ಆ್ಯಪ್ನಗರ

Google Shoelace: ಗೂಗಲ್‌ನಿಂದ ಹೊಸ ಸೋಷಿಯಲ್ ನೆಟ್‌ವರ್ಕ್ ಸಾಹಸ

ಒರ್ಕುಟ್, ಗೂಗಲ್ ಪ್ಲಸ್, ಬಝ್ ಮುಂತಾದ ಸೋಷಿಯಲ್ ನೆಟ್ವರ್ಕ್ ತಾಣಗಳಲ್ಲಿ ವಿಫಲವಾಗಿ ಮುಚ್ಚಿರುವ ಗೂಗಲ್, ಈಗ ಸ್ಥಳೀಯವಾಗಿ ಸ್ನೇಹಿತರನ್ನು ಆಸಕ್ತಿ ಆಧಾರಿತವಾಗಿ ಬೆಸೆಯುವ ಕಾರ್ಯಕ್ಕೆ ಕೈಹಚ್ಚಿದೆ. ಇದರ ಪರಿಣಾಮ ಗೂಗಲ್ ಶೂಲೇಸ್ ಆ್ಯಪ್. ಇದು ವರ್ಚುವಲ್ ಜಗತ್ತಿನಿಂದ ನಿಜ ಜಗತ್ತಿಗೆ ಜನರನ್ನು ಕರೆತರುವ ಪ್ರಯತ್ನವೂ ಹೌದು.

TNN & Agencies 12 Jul 2019, 5:21 pm
ಈಗಾಗಲೇ ಒರ್ಕುಟ್, ಗೂಗಲ್ ಪ್ಲಸ್, ಬಝ್ ಮುಂತಾದ ಸೋಷಿಯಲ್ ನೆಟ್ವರ್ಕ್ ತಾಣಗಳ ಮೂಲಕ ಪ್ರಯೋಗ ಮಾಡಿ, ಅದನ್ನು ಮುಂದುವರಿಸಲು ತ್ರಾಸಪಟ್ಟು ಮುಚ್ಚಿದ ಗೂಗಲ್, ಈ ಬಗ್ಗೆ ಸುಮ್ಮನೆ ಕೂತಿಲ್ಲ. ಇದೀಗ ಹೊಸದಾದ ಸಾಮಾಜಿಕ ಜಾಲವೊಂದನ್ನು ಪರಿಚಯಿಸಲಾರಂಭಿಸಿದೆ. ಅದರ ಹೆಸರು ಗೂಗಲ್ ಶೂಲೇಸ್.
Vijaya Karnataka Web Shoelace App


ಗೂಗಲ್ ಪ್ಲಸ್‌ನಂತಹಾ ಭರ್ಜರಿ ತಾಣದಲ್ಲೇ ವೈಫಲ್ಯ ಸಾಧಿಸಿದ್ದ ಗೂಗಲ್, ಶೂಲೇಸ್ ಆ್ಯಪ್ ಮೂಲಕ, ಫೇಸ್‌ಬುಕ್, ಟ್ವಿಟರ್ ಎದುರು ಕಳೆದುಕೊಂಡ ಘನತೆಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ.

ಅದೇ ಹಿಂದಿನ ತಂತ್ರದಂತೆ, ಸ್ನೇಹಿತರ ಆಹ್ವಾನದ ಮೂಲಕವಾಗಿ ಮಾತ್ರ ಶೂಲೇಸ್ ಆ್ಯಪ್ ಕೆಲಸ ಮಾಡುತ್ತದೆ ಮತ್ತು ಸದ್ಯಕ್ಕೆ ಇದು ನ್ಯೂಯಾರ್ಕ್ ವಾಸಿಗಳಿಗೆ ಮಾತ್ರ ಲಭ್ಯವಿದೆ. ನಿಧಾನವಾಗಿ ಜಗತ್ತಿನ ಇತರ ನಗರಗಳಿಗೂ ಇದು ವಿಸ್ತರಣೆಯಾಗಲಿದೆ.

ಇದು ಫೇಸ್‌ಬುಕ್ ಮತ್ತು ಟ್ವಿಟರ್‌ನಂತೆ ಯಾರ್ಯಾರನ್ನೋ, ಎಲ್ಲೋ ಇರುವವರನ್ನು ಫ್ರೆಂಡ್ ಮಾಡಿಕೊಳ್ಳುವಂತಲ್ಲ. ತೀರಾ ಹತ್ತಿರದವರನ್ನು, ತಾವಿರುವ ಊರಿನಲ್ಲೇ ಇರುವವರನ್ನು ಮತ್ತು ಸಮಾನ ಮನಸ್ಕರು, ಸಮಾನ ಹಿತಾಸಕ್ತಿಯುಳ್ಳವರನ್ನು ಒಂದುಗೂಡಿಸುವ ಒಂದು ವೇದಿಕೆಯಾಗಲಿದೆ ಇದು. ಇಷ್ಟೇ ಅಲ್ಲ, ಇಂಟರ್ನೆಟ್ ಸಂಪರ್ಕಿತ ಅವಾಸ್ತವಿಕ ಜಗತ್ತಿಗಿಂತಲೂ ವಾಸ್ತವ ಜಗತ್ತಿನಲ್ಲಿ ಹೆಚ್ಚು ಕೆಲಸ ಮಾಡುವಂತೆ, ಸ್ನೇಹಿತರನ್ನು ಒಂದುಗೂಡಿಸುವ ವೇದಿಕೆಯಾಗಲಿದೆ ಇದು.

ಶೂಲೇಸ್‌ನ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಮಾಹಿತಿಯಂತೆ, ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ಮಾತ್ರ ಇದು ದೊರೆಯುತ್ತಿದೆ ಮತ್ತು ಶೀಘ್ರವೇ ಅಮೆರಿಕದ ಇತರ ನಗರಗಳಿಗೂ ವಿಸ್ತರಣೆಯಾಗಲಿದೆ. ಬಳಕೆದಾರರ ಆಸಕ್ತಿಯನ್ನು ಕೇಳುವ ಈ ಆ್ಯಪ್, ಅದಕ್ಕೆ ಅನುಸಾರವಾಗಿ ಅವರಿರುವ ಜಾಗದ ಸುತ್ತಮುತ್ತ ನಡೆಯುವ, ಆ ಆಸಕ್ತಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಶಿಫಾರಸು ಮಾಡುತ್ತದೆ. ಈ ಮೂಲಕ ವರ್ಚುವಲ್ ಸ್ನೇಹಿತರು, ನಿಜ ಜಗತ್ತಿನ ಸ್ನೇಹಿತರಾಗಿ, ಕೆಲಸ ಕಾರ್ಯ ಮಾಡಲು ಪ್ರೇರೇಪಿಸುತ್ತದೆ.

ಭೌಗೋಳಿಕ ನಿರ್ಬಂಧಗಳಷ್ಟೇ ಅಲ್ಲದೆ, ಇದು ಆಹ್ವಾನದ ಮೂಲಕವಾಗಿ ಮಾತ್ರವೇ ದೊರೆಯುವ ಆ್ಯಪ್. ಆಂಡ್ರಾಯ್ಡ್‌ನ ಪ್ಲೇ ಸ್ಟೋರ್ ಹಾಗೂ ಐಒಎಸ್‌ನ ಆ್ಯಪ್ ಸ್ಟೋರ್‌ಗಳಲ್ಲಿ ಈ ಆ್ಯಪ್ ಲಭ್ಯವಿದೆ. ಆದರೆ ಪಡೆಯಲು ನೀವು ನ್ಯೂಯಾರ್ಕ್‌ನಲ್ಲಿರಬೇಕು ಮತ್ತು ನಿಮ್ಮಲ್ಲಿ ಇನ್ವಿಟೇಶನ್ ಇರಬೇಕಾಗುತ್ತದೆ. ಒಂದೇ ಆಸಕ್ತಿಯ ಹೊಸಬರನ್ನು ಭೇಟಿಯಾಗಿ ಮಿತ್ರರನ್ನಾಗಿಸಿಕೊಳ್ಳುವ ಈ ಪ್ರಯತ್ನವು ಫಲ ನೀಡುವುದೇ ಎಂಬುದು ಕಾದು ನೋಡಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌