ಆ್ಯಪ್ನಗರ

ಇ-ನ್ಯೂಸ್: 1 ಟಿಬಿ ಮೆಮೊರಿ ಕಾರ್ಡ್

ಅಂಗೈಯಲ್ಲೇ ಜಗತ್ತು ಎಂದರೆ ಇದೇ. ತಂತ್ರಜ್ಞಾನ ಕಂಪನಿ ಸ್ಯಾನ್‌ಡಿಸ್ಕ್ ಇದೀಗ 1 ಟಿಬಿ (1024 ಜಿಬಿ) ಸಾಮರ್ಥ್ಯದ ಎಸ್‌ಡಿಎಕ್ಸ್‌ಸಿ ಕಾರ್ಡನ್ನು ಬಿಡುಗಡೆಗೊಳಿಸಿದೆ.

Vijaya Karnataka Web 26 Sep 2016, 4:00 am
ಅಂಗೈಯಲ್ಲೇ ಜಗತ್ತು ಎಂದರೆ ಇದೇ. ತಂತ್ರಜ್ಞಾನ ಕಂಪನಿ ಸ್ಯಾನ್‌ಡಿಸ್ಕ್ ಇದೀಗ 1 ಟಿಬಿ (1024 ಜಿಬಿ) ಸಾಮರ್ಥ್ಯದ ಎಸ್‌ಡಿಎಕ್ಸ್‌ಸಿ ಕಾರ್ಡನ್ನು ಬಿಡುಗಡೆಗೊಳಿಸಿದೆ. 4ಕೆ ಹಾಗೂ 8 ಕೆ ಪಿಕ್ಸೆಲ್ ರೆಸೊಲ್ಯುಶನ್ ಇರುವ ಫೋಟೋ ವೀಡಿಯೋ ಫೈಲುಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನದಲ್ಲಿರಿಸಿಕೊಂಡು ಈ ಮೆಮೊರಿ ಕಾರ್ಡ್ ರೂಪಿಸಲಾಗಿದೆ ಎಂದು ಸ್ಯಾನ್‌ಡಿಸ್ಕ್ ಕಂಪನಿಯನ್ನು ಖರೀದಿಸಿರುವ ವೆಸ್ಟರ್ನ್ ಡಿಜಿಟಲ್ ತಿಳಿಸಿದೆ. ಇದಿನ್ನೂ ಪ್ರೋಟೋಟೈಪ್ ಹಂತದಲ್ಲಿದ್ದು, ಬೆಲೆ ಹಾಗೂ ಲಭ್ಯತೆಯ ವಿವರ ಇನ್ನೂ ತಿಳಿದುಬಂದಿಲ್ಲ. ಎರಡು ವರ್ಷಗಳ ಹಿಂದೆ 512 ಜಿಬಿ ಸಾಮರ್ಥ್ಯದ ಎಸ್‌ಡಿ ಕಾರ್ಡ್ ಬಿಡುಗಡೆಗೊಳಿಸಿರುವ ವೆಸ್ಟರ್ನ್ ಡಿಜಿಟಲ್, ಅದರ ಬೆಲೆಯನ್ನು ಸುಮಾರು 52 ಸಾವಿರ ರೂ.ಗೆ ನಿಗದಿಪಡಿಸಿತ್ತು. ಇದೀಗ ಈ ಪುಟ್ಟ ಮೆಮೊರಿ ಕಾರ್ಡ್ ವಿಶೇಷತಃ ಛಾಯಾಗ್ರಾಹಕರಿಗೆ ಮತ್ತಷ್ಟು ಆಯ್ಕೆಗಳನ್ನು ನೀಡುವಂತಾಗಿದೆ.
Vijaya Karnataka Web e news 1 tb memory card
ಇ-ನ್ಯೂಸ್: 1 ಟಿಬಿ ಮೆಮೊರಿ ಕಾರ್ಡ್


ಆಧಾರ್ ದೃಢೀಕರಣಕ್ಕೆ Skype

ಸ್ಕೈಪ್ ಎಂಬ ವೀಡಿಯೋ ಸಂದೇಶ ವಿನಿಮಯ ಸೇವೆಯನ್ನು ಆಧಾರ್ ಡೇಟಾಬೇಸ್ ಆಧಾರದ ದೃಢೀಕರಣ ಪ್ರಕ್ರಿಯೆಗೆ ಹೇಗೆಲ್ಲಾ ಬಳಸಬಹುದೆಂಬ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಂತ್ರಜ್ಞಾನ ದಿಗ್ಗಜ ಸಂಸ್ಥೆ ಮೈಕ್ರೋಸಾಫ್ಟ್ ಹೇಳಿದೆ. 'ಅದು ಈಗಾಗಲೇ ವಿಂಡೋಸ್ 10 ಮೂಲಕ ಕಣ್ಣುಪಾಪೆ ದೃಢೀಕರಣವನ್ನು ಬೆಂಬಲಿಸುತ್ತಿದ್ದು, ವಿಭಿನ್ನ ಸಾಧ್ಯತೆಗಳನ್ನು ಕೇಂದ್ರಕ್ಕೆ ನೀಡಿದ್ದೇವೆ. ಆಧಾರ್ ದೃಢೀಕರಣ ಅಗತ್ಯವಿರುವ ಸರಕಾರಿ ಸೇವೆಗಳಿಗೆ ಸ್ಕೈಪ್ ಬಳಸಲು ಸಾಧ್ಯವಾಗಲಿದೆ. ಆದರೆ, ಸರಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆಂದು ಕಾದುನೋಡುತ್ತಿದ್ದೇವೆ' ಎಂದು ಮೈಕ್ರೋಸಾಫ್ಟ್ ಇಂಡಿಯಾ ಅಧ್ಯಕ್ಷ ಭಾಸ್ಕರ್ ಪ್ರಾಮಾಣಿಕ್ ಹೇಳಿದ್ದಾರೆ.

ಮಾಹಿತಿ ಅಳಿಸಿ: WhatsApp ಗೆ ಕೋರ್ಟ್

ವಾಟ್ಸಪ್ ಸೇವೆಯ ಹೊಸ ಗೋಪ್ಯತಾ ನೀತಿ ಜಾರಿಗೆ ಬರುವ ಸೆಪ್ಟೆಂಬರ್ 25ರೊಳಗೆ, ಈಗಾಗಲೇ ಅದರಿಂದ ಹೊರಬಂದಿರುವ ಬಳಕೆದಾರರ ಎಲ್ಲ ಮಾಹಿತಿಯನ್ನು ಅಳಿಸುವಂತೆ ದಿಲ್ಲಿ ಹೈಕೋರ್ಟು ವಾಟ್ಸಪ್‌ಗೆ ಸೂಚಿಸಿದೆ. ವಾಟ್ಸಪ್‌ನಿಂದ ನಿರ್ಗಮಿಸಿದವರ ವಿವರಗಳನ್ನು ಅದರ ಮಾತೃಸಂಸ್ಥೆಯಾಗಿರುವ ಫೇಸ್‌ಬುಕ್ ಜತೆ ಹಂಚಿಕೊಳ್ಳಬಾರದು ಎಂದೂ ಹೈಕೋರ್ಟ್ ಸೂಚಿಸಿದೆ. ವಾಟ್ಸಪ್ ಜಾರಿಗೆ ತರಲಿರುವ ಹೊಸ ಪ್ರೈವೆಸಿ ಪಾಲಿಸಿಗೆ ಈಗಾಗಲೇ ಒಪ್ಪಿರುವ ಬಳಕೆದಾರರ ಮಾಹಿತಿಯನ್ನೂ ಹಂಚದಂತೆ ಮುಖ್ಯ ನ್ಯಾಯಮೂರ್ತಿ ಜಿ.ರೋಹಿಣಿ ಹಾಗೂ ನ್ಯಾಯಮೂರ್ತಿ ಸಂಗೀತಾ ಧೀಂಗ್ರಾ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿದೆ.

ಹಿಂದಿನ ಕ್ಷಣಗಳನ್ನೂ ದಾಖಲಿಸಿಕೊಳ್ಳುವ ಕ್ಯಾಮೆರಾ

ನಿಮ್ಮ ಮಗು ಇಟ್ಟ ಮೊದಲ ಹೆಜ್ಜೆಯ ವೀಡಿಯೋ ರೆಕಾರ್ಡಿಂಗ್ ಮಾಡಲು ಮರೆತಿರಾ? ಇಂತಹಾ ಕಳೆದುಕೊಂಡ ಭಾವನೆಗಳನ್ನು, ಅನುಭವಗಳನ್ನು 'ಕಾಲದ ಹಿಂದಕ್ಕೆ ಸರಿದು' ಮತ್ತೆ ಸೆರೆಹಿಡಿದಿಟ್ಟುಕೊಳ್ಳಲು ಅವಕಾಶ ಮಾಡಿಕೊಡಲಿದೆ ಪಾಕೆಟ್ ಗಾತ್ರದ ಪುಟ್ಟ ಕ್ಯಾಮೆರಾ. ಪರ್ಫೆಕ್ಟ್ ಮೆಮೊರಿ ಎಂಬ ಹೆಸರಿನ ಈ ಕ್ಯಾಮೆರಾವನ್ನು ಅಮೆರಿಕದ ಕಂಪನಿಯೊಂದು ಅಭಿವೃದ್ಧಿಪಡಿಸಿದೆ. ಪುಟ್ಟ ಗಾತ್ರ, 12 ಮೆಗಾಪಿಕ್ಸೆಲ್ ಕ್ಯಾಮೆರಾ ಇದರಲ್ಲಿದ್ದು, ಆಡಿಯೋ ಹಾಗೂ ಹೈಡೆಫಿನಿಶನ್ ವೀಡಿಯೋವನ್ನು ಕೂಡ ಇದು ರೆಕಾರ್ಡ್ ಮಾಡಿಕೊಳ್ಳಬಲ್ಲುದು.

ಈ ಕ್ಯಾಮೆರಾ ನಿರಂತರವಾಗಿ ರೆಕಾರ್ಡ್ ಮಾಡುತ್ತದೆ ಮತ್ತು ಐದು ನಿಮಿಷಗಳ ಅಥವಾ ಪೂರ್ವನಿಗದಿತ ಸಮಯದಷ್ಟು ಹಿಂದಿನ ಫೂಟೇಜನ್ನು ಕೂಡ ದಾಖಲಿಸಿಕೊಳ್ಳಬಹುದಾಗಿದೆಯಂತೆ.

ಯಾವ ಕ್ಷಣದಲ್ಲಿ ಕೂಡ ಯಾವುದೇ ಸುಂದರ ಕ್ಷಣಗಳು ಘಟಿಸಬಹುದು, ಉದಾಹರಣೆಗೆ, ಮಗುವಿನ ಮೊದಲ ಹೆಜ್ಜೆ, ಮೊದಲ ತೊದಲುನುಡಿ. ಈ ಕ್ಯಾಮೆರಾ ಅನ್ ಮಾಡಿಟ್ಟುಕೊಂಡರೆ ಅದನ್ನು ದಾಖಲಿಸಿಕೊಳ್ಳುವುದು ಸಾಧ್ಯವಾಗುತ್ತದೆ ಎಂದು ಜನರಲ್ ಸ್ಟ್ರೀಮಿಂಗ್ ಸಿಸ್ಟಮ್ಸ್ ಕಂಪನಿಯ ಸಿಒಒ ಜೂಲ್ಯ್ ವಿನ್‌ಫೀಲ್ಡ್ ಹೇಳಿದ್ದಾರೆ.

ಈ ಸಾಧನವನ್ನು ದೇಹದಲ್ಲಿ ವೈರುಗಳಿಲ್ಲದೆ ಧರಿಸಿಕೊಳ್ಳಬಹುದಾಗಿದೆ. ಕಾರಿನ ಡ್ಯಾಶ್‌ಬೋರ್ಡ್‌ಗೂ ಲಗತ್ತಿಸಬಹುದು ಅಥವಾ ಯಾವುದೇ ಮೇಲ್ಮೈಗೆ ಅಂಟಿಸಬಹುದಷ್ಟೇ ಅಲ್ಲದೆ, ನಾಯಿ-ಬೆಕ್ಕುಗಳ ಕುತ್ತಿಗೆಯಲ್ಲಿಯೂ ತೊಡಿಸಬಹುದಾಗಿದೆ. ಟೈಮ್ ಲ್ಯಾಪ್ಸ್ ಫೋಟೋಗ್ರಫಿ ಎಂಬ ತಂತ್ರಜ್ಞಾನ ಇದರಲ್ಲಿ ಬಳಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌