ಆ್ಯಪ್ನಗರ

ರಾಜ್ಯದಲ್ಲಿ ಆಪಲ್‌ ಐಫೋನ್ ತಯಾರಿಕಾ ಘಟಕ ಸ್ಥಾಪನೆಗೆ ಸ್ಥಳ ವೀಕ್ಷಣೆ!..ಎಲ್ಲಿ ಗೊತ್ತಾ?

ಫಾಕ್ಸ್‌ಕಾನ್‌ ಕಂಪನಿಯು ಚೀನಾ, ಭಾರತ, ಜಪಾನ್‌, ವಿಯಟ್ನಾಂ, ಮಲೇಷ್ಯಾ, ಝೆಕ್‌ ರಿಪಬ್ಲಿಕ್‌, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಸಂಶೋಧನಾ ಕೇಂದ್ರ ಮತ್ತು ಉತ್ಪಾದನಾ ಘಟಕಗಳನ್ನು ಹೊಂದಿದ್ದು, 54 ಸಾವಿರಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಪಡೆದುಕೊಂಡಿದೆ. ಗುಣಮಟ್ಟಕ್ಕೆ ಹೆಸರಾಗಿರುವ ಕಂಪನಿಯು 2021ರಲ್ಲಿ 206 ಬಿಲಿಯನ್‌ ಡಾಲರ್‍‌ ಆದಾಯ ದಾಖಲಿಸಿದೆ

Authored byಭಾಸ್ಕರ್ ಶೆಟ್ಟಿ | Vijaya Karnataka Web 3 Mar 2023, 1:54 pm
ಜಗತ್ತಿನ ಅತ್ಯಂತ ಮುಂಚೂಣಿ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿರುವ ತೈವಾನ್‌ ಮೂಲದ "ಫಾಕ್ಸ್‌ಕಾನ್‌" ಸಮೂಹದ ಸಿಇಒ ಮತ್ತು ಅಧ್ಯಕ್ಷ ಯಂಗ್ ಲಿಯು ನೇತೃತ್ವದ ಉನ್ನತ ಮಟ್ಟದ ನಿಯೋಗವು ರಾಜ್ಯದಲ್ಲಿ ಆಪಲ್‌ ಫೋನ್‌ ತಯಾರಿಕಾ ಘಟಕ ಸ್ಥಾಪಿಸುವ ಸಂಬಂಧ ಸ್ಥಳ ವೀಕ್ಷಣೆಗೆ ಆಗಮಿಸಿದೆ. ಆಪಲ್ ಐಫೋನ್‌ ತಯಾರಿಕೆಯಲ್ಲಿ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿರುವ ಫಾಕ್ಸ್‌ಕಾನ್‌ ಕಂಪನಿಯು ರಾಜ್ಯದಲ್ಲಿ ವಿಮಾನ ನಿಲ್ದಾಣದ ಸಮೀಪವೇ $700 ಮಿಲಿಯನ್ ಡಾಲರ್ ವೆಚ್ಚದಲ್ಲಿ ಆಪಲ್ ಐಫೋನ್ ತಯಾರಿಕ ಘಟಕ ತೆರೆಯುವ ಚಿಂತನೆ ನಡೆಸಿದ್ದು, ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರೊಂದಿಗೆ ಶುಕ್ರವಾರ ಮೊದಲ ಸುತ್ತಿನ ಚರ್ಚೆ ನಡೆಸಿದೆ ಎಂದು ತಿಳಿದುಬಂದಿದೆ.!
Vijaya Karnataka Web ರಾಜ್ಯದಲ್ಲಿ ಆಪಲ್‌ ಐಫೋನ್ ತಯಾರಿಕಾ ಘಟಕ ಸ್ಥಾಪನೆಗೆ ಸ್ಥಳ ವೀಕ್ಷಣೆ!..ಎಲ್ಲಿ ಗೊತ್ತಾ?


ಫಾಕ್ಸ್‌ಕಾನ್‌ ಸಮೂಹ ಕಂಪನಿಯು ರಾಜ್ಯದಲ್ಲಿ ವಿಮಾನ ನಿಲ್ದಾಣದ ಸಮೀಪವೇ ಘಟಕ ತೆರೆಯುವ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಕಂಪನಿಗೆ ದೊಡ್ಡಬಳ್ಳಾಪುರದ ಕೆಐಎಡಿಬಿ ಪ್ರದೇಶದಲ್ಲಿ 300 ಎಕರೆ ಜಾಗ ತೋರಿಸಲಾಗುವುದು. ಕಂಪನಿಯು ಇಲ್ಲಿ ಹೂಡಿಕೆ ಮಾಡಿದರೆ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯದಲ್ಲಿ ಐಟಿಐ, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಪಠ್ಯಕ್ರಮಗಳನ್ನು ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ಇಡಿಯಾಗಿ ಪರಿಷ್ಕರಿಸಲಾಗಿದೆ. ಯುವಜನರಿಗೆ ಕೌಶಲ್ಯ ತರಬೇತಿ ಕಡ್ಡಾಯವಾಗಿರುವುದರಿಂದ ಫಾಕ್ಸ್‌ಕಾನ್‌ ಕಂಪೆನಿಗೆ ರಾಜ್ಯದಲ್ಲಿ ಅನುಕೂಲಕರ ವಾತಾವರಣವಿದೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಫಾಕ್ಸ್‌ಕಾನ್‌ ನಿಯೋಗವನ್ನು ಬರಮಾಡಿಕೊಂಡ ಸಚಿವರು, ರಾಜ್ಯದಲ್ಲಿ ಐಟಿ, ತಾಂತ್ರಿಕ ಶಿಕ್ಷಣ, ಕೌಶಲ್ಯಾಭಿವೃದ್ಧಿ, ನುರಿತ ಮಾನವ ಸಂಪನ್ಮೂಲ, ಉದ್ಯಮಗಳು ನೀಡುತ್ತಿರುವ ಸಹಭಾಗಿತ್ವ ಮತ್ತು ಇಲ್ಲಿರುವ ಅತ್ಯುತ್ತಮ ಕಾರ್ಯ ಪರಿಸರ ಕುರಿತು ಮನದಟ್ಟು ಮಾಡಿಕೊಟ್ಟರು. ಈ ವೇಳೆ ರಾಜ್ಯದಲ್ಲಿ ಪಠ್ಯಕ್ರಮಗಳನ್ನು ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ಇಡಿಯಾಗಿ ಪರಿಷ್ಕರಿಸಲಾಗಿದೆ. ನಮ್ಮಲ್ಲಿ 270 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಇವುಗಳಿಂದ ಪ್ರತೀವರ್ಷ 1.50 ಲಕ್ಷ ಪದವೀಧರರು ಹೊರಬರುತ್ತಿದ್ದಾರೆ. ಇದಲ್ಲದೆ ಯುವಜನರಿಗೆ ಕೌಶಲ್ಯ ತರಬೇತಿ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೆ ಸ್ಪಂದಿಸಿದ ಫಾಕ್ಸ್‌ಕಾನ್‌ ಸಮೂಹದ ಸಿಇಒ ಮತ್ತು ಅಧ್ಯಕ್ಷ ಯಂಗ್ ಲಿಯು ಅವರು, "ಐಟಿ ಮತ್ತಿತರ ತಂತ್ರಜ್ಞಾನ ವಲಯಗಳಲ್ಲಿ ಹಾಗೂ ಬಂಡವಾಳ ಆಕರ್ಷಣೆಯಲ್ಲಿ ಬೆಂಗಳೂರು ಪ್ರಶಸ್ತ ತಾಣವಾಗಿದೆ. ಹಾಗೆಯೇ ಉದ್ಯೋಗಾವಕಾಶಗಳು ಮತ್ತು ಸಂಶೋಧನೆಯ ದೃಷ್ಟಿಯಿಂದಲೂ ಈ ನಗರವು ಎಲ್ಲರನ್ನೂ ಸೆಳೆಯುತ್ತಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಷ್ಟೇ ಅಲ್ಲದೇ, ಭವಿಷ್ಯದಲ್ಲಿ ರಾಜ್ಯದಲ್ಲಿ ಮತ್ತಷ್ಟು ಉದ್ಯಮ ವಿಸ್ತರಣೆ ಮಾಡುವ ಕುರಿತಂತೆ ಆಶಾಭಾವನೆ ಹೊಂದಿರುವುದಾಗಿ ತಿಳಿಸಿದ್ದಾರೆ.

"ಫಾಕ್ಸ್‌ಕಾನ್‌ ಕಂಪನಿಯು ಚೀನಾ, ಭಾರತ, ಜಪಾನ್‌, ವಿಯಟ್ನಾಂ, ಮಲೇಷ್ಯಾ, ಝೆಕ್‌ ರಿಪಬ್ಲಿಕ್‌, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಸಂಶೋಧನಾ ಕೇಂದ್ರ ಮತ್ತು ಉತ್ಪಾದನಾ ಘಟಕಗಳನ್ನು ಹೊಂದಿದ್ದು, 54 ಸಾವಿರಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಪಡೆದುಕೊಂಡಿದೆ. ಗುಣಮಟ್ಟಕ್ಕೆ ಹೆಸರಾಗಿರುವ ಕಂಪನಿಯು 2021ರಲ್ಲಿ 206 ಬಿಲಿಯನ್‌ ಡಾಲರ್‍‌ ಆದಾಯ ದಾಖಲಿಸಿದೆ". ಕಂಪನಿಯು ಮೊಬೈಲ್‌ ತಯಾರಿಕೆ ಜತೆಗೆ ವಿದ್ಯುಚ್ಚಾಲಿತ ವಾಹನ, ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್, ಡಿಜಿಟಲ್ ಆರೋಗ್ಯ ಮತ್ತು ರೋಬೋಟಿಕ್ಸ್ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಮುಖ್ಯವಾಗಿ ಆಧುನಿಕ ಎಲೆಕ್ಟ್ರಾನಿಕ್ ಸಾಧನಗಳು, ಕ್ಲೌಡ್‌, ನೆಟ್‌ವರ್ಕಿಂಗ್‌ಗಳಲ್ಲಿ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದೆ ಎಂದು ಲಿಯು ಅವರು ಸಚಿವರಿಗೆ ವಿವರಿಸಿದರು.
ಲೇಖಕರ ಬಗ್ಗೆ
ಭಾಸ್ಕರ್ ಶೆಟ್ಟಿ
ವಿಜಯ ಕರ್ನಾಟಕದಲ್ಲಿ ಡಿಜಿಟಲ್ ಪತ್ರಕರ್ತನಾಗಿ 2022 ಮಾರ್ಚ್‌ನಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದಕ್ಕೂ ಮುನ್ನ ಡಿಜಿಟಲ್ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ 5 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಪ್ರಮುಖವಾಗಿ ತಂತ್ರಜ್ಞಾನ ಹಾಗೂ ಕ್ರೀಡೆಯ ಕುರಿತಾಗಿ ಲೇಖನ ಬರೆಯುವುದು ಆಸಕ್ತಿಯ ವಿಷಯಗಳು. ದೂರದ ಪ್ರಯಾಣ, ಪ್ರವಾಸ ಕೈಗೊಳ್ಳುವುದು ನನ್ನ ಮೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌