ಆ್ಯಪ್ನಗರ

Smartphone Addiction : ಸುಖ ನಿದ್ದೆಗೆ ಸ್ಮಾರ್ಟ್‌ಫೋನ್‌ ಅಡ್ಡಿಯಾಗುತ್ತಿದೆಯೇ?

ಸ್ಮಾರ್ಟ್‌ಫೋನ್‌ ಅನ್ನು ಸದಾಕಾಲ ಬಳಸುತ್ತಾ ಇದ್ದರೆ ಕಣ್ಣಿಗೆ ತೊಂದರೆಯಾಗುವುದು ಖಚಿತ. ಅದಕ್ಕಾಗಿ ಏನು ಮಾಡಬೇಕು, ಸ್ಮಾರ್ಟ್‌ಫೋನ್‌ನಿಂದ ನಿದ್ದೆಗೆ ತೊಂದರೆಯಾದಂತೆ ತಡೆಯುವುದು ಹೇಗೆ? ಇಲ್ಲಿದೆ ವಿವರ.

Vijaya Karnataka 31 Aug 2019, 2:55 pm
ಮಲ್ಲಿಕಾರ್ಜುನ ತಿಪ್ಪಾರ
Vijaya Karnataka Web Phone

ಹಗಲಿಡಿ ಸ್ಮಾರ್ಟ್‌ ಬಳಸಿ ಮತ್ತು ರಾತ್ರಿ ಹೊತ್ತು ಮಲಗುವ ಮುಂಚೆಯೂ ಸ್ಮಾರ್ಟ್‌ ಫೋನ್‌ ಬಳಸುವುದರಿಂದ ನಿಮ್ಮ ಸುಖ ನಿದ್ದೆಗೆ ಭಂಗ ಖಂಡಿತ ಬರುತ್ತದೆ. ಈ ಆಧುನಿಕ ದಿನಗಳಲ್ಲಿ ಎಲ್ಲರ ಬದುಕು ತುಂಬ ಒತ್ತಡದಿಂದ ಕೂಡಿರುತ್ತದೆ. ನಮ್ಮ ಜೀವನ ಶೈಲಿಯೇ ಹಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೆ ಅತ್ಯುತ್ತಮವಾದ ನಿದ್ದೆ ಬೇಕು. ಆದರೆ, ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್‌ ಬಳಕೆಯಿಂದ ನಮ್ಮ ನಿದ್ರೆಯ ಪ್ಯಾಟರ್ನ್‌ ಕೂಡ ಬದಲಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 9 ಗಂಟೆಯಾದರೂ ನಿದ್ರೆ ಮಾಡಬೇಕು.

ಕೆಲಸ ಮಾಡುವಾಗ ನಾವು ಬಹುತೇಕ ಸಮಯವನ್ನು ಕಂಪ್ಯೂಟರ್‌ ಸ್ಕ್ರೀನ್‌ ನೋಡಿಕೊಂಡೇ ಇರುತ್ತೇವೆ ಮತ್ತು ಕೆಲಸ ಇಲ್ಲದಿದ್ದಾಗ ಮೊಬೈಲ್‌ ಫೋನ್‌ಗಳಲ್ಲಿ ನಿರತರಾಗಿರುತ್ತೇವೆ. ಅಂದರೆ, ನಮ್ಮ ಕಣ್ಣು ಸದಾ ಯಾವುದಾರೂ ಒಂದು ಸ್ಕ್ರೀನ್‌ ಮೇಲೆ ಇದ್ದೇ ಇರುತ್ತದೆ. ಈ ರೀತಿಯಾಗಿ ನಿರಂತರವಾಗಿ ಕಂಪ್ಯೂಟರ್‌ ಅಥವಾ ಮೊಬೈಲ್‌ ಸ್ಕ್ರೀನ್‌ಗಳನ್ನು ನೋಡುವುದರಿಂದ ನಮ್ಮ ನಿದ್ರೆಯ ಪ್ಯಾಟರ್ನ್‌ನಲ್ಲಿ ಬದಲಾವಣೆಗೆ ಕಾರಣವಾಗುತ್ತದೆ.

ಸ್ಮಾರ್ಟ್‌ಫೋನ್‌ ಬಳಕೆಯ ಹೊರತಾಗಿಯೂ ನಾವು ಅತ್ಯುತ್ತಮ ನಿದ್ರೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸಹಜ. ಹೌದು, ಸ್ಮಾರ್ಟ್‌ಫೋನ್‌ ಅನ್ನು ಯೋಜಿತ ರೀತಿಯಲ್ಲಿ ಬಳಸಿದರೆ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

ನಿದ್ದೆಗೂ ಮೊದಲು ಎರಡು ಗಂಟೆ
ಸುಖವಾದ ನಿದ್ರೆಗೆ ಮಲಗುವ ಕೋಣೆಯ ಉಷ್ಣಾಂಶವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ತುಂಬ ತಂಪಾದ ಇಲ್ಲವೇ ತುಂಬ ಉಷ್ಣಾಂಶವಿದ್ದರೆ ನಿಮಗೆ ಸುಖ ನಿದ್ರೆ ಮಾಡಲು ಸಾಧ್ಯವಿಲ್ಲ. ನಿದ್ರೆ ಮಾಡುವ ಕೋಣೆಯ ಉಷ್ಣಾಂಶ 18ರಿಂದ 22 ಡಿಗ್ರಿ ಸೆಲ್ಸಿಯಸ್‌ ಇರಬೇಕು. ಹಾಗೆಯೇ, ಮಲಗುವ ಎರಡು ಗಂಟೆ ಮೊದಲ ಯಾವುದೇ ಟೀ ಮತ್ತು ಕಾಫಿ ಸೇವಿಸಬಾರದು.

ಉತ್ತಮ ನಿದ್ರೆ ಮಾಡಲು ನಿಮ್ಮ ಸುತ್ತಮುತ್ತಲಿನಲ್ಲಿ ಲೈಟ್‌ ಮತ್ತು ಸೌಂಡ್‌ ಇರದಂತೆ ನೋಡಿಕೊಳ್ಳಬೇಕು. ನಿಮ್ಮ ಫೋನ್‌ನೊಂದಿಗೆ ಹೊಂದಿಸಲಾದ ಸ್ಮಾರ್ಟ್‌ ಬಲ್ಬ್ ಬಳಸುತ್ತಿದ್ದರೆ ಅದನ್ನು ಮಂದ(ಡಿಮ್‌)ಗೊಳಿಸಬಹುದು. ಒಂದು ವೇಳೆ, ಸ್ಮಾರ್ಟ್‌ ಬಲ್ಬ್ ಇಲ್ಲದಿದ್ದರೆ ಪ್ರಕಾಶಮಾನವಾದ ಟೂಬ್‌ಲೈಟ್‌ಗಳನ್ನು ಸ್ವಿಚ್‌ ಆಫ್‌ ಮಾಡಿ ಮತ್ತು ಬೆಚ್ಚನೆ ಅನುಭವ ನೀಡುವ ಸ್ಟ್ಯಾಂಡರ್ಡ್‌ ಹಳದಿ ಬಲ್ಬ್ ಅನ್ನು ಬೆಳಗಿಸಬಹುದು.

ಮಲಗುವ ಒಂದು ಗಂಟೆ ಮುಂಚೆ
ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ನಿಮ್ಮ ವೈರ್‌ಲೆಸ್‌ ಸ್ಪೀಕರ್‌ಗೆ ಹೊಂದಿಸಿ ಮತ್ತು ಸಾಫ್ಟ್‌ ಮ್ಯೂಸಿಕ್‌ ಅನ್ನು ಪ್ಲೇ ಮಾಡಿ. ಅಂದರೆ, ಮಳೆ, ಗುಡುಗು, ತಂಗಾಳಿಯಂಥ ಧ್ವನಿಯನ್ನು ಒಳಗೊಂಡ ಸ್ವಾಭಾವಿಕ ಸಂಗೀತವಿರಲಿ. ಅಲ್ಲದೇ ಮಲಗುವ ಒಂದು ಗಂಟೆ ಮುಂಚೆ ನೀವು ಸ್ಲೀಪ್‌ ಮ್ಯೂಸಿಕ್‌ ಆನ್‌ ಮಾಡಬಹುದು ಅಥವಾ ಯುಟೂಬ್‌ನಲ್ಲಿ ದೊರೆಯುವ ಸಾಫ್ಟ್‌ ಮ್ಯೂಸಿಕ್‌ ಕೂಡ ಪ್ಲೇ ಮಾಡಬಹುದು. ಇದಕ್ಕೆ ಪರ್ಯಾಯವಾಗಿ ಉತ್ತಮ ನಿದ್ರೆಗಾಗಿ ಆಡಿಯೊಬುಕ್‌ ಅಥವಾ ನಿಮಗೆ ಇಷ್ಟವಾದ, ನಿದ್ರೆ ಬರಿಸುವ ಪಾಡ್‌ಕಾಸ್ಟ್‌ ಕೂಡ ಕೇಳಬಹುದು.

ಎಲ್ಲಕ್ಕಿಂತ ಹೆಚ್ಚಾಗಿ ಮಲಗುವಾಗ ನಿಮ್ಮ ಫೋನ್‌ ಅನ್ನು ಹತ್ತಿರ ಇಟ್ಟುಕೊಳ್ಳಬೇಡಿ. ಮಲಗುವ ಒಂದು ಗಂಟೆ ಮುಂಚೆ ನಿಮ್ಮ ಫೋನ್‌ ಅನ್ನು ಸೈಲೆಂಟ್‌ ಮೋಡ್‌ಗೆ ಹಾಕಿ ಅದನ್ನು ಇನ್ನೊಂದು ರೂಮ್‌ನಲ್ಲಿಡಿ ಅಥವಾ ಡ್ರಾಯರ್‌ನಲ್ಲಿ ಇಟ್ಟು ಬಿಡಿ. ಮಲಗುವ ಮುಂಚೆ ನಿಮ್ಮ ಫೋನ್‌ ಆನ್‌ನಲ್ಲಿಡುವುದರಿಂದ ಅನಗತ್ಯ ಒತ್ತಡ ಹೆಚ್ಚಾಗಲು ಕಾರಣವಾಗುತ್ತದಲ್ಲದೇ ನಿದ್ರೆಯೂ ವಿಳಂಬವಾಗುತ್ತದೆ. ನಿದ್ದೆಗೆ ಹೋಗುವ ಮುಂಚೆ ಸಂಪೂರ್ಣವಾಗಿ ಒಂದು ಗಂಟೆ ಕಾಲ ನೀವು ಸ್ಮಾರ್ಟ್‌ಫೋನ್‌ನಿಂದ ದೂರ ಇದ್ದಿದ್ದಾದರೆ ಅತ್ಯುತ್ತಮವಾದ ನಿದ್ರೆಯನ್ನು ಮಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅದು ನಿದ್ರಾಭಂಗಕ್ಕೆ ಕಾರಣವಾಗುತ್ತದೆ.

ಸೌಂಡ್‌ ಅಲಾರಾಂ ಬಳಸಬೇಡಿ
ರಾತ್ರಿ ಪೂರ್ತಿ ಭರಪೂರ ನಿದ್ದೆ ಮಾಡಿ ಬೆಳಗಿನ ಜಾವ ಅಲಾರಾಂ ಸದ್ದಿನೊಂದಿಗೆ ಎದ್ದೇಳುವುದಿದೆಯಲ್ಲ ಅದಕ್ಕಿಂತ ಹಿಂಸೆ ಮತ್ತೊಂದಿಲ್ಲ. ಅಲಾರಾಂ ಸದ್ದಿನೊಂದಿಗೆ ಎಚ್ಚರವಾಗುವ ನಿಮ್ಮ ರೂಢಿಯನ್ನು ಬದಲಿಸಿಕೊಳ್ಳಿ. ಅಲಾರಾಂ ಬದಲಿಗೆ ಬ್ರೈಟ್‌ ಲೈಟ್‌ನಿಂದಾಗಿ ಎಚ್ಚರಗೊಳ್ಳುವಂತೆ ನಿಮ್ಮ ದೇಹ ಮತ್ತು ಮನಸ್ಸನ್ನು ತರಬೇತುಗೊಳಿಸಿ. ಒಂದು ವೇಳೆ ನಿಮ್ಮ ಮನೆಯಲ್ಲಿ ಸ್ಮಾರ್ಟ್‌ ಲೈಟ್‌ ಇದ್ದರೆ, ಬೆಳಗ್ಗೆ ನೀವು ಎಷ್ಟು ಗಂಟೆಗೆ ಏಳಬೇಕು ಎಂದಿಕೊಂಡಿದ್ದೀರೋ ಅಷ್ಟು ಗಂಟೆಗೆ ಆ ಲೈಟ್‌ ಬ್ರೈಟ್‌ ಆಗುವಂತೆ ಸೆಟ್‌ ಮಾಡಿಟ್ಟುಕೊಳ್ಳಿ.

ಒಂದು ವೇಳೆ ನಿಮ್ಮ ಮನೆಯಲ್ಲಿ ಸ್ಮಾರ್ಟ್‌ ಲೈಟ್‌ ಇಲ್ಲದಿದ್ದರೆ ಕಿಟಕಿಗಳನ್ನು ಮುಚ್ಚಿರುವ ಕರ್ಟನ್‌ಗಳನ್ನು ಓಪನ್‌ ಮಾಡಿಟ್ಟುಬಿಡಿ. ಬೆಳಗ್ಗೆ ಸೂರ್ಯನ ಕಿರಣಗಳು ನಿಮ್ಮ ಕೋಣೆಯನ್ನು ಪ್ರವೇಶಿಸುತ್ತಿದ್ದಂತೆ ನಿಮಗೆ ಎಚ್ಚರವಾಗಬಹುದು. ಈ ರೀತಿ ಮಾಡುವುದರಿಂದ ಅಲಾರಾಂ ಸದ್ದಿನಿಂದಾಗುವ ಒತ್ತಡ, ಮನೋವಿಕಾರತೆಯನ್ನು ತಡೆಯಹುದು.

Google Calendar Spam: ಬಳಕೆದಾರರಿಗೆ ಎಚ್ಚರಿಕೆ

ಹೀಗೆ ಮಾಡಿ
ಕಣ್ಣುರೆಪ್ಪೆ ಬಡೆಯಿರಿ: ಮೊಬೈಲ್‌ ಅಥವಾ ಕಂಪ್ಯೂಟರ್‌ ಸ್ಕ್ರೀನ್‌ ನೋಡದೇ ಇರುವುದು ಸಾಧ್ಯವಿಲ್ಲ. ಹಾಗಿದ್ದಾಗ್ಯೂ ಕಣ್ಣಿನ ತೊಂದರೆ ತಪ್ಪಿಸಿಕೊಳ್ಳಲು ನೀವು ಆಗಾಗ ಕಣ್ಣು ರೆಪ್ಪೆಯನ್ನು ಬಡೆಯುತ್ತಿದ್ದರೆ ಡ್ರೈನೆಸ್‌ ಮತ್ತು ಇರಿಟೇಷನ್‌ ತಪ್ಪಿಸಬಹುದು.

ಪ್ರಜ್ವಲಿಸುವುದನ್ನು(ಗ್ಲೇರ್‌) ಕಡಿಮೆ ಮಾಡಿ: ಸಾಮಾನ್ಯವಾಗಿ ಈಗಿನ ಸ್ಮಾರ್ಟ್‌ಫೋನ್‌ಗಳು ಆ್ಯಂಟಿ ಗ್ಲೇರ್‌ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ಗಳಿರುವ ಸ್ಕ್ರೀನ್‌ಗಳನ್ನು ಹೊಂದಿರುತ್ತವೆ. ಇದು ಗ್ಲೇರಿಂಗ್‌ ಕಡಿಮೆ ಮಾಡುತ್ತದೆ. ಒಂದು ವೇಳೆ ಇಲ್ಲದಿದ್ದರೆ ಸೂರ್ಯನ ಬೆಳಕಿಗೆ ನಿಮ್ಮ ಫೋನ್‌ನ ಬೆಳಕಿನ ತೀವ್ರತೆಯನ್ನು ಸರಿಹೊಂದಿಸಿ.

ಬಿಟ್ಟು ಬಿಟ್ಟು ನೋಡಿ: ತಂತ್ರಜ್ಞಾನ ಅತಿಯಾದ ಬಳಕೆ ಯಾವಾಗಿದ್ದರೂ ಅಪಾಯಕಾರಿ. ಸ್ಕ್ರೀನ್‌ ಕೂಡ ಇದೇ ಸಾಲಿನಲ್ಲಿರುವುದು. ಹಾಗಾಗಿ, ಕಂಪ್ಯೂಟರ್‌ ಆಗಲಿ ಮೊಬೈಲ್‌ ಸ್ಕ್ರೀನ್‌ ಆಗಲಿ ಸತತವಾಗಿ ನೋಡಬೇಡಿ. ಪ್ರತಿ 20 ನಿಮಿಷಕ್ಕೆ 20 ಸೆಕೆಂಡ್‌ ಸ್ಕ್ರೀನ್‌ ನೋಡುವುದನ್ನು ಬಿಟ್ಟು ಬಿಡಿ. ಈ ಸಮಯದಲ್ಲಿ ಕನಿಷ್ಠ 20 ಅಡಿ ದೂರವಾದರೂ ನೋಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಕಣ್ಣಿಗೆ ಒಳ್ಳೆಯದು.

ಬ್ರೈಟ್‌ನೆಸ್‌ ಹೊಂದಿಸಿ: ಸ್ಕ್ರೀನ್‌ ಅನ್ನು ಅತಿ ಬ್ರೈಟ್‌ ಅಥವಾ ಡಾರ್ಕ್‌ ಮಾಡುವುದು ಕೂಡ ಅಪಾಯಕಾರಿ. ರೂಮ್‌ ಬೆಳಕಿಗೆ ಸರಿ ಹೊಂದುವಂತೆ ಸ್ಕ್ರೀನ್‌ ಬ್ರೈಟ್‌ನೆಸ್‌ ಅನ್ನು ಹೊಂದಿಸಿಕೊಳ್ಳಿ. ಕೆಲವೊಮ್ಮೆ ಇದು ಆಟೊಮ್ಯಾಟಿಕ್‌ ಆಗಿರುತ್ತದೆ.

Jio Giga Fiber Broadband: ನೋಂದಣಿ ಹೇಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌