Please enable javascript.ಕಾನೂನು ಸ್ನಾತ್ತಕೋತ್ತರ ಪಡೆದ ನಿವೃತ್ತ ಅಧಿಕಾರಿ! - ಕಾನೂನು ಸ್ನಾತ್ತಕೋತ್ತರ ಪಡೆದ ನಿವೃತ್ತ ಅಧಿಕಾರಿ! - Vijay Karnataka

ಕಾನೂನು ಸ್ನಾತ್ತಕೋತ್ತರ ಪಡೆದ ನಿವೃತ್ತ ಅಧಿಕಾರಿ!

Vijaya Karnataka Web 2 Sep 2013, 4:25 am
Subscribe

ನಿವೃತ್ತ ಕೆಎಎಸ್ ಅಧಿಕಾರಿಯೊಬ್ಬರು ತಮ್ಮ 66ನೇ ವಯಸ್ಸಿನಲ್ಲಿ ಕಾನೂನು ಸ್ನಾತ್ತಕೋತ್ತರ ಪದವಿ ಪಡೆಯುವ ಮೂಲಕ ಅಚ್ಚರಿ ಮೂಡಿಸಿದರು.

ಕಾನೂನು ಸ್ನಾತ್ತಕೋತ್ತರ ಪಡೆದ ನಿವೃತ್ತ ಅಧಿಕಾರಿ!
-ಸ್ನಾತ್ತಕೋತ್ತರ ಪದವಿ ಪಡೆದ ನಿವೃತ್ತ ಅಧಿಕಾರಿ!

ಬೆಂಗಳೂರು: ನಿವೃತ್ತ ಕೆಎಎಸ್ ಅಧಿಕಾರಿಯೊಬ್ಬರು ತಮ್ಮ 66ನೇ ವಯಸ್ಸಿನಲ್ಲಿ ಕಾನೂನು ಸ್ನಾತ್ತಕೋತ್ತರ ಪದವಿ ಪಡೆಯುವ ಮೂಲಕ ಅಚ್ಚರಿ ಮೂಡಿಸಿದರು.

ರಾಷ್ಟ್ರೀಯ ಕಾನೂನು ಶಾಲೆಯ 21ನೇ ಘಟಿಕೋತ್ಸವದಲ್ಲಿ ಪದಕ ವಿಜೇತರ ಸಂತಸ, ಪದವಿ ಪಡೆದ ವಿದ್ಯಾರ್ಥಿಗಳ ಸಂಭ್ರಮಗಳ ನಡುವೆ ಸಂಕೋಚದಿಂದ ಕುಳಿತಿದ್ದ ಜಿ. ಎಸ್. ಬಿರಾದಾರ್, ಈ ಬಾರಿಯ ಸ್ನಾತ್ತಕೋತ್ತರ ಪದವಿ ಪಡೆದ ಹಿರಿಯ ವಿದ್ಯಾರ್ಥಿ ಎನ್ನಿಸಿಕೊಂಡರು.

ವಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಬೈರವಾಡಿಗಿ ಗ್ರಾಮದವರಾದ ಇವರು ಸದ್ಯ ರಾಜ್ಯ ಸರಕಾರದ ಸೇವೆಯಿಂದ ನಿವೃತ್ತರಾಗಿದ್ದಾರೆ. ‘‘ನಾನು ನಮ್ಮ ಮನೆಯ ಮೊದಲ ತಲೆಮಾರಿನ ಪದವಿ ಪಡೆದ ಹುಡುಗನಾಗಿದ್ದೆ,’’ ಎನ್ನುವ ಮೂಲಕ ಅವರು ರಾಷ್ಟ್ರೀಯ ಕಾನೂನು ಶಾಲೆವರೆಗೆ ಕ್ರಮಿಸಿದ ಹಾದಿಯನ್ನು ‘ವಿಕ’ಗೆ ವಿವರಿಸಿದರು.

‘‘ಪದವಿ ಮುಗಿಸಿದ ತಕ್ಷಣ ಕಾನೂನು ಓದಬೇಕು ಎಂದುಕೊಂಡಿದ್ದೆ. ಆದರೆ ಮನೆಯಲ್ಲಿ ಸುಮ್ಮನೆ ಗಲಾಟೆ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಕಾನೂನು ಕಲಿಕೆಗೆ ಒತ್ತಾಸೆ ವ್ಯಕ್ತಪಡಿಸಲಿಲ್ಲ. ಹೀಗಾಗಿ ಎಂ. ಎ ಅರ್ಥಶಾಸ್ತ್ರ ಮುಗಿಸಿದೆ. ಅದಾದ ನಂತರ ಕಾನೂನು ಪದವಿಗಾಗಿ ನೋಂದಣಿ ಮಾಡಿಕೊಂಡೆನಾದರೂ, ಅಷ್ಟರಲ್ಲೇ ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕನ ಹುದ್ದೆ ಸಿಕ್ಕಿತು. ಹೀಗಾಗಿ ಕಾನೂನು ಪದವಿಗಾಗಿ ಓದು ಮುಂದುವರಿಸಲು ಸಾಧ್ಯವಾಗಲಿಲ್ಲ,’’ ಎಂದು ಬಿರಾದಾರ್ ಹೇಳಿಕೊಂಡರು.

‘‘ಸರಕಾರಿ ಸೇವೆಯಲ್ಲಿದ್ದುಕೊಂಡೆ ಕೆಎಎಸ್ ಪರೀಕ್ಷೆ ಕಟ್ಟಿದೆ. ಅನಿರೀಕ್ಷಿತವಾಗಿ ಅದೂ ಪಾಸಾಯಿತು. ಹೀಗಾಗಿ ನಾನು ಎಸಿ ಹುದ್ದೆಗೆ ಬಂದೆ. ಮುಂದೆ ಬಡ್ತಿ ಪಡೆಯುತ್ತ ಬಿಬಿಎಂಪಿ ಜಂಟಿ ಆಯುಕ್ತನಾಗಿ ಐದು ವರ್ಷಗಳ ಹಿಂದೆ ನಿವೃತ್ತನಾದೆ. ಇದರ ನಡುವೆಯೇ ಹಿಂದೆ ಕಟ್ಟಿ ಬಿಟ್ಟಿದ್ದ ಕಾನೂನು ಪದವಿಯನ್ನು ಸಂಜೆ ಕಾಲೇಜಿನಲ್ಲಿ ಮುಗಿಸಿದೆ. ನಿವೃತ್ತನಾದ ನಂತರ ರಾಷ್ಟ್ರೀಯ ಕಾನೂನು ಶಾಲೆಯಲ್ಲಿದ್ದ ಗೆಳೆಯರ ಸಹಾಯದಿಂದ ಪ್ರವೇಶ ಪರೀಕ್ಷೆ ಬರೆದು ಅಲ್ಲಿ ಮಾಸ್ಟರ್ಸ್‌ ಇನ್ ಬಿಜಿನೆಸ್ ಲಾ ಆಯ್ಕೆ ಮಾಡಿಕೊಂಡು ಎರಡು ವರ್ಷಗಳ ಅಧ್ಯಯದ ನಂತರ ಸ್ನಾತ್ತಕೋತ್ತರ ಪದವಿ ಪಡೆದು ಹೊರಬಂದಿದ್ದೇನೆ,’’ ಎಂದು ವಿವರಿಸಿದ್ದಾರೆ.
***

16 ಚಿನ್ನದ ಪದಕಗಳ ಒಡತಿ
ಘಟಿಕೋತ್ಸವದಲ್ಲಿ 16 ಚಿನ್ನದ ಪದಕ ಪಡೆಯುವ ಮೂಲಕ ಗುಜರಾತ್ ಮೂಲದ ಮುಂಬಯಿ ನಿವಾಸಿ ನಮ್ರತಾ ಷಾ ಎಲ್ಲರ ಗಮನ ಸೆಳೆದರು. ಪದಕಗಳನ್ನು ಪಡೆದುಕೊಂಡ ಸಂತಸವನ್ನು ಅದುಮಿಟ್ಟುಕೊಳ್ಳುತ್ತಲೇ ‘ವಿಕ’ ಜತೆ ಮಾತನಾಡಿದ ಅವರು, ‘‘ನಾನು ಹತ್ತು ಪದಕಗಳನ್ನು ನಿರೀಕ್ಷಿಸಿದ್ದೆ. ಆದರೆ ಇದು ಬಂಪರ್ ಸಿಕ್ಕ ಹಾಗೆ ಆಗಿದೆ,’’ ಎಂದರು.

‘‘ಈಗಾಗಲೇ ದೇಶ ಹಾಗೂ ವಿದೇಶದ ಕಾನೂನು ಸೇವೆ ಒದಗಿಸುವ ಕಚೇರಿಗಳಿಂದ ಕೆಲಸಕ್ಕೆ ಕರೆ ಬಂದಿದೆ. ಸದ್ಯಕ್ಕೆ ಇಲ್ಲಿನ ಸ್ಥಳೀಯ ಕಾನೂನು ಕಚೇರಿಯೊಂದರಲ್ಲಿ ಕೆಲಸ ಆರಂಭಿಸಿದ್ದೇನೆ. ಮುಂದಿನ ಕೆಲವು ವರ್ಷಗಳ ಕಾಲ ಕಲಿಯುವುದು ಸಾಕಷ್ಟಿದೆ. ನಂತರ ನೀತಿ ನಿರೂಪಣೆಗಳಿಗಾಗಿ ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ. ಕಾರ್ಪೊರೇಟ್ ಜಗತ್ತಿನ ನನ್ನ ಸೇವೆ ಮೀಸಲಿಟ್ಟಿದ್ದೇನೆ,’’ ಎಂದರು.
***

ರ‌್ಯಾಂಕ್ ವಿಜೇತರಿವರು
ನಮ್ರತಾ ಷಾ 16 ಮತ್ತು ರಿಶಿ ಶ್ರಾಫ್ ಐದು ಪದಕಗಳನ್ನು ಮುಡಿಗೇರಿಸಿಕೊಂಡರು. ಉಳಿದಂತೆ, ಅಶ್ವಿತಾ ಅಂಬಾಸ್ತ್, ರಾಘ್ ಯಾದವ್, ಅನುಪಮಾ ಕುಮಾರ್, ಮಹೇಶ್ ಮೆನನ್ ಮತ್ತು ಪ್ರೀತಿಕಾ ಪಿಲಿಂಜ ತಲಾ ಎರಡು ಹಾಗೂ ಶ್ವೇತಂಕ್ ಜಿನೋಡಿಯಾ, ಸುಸ್ವಾಗತಾ ರಾಯ್, ಸುರಭಿ ಕುವೇಲ್ಕರ್, ಸುಹಾನ ಮಂಜೇಶ್, ವಾಗೀಶ್ ಕುಮಾರ್ ಸಿಂಗ್, ಸಾಹಿಲ್ ಖೇರ್, ಅಶ್ವಿನಿ. ಓ, ನಿಯಾತಿ ಸಮೀರ್ ಗಾಂಧಿ, ಭೂಮಿಕಾ ನಂದಾ, ವ್ಯಾಸ್ ಫಗನ್ ಇಂದ್ರವದನ್ ಮತ್ತು ಅಂಜಲಿ ಶಿವಾರಾಮ ಕೃಷ್ಟನ್ ತಲಾ ಒಂದೊಂದು ಪದಕವನ್ನು ತಮ್ಮದಾಗಿಸಿಕೊಂಡರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ