Please enable javascript.ನಿಷ್ಕ್ರಿಯ ಸಚಿವರ ಕಿವಿ ಹಿಂಡಲು ಸೂಚನೆ - ನಿಷ್ಕ್ರಿಯ ಸಚಿವರ ಕಿವಿ ಹಿಂಡಲು ಸೂಚನೆ - Vijay Karnataka

ನಿಷ್ಕ್ರಿಯ ಸಚಿವರ ಕಿವಿ ಹಿಂಡಲು ಸೂಚನೆ

Vijaya Karnataka Web 15 May 2014, 4:51 am
Subscribe

ನಿರೀಕ್ಷೆಯಂತೆ ಸಚಿವರ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ನಿಷ್ಕ್ರಿಯ ಸಚಿವರ ಕಿವಿ ಹಿಂಡಲು ಸೂಚನೆ
-ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ-

ಬೆಂಗಳೂರು: ನಿರೀಕ್ಷೆಯಂತೆ ಸಚಿವರ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜತೆಗೆ ಸರಕಾರ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ನಡವಳಿಕೆಯ ಸಚಿವರ ವಿರುದ್ಧ ‘ದಂಡ ಪ್ರಯೋಗ’ ಮಾಡಬಹುದು ಎಂಬ ಸಂದೇಶವನ್ನು ಹೈಕಮಾಂಡ್ ಪ್ರತಿನಿಧಿಗಳು ರವಾನಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅಧ್ಯಕ್ಷತೆಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಸಮ್ಮುಖ ಬುಧವಾರ ನಡೆದ ಸಮನ್ವಯ ಸಮಿತಿ ಸಭೆ, ಈೆಳವಣಿಗೆಗೆ ಸಾಕ್ಷಿಯಾಗಿದೆ. ಸುಮಾರು 15 ಸಚಿವರತ್ತ ಬೊಟ್ಟು ಮಾಡಿದ ಸಿಂಗ್, ಇಂತಹ ಸಚಿವರು ವರ್ತನೆ ತಿದ್ದಿಕೊಳ್ಳದಿದ್ದರೆ ಬೆಲೆ ತೆರಬೇಕಾಗುತ್ತದೆ. ಹಲವು ಜನಪರ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದರೂ ಸಂಪುಟ ಸದಸ್ಯರ ನಿಷ್ಕ್ರಿಯತೆ, ವಿವಾದಾತ್ಮಕ ನಡೆಯಿಂದಾಗಿ ನಿರೀಕ್ಷಿತ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ. ಈ ಪ್ರವೃತ್ತಿಗೆ ಕಡಿವಾಣ ಹಾಕುವಂತೆ ಸೂಚಿಸಿರು ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಪಕ್ಷದ ಆಂತರಿಕ ವಲಯ, ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ಅಭಿಪ್ರಾಯದ ಜತೆಗೆ ಸಚಿವರ ಸಾಧನೆಯ ಬಗ್ಗೆ ಪ್ರತ್ಯೇಕವಾದ ವರದಿಯೊಂದನ್ನು ಹೈಕಮಾಂಡ್ ತರಿಸಿಕೊಂಡಿತ್ತು. ಈ ವರದಿಯ ಸಾರಾಂಶವನ್ನು ಸಭೆಯ ಮುಂದಿಟ್ಟ ಸಿಂಗ್, ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಕೆಲ ಸಚಿವರು ಪ್ರವಾಸ ಮಾಡಿಲ್ಲ. ತಮ್ಮ ಖಾತೆ ನಿಭಾಯಿಸುವಲ್ಲೂ ವಿಫಲರಾಗಿದ್ದಾರೆ. ಇನ್ನು ಕೆಲವರು ಲೋಕಸಭೆ ಚುನಾವಣೆಯಲ್ಲಿ ತಟಸ್ಥವಾಗಿ ಉಳಿದಿದ್ದಾರೆ. ಹೀಗಾಗಿ ಮುಲಾಜಿಲ್ಲದೆ ಇಂಥವರ ಖಾತೆ ಬದಲಿಸಬೇಕು. ಇಲ್ಲದಿದ್ದರೆ ಸಂಪುಟ ವಿಸ್ತರಣೆ ವೇಳೆ ಅನುಭವಿಗಳು, ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂದರು ಎನ್ನಲಾಗಿದೆ.

ಬರ ನಿರ್ವಹಣೆಯಲ್ಲಿ ಸಂಬಂಧಿತ ಸಚಿವರು ಅನಾದರ ತೋರಿದ್ದಾಗಿ ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದ್ದಾಗಿ ಹೇಳಿದ ದಿಗ್ವಿಜಯ್, ಈ ಸಚಿವರಿಗೆ ಎಚ್ಚರಿಕೆ ನೀಡಬೇಕು. ವಿಧಾನಸೌಧದ ಗೋಡೆ ಒಡೆಸುವ, ಸರಕಾರಿ ಬಂಗಲೆ ನವೀಕರಣಕ್ಕೆ ಕೋಟ್ಯಂತರ ರೂ. ದುಂದು ವೆಚ್ಚ ಮಾಡುವ ಸಚಿವರನ್ನೂ ಪ್ರಶ್ನೆಗೆ ಒಳಪಡಿಸಬೇಕು. ಬಾಯಿ ಚಪಲ ತೀರಿಸಿಕೊಳ್ಳಲು ದಿನಕ್ಕೊಂದು ಯೋಜನೆ, ವಿಧೇಯಕದ ಬಗ್ಗೆ ಮಾತನಾಡುವವರನ್ನು ನಿಯಂತ್ರಿಸಬೇಕು. ಯಾವುದೇ ಜನಪರ ಕಾರ್ಯಕ್ರಮ ಅನುಷ್ಠಾನಗೊಳಿಸುವಾಗ ಸಾಧಕ-ಬಾಧಕದ ಪರಿಶೀಲನೆಯಾಗಬೇಕು. ಪಕ್ಷದ ವೇದಿಕೆಲ್ಲಿ ಚರ್ಚಿಸಬೇಕು ಎಂಬ ನಿರ್ದೇಶನ ನೀಡಿದರು ಎಂದು ತಿಳಿದು ಬಂದಿದೆ.
ಅಧಿಕಾರಿಗಳು, ನೌಕರರ ವರ್ಗಾವಣೆ ವೇಳೆ ಶಾಸಕರ ಶಿಫಾರಸು ಮಾನ್ಯ ಮಾಡಬೇಕು.

ಚುನಾವಣೆ ಫಲಿತಾಂಶದ ಬಳಿಕ ನಿಗಮ ಮಂಡಳಿ ನೇಮಕ ಕೈಗೊಂಡು ನಿಷ್ಠಾವಂತರು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸೂಚಿಸಿದವರಿಗೆ ಆದ್ಯತೆ ಕೊಡಬೇಕು. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆದೇಶದಂತೆ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಪುನಾರಚಿಸಿ ಹೈಕಮಾಂಡ್ ಒಪ್ಪಿಗೆ ಪಡೆಯುವಂತೆ ಸೂಚಿಸಿದರು ಎಂದು ಹೇಳಲಾಗಿದೆ.
ಆದರೆ, ಬಹುನಿರೀಕ್ಷಿತ ಮೇಲ್ಮನೆ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ

ಬಗ್ಗೆ ಹೆಚ್ಚಿನ ಚರ್ಚೆಯಾಗಿಲ್ಲ. ಫಲಿತಾಂಶದ ನಂತರ ಈ ನಿಟ್ಟಿನಲ್ಲಿ ಮುಂದುವರಿಯಬಹುದು. ಸಂಪುಟ ವಿಸ್ತರಣೆ/ ಪುನಾರಚನೆಗೂ ಪ್ರತ್ಯೇಕ ಚರ್ಚೆ ನಡೆಸಿದರಾಯಿತು. ಫಲಿತಾಂಶ ನೋಡಿಕೊಂಡು ಸಂಪುಟಕ್ಕೆ ಯಾವ ರೀತಿಯ ಸರ್ಜರಿ ಮಾಡಬಹುದೆಂಬ ನಿರ್ಧಾರ ಕೈಗೊಳ್ಳಬಹುದು ಎಂಬ ಸಲಹೆ ಸಿಂಗ್ ಅವರಿಂದ ಬಂತು ಎನ್ನಲಾಗಿದೆ.
ಸೋನಿಯಾ, ರಾಹುಲ್ ಭೇಟಿ: ಪಕ್ಷದ ಸಂಘಟನೆ ದೃಷ್ಟಿಯಿಂದ ಮುಂದಿನ 6 ತಿಂಗಳ ಕಾರ್ಯಕ್ರಮದ ನಿೀಲನಕ್ಷೆ ಸಿದ್ಧಪಡಿಸಲು ಕೆಪಿಸಿಸಿ ಅಧ್ಯಕ್ಷರಿಗೆ ಸೂಚಿಸಲಾಗಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಘಟಕಕ್ಕೆ ಹೆಚ್ಚಿನ ಬಲ ತುಂಬಬೇಕಿದ್ದು, ರಾಜ್ಯಾದ್ಯಂತ ಸಮಾವೇಶ ನಡೆಸಬೇಕಿದೆ. ಜೂನ್‌ನಲ್ಲಿ ಕೆಪಿಸಿಸಿ ಪಾಧಿಕಾರಿಗಳ ಸಭೆ ನಡೆಸಲು ಉದ್ದೇಶಿಸಲಾಗಿದ್ದು, ಸೋನಿಯಾ, ರಾಹುಲ್ ಆಗಮಿಸುವ ನಿರೀಕ್ಷೆ ಇದೆ ಎಂದು ನಂತರ ಮಾತನಾಡಿದ ದಿಗ್ವಿಜಯ್ ಸಿಂಗ್ ತಿಳಿಸಿದರು.

ಸಚಿವರಾದ ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ್, ಎಐಸಿಸಿ ಕಾರ್ಯದರ್ಶಿಗಳಾದ ಡಾ. ಚೆಲ್ಲಕುಮಾರ್, ಶಾಂತಾರಾಮ ನಾಯಕ್ ಸಭೆಯಲ್ಲಿ ಪಾಲ್ಗೊಂಡಿದ್ದರು.
---

ಸರಕಾರ ಉನ್ನತ ಶ್ರೇಣಿಯಲ್ಲಿ ಪಾಸ್
ವರ್ಷ ಪೂರೈಸಿರುವ ಸರಕಾರ ಉನ್ನತ ಶ್ರೇಣಿಯಲ್ಲಿ (ಡಿಸ್ಟಿಂಗ್‌ಷನ್) ಪಾಸಾಗಿದೆ ಎಂದು ದಿಗ್ವಿಜಯ್

ಸಿಂಗ್ ಶಹಬ್ಬಾಸ್‌ಗಿರಿ ಕೊಟ್ಟರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘‘ರಾಜ್ಯ ನಾಯಕತ್ವದ ಬಗ್ಗೆ ಹೈಕಮಾಂಡ್‌ಗೆ ಸಮಾಧಾನವಿದೆ. ವರ್ಷದ ಅವಧಿಯಲ್ಲಿ ಉತ್ತಮ ಯೋಜನೆ ಜಾರಿಗೊಳಿಸಲಾಗಿದೆ,’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
---

ಡಿಸಿಎಂ ಸ್ಥಾನಕ್ಕೆ ಒತ್ತಾಯ
ಈ ನಡುವೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂದು ಪಕ್ಷದ ಎಸ್‌ಸಿ ಘಟಕದ ಮುಖಂಡರು, ಕಾರ್ಯಕರ್ತರು ಒತ್ತಾಯಿಸಿದರು. ಈ ಸಂಬಂಧ ವಿಧಾನಸಭೆ ಚುನಾವಣೆಯಲ್ಲಿ ಕೆಜಿಎಫ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿ. ಶಂಕರ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿ ಎದುರು ಪ್ಲೆಕ್ಸ್‌ಗಳನ್ನು ಪ್ರದರ್ಶಿಸಿದ ಅವರು, ತಕ್ಷಣವೇ ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಳಿಕ ದಿಗ್ವಿಜಯ್ ಸಿಂಗ್ ಅವರಿಗೂ ಮನವಿ ಸಲ್ಲಿಸಿರು.
----

ಸಂಪುಟ ವಿಸ್ತರಣೆ ತಕ್ಷಣದ ಆದ್ಯತೆಯಲ್ಲ
ಸಚಿವ ಸಂಪುಟ ವಿಸ್ತರಣೆ/ ಪುನಾರಚನೆ ತಕ್ಷಣದ ಅಗತ್ಯವಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದರು. ಸಮನ್ವಯ ಸಮಿತಿ ಸಭೆ ಬಳಿಕ ಮಾತನಾಡಿದ ಅವರು ‘‘ಮೇಲ್ಮನೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು, ನಿಗಮ ಮಂಡಳಿ ನೇಮಕ ಕೈಗೊಳ್ಳುವುದು ಈಗಿನ ಆದ್ಯತೆಯಾಗಿದೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು,’’ ಎಂದರು.

‘‘ಚುನಾವಣೋತ್ತರ ಸಮೀಕ್ಷೆಗಳಲ್ಲಿ ನಂಬಿಕೆಯಿಲ್ಲ. ಈ ಕುರಿತು ಚರ್ಚಿಸುವುದರಲ್ಲೂ ಅರ್ಥವಿಲ್ಲ. ಕಾಂಗ್ರೆಸ್‌ಗೆ 18ರಿಂದ 20 ಸ್ಥಾನ ಬರುವ ವಿಶ್ವಾಸವಿದೆ,’’ ಎಂದು ಹೇಳಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ