ಆ್ಯಪ್ನಗರ

Xiaomi Redmi K20 Signature Edition: ವಜ್ರಖಚಿತ ಚಿನ್ನದ ಫೋನ್, ಬೆಲೆ ಎಷ್ಟು ಗೊತ್ತೇ?

ಚಿನ್ನದಿಂದಲೇ ಮಾಡಿರುವ ಕವಚದ ರೆಡ್‌ಮಿ 20ಕೆ ಪ್ರೋ ಸಿಗ್ನೇಚರ್ ಆವೃತ್ತಿಯ ಫೋನನ್ನು ಬುಧವಾರ ಶವೋಮಿ ಘೋಷಿಸಿದ್ದು, ಇದರ ತಯಾರಿಕಾ ವೆಚ್ಚವೇ 4.8 ಲಕ್ಷ ರೂ. ಯಾರಿಗೆ ಇದು ದೊರೆಯುತ್ತದೆ? ಏನಿದೆ ಇದರ ವಿಶೇಷತೆ? ಇಲ್ಲಿದೆ ಮಾಹಿತಿ.

Avinash Baipadithaya | Vijaya Karnataka Web 18 Jul 2019, 5:41 pm
ಹೊಸದಿಲ್ಲಿ: ಫೋನ್‌ಗಳ ಬೆಲೆ ಕೇಳಿದರೇ, ಅದೇನು ಚಿನ್ನದ್ದೋ ಎಂದು ಹುಬ್ಬೇರಿಸಿದ್ದನ್ನು ಕೇಳಿದ್ದೇವೆ. ಆದರೆ, ನಿಜಕ್ಕೂ ಚಿನ್ನದ ಫೋನೇ ಈಗ ಮಾರುಕಟ್ಟೆಗೆ, ಅದೂ ಭಾರತೀಯ ಮಾರುಕಟ್ಟೆಗೆ ಬರುತ್ತಿದೆ. ಇದನ್ನು ತಯಾರಿಸಿದ್ದು ಚೀನಾದ ಪ್ರಮುಖ ಫೋನ್ ತಯಾರಿಕಾ ಕಂಪನಿ ಶವೋಮಿ.

ಬುಧವಾರ ರೆಡ್‌ಮಿ ಕೆ20 ಹಾಗೂ ರೆಡ್‌ಮಿ ಕೆ20 ಪ್ರೋ ಫೋನ್‌ಗಳನ್ನು ಬಿಡುಗಡೆ ಮಾಡುವ ಸಂದರ್ಭ ರೆಡ್‌ಮಿ ಕೆ20 ಸಿಗ್ನೇಚರ್ ಆವೃತ್ತಿಯನ್ನೂ ಘೋಷಿಸಲಾಯಿತು. ಇದು ಗೋಲ್ಡ್ ಪ್ಲೇಟೆಡ್ ಸ್ಮಾರ್ಟ್ ಫೋನ್ ಅಲ್ಲ. ನಿಜಕ್ಕೂ ಚಿನ್ನದಿಂದಲೇ ತಯಾರು ಮಾಡಲಾದ ಫೋನ್. ಅಷ್ಟೇ ಅಲ್ಲ, ಸ್ಮಾರ್ಟ್ ಫೋನ್‌ನ ಹಿಂಭಾಗದಲ್ಲಿ ಇಂಗ್ಲಿಷಿನ K ಅಕ್ಷರ ಬರೆಯಲಾಗಿದ್ದು, ಅದರಲ್ಲಿ ವಜ್ರದ ಹರಳು ಇದೆ.

ಹಾಗಿದ್ದರೆ ಈ ಚಿನ್ನದ ಫೋನ್‌ನ ಬೆಲೆ ಎಷ್ಟಿದ್ದೀತು? ಇದರ ತಯಾರಿಕಾ ವೆಚ್ಚವೇ 4,80,000 ಎಂದು ಶವೋಮಿ ಇಂಡಿಯಾ ಮ್ಯಾನೇಜಿಂಗ್ ಡೈರೆಕ್ಟರ್ ಮನುಕುಮಾರ್ ಜೈನ್ ಕಾರ್ಯಕ್ರಮದಲ್ಲಿ ಹೇಳಿದರು. ಆದರೆ, ಮಾರುಕಟ್ಟೆ ಬೆಲೆ ಎಷ್ಟೆಂಬುದನ್ನು ಇನ್ನೂ ನಿರ್ಧರಿಸಿಲ್ಲ.


ಚಿನ್ನ-ವಜ್ರದಿಂದ ಮಾಡಲಾದ ಈ ಫೋನ್ ಮಾರುಕಟ್ಟೆಗೆ ಯಾವಾಗ ಬರುತ್ತದೆ ಎಂಬ ಮಾಹಿತಿಯನ್ನು ಕಂಪನಿಯು ಬಿಟ್ಟುಕೊಟ್ಟಿಲ್ಲ. ಯಾವಾಗ ಎಂಬುದನ್ನು ಮುಂದಿನ ದಿನಗಳಲ್ಲಿ ಘೋಷಿಸಲಿದ್ದೇವೆ ಎಂದಿದ್ದಾರೆ ಜೈನ್. ಆದರೆ, ಇದನ್ನು ಎಲ್ಲರೂ ಕೊಳ್ಳುವುದು ಸಾಧ್ಯವಿಲ್ಲ. ಯಾಕೆ ಗೊತ್ತೇ? ಕೇವಲ 20 ಚಿನ್ನದ ಫೋನ್‌ಗಳನ್ನು ಮಾತ್ರವೇ ಶವೋಮಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದೆ!

ಈ ಫೋನ್‌ನ ಕವಚವನ್ನು ಚಿನ್ನದಿಂದಲೇ (ಚಿನ್ನದ ಲೇಪನ ಅಲ್ಲ) ಮಾಡಲಾಗಿದೆ. ಉಳಿದಂತೆ ಎಲ್ಲ ಸ್ಪೆಸಿಫಿಶೇಕನ್‌ಗಳು ರೆಡ್‌ಮಿ ಕೆ20 ಪ್ರೋ ಎಂಬ ಅತ್ಯಾಧುನಿಕ ಫ್ಲ್ಯಾಗ್‌ಶಿಪ್ ಮಾಡೆಲ್‌ನದ್ದೇ. ಅಂದರೆ ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್ 855 ಪ್ರೊಸೆಸರ್, 8 ಜಿಬಿ RAM, 256 GB ಆಂತರಿಕ ಮೆಮೊರಿ, AMOLED ಡಿಸ್‌ಪ್ಲೇ, 20 ಮೆಗಾಪಿಕ್ಸೆಲ್ ಪಾಪ್-ಅಪ್ ಸೆಲ್ಫೀ ಕ್ಯಾಮೆರಾ, 48, 13 ಹಾಗೂ 8 ಮೆಗಾಪಿಕ್ಸೆಲ್ ಸೆನ್ಸರ್‌ಗಳಿರುವ ತ್ರಿವಳಿ ಪ್ರಧಾನ ಕ್ಯಾಮೆರಾ, 4000mAh ಬ್ಯಾಟರಿ, 27W ಫಾಸ್ಟ್ ಚಾರ್ಜಿಂಗ್ ಬೆಂಬಲ, ಆಂಡ್ರಾಯ್ಡ್ 9 ಪೈ ಆಧಾರಿತ MIUI 10 ಕಾರ್ಯಾಚರಣಾ ವ್ಯವಸ್ಥೆ ಮುಂತಾದವುಗಳಿವೆ.

undefined

ಶವೋಮಿ ರೆಡ್‌ಮಿ ಕೆ20 ಪ್ರೋ - ಫ್ಲ್ಯಾಗ್‌ಶಿಪ್ ಫೋನ್ ಬೆಲೆ:
8+256GB ಆವೃತ್ತಿ ₹30,999
6+128 GB ಆವೃತ್ತಿ ₹27,999

ಶವೋಮಿ ರೆಡ್‌ಮಿ ಕೆ20 - ಮಧ್ಯಮ ವರ್ಗದ ಫೋನ್ ಬೆಲೆ
6+128 GB ಆವೃತ್ತಿ ₹23,999
6+64 GB ಆವೃತ್ತಿ ₹21,999

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌