Please enable javascript.ತುಂಗಾ ನಾಲೆಗಳ ಆಧುನೀಕರಣ ಕಾಮಗಾರಿ ಅಕ್ರಮ ಆರೋಪ - Modernization of the alleged illegal construction of canals Tunga - Vijay Karnataka

ತುಂಗಾ ನಾಲೆಗಳ ಆಧುನೀಕರಣ ಕಾಮಗಾರಿ ಅಕ್ರಮ ಆರೋಪ

ವಿಕ ಸುದ್ದಿಲೋಕ 29 Dec 2015, 4:00 am
Subscribe

ತುಂಗಾ ಅಣೆಕಟ್ಟು ಯೋಜನೆಯ ನಾಲೆಗಳ ಆಧುನೀಕರಣಗೊಳಿಸುವ 127.30 ಕೋಟಿ ರೂ. ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

modernization of the alleged illegal construction of canals tunga
ತುಂಗಾ ನಾಲೆಗಳ ಆಧುನೀಕರಣ ಕಾಮಗಾರಿ ಅಕ್ರಮ ಆರೋಪ
-ಲೋಕಾಯುಕ್ತಕ್ಕೆ ಪ್ರತಿಪಕ್ಷ ನಾಯಕ ಈಶ್ವರಪ್ಪ ದೂರು-
ಬೆಂಗಳೂರು: ತುಂಗಾ ಅಣೆಕಟ್ಟು ಯೋಜನೆಯ ನಾಲೆಗಳ ಆಧುನೀಕರಣಗೊಳಿಸುವ 127.30 ಕೋಟಿ ರೂ. ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ತುಂಗಾ ನಾಲೆ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಈ ಮೊದಲು ಆರೋಪಿಸಿದ್ದ ಈಶ್ವರಪ್ಪ ಅವರು ಸೋಮವಾರ ಲೋಕಾಯುಕ್ತ ಕಚೇರಿಗೆ ಖುದ್ದು ಹಾಜರಾಗಿ ರಿಜಿಸ್ಟ್ರಾರ್‌ಗೆ ದೂರು ಸಲ್ಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದರು.

‘‘ತುಂಗಾ ಯೋಜನೆಯ ಎಡದಂಡೆ ಕಾಲುವೆ 101.60 ಕಿ.ಮೀ. ಇದ್ದು ಒಟ್ಟು 70 ವಿತರಣಾ ಕಾಲುವೆ ಒಳಗೊಂಡಿವೆ. ಬಲದಂಡೆ ಕಾಲುವೆ ಉದ್ದ 54 ಕಿ.ಮೀ. ಇದ್ದು 51ವಿತರಣಾ ಕಾಲುವೆಗಳಿವೆ. ಈ ಕಾಲುವೆಗಳ ಆಧುನೀಕರಣಕ್ಕಾಗಿ ಪ್ಯಾಕೇಜ್ 1ರ ಅಡಿ 127.30 ಕೋಟಿ ಮೊತ್ತದ ಟೆಂಡರ್‌ನಲ್ಲಿ ಭಾರಿ ಅಕ್ರಮ ನಡೆಸಲಾಗಿದೆ,’’ಎಂದು ಈಶ್ವರಪ್ಪ ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

‘‘ದೊಡ್ಡ ಮೊತ್ತದ ಕಾಮಗಾರಿಗೆ ಅಲ್ಪಾವಧಿ ಟೆಂಡರ್ ಕರೆಯಲಾಗಿದೆ. ಕರ್ನಾಟಕ ನೀರಾವರಿ ನಿಗಮದ ಮಂಡಳಿಯ ಅಧ್ಯಕ್ಷರಾಗಿರುವ ಮುಖ್ಯಮಂತ್ರಿಗಳ ಒಪ್ಪಿಗೆಯನ್ನು ಪಡೆದಿಲ್ಲ. ರಾಜ್ಯ ಸರಕಾರದೊಂದಿಗೆ ಗುತ್ತಿಗೆದಾರರು ಒಪ್ಪಂದವನ್ನು ಮಾಡಿಕೊಂಡಿಲ್ಲ. ಕಾಮಗಾರಿ ಮೊತ್ತಕ್ಕಿಂತ ಶೇ.26ರಷ್ಟು ಹೆಚ್ಚು ಹಣ ನಮೂದಿಸಿದ್ದಾರೆ. ಜತೆಗೆ ಕಾರ್ಯಾದೇಶ ಇಲ್ಲದೇ ಕಾಮಗಾರಿ ಆರಂಭವಾಗಿರುವ ಅಂಶವನ್ನು ಲೋಕಾಯುಕ್ತ ರಿಜಿಸ್ಟ್ರಾರ್ ಗಮನಕ್ಕೆ ತರಲಾಗಿದೆ. ಅವರು ದೂರು ಸ್ವೀಕರಿಸಿದ್ದಾರೆ. ಅದಷ್ಟು ಬೇಗ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ,’’ಎಂದು ಈಶ್ವರಪ್ಪ ಸುದ್ದಿಗಾರರಿಗೆ ತಿಳಿಸಿದರು.

‘‘ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲೆಗಳು, ಪತ್ರಿಕಾ ಹೇಳಿಕೆಗಳು ಹಾಗೂ ಅಫಿಡಿವೇಟ್ ನೀಡಿದ್ದೇವೆ. ಕಾಮಗಾರಿ ಆರಂಭಿಸಿ 60 ಕಿ.ಮೀ. ವರೆಗೆ ಜಂಗಲ್ ಕಟ್ ಮಾಡಿದ್ದಾರೆ. ಕೆನಾಲ್ ಶೀಲ್ಡ್ ತೆಗೆದಿದ್ದಾರೆ. ಕಳಪೆ ಮಣ್ಣು ಬಳಸಿ ಏರಿ ಮಾಡಿದ್ದಾರೆ. ಇನ್ನೇನು ಕಾಂಕ್ರಿಟ್ ಹಾಕಬೇಕೆನ್ನುವ ಹಂತಕ್ಕೆ ಕಾಮಗಾರಿ ತಲುಪಿದೆ. ಸುಮಾರು 25 ರಿಂದ 30 ಜೆಸಿಬಿಗಳಿಂದ 7 ವಾರಗಳ ಕಾಲ ಕೆಲಸ ಮಾಡಲಾಗಿದೆ,’’ ಎಂದು ಹೇಳಿದರು.

‘‘ಆರಂಭದಲ್ಲಿ ಕಾಲುವೆ ಸ್ಥಿತಿ ಹೇಗಿತ್ತು ಹಾಗೂ ಕಾಮಗಾರಿ ಆರಂಭವಾದ ಬಳಿಕ ಇರುವ ಸ್ಥಿತಿಯ ಫೋಟೋಗಳು, ಅನುಮತಿ ಇಲ್ಲದೇ ಕಾಮಗಾರಿ ಕೆಲಸ ಆರಂಭಿಸಿ ಅತಿಕ್ರಮ ಪ್ರವೇಶ ಮಾಡಲಾಗಿದೆ ಎಂದು ಜೆಸಿಬಿ, ಇತರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಇದು ತನಿಖೆ ನಡೆಸಲು ಅರ್ಹ ಪ್ರಕರಣವೆಂದು ಲೋಕಾಯುಕ್ತ ರಿಜಿಸ್ಟ್ರಾರ್ ಒಪ್ಪಿಕೊಂಡಿದ್ದಾರೆ. ಯು.ಟಿ.ಪಿ.ಐ ಕಾರ್ಯಪಾಲಕ ಎಂಜಿನಿಯರ್ ಸೇರಿ ಇತರ ಅಧಿಕಾರಿಗಳ ವಿರುದ್ಧ ದೂರು ನೀಡಲಾಗಿದೆ. ಅದಷ್ಟು ಬೇಗ ಇಲಾಖೆಯಿಂದ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ರಿಜಿಸ್ಟ್ರಾರ್ ಭರವಸೆ ನೀಡಿದ್ದಾರೆ,’’ ಎಂದು ಈಶ್ವರಪ್ಪ ಹೇಳಿದರು.

4 ತಾಸು ಕುಳಿತ ಈಶ್ವರಪ್ಪ

ಬಿಜೆಪಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಪರಿಷತ್ ಸದಸ್ಯ ಅಶ್ವತ್ಥ ನಾರಾಯಣ ಮಾಜಿ ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಮಧ್ಯಾಹ್ನ 12 ಗಂಟೆಗೆ ಲೋಕಾಯುಕ್ತ ಕಚೇರಿಗೆ ಆಗಮಿಸಿದ ಈಶ್ವರಪ್ಪ, ದೂರು ಸಲ್ಲಿಸಲು ಬರೋಬ್ಬರಿ ನಾಲ್ಕು ತಾಸು ಬೇಕಾಯಿತು. ಪ್ರಕರಣದಲ್ಲಿ ಮುಖ್ಯ ಎಂಜಿನಿಯರ್ ಸೇರಿ ಉನ್ನತ ಅಧಿಕಾರಿಗಳು ಇರುವ ಕಾರಣ ಪ್ರಕರಣ ವಿಲೇವಾರಿ ಅಧಿಕಾರಿ ಲೋಕಾಯುಕ್ತ ಮಾತ್ರ ಬರುತ್ತದೆ. ಹೀಗಾಗಿ, ಇದನ್ನು ಯಾವ ರೀತಿ ಸ್ವೀಕರಿಸಬೇಕು ಎನ್ನುವ ವಿಚಾರದಲ್ಲಿ ಗೊಂದಲಕ್ಕೀಡಾದ ರಿಜಿಸ್ಟ್ರಾರ್, ಸಂಸ್ಥೆಯ ಕಾನೂನು ಅಧಿಕಾರಿಗಳ ಸಲಹೆ ಪಡೆದುಕೊಂಡರು. ಅಂತಿಮವಾಗಿ ದೂರು ಸ್ವೀಕಾರ ಮಾಡಿಕೊಳ್ಳುವಷ್ಟರಲ್ಲಿ 4 ಗಂಟೆ ಆಯಿತು. ಅಲ್ಲಿಯವರೆಗೂ ಮಧ್ಯಾಹ್ನದ ಊಟವನ್ನು ಬಿಟ್ಟು ಈಶ್ವರಪ್ಪ ಅವರು 4 ಗಂಟೆವರೆಗೆ ಕಚೇರಿಯಲ್ಲಿ ಕಾದು ಕುಳಿತಿದ್ದರು.

ಮುಖ್ಯಮಂತ್ರಿಗೆ ದೂರು

ಲೋಕಾಯುಕ್ತದಲ್ಲಿ ದೂರು ಸಲ್ಲಿಸಿದ್ದ ಬಳಿಕ ವಿಧಾನಸೌಧಕ್ಕೆ ತೆರಳಿದ ಕೆ.ಎಸ್ ಈಶ್ವರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದರು.

ಕಾರ್ಯಾದೇಶ ಪತ್ರ, ಮಂಡಳಿ ಸಭೆಯಲ್ಲಿ ಅನುಮತಿ ಪಡೆಯುವ ಮೊದಲೇ ಅಕ್ರಮವಾಗಿ ಕಾಮಗಾರಿ ನಡೆಸಿರುವ ಕಾರಣ ಕರ್ನಾಟಕ ನೀರಾವರಿ ನಿಗಮದ ಮಂಡಳಿ ಸಭೆಯಲ್ಲಿ ಒಪ್ಪಿಗೆ ನೀಡಬಾರದು ಎಂದು ಮನವಿ ಸಲ್ಲಿಸಿದರು.

ಅಕ್ರಮಗಳೇನು?

- ಕರ್ನಾಟಕ ಪಾರದರ್ಶಕ ಕಾಯಿದೆ ಅನ್ವಯ (ಕೆಟಿಟಿಪಿ) ಧೀರ್ಘಾವಧಿ ಟೆಂಡರ್ ಬದಲು ಅಲ್ಪಾವಧಿ ಟೆಂಡರ್ ಕರೆಯಲಾಗಿದೆ.

- 2015 ನ.30ರಂದು ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಏಕೈಕ ಗುತ್ತಿಗೆದಾರರಾದ ಶ್ರೀರಾಮಲಿಂಗಂ ಕನ್‌ಸ್ಟ್ರಕ್ಷನ್ಸ್ ಕಂಪನಿಯವರು ಕರ್ನಾಟಕ ನೀರಾವರಿ ನಿಗಮ ನಿಯಮಿತ ಮಂಡಳಿಯ ಅನುಮೋದನೆಗಾಗಿ ಒಂದೇ ದಿನದಲ್ಲಿ ಕಾರ್ಯಪಾಲಕ ಎಂಜಿನಿಯರ್, ಅಧೀಕ್ಷಕ ಎಂಜಿನಿಯರ್ ಮತ್ತು ಮುಖ್ಯ ಎಂಜಿನಿಯರ್ ಅನುಮೋದನೆಗಾಗಿ ಶಿಫಾರಸು ಮಾಡಿದ್ದಾರೆ.

- ಕಾಮಗಾರಿ ಆರಂಭದ ಬಳಿಕ ಅಕ್ರಮ ಪ್ರವೇಶ ಮಾಡಿದ್ದಾರೆಂದು ಕಾಮಗಾರಿಗೆ ಬಳಸಲಾಗುತ್ತಿದ್ದ ಯಂತ್ರೋಪಕರಣಗಳನ್ನು ಪೊಲೀಸ್ ಇಲಾಖೆಯಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

- ಟೆಂಡರ್ ಕರಾರಿಗೆ ನಿಗಮದ ವತಿಯಿಂದ ಕಾರ್ಯಪಾಲಕ ಎಂಜಿನಿಯರ್ ಮತ್ತು ಗುತ್ತಿಗೆದಾರರ ನಡುವೆ ಯಾವುದೇ ಸಹಿಯಾಗಿಲ್ಲ.

- ನಿಯಮಾನುಸಾರ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವ ಮೊದಲೇ ಕಾಮಗಾರಿ ಆರಂಭ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ