ಆ್ಯಪ್ನಗರ

WhatsApp, FB ಮೆಸೆಂಜರ್: ಕಳಿಸಿದ ಮೆಸೇಜ್ ಡಿಲೀಟ್ ಮಾಡುವುದು ಹೇಗೆ?

ಅವಸರದಲ್ಲಿ ಸಂದೇಶ ಕಳುಹಿಸಿಯಾಗಿದೆ, ಅದರಲ್ಲಿ ತಪ್ಪಿತ್ತು ಅಥವಾ ಗ್ರೂಪಿನ ನಿಯಮಗಳಿಗೆ ವಿರುದ್ಧವಾಗಿ ಸಂದೇಶವೊಂದು ಫಾರ್ವರ್ಡ್ ಆಗಿದೆ. ಅದನ್ನು ಅಳಿಸುವುದು ಹೇಗೆ? ಈ ಕುರಿತು ಆಯಾ ಆ್ಯಪ್‌ಗಳಲ್ಲಿ ಅವಕಾಶವಿದ್ದರೂ, ಅವುಗಳ ಬಗ್ಗೆ ಕೆಲವರಿಗೆ ಮಾಹಿತಿ ಇಲ್ಲ. ವಾಟ್ಸ್ಆ್ಯಪ್, ಫೇಸ್‌ಬುಕ್ ಮೆಸೆಂಜರ್‌ಗಳಲ್ಲಿ ಕಳುಹಿಸಲಾದ ಸಂದೇಶವನ್ನು ಅಳಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

Avinash Baipadithaya | Vijaya Karnataka Web 13 Feb 2019, 11:36 am
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ.
Vijaya Karnataka Web how to delete sent messages in whatsapp facebook messenger
WhatsApp, FB ಮೆಸೆಂಜರ್: ಕಳಿಸಿದ ಮೆಸೇಜ್ ಡಿಲೀಟ್ ಮಾಡುವುದು ಹೇಗೆ?


ಅವಸರದ ಕಾಲವಿದು. ಅಚಾತುರ್ಯಗಳು ಸಹಜ. ಹತ್ತಾರು ಮೆಸೇಜ್ ಗ್ರೂಪುಗಳು, ಒಂದರಲ್ಲಿ ಬಂದಿದ್ದು ಮತ್ತೊಂದಕ್ಕೆ ಫಾರ್ವರ್ಡ್ ಮಾಡುವ ಧಾವಂತ. ಆದರೆ, ಕೆಲವು ಗ್ರೂಪುಗಳಿಗೆ ಅದರದ್ದೇ ಆದ ಲಿಖಿತ/ಅಲಿಖಿತ ನಿಯಮಗಳಿರುತ್ತವೆ. ಹೀಗಾಗಿ ನಿಯಮ ಮೀರಿ, ಧಾವಂತದಲ್ಲಿ ಸಂದೇಶವನ್ನು ಫಾರ್ವರ್ಡ್ ಮಾಡಿಬಿಟ್ಟರೆ? ಕಚೇರಿಗೆ ಸಂಬಂಧಿಸಿದ ಗ್ರೂಪಿಗೆ ಕೌಟುಂಬಿಕ ಗ್ರೂಪಿನ ಮೆಸೇಜುಗಳನ್ನೂ ಹಾಕಿಬಿಟ್ಟರೆ? ಅಥವಾ ಏನೋ ತರಾತುರಿಯಲ್ಲೋ, ಕೋಪದಲ್ಲೋ ಸಂದೇಶ ಹಾಕಿಯಾಗಿದೆ, ಅದನ್ನು ಹಾಗೆ ಮಾಡಬಾರದಿತ್ತು ಎಂದು ಪಶ್ಚಾತ್ತಾಪವಾಗುತ್ತದೆ. ಇಂಥ ಸಂದರ್ಭಕ್ಕಾಗಿಯೇ, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಮುಂತಾದ ಕಿರು ಸಾಮಾಜಿಕ ಜಾಲ ತಾಣಗಳಲ್ಲಿ ಕಳುಹಿಸಿದ ಸಂದೇಶವನ್ನು ಡಿಲೀಟ್ ಮಾಡುವ ಆಯ್ಕೆ ನೀಡಲಾಗಿದೆ. ಇದಕ್ಕೆ ಇತ್ತೀಚಿನ ಹೊಸ ಸೇರ್ಪಡೆ ಫೇಸ್‌ಬುಕ್ ಮೆಸೆಂಜರ್.

ಕಳುಹಿಸಿದ ಸಂದೇಶವನ್ನು ಅಳಿಸುವ ವೈಶಿಷ್ಟ್ಯದ ಬಗ್ಗೆ ಕೆಲವರಿಗಷ್ಟೇ ತಿಳಿದಿದೆ. ಹೆಚ್ಚಿನವರಿಗೆ ಇದನ್ನು ಹೇಗೆ ಮಾಡಬೇಕೆಂಬುದರ ಅರಿವಿಲ್ಲ. ಹೀಗಾಗಿಯೇ, ಗ್ರೂಪುಗಳಲ್ಲಿ ಬಂದ ಸಂದೇಶಗಳಲ್ಲಿ, "ಕ್ಷಮಿಸಿ, ತಿಳಿಯದೇ ಫಾರ್ವರ್ಡ್ ಮಾಡಿಬಿಟ್ಟೆ" ಎಂಬ ಸಂದೇಶಗಳು ಬರುತ್ತಿವೆಯಾದರೂ, ಕಳುಹಿಸಿದ್ದನ್ನು ಡಿಲೀಟ್ ಮಾಡಬಹುದು ಅಥವಾ ಅಂಥದ್ದೊಂದು ಆಯ್ಕೆ ಇದೆ ಎಂಬುದು ಅವರ ಗಮನಕ್ಕೆ ಬಂದಂತಿಲ್ಲ. ಯಾವುದಾದರೂ ಮೆಸೆಂಜರ್, ವಾಟ್ಸ್ಆ್ಯಪ್, ಟೆಲಿಗ್ರಾಂ, ಇನ್‌ಸ್ಟಾಗ್ರಾಂ ಮುಂತಾದ ಗ್ರೂಪುಗಳಲ್ಲಿ ನಿಮಗೂ ಇಂಥ ಅನುಭವವಾಗಿದ್ದರೆ, ಅವರೆಲ್ಲರಿಗೆ ತಿಳಿಯಪಡಿಸಲು ಈ ಮಾಹಿತಿಯನ್ನು ಹಂಚಿಕೊಳ್ಳಿ.

ಅಳಿಸುವುದು ಹೇಗೆ?: ವಾಟ್ಸ್ಆ್ಯಪ್‌ನಲ್ಲಾದರೆ, ಯಾವುದೇ ಗ್ರೂಪಿಗೆ ಅಥವಾ ವೈಯಕ್ತಿಕವಾಗಿ ತಪ್ಪು ಸಂದೇಶ ಕಳುಹಿಸಿದ್ದರೆ ಅದನ್ನು ಡಿಲೀಟ್ ಮಾಡಲು ಒಂದು ಗಂಟೆ ಸಮಯಾವಕಾಶವಿದೆ. ಆ ಸಂದೇಶವನ್ನು ಬೆರಳಿನಿಂದ ಒತ್ತಿ ಹಿಡಿದಾಗ (ಟಚ್ ಆ್ಯಂಡ್ ಹೋಲ್ಡ್) ಸಂದೇಶವು ಆಯ್ಕೆಯಾಗುತ್ತದೆ. ಮೇಲ್ಭಾಗದಲ್ಲಿ ಕಾಣಿಸುವ ಡಿಲೀಟ್ ಬಟನ್ ಒತ್ತಿದಾಗ, 'ಡಿಲೀಟ್ ಫಾರ್ ಯುವರ್‌ಸೆಲ್ಫ್' ಹಾಗೂ 'ಡಿಲೀಟ್ ಫಾರ್ ಎವ್ರಿವನ್' ಎಂಬ ಎರಡು ಆಯ್ಕೆಗಳಿರುತ್ತವೆ. ಎರಡನೆಯದನ್ನು ಒತ್ತಿದರೆ, ಗ್ರೂಪಿನಲ್ಲಿರುವ ಯಾರಿಗೂ ನೀವು ಕಳುಹಿಸಿದ ಸಂದೇಶವು ಕಾಣಿಸುವುದಿಲ್ಲ. ಬದಲಾಗಿ 'ದಿಸ್ ಮೆಸೇಜ್ ವಾಸ್ ಡಿಲೀಟೆಡ್' ಅಂತಷ್ಟೇ ಗೋಚರಿಸುತ್ತದೆ. ಇಲ್ಲಿ ಗಮನಿಸಬೇಕಾದ ಎರಡು ಅಂಶಗಳಿವೆ. ಒಂದನೆಯದು, ನೀವು ಡಿಲೀಟ್ ಮಾಡುವ ಮುನ್ನ ಗ್ರೂಪಿನಲ್ಲಿದ್ದವರು ಅಥವಾ ನಿಮ್ಮಿಂದ ಸಂದೇಶ ಸ್ವೀಕರಿಸಿದವರು ಓದಿಬಿಟ್ಟರೆ, ನಿಮ್ಮ ಡಿಲೀಟ್ ಪ್ರಕ್ರಿಯೆಗೆ ಬೆಲೆ ಇರುವುದಿಲ್ಲ. ಹಾಗಿರುವಾಗ ತಪ್ಪಾಗಿ ಸಂದೇಶ ಹಾಕಿದ್ದಕ್ಕೆ ನೀವು ಕ್ಷಮೆ ಯಾಚಿಸುವುದೇ ಸೂಕ್ತ. ಎರಡನೇ ವಿಚಾರವೆಂದರೆ, ವಾಟ್ಸ್ಆ್ಯಪ್ ಕಿರು ತಂತ್ರಾಂಶವು (ಆ್ಯಪ್) ಉಭಯರ ಮೊಬೈಲ್ ಫೋನ್‌ಗಳಲ್ಲಿಯೂ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಆಗಿದ್ದರೆ ಮಾತ್ರವೇ ಇದು ಪರಿಣಾಮಕಾರಿಯಾಗಿರುತ್ತದೆ ಎಂಬುದು ಗಮನದಲ್ಲಿರಲಿ. ಮೂರನೇ ವಿಚಾರವೂ ಇದೆ. ಇತ್ತೀಚೆಗೆ ಸ್ಮಾರ್ಟ್‌ವಾಚ್‌ಗಳು ಕೂಡ ಬಂದಿವೆಯಲ್ಲ. ಮೆಸೇಜ್ ಬಂದ ತಕ್ಷಣ ಅದನ್ನು ಸ್ಮಾರ್ಟ್‌ವಾಚ್‌ನಲ್ಲೇ ನೋಡಬಹುದು. ನೀವು ಡಿಲೀಟ್ ಮಾಡುವ ಮುನ್ನವೇ ಅದು ತಲುಪಬೇಕಾದವರಿಗೆ ತಲುಪಿರಲೂಬಹುದು. ಹೀಗಾಗಿ, ಮೆಸೇಜ್ ಹಾಕುವ ಮುನ್ನ ಎಚ್ಚರಿಕೆ ವಹಿಸುವುದೇ ಸೂಕ್ತ.

ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಕೂಡ ಕಳುಹಿಸಿದ ಸಂದೇಶವನ್ನು ಒತ್ತಿ ಹಿಡಿದಾಗ, ಎಲ್ಲರಿಗೂ ಡಿಲೀಟ್ ಮಾಡಬೇಕೇ, ಅಥವಾ ನಿಮ್ಮ ಫೋನ್‌ನಲ್ಲಿ ಮಾತ್ರವೇ ಡಿಲೀಟ್ ಆದರೆ ಸಾಕೇ ಎಂಬ ಆಯ್ಕೆಯೂ ಇದೆ. ಮೊಬೈಲ್ ಫೋನ್‌ನಲ್ಲಿ ಆ್ಯಪ್ ಮೂಲಕ ಮಾತ್ರವಲ್ಲದೆ, ಕಂಪ್ಯೂಟರ್ ಸಿಸ್ಟಂಗಳಲ್ಲಿ ನಾವು ಮೆಸೆಂಜರ್ ಬಳಸುತ್ತಿದ್ದರೆ ಕೂಡ ಸಂದೇಶ ಅಳಿಸಬಹುದು. ಅದಕ್ಕಾಗಿ, ಆ ಸಂದೇಶದ ಬಳಿಯ ಮೂರು ಚುಕ್ಕಿಗಳನ್ನು ಕ್ಲಿಕ್ ಮಾಡಿದರೆ, ರಿಮೂವ್ ಎಂಬ ಆಯ್ಕೆ ಗೋಚರಿಸುತ್ತದೆ. ಅದನ್ನು ಒತ್ತಿದರಾಯಿತು. ಜತೆಗೆ ಸಂದೇಶವನ್ನು ಫಾರ್ವರ್ಡ್ ಮಾಡುವ ಆಯ್ಕೆಯನ್ನೂ ನೀಡಲಾಗಿದೆ.

ಗಮನಿಸಬೇಕಾದ ಅಂಶವೆಂದರೆ, ಎಲ್ಲ ರೀತಿಯ ಆ್ಯಪ್‌ಗಳಲ್ಲಿ, ಬೇರೆಯವರ ಸಂದೇಶವನ್ನು ಡಿಲೀಟ್ ಮಾಡಲು ನಮಗೆ ಸಾಧ್ಯವಾಗುವುದಿಲ್ಲ. ಡಿಲೀಟ್ ಮಾಡಲು ಸಾಧ್ಯ ಅಂದುಕೊಂಡು ಡಿಲೀಟ್ ಮಾಡಿದರೂ, ಅದು ನಮ್ಮ ಫೋನ್‌ನಲ್ಲಷ್ಟೇ ಡಿಲೀಟ್ ಆಗಿರುತ್ತದೆ ಹೊರತು, ಗ್ರೂಪಿನಲ್ಲಿರುವ ಇತರರಿಗಂತೂ ಕಾಣಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌