ಆ್ಯಪ್ನಗರ

ಟ್ವಿಟರ್‌ ಬಳಸುತ್ತಿದ್ದೀರಾ?: ಸುರಕ್ಷತೆ ಬಗ್ಗೆ ಇರಲಿ ಎಚ್ಚರ

ಫೇಸ್‌ಬುಕ್‌, ವಾಟ್ಸಾಪ್‌, ಲಿಂಕ್ಡ್‌ಇನ್‌ ಮುಂತಾದ ಸಾಮಾಜಿಕ ಜಾಲ ತಾಣಗಳ (ಸೋಷಿಯಲ್‌ ವೆಬ್‌ಸೈಟ್ಸ್‌) ಮಧ್ಯೆ ತನ್ನದೇ ಆದ ಛಾಪು ಒತ್ತಿರುವುದು ಟ್ವಿಟರ್‌.

Vijaya Karnataka Web 13 Feb 2017, 12:15 pm

ಮಾಹಿತಿ@ತಂತ್ರಜ್ಞಾನ: ಅವಿನಾಶ್‌ ಬಿ.

ಫೇಸ್‌ಬುಕ್‌, ವಾಟ್ಸಾಪ್‌, ಲಿಂಕ್ಡ್‌ಇನ್‌ ಮುಂತಾದ ಸಾಮಾಜಿಕ ಜಾಲ ತಾಣಗಳ (ಸೋಷಿಯಲ್‌ ವೆಬ್‌ಸೈಟ್ಸ್‌) ಮಧ್ಯೆ ತನ್ನದೇ ಆದ ಛಾಪು ಒತ್ತಿರುವುದು ಟ್ವಿಟರ್‌. ಪೋಸ್ಟ್‌ ಮಾಡಲು ಕೇವಲ 140 ಪದಗಳ ಮಿತಿಯೊಂದಿಗೆ ಆರಂಭವಾಗಿದ್ದ ಈ ಕಿರು ಸಾಮಾಜಿಕ ಜಾಲತಾಣವು ನಗರ ಕೇಂದ್ರಿತವಾಗಿ ಬೆಳೆದಿದ್ದೇ ಹೆಚ್ಚು. ಗ್ರಾಮೀಣ ಭಾಗದವರು ಇದನ್ನು ಬಳಸುವುದು ಕಡಿಮೆ ಎಂಬುದು ಇದುವರೆಗಿನ ಅಂದಾಜು.

Vijaya Karnataka Web how to be safe in twitter
ಟ್ವಿಟರ್‌ ಬಳಸುತ್ತಿದ್ದೀರಾ?: ಸುರಕ್ಷತೆ ಬಗ್ಗೆ ಇರಲಿ ಎಚ್ಚರ


ಆದರೆ, ಜನರ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯರಿಗೋ, ವಿದೇಶದಲ್ಲಿರುವವರ ಸಂಕಷ್ಟದ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೋ, ರೈಲಿನಲ್ಲಿನ ಅವ್ಯವಸ್ಥೆಗಳ ಕುರಿತು ರೈಲ್ವೇ ಸಚಿವ ಸುರೇಶ್‌ ಪ್ರಭು ಅವರಿಗೋ ಟ್ವೀಟ್‌ ಮಾಡಿದರೆ ಬಲುಬೇಗನೇ ಕೆಲಸವಾಗಿರುವ ಉದಾಹರಣೆಗಳನ್ನು ನಾವು ಪ್ರತಿದಿನವೆಂಬಂತೆ ಓದುತ್ತಿದ್ದೇವೆ. ಅಷ್ಟೇ ಅಲ್ಲದೆ, ತಂತ್ರಜ್ಞಾನ ನಗರಿ ಬೆಂಗಳೂರಿನಲ್ಲಂತೂ ಪೊಲೀಸ್‌ ಇಲಾಖೆಯು ಸರ್ವಸನ್ನದ್ಧವಾಗಿ ಟ್ವಿಟರ್‌ನಲ್ಲಿ, ಫೇಸ್‌ಬುಕ್‌ನಲ್ಲಿ ಜನ ಜಾಗೃತಿ ಮೂಡಿಸುತ್ತಿರುವುದು, ದೂರುಗಳನ್ನು ಸ್ವೀಕರಿಸುತ್ತಿರುವುದು ನಗರದ ಜನರಿಂದ ಸೈ ಅನ್ನಿಸಿಕೊಂಡಿದೆ. ಇದಲ್ಲದೆ, ಬ್ರೇಕಿಂಗ್‌ ಸುದ್ದಿಗಳು, ಪತ್ರಿಕಾ ಹೇಳಿಕೆಗಳೂ ಕೂಡ ಟ್ವಿಟರ್‌ ಮೂಲಕವೇ ಬರುತ್ತಿರುವುದು ಈಗಿನ ವಿದ್ಯಮಾನ.

ಇವೆಲ್ಲ ಪಾಸಿಟಿವ್‌ ವಿಚಾರಗಳ ನಡುವೆ, ಟ್ವಿಟರ್‌ ಖಾತೆಯೇ ಹ್ಯಾಕ್‌ ಆಗಿರುವ ಅದೆಷ್ಟೋ ಸುದ್ದಿಗಳನ್ನೂ ನಾವು ಓದುತ್ತಿದ್ದೇವೆ. ಹೀಗಾಗಿ ಗ್ರಾಮೀಣ ಭಾಗದಲ್ಲಿರುವವರಿಗೆ ಈ ಬಗ್ಗೆ ಒಂದು ರೀತಿಯ ಆತಂಕವಿದೆ. ನಮ್ಮ ಟ್ವಿಟರ್‌ ಖಾತೆಯ ಸುರಕ್ಷತೆಯ ಬಗ್ಗೆ ಒಂದಿಷ್ಟು ಕಾಳಜಿ ವಹಿಸಿಕೊಂಡರೆ ಈ ಆತಂಕ ಅನಗತ್ಯ ಎಂದು ಹೇಳಿಕೊಡುವುದು ಈ ಅಂಕಣದ ಉದ್ದೇಶ. ಜನಪ್ರತಿನಿಧಿಗಳನ್ನು, ನಮ್ಮ ಆಡಳಿತ ವ್ಯವಸ್ಥೆಯನ್ನು ಸಂಪರ್ಕಿಸಲು ಅತ್ಯಂತ ಸುಲಭ ಮತ್ತು ಕ್ಷಿಪ್ರ ಮಾರ್ಗವಾಗಿ ಟ್ವಿಟರ್‌ ಅನ್ನೂ ಬಳಸಿಕೊಳ್ಳಬಹುದು ಎಂಬ ಸಂದೇಶಗಳೊಂದಿಗೆ, ಟ್ವಿಟರ್‌ ಖಾತೆಯ ಭದ್ರತೆ ಕುರಿತು ಒಂದಿಷ್ಟು ಸಲಹೆಗಳು ಇಲ್ಲಿವೆ.

- ಕ್ಲಿಷ್ಟಕರ ಪಾಸ್‌ವರ್ಡ್‌ -

ಎಲ್ಲ ಆನ್‌ಲೈನ್‌ ವ್ಯವಸ್ಥೆಗೆ ಇರುವಂತೆ ಟ್ವಿಟರ್‌ಗೂ ಅತ್ಯಂತ ಪ್ರಬಲವಾದ ಮತ್ತು ಬೇರೆಯವರು ಸುಲಭವಾಗಿ ಊಹಿಸಲಾಗದ ಪಾಸ್‌ವರ್ಡ್‌ ಬಳಸುವುದು ಅಗತ್ಯ. ಇದರಲ್ಲಿ ನಿಮ್ಮ ಜನ್ಮದಿನಾಂಕ, ಹೆಸರು, ಊರಿನ ಹೆಸರು ಮುಂತಾದ ಸುಲಭಗ್ರಾಹ್ಯ ಪದಗಳು ಇಲ್ಲದಂತೆ ನೋಡಿಕೊಳ್ಳಿ. ಕ್ಯಾಪಿಟಲ್‌-ಸ್ಮಾಲ್‌ ಅಕ್ಷರಗಳು, ಅಂಕಿಗಳು ಮತ್ತು ವಿಶೇಷ ಅಕ್ಷ ರಗಳ ಕಾಂಬಿನೇಷನ್‌ ಇದ್ದರೆ ನಿಮ್ಮ ಪಾಸ್‌ವರ್ಡ್‌ ಹೆಚ್ಚು ಸುರಕ್ಷಿತವಾಗಿರುತ್ತದೆ. ಉದಾಹರಣೆಗೆ, diaspora1435 ಅನ್ನೋದು ನಿಮ್ಮ ಪಾಸ್‌ವರ್ಡ… ಆಗಿದ್ದರೆ, ಅದನ್ನೇ Di@$p0r@1435 ಎಂಬ ಮಾದರಿಯಲ್ಲಿ ಪಾಸ್‌ವರ್ಡ್ ಆಗಿ ಬಳಸಬಹುದು.

ಲಾಗಿನ್‌ ವೆರಿಫಿಕೇಶನ್‌-

ಹೆಚ್ಚು ಖಾತೆಗಳು ಹ್ಯಾಕ್‌ ಆಗುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಟ್ವಿಟರ್‌, ಈಗ ಲಾಗಿನ್‌ ವೆರಿಫಿಕೇಶನ್‌ ವ್ಯವಸ್ಥೆ ಒದಗಿಸಿದೆ. ಟ್ವಿಟರ್‌ ಲಾಗಿನ್‌ ಆಗಿ ಸೆಟ್ಟಿಂಗ್ಸ್‌ನಲ್ಲಿ ಸೆಕ್ಯುರಿಟಿ ಮತ್ತು ಪ್ರೈವೆಸಿ ಎಂಬಲ್ಲಿ ಕ್ಲಿಕ್‌ ಮಾಡಿ. ವೆರಿಫಿಕೇಶನ್‌ ಆ್ಯಕ್ಟಿವೇಟ್ ಮಾಡಿ. ಪ್ರತಿ ಬಾರಿ ನಿಮ್ಮ ಖಾತೆಗೆ ಲಾಗಿನ್‌ ಆದಾಗ, ನಿಮ್ಮ ಮೊಬೈಲ್‌ಗೆ ಎಸ್ಸೆಮ್ಮೆಸ್‌ ರೂಪದಲ್ಲಿ ಕೋಡ್‌ ಬರುತ್ತದೆ. ಅದನ್ನು ನಮೂದಿಸಿದರಷ್ಟೇ ಲಾಗಿನ್‌ ಆಗಬಹುದು. ಇದು ನಿಮ್ಮ ಖಾತೆಗೆ ಹೆಚ್ಚುವರಿ ಭದ್ರತೆ.

- ಮೆಸೇಜ್‌ ಲಿಂಕ್‌ ಕ್ಲಿಕ್‌ ಮಾಡಬೇಡಿ -

ಎಲ್ಲ ಕಡೆ ಇರುವಂತೆ ಇಲ್ಲಿಯೂ ಕೂಡ, ಮೇಲ್‌ಗೆ ಕಳುಹಿಸುವಂತೆ ಹ್ಯಾಕರ್‌ಗಳು ಫೀಶಿಂಗ್‌(ನಿಮ್ಮ ಕಂಪ್ಯೂಟರು, ನಿಮ್ಮ ಮಾಹಿತಿ ಕದಿಯಲು ಪೂರಕವಾಗುವ ತಂತ್ರಾಂಶವುಳ್ಳ) ಸಂದೇಶಗಳನ್ನು ಕಳುಹಿಸುತ್ತಾರೆ. ಕ್ಲಿಕ್‌ ಮಾಡಿದ ಮೊಬೈಲ್‌ ಅಥವಾ ಕಂಪ್ಯೂಟರ್‌ ಸಾಧನದ ಗೌಪ್ಯ ಮಾಹಿತಿಯನ್ನೆಲ್ಲಾ ಕದಿಯಬಲ್ಲರು ಅವರು. ಅಷ್ಟೇ ಅಲ್ಲದೆ, ಈ ಲಿಂಕ್‌ಗಳ ಮೂಲಕ ರಾರ‍ಯನ್ಸಮ್‌ವೇರ್‌ ಎಂಬ ಮಾಲ್‌ವೇರ್‌ ಅನುಸ್ಥಾಪಿಸಿ, ನಿಮ್ಮ ಸಾಧನವನ್ನೇ ಬ್ಲಾಕ್‌ ಮಾಡಿ, 'ಅನ್‌ಬ್ಲಾಕ್‌ ಮಾಡಬೇಕಿದ್ದರೆ ಇಂತಿಷ್ಟು ಹಣ ಕಳುಹಿಸಿ' ಅಂತೆಲ್ಲ ಸುಲಿಗೆಗೂ ಮುಂದಾಗಬಹುದು. ಹೀಗಾಗಿ, ಡೈರೆಕ್ಟ್ ಮೆಸೇಜ್‌ ಮೂಲಕ ಬರುವ ಶಂಕಾಸ್ಪದ ಲಿಂಕ್‌ಗಳನ್ನು ಕ್ಲಿಕ್‌ ಮಾಡಲು ಹೋಗಲೇಬೇಡಿ. ಅದು ನಿಮ್ಮ ಸ್ನೇಹಿತರಿಂದ ಬಂದರೂ ಅವರಲ್ಲಿ ಕೇಳದೆ ಕ್ಲಿಕ್‌ ಮಾಡಬೇಡಿ. ಯಾಕೆಂದರೆ, ನಿಮ್ಮ ಸ್ನೇಹಿತರ ಖಾತೆ ಹ್ಯಾಕ್‌ ಆಗಿ, ಅದರ ಮೂಲಕ ಇಂಥ ಲಿಂಕ್‌ಗಳನ್ನು ಕಳುಹಿಸುವ ಅಪಾಯವೂ ಇದೆ. ಹೀಗಾಗಿ ನಿಮ್ಮ ಯೂಸರ್‌ನೇಮ್ ಹಾಗೂ ಪಾಸ್‌ವರ್ಡ್‌ ದಾಖಲಿಸುವ ಮೊದಲು ವೆಬ್‌ಸೈಟ್‌ನ ಯುಆರ್‌ಎಲ್‌ (ವೆಬ್ ವಿಳಾಸ)ವನ್ನು ಸರಿಯಾಗಿ ಪರಿಶೀಲಿಸಿ ನೋಡಿ. ವಿಶೇಷವಾಗಿ ಸ್ಪೆಲ್ಲಿಂಗ್‌ ನಿಖರವಾಗಿ ಪರೀಕ್ಷಿಸಬೇಕು. ಒಂದು ಅಕ್ಷ ರ ಹೆಚ್ಚು ಕಡಿಮೆ ಮಾಡಿಯೋ, ಸ್ಥಾನ ಬದಲಾಯಿಸಿಯೋ ಅದೇ ವಿಳಾಸದಂತೆ ಕಾಣುವ ವೆಬ್ ವಿಳಾಸಗಳು ಅಪಾಯಕಾರಿಯೇ. ಇದು ಟ್ವಿಟರ್‌ನಲ್ಲಿ ಮಾತ್ರವೇ ಅಲ್ಲ, ಸಾರ್ವತ್ರಿಕವಾಗಿ ವಹಿಸಬೇಕಾದ ಎಚ್ಚರಿಕೆ.

- ಥರ್ಡ್‌ ಪಾರ್ಟಿ ಅಪ್ಲಿಕೇಶನ್‌-

ಟ್ವಿಟರ್‌ ಖಾತೆಯ ಮೂಲಕ ಹಲವಾರು ಥರ್ಡ್‌ ಪಾರ್ಟಿ ವೆಬ್ ತಾಣಗಳು ಹಾಗೂ ಅಪ್ಲಿಕೇಶನ್‌ಗಳಿಗೆ ಲಾಗಿನ್‌ ಆಗುವ ಆಯ್ಕೆಗಳಿರುತ್ತವೆ. ಆದರೆ, ಇಂಥ ಯಾವುದೇ ತಾಣಗಳಿಗೆ ಟ್ವಿಟರ್‌ ಮೂಲಕ ಲಾಗಿನ್‌ ಆಗುವಾಗ ಅವುಗಳು ವಿಶ್ವಾಸಾರ್ಹ ತಾಣಗಳೇ ಎಂದು ಪರಿಶೀಲಿಸಿ ಕಟ್ಟೆಚ್ಚರ ವಹಿಸಬೇಕು.

ಎಲ್ಲಕ್ಕೂ ಮುಖ್ಯವಾಗಿ, ಸಾಮಾಜಿಕ ಜಾಲ ತಾಣಗಳನ್ನು ಸ್ನೇಹಿತರ ಸಂಪಾದನೆಗಾಗಿ ಬಳಸಿಕೊಳ್ಳಬೇಕೇ ಹೊರತು ನಿಮ್ಮ ಇಡೀ ಪ್ರವರಗಳನ್ನು, ಇಮೇಲ್‌ ವಿಳಾಸ, ಮೊಬೈಲ್‌ ಸಂಖ್ಯೆಯಂಥ ಸೂಕ್ಷ್ಮ ಮಾಹಿತಿಯನ್ನೆಲ್ಲಾ ಪ್ರೊಫೈಲ್‌ನಲ್ಲಿ ತುಂಬಿಸಿಡುವ ತಾಣವಾಗಿಸಬೇಡಿ. ಮಾಹಿತಿ ಸೋರಿ ಹೋಗುವ ಅಪಾಯವಿರುತ್ತದೆ.

ಮತ್ತೊಂದು ನೆನಪಿಡಲೇಬೇಕಾದ ಸಂಗತಿಯೆಂದರೆ, ಕೆಲಸವಾದ ಮೇಲೆ ಟ್ವಿಟರ್‌ ಪುಟವನ್ನು ಮುಚ್ಚಬೇಡಿ, ಲಾಗೌಟ್ ಮಾಡಿದ ಬಳಿಕವಷ್ಟೇ ನಿರ್ಗಮಿಸಿ. ಇದು ಇ-ಮೇಲ್‌ ಹಾಗೂ ಬೇರೆ ಸಾಮಾಜಿಕ ಜಾಲತಾಣಗಳಿಗೂ ಅನ್ವಯಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌