿಫಲಗೊಂಡ ಸರಿತಾ ಕಿರ್ಗಿಸ್ತಾನ್‌ನ ಐಸುಲು ಟೈನಿಬೆಕೊ ವಿರುದ್ಧ 0-6 ಅಂತರದಲ್ಲಿ ಹೀನಾಯ ಸೋಲುಂಡರು.

ಇದಕ್ಕೂ ಮುನ್ನ ಸ್ಫೂರ್ತಿದಾಯಕ ಪ್ರದರ್ಶನ ನೀಡಿದ ಬಜರಂಗ್‌ ಪೂನಿಯಾ ಮತ್ತು ಸರಿತಾ ತಮ್ಮ ವಿಭಾಗಗಳಲ್ಲಿ ಸ್ವರ್ಣ ಸುತ್ತಿಗೆ ಮುನ್ನಡೆದು ಕನಿಷ್ಠ ಬೆಳ್ಳಿ ಪದಕ ಖಾತ್ರಿ ಪಡಿಸಿದ್ದರು. ಈ ಆವೃತ್ತಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವ ಭಾರತೀಯ ಮಹಿಳಾ ಕುಸ್ತಿಪಟುಗಳು ಕನಿಷ್ಠ ಐದು ಪದಕಗಳ ಸಾಧನೆ ಮಾಡಿದ್ದಾರೆ. ಇದರಲ್ಲಿ ಮೂರು ಬೆಳ್ಳಿ ಮತ್ತು ಎರಡು ಕಂಚು ಸೇರಿವೆ. 2013ರ ಆವೃತ್ತಿಯಲ್ಲಿ ಭಾರತ ಒಟ್ಟು ಐದು ಪದಕ ಜಯಿಸಿತ್ತು. ಈ ವೇಳೆ ಎರಡು ಬೆಳ್ಳಿ ಪದಕ ಜಯಿಸಿದ್ದ ಭಾರತ ಮೂರು ಕಂಚಿನ ಪದಕಗಳ ಸಾಧನೆ ಮಾಡಿತ್ತು.

58ಕೆಜಿ ವಿಭಾಗದ ಕ್ವಾರ್ಟರ್‌ ಫೈನಲ್‌ ಸ್ಪರ್ಧೆಯಲ್ಲಿ ಉಜ್ಬೇಕಿಸ್ತಾನದ ಅಸೆಮ್‌ ಸಯಮ್ಮೆತೊವಾ ಅವರನ್ನು 10-0 ಅಂಕಗಳ ಅಂತರದಲ್ಲಿ ಬಗ್ಗು ಬಡಿದ ಸರಿತಾ, ಸೆಮಿಫೈನಲ್‌ ಪಂದ್ಯದಲ್ಲಿ ವಿಯೆಟ್ನಾಂನ ಥಿ ಹೂಂಗ್‌ ದಾವೋ ಅವರನ್ನು 12-0 ಅಂಕಗಳಿಂದ ಸೋಲಿಸಿ ಫೈನಲ್‌ ಪ್ರವೇಶಿಸಿದರು.

ಪುರುಷರ 65ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ತೀವ್ರ ಪ್ರತಿರೋಧ ಎದುರಿಸಿದ ಬಜರಂಗ್‌ 3-2 ಅಂತರದಲ್ಲಿ ಕುಕ್ವಾಂಗ್‌ ಕಿಮ್‌ ವಿರುದ್ಧ ಗೆದ್ದು ನಾಲ್ಕರ ಘಟ್ಟ ತಲುಪಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ಕಳೆದ ಆವೃತ್ತಿಯ ಚಿನ್ನದ ಪದಕ ವಿಜೇತ ಇರಾನಿನ ಮೀಸಮ್‌ ನಾಸಿರಿ ವಿರುದ್ಧ 7-5ರಲ್ಲಿ ಗೆದ್ದ ಬಜರಂಗ್‌, ಅರ್ಹತಾ ಸುತ್ತಿನಲ್ಲಿ 4-3 ಅಂತರದಲ್ಲಿ ಉಜ್ಬೇಕಿಸ್ತಾನದ ಕುಸ್ತಿಪಟು ಸಿರಾಜಿದ್ದೀನ್‌ ಹಸನೋವ್‌ ವಿರುದ್ಧ ಜಯಭೇರಿ ಬಾರಿಸಿದರು.

ಬೆಳ್ಳಿಗೆ ತೃಪ್ತಿಪಟ್ಟುಕೊಂಡ ಸಾಕ್ಷಿ


ರಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್‌ ಇಲ್ಲಿ ನಡೆಯುತ್ತಿರುವ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಪರಾಭವಗೊಳ್ಳುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ 60ಕೆಜಿ ವಿಭಾಗದ ಫೈನಲ್‌ ಸ್ಪರ್ಧೆಯಲ್ಲಿ 0-10 ಅಂಕಗಳ ಅಂತರದಿಂದ ರಿಯೊ ಒಲಿಂಪಿಕ್‌ ಸ್ವರ್ಣ ಪದಕ ವಿಜೇತೆ ಜಪಾನ್‌ನ ರಿಸಾಕೊ ಕವಾಯಿ ವಿರುದ್ಧ ಪರಾಭವಗೊಂಡರು.

ಈ ಮಧ್ಯೆ, ವಿನೇಶ್‌ ಫೋಗತ್‌ ಫೈನಲ್‌ನಲ್ಲಿ ಸೋಲುಂಡು ಬೆಳ್ಳಿ ಪದಕ ಜಯಿಸಿದರೆ, ರಿತು ಫೋಗತ್‌ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇವರಲ್ಲದೆ ಪುರುಷರ ವಿಭಾಗದಲ್ಲಿ ಹರ್‌ಪ್ರೀತ್‌ ಸಿಂಗ್‌ ಸಂಧು ಸಹ ಕಂಚಿನ ಸಾಧನೆ ತೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌